Karnataka Rains: ಮೈಸೂರು ಸಹಿತ 4 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಮುನ್ಸೂಚನೆ, ಇನ್ನೂ 6 ದಿನ ಕರ್ನಾಟಕದಲ್ಲಿ ಮಳೆ ಉಂಟು
ಮೈಸೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ನಾಲ್ಕು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಶನಿವಾರ ಭಾರೀ ಮಳೆಯಾಗುವ ಸೂಚನೆಯಿದೆ. ಮೈಸೂರು ಜಂಬೂ ಸವಾರಿ ಹಾಗೂ ಪಂಜಿನ ಕವಾಯತಿನ ಸಡಗರಕ್ಕೆ ಮಳೆ ಅಡ್ಡಿಯಾಗಬಹುದು ಎನ್ನುವ ಆತಂಕವೂ ಇದೆ.
ಬೆಂಗಳೂರು: ವಿಶ್ವವಿಖ್ಯಾತ ಜಂಬೂ ಸವಾರಿ ಹಾಗೂ ಪಂಜಿನ ಕವಾಯಿತಿಗೆ ಅಣಿಯಾಗಿರುವ ಮೈಸೂರಿನಲ್ಲಿ ಅಕ್ಟೋಬರ್ 12 ರ ಶನಿವಾರ ಮಳೆಯಾಗಲಿದೆ. ಅದೂ ಮೈಸೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ನೀಡಿದೆ. ಮೈಸೂರು ಮಾತ್ರವಲ್ಲದೇ ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸೂಚನೆಯಿದೆ.ನಾಲ್ಕೂ ಜಿಲ್ಲೆಗಳಲ್ಲೂ ಯಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರದಲ್ಲೂ ಮುಂದಿನ ಎರಡು ದಿನ ಉತ್ತಮ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.
ಎಲ್ಲೆಲ್ಲಿ ಮಳೆಯಾಗಬಹುದು
ಶನಿವಾರದಂದು ಕರಾವಳಿ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳು ಅಧಿಕವಾಗಿದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ ಗುಡುಗು ಸಹಿತ ಬೀಳಲಿದೆ. ಅದೇ ರೀತಿ ಮೈಸೂರು ಜಿಲ್ಲೆಯಲ್ಲೂ ಕೆಲವು ಭಾಗಗಳಲ್ಲಿ ಭಾರೀ ಮಳೆ ಗುಡುಗು ಸಹಿತ ಸುರಿಯಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ಮೈಸೂರು ಅರಮನೆ ಆವರಣದಲ್ಲಿ ಜಂಬೂ ಸವಾರಿ ಮಧ್ಯಾಹ್ನ ಆರಂಭವಾಗಲಿದ್ದು, ಸಂಜೆವರೆಗೂ ಮೆರವಣಿಗೆ ಐದು ಕಿ.ಮಿ. ಸಾಗಲಿದೆ. ಸಂಜೆ ನಂತರ ಪಂಜಿನ ಕವಾಯತು ನಡೆಯಲಿದ್ದು ಆಗಲೂ ಸಹಸ್ರಾರು ಮಂದಿ ಸೇರಲಿದ್ದಾರೆ. ಪ್ರತಿ ವರ್ಷ ದಸರಾದ ಕೊನೆಯ ಮಳೆ ಬಂದೇ ಬರುತ್ತದೆ. ಈ ಬಾರಿಯೂ ಮೈಸೂರು ಸಹಿತ ಕೆಲವು ಭಾಗದಲ್ಲಿ ಮಳೆಯಾಗಬಹುದು ಎನ್ನುವ ಸೂಚನೆಯಿದೆ.
ಕರ್ನಾಟಕದ ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಗುಡುಗು ಕೂಡ ಇರಲಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಗುಡುಗು ಸಹಿತ ಆಗಬಹುದು ಎಂದು ತಿಳಿಸಲಾಗಿದೆ.
ಸುರಿದ ಮಳೆ
ಮೈಸೂರಿನಲ್ಲಿ ಶುಕ್ರವಾರ ರಾತ್ರಿಯೂ ಸಾಧಾರಣ ಮಳೆ ಸುರಿಯಿತು. ಜಂಬೂ ಸವಾರಿಯ ಪಂಜಿನ ಕವಾಯತು ಆರಂಭಗೊಂಡ ಕೆಲವೇ ಹೊತ್ತಿನಲ್ಲಿ ಹನಿ ಶುರುವಾಗಿ ನಂತರ ಜೋರಾಗಿ ಮಳೆಯಾಯಿತು. ಇದರಿಂದ ಅರ್ಧಕ್ಕೂ ಹೆಚ್ಚು ಮಂದಿ ಮಳೆಯಿಂದ ತಪ್ಪಿಸಿಕೊಳ್ಳಲು ಹೊರಟಿದ್ದು ಕಂಡು ಬಂದಿತು.
ಮುಂದಿನ ಐದು ದಿನ ಮಳೆ
ಇದಲ್ಲದೇ ಅಕ್ಟೋಬರ್ 13ರಂದು ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.
ಅಕ್ಟೋಬರ್ 14ರಂದು ಕೂಡ ಕರಾವಳಿ ಭಾಗದ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಅಕ್ಟೋಬರ್ 15ರಂದು ಮಾತ್ರ ಬೆಂಗಳೂರು ನಗರ ಸಹಿತ ಹಲವ ಕಡೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದರೆ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ತುಮಕೂರು, ಮಂಡ್ಯ , ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆಯಿದೆ.
ಅಕ್ಟೋಬರ್ 16 ರಂದು ಕೂಡ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ.
ಅಕ್ಟೋಬರ್ 17ರ ಗುರುವಾರವೂ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ ಎನ್ನುವ ಮುನ್ನೆಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ.
ಕರ್ನಾಟಕದ ಕರಾವಳಿಯಲ್ಲೂ ನಾಲ್ಕೈದು ದಿನಗಳ ಕಾಲ ಗಾಳಿಯ ವೇಗದಲ್ಲಿ ಗಣನೀಯ ಏರಿಕೆಯಾಗುವುದರಿಂದ ಮೀನುಗಾರರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಬೆಂಗಳೂರು ಹವಾಮಾನ
ಬೆಂಗಳೂರು ನಗರದಲ್ಲೂ ಮುಂದಿನ ಎರಡು ದಿನ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಕಂಡು ಬಂದರೂ, ಸಾಧಾರಣ ಮಳೆ ಇರಲಿದೆ. ಗುಡುಗು ಕೂಡ ಕಳಿಸಿಕೊಳ್ಳಬಹುದು. ಶನಿವಾರ ಭಾರೀ ಮಳೆಯೂ ಬೆಂಗಳೂರಿನ ಕೆಲವು ಭಾಗಗಳಲ್ಲಿ ಆಗಬಹುದು ಎಂದು ತಿಳಿಸಲಾಗಿದೆ. ಉಷ್ಣಾಂಶದ ಪ್ರಮಾಣವು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು.