ಕರಾವಳಿ ಕರ್ನಾಟಕ ಹವಾಮಾನ; ಕರಾವಳಿಯಲ್ಲಿ ಮುಂದುವರಿದ ಗಾಳಿ ಮಳೆ, ಹಾನಿ, ಆತಂಕ ಮೂಡಿಸಿದ ಸುಂಟರಗಾಳಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರಾವಳಿ ಕರ್ನಾಟಕ ಹವಾಮಾನ; ಕರಾವಳಿಯಲ್ಲಿ ಮುಂದುವರಿದ ಗಾಳಿ ಮಳೆ, ಹಾನಿ, ಆತಂಕ ಮೂಡಿಸಿದ ಸುಂಟರಗಾಳಿ

ಕರಾವಳಿ ಕರ್ನಾಟಕ ಹವಾಮಾನ; ಕರಾವಳಿಯಲ್ಲಿ ಮುಂದುವರಿದ ಗಾಳಿ ಮಳೆ, ಹಾನಿ, ಆತಂಕ ಮೂಡಿಸಿದ ಸುಂಟರಗಾಳಿ

ಕರಾವಳಿ ಕರ್ನಾಟಕ ಹವಾಮಾನ; ಕರಾವಳಿಯಲ್ಲಿ ಮುಂದುವರಿದ ಗಾಳಿ ಮಳೆಯ ಕಾರಣ ಹಾನಿ ಪ್ರಮಾಣ ಹೆಚ್ಚಾಗಿದೆ. ಆತಂಕ ಮೂಡಿಸಿದ ಸುಂಟರಗಾಳಿ ಬಂಟ್ವಾಳ, ಬಿಸಿ ರೋಡ್ ಸುತ್ತಮುತ್ತ ಅನೇಕ ನಾಶ ನಷ್ಟ ಉಂಟುಮಾಡಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಕರಾವಳಿ ಕರ್ನಾಟಕ ಹವಾಮಾನ; ಕರಾವಳಿಯಲ್ಲಿ ಮುಂದುವರಿದ ಗಾಳಿ ಮಳೆ, ಹಾನಿ ಗಂಭೀರ ಪ್ರಮಾಣದಲ್ಲಿದ್ದು, ಸುಂಟರಗಾಳಿ ಆತಂಕ ಮೂಡಿಸಿದೆ. ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ಮರ (ಎಡಚಿತ್ರ). ತೆಂಗಿನಮರ ಉರುಳಿ ಬಂಟ್ವಾಳ ಡಿವೈಎಸ್ಪಿ ಕಚೇರಿಗೆ ಹಾನಿಯಾಗಿದೆ. (ಬಲಚಿತ್ರ)
ಕರಾವಳಿ ಕರ್ನಾಟಕ ಹವಾಮಾನ; ಕರಾವಳಿಯಲ್ಲಿ ಮುಂದುವರಿದ ಗಾಳಿ ಮಳೆ, ಹಾನಿ ಗಂಭೀರ ಪ್ರಮಾಣದಲ್ಲಿದ್ದು, ಸುಂಟರಗಾಳಿ ಆತಂಕ ಮೂಡಿಸಿದೆ. ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ಮರ (ಎಡಚಿತ್ರ). ತೆಂಗಿನಮರ ಉರುಳಿ ಬಂಟ್ವಾಳ ಡಿವೈಎಸ್ಪಿ ಕಚೇರಿಗೆ ಹಾನಿಯಾಗಿದೆ. (ಬಲಚಿತ್ರ) (HSM)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಳಿ ಮಳೆಗೆ ಅನಾಹುತಗಳ ಸರಣಿಯೇ ಸಂಭವಿಸಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಬುಧವಾರ ದಿನವಿಡೀ ಮಳೆ ಕಡಿಮೆ ಇದ್ದರೂ ಸಂಜೆಯ ವೇಳೆ ಮತ್ತೆ ಗಾಳಿ ಮಳೆಯಾಗಿದೆ. ಗುರುವಾರ ಬೆಳಗ್ಗೆ ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕಳೆದ ಎರಡು ಮೂರು ದಿನಗಳಿಂದ ಗಾಳಿಯ ಅಬ್ಬರ ಜೋರಾಗಿದೆ. ಅಲ್ಲಲ್ಲಿ ಏಕಾಏಕಿ ಸುಂಟರಗಾಳಿ ಬೀಸುತ್ತಿದ್ದು, ಇದರಿಂದ ಭಾರಿ ಹಾನಿ ಸಂಭವಿಸಿದೆ. ವಿದ್ಯುತ್ ಕಂಬ ಉರುಳಿಬಿದ್ದ ಘಟನೆಗಳು ಹಲವಾರು. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಇನ್ನೂ ಕೆಲ ದಿನ ಆಗಾಗ್ಗೆ ರಭಸವಾಗಿ ಗಾಳಿ ಬೀಸುವ ಸಾಧ್ಯತೆ ಇದೆ.

ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ಗಾಳಿ ಮಳೆಗೆ ಕಲ್ಲಾಪು ಪಟ್ಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಗೆ ಹಾನಿಯಾಗಿ ಹಂಚು ಹಾರಿಹೋಗಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಉಡುಪಿ, ಸಿದ್ಧಾಪುರ, ಕಾರ್ಕಳ ಕಡೆಗಳಲ್ಲಿ ಸಾಧಾರಣ ಮಳೆಯಾಗಿದ್ದರೂ ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಹಲವೆಡೆ ಸುಮಾರು 40ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ.

ಕರಾವಳಿ ಕರ್ನಾಟಕದ ಮಳೆ, ಸುಂಟರಗಾಳಿ; ಶಾಲಾ ಕಾಲೇಜುಗಳಿಗೆ ಇಂದು ರಜೆ

ಭಾರಿ ಮಳೆಯ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಕುಂದಾಪುರ , ಬೈಂದೂರು, ಹೆಬ್ರಿ ಹಾಗೂ ಕಾರ್ಕಳ ತಾಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಗಾಳಿ ಮಳೆಯಾಗುತ್ತಿರುವ ಹಿನ್ನೆಲೆ ಅಂಗನವಾಡಿ, ಪ್ರಾಥಮಿಕ ಪಾಠಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಇಂದು (ಜುಲೈ 25) ರಜೆಯನ್ನು ತಾಲ್ಲೂಕಿನ ತಹಸೀಲ್ದಾರ್‌ಗಳು ಘೋಷಣೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಂಟರಗಾಳಿ ಅಬ್ಬರವನ್ನೇ ತೋರಿಸಿದೆ. ಬಿ.ಸಿ. ರೋಡ್ ಹೃದಯಭಾಗವಾದ ಭೂ ಅಭಿವೃದ್ಧಿ ಬ್ಯಾಂಕ್ ಕಟ್ಟಡದ ಪಕ್ಕದಿಂದಲೇ ಹಾದುಹೋದ ಗಾಳಿ ಸ್ಪರ್ಶ ಕಲಾ ಮಂದಿರದವರೆಗೆ ಅನಾಹುತಗಳ ಸರಣಿಯನ್ನೇ ಮಾಡಿತು.

ಬಂಟ್ವಾಳದ ಟ್ಯಾಕ್ಸಿ ನಿಲ್ಲುವ ಜಾಗದಲ್ಲಿ ಪೊಲೀಸ್ ಸ್ಟೇಶನ್‌ಗೆ ತೆರಳುವ ಮಾರ್ಗ ಎಂಬ ನಾಮಫಲಕ ಗಾಳಿಗೆ ನೆಲಕ್ಕುರುಳಿದೆ.
ಬಂಟ್ವಾಳದ ಟ್ಯಾಕ್ಸಿ ನಿಲ್ಲುವ ಜಾಗದಲ್ಲಿ ಪೊಲೀಸ್ ಸ್ಟೇಶನ್‌ಗೆ ತೆರಳುವ ಮಾರ್ಗ ಎಂಬ ನಾಮಫಲಕ ಗಾಳಿಗೆ ನೆಲಕ್ಕುರುಳಿದೆ.

ಟ್ಯಾಕ್ಸಿ ನಿಲ್ಲುವ ಜಾಗದಲ್ಲಿ ಪೊಲೀಸ್ ಸ್ಟೇಶನ್ ಗೆ ತೆರಳುವ ಮಾರ್ಗ ಎಂಬ ನಾಮಫಲಕವನ್ನು ಗಾಳಿ ಉರುಳಿಸಿದರೆ, ಮುಂದಕ್ಕೆ ಹಿಂದಿನ ಬಿಡಿಒ ಕಚೇರಿ ಇದ್ದ ಜಾಗದಲ್ಲಿ ನಿಲುಗಡೆಯಾಗಿರುವ ಮಾರುತಿ ಝೆನ್ ಕಾರಿನ ಮೇಲೆ ಮರದ ಗೆಲ್ಲುಗಳು ಕವುಚಿ ಬಿದ್ದಿವೆ. ಹಾಗೆಯೇ ಮುಂದಕ್ಕೆ ತೆರಳಿದ ಗಾಳಿ, ವಿವೇಕನಗರಕ್ಕೆ ತೆರಳುವ ರಸ್ತೆಯಲ್ಲಿ ಎರಡು ವಿದ್ಯುತ್ ಕಂಬಗಳನ್ನು ಉರುಳಿಸಿದರೆ, ಮುಂದೆ ರೈಲ್ವೆ ಮೇಲ್ಸೇತುವೆಯ ಬಳಿ ಬೃಹದಾದ 3 ವಿದ್ಯುತ್ ಕಂಬಗಳನ್ನು ನೆಲಕ್ಕುರುಳಿಸಿ ಅನಾಹುತವನ್ನೇ ಮಾಡಿತು. ರಾಷ್ಟ್ರೀಯ ಹೆದ್ದಾರಿ 75ರ ಮೇಲೆಲ್ಲಾ ವಿದ್ಯುತ್ ಕಂಬದ ಜತೆಗಿದ್ದ ವಯರುಗಳು ಬಿದ್ದವು.

ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರದ ಪ್ರವೇಶದ್ವಾರದ ಸನಿಹವೇ ಇದ್ದ ಬೃಹತ್ ಮರವೊಂದು ಬುಡಸಮೇತ ಉರುಳಿ ಬಿದ್ದಿದೆ.
ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರದ ಪ್ರವೇಶದ್ವಾರದ ಸನಿಹವೇ ಇದ್ದ ಬೃಹತ್ ಮರವೊಂದು ಬುಡಸಮೇತ ಉರುಳಿ ಬಿದ್ದಿದೆ.

ಇಷ್ಟಲ್ಲದೆ, ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರದ ಪ್ರವೇಶದ್ವಾರದ ಸನಿಹವೇ ಇದ್ದ ಬೃಹತ್ ಮರವೊಂದು ಬುಡಸಮೇತ ಉರುಳಿ, ಸ್ಪರ್ಶ ಮಂದಿರ ಒಳಗೆ ಪ್ರವೇಶಿಸಲೂ ಆಗದಂಥ ವಾತಾವರಣ ನಿರ್ಮಾಣವಾಯಿತು. ಘಟನೆ ನಡೆದ ಕೂಡಲೇ ಕಂದಾಯ, ಅಗ್ನಿಶಾಮಕ, ಮೆಸ್ಕಾಂ ಸಹಿತ ವಿವಿಧ ಇಲಾಖಾಧಿಕಾರಿಗಳು, ಸಾರ್ವಜನಿಕರು ಸೇರಿ ತತ್ ಕ್ಷಣದ ಕ್ರಮಗಳನ್ನು ಕೈಗೊಂಡರು.

ತೆಂಗಿನಮರ ಉರುಳಿ ಬಂಟ್ವಾಳ ಡಿವೈಎಸ್ಪಿ ಕಚೇರಿಗೆ ಹಾನಿ

ಬಂಟ್ವಾಳ ಪೋಲೀಸ್ ಉಪವಿಭಾಗದ ಕಚೇರಿಯ ಮಾಡಿನ ಮೇಲೆ ತೆಂಗಿನ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ. ಡಿ.ವೈ.ಎಸ್.ಪಿ ವಿಜಯಪ್ರಸಾದ್ ಅವರು ಕುಳಿತುಕೊಳ್ಳುವ ಕೊಠಡಿ ಮೇಲೆ ಕಚೇರಿಯ ಅಂಗಳದಲ್ಲಿದ್ದ ಹಳೆಯ ತೆಂಗಿನ ಮರ ಬಿದ್ದು ಹಂಚು ಹುಡಿಯಾಗಿದೆ. ಕಚೇರಿಯ ಒಳಗೆ ಮರದಲ್ಲಿದ್ದ ಸೀಯಾಳ ಮತ್ತು ತೆಂಗಿನಕಾಯಿ ಹಾಗೂ ಹಂಚುಗಳು ಹುಡಿಯಾಗಿ ಬಿದ್ದಿವೆ. ರಾತ್ರಿ ಸುಮಾರು ‌ 9.30 ರವೇಳಗೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಡಿ.ವೈ.ಎಸ್.ಪಿ.ಯವರು ಕಚೇರಿಯೊಳಗೆ ಇಲ್ಲದೆ ಇದ್ದರಿಂದ ಅಪಾಯ ತಪ್ಪಿದೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್‌.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner