KC Reddy Bronze Statue: ವಿಧಾನಸೌಧದ ಆವರಣದಲ್ಲಿ ಕೆಸಿ ರೆಡ್ಡಿ ಪ್ರತಿಮೆ ಅನಾವರಣ, ರಾಜ್ಯದ ಮೊದಲ ಸಿಎಂ ಬಗ್ಗೆ ನಿಮಗೆಷ್ಟು ಗೊತ್ತು?
Kyasamballi Chengaluraya Reddy: ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಸ್ವತಂತ್ರ ಭಾರತದ, ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ ರೆಡ್ಡಿ (ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ) ಅವರ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಅನಾವರಣಗೊಳಿಸಿದ್ದಾರೆ.
ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಸ್ವತಂತ್ರ ಭಾರತದ, ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ ರೆಡ್ಡಿ (ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ) ಅವರ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಅನಾವರಣಗೊಳಿಸಿದ್ದಾರೆ. ಈ ಹಿಂದಿನ ಫೈಬರ್ ಪ್ರತಿಮೆಯ ಬದಲು ವಿಧಾನಸೌಧದ ಮುಂಭಾಗದಲ್ಲಿ ಕಂಚಿನ ಪ್ರತಿಮೆ ಕಂಗೊಳಿಸಿದೆ.
2018ರ ಅಸೆಂಬ್ಲಿ ಚುನಾವಣೆ ಹೊಸ್ತಿಲಲ್ಲಿರುವಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಸಿ ರೆಡ್ಡಿಯವರ ಫೈಬರ್ ಪ್ರತಿಮೆ (ಪ್ಲಾಸ್ಟಿಕ್ ಮಿಶ್ರಿತ) ಅನಾವರಣ ಗೊಳಿಸಿದ್ದರು. ಕೆಸಿ ರೆಡ್ಡಿ ಕುಟುಂಬದ ಒತ್ತಾಯಕ್ಕೆ ಮಣಿದು ಪ್ರತಿಮೆ ಸ್ಥಾಪಿಸಲಾಗಿತ್ತು. ಕಂಚಿನ ಪ್ರತಿಮೆಯನ್ನು ಭವಿಷ್ಯದಲ್ಲಿ ಸ್ಥಾಪಿಸಲಾಗುವುದು ಎಂದು ಆ ಸಂದರ್ಭದಲ್ಲಿ ಭರವಸೆ ನೀಡಲಾಗಿತ್ತು.
2017ರ ನವೆಂಬರ್‌ನಲ್ಲಿ ಬೆಳಗಾವಿ ಅಸೆಂಬ್ಲಿ ಸೆಸನ್ ಸಮಯದಲ್ಲಿ ಕೆಸಿ ರೆಡ್ಡಿಯವರ ಕುಟುಂಬದ ಸದಸ್ಯರು "ಸ್ವಾತಂತ್ರ್ಯ ನಂತರದ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಕೆಸಿ ರೆಡ್ಡಿಯವರ ಕಂಚಿನ ಪ್ರತಿಮೆ ಸ್ಥಾಪಿಸಬೇಕುʼʼ ಎಂದು ಧರಣಿ ನಡೆಸಿದ್ದರು. ಇದೀಗ, ಮುಂಬರುವ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಕರ್ನಾಟಕ ಇರುವ ಸಂದರ್ಭದಲ್ಲಿ ಕೆಸಿ ರೆಡ್ಡಿಯವರ ಕಂಚಿನ ಪ್ರತಿಮೆ ಅನಾವರಣಗೊಂಡಿದೆ.
ಸಿಎಂ ಬಸವರಾಜ ಬೊಮ್ಮಾಯಿ ಏನಂದ್ರು?
- ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ. ಸಿ ರೆಡ್ಡಿ ಅವರ ಹುಟ್ಟೂರಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಅನಾವರಣಗೊಳಿಸಿ ಮಾತನಾಡಿದರು.
- ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಬಗ್ಗೆ ಸಾಹಿತ್ಯ ರಚನೆ ಮಾಡಿ ಜನರಿಗೆ ಹಾಗೂ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಕರ್ನಾಟಕ ಏಕೀಕರಣದ ಹೋರಾಟ, ಆಗಿನ ಜನರ ಮನಸ್ಥಿತಿ ಬೇರೆ ಬೇರೆ ಹೋರಾಟಗಳು, ಎಲ್ಲ ಮುಖ್ಯ ಮಂತ್ರಿಗಳು ತೆಗೆದುಕೊಂಡ ತೀರ್ಮಾನಗಳ ಒಂದು ಮ್ಯೂಸಿಯಂ ಮಾಡುವ ಅವಶ್ಯಕತೆ ಇದೆ ಎಂದರು.
- ಅವರು ಸ್ವಾತಂತ್ರ್ಯ ಬಂದ ಕೂಡಲೇ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ರೈತ ಕುಟುಂಬದಿಂದ ಬಂದ ಅವರು ವಕೀಲರಾಗಿ, ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪ್ರಜಾಪ್ರತಿನಿಧಿ ಎಂಬ ಪಕ್ಷ ಕಟ್ಟಿದ್ದರು. ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದ ಅವರು ಭವಿಷ್ಯದ ನಾಡು ಕಟ್ಟಲು ಅಗತ್ಯವಿರುವ , ಶಾಸನ ರಚನೆ, ಸರ್ಕಾರದ ಯಂತ್ರ ರಚನೆ ಎಲ್ಲವನ್ನು ತಾವಿದ್ದ ನಾಲ್ಕೂವರೆ ವರ್ಷದಲ್ಲಿ ನಮಗೆ ಬಳುವಳಿಯಾಗಿ ನೀಡಿದ್ದಾರೆ. ಅವರ ಆದರ್ಶ ನಮಗೆ ಬಿಟ್ಟು ಹೋಗಿದ್ದಾರೆ. ಆ ಮಹನೀಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು ಎನ್ನುವುದು ನಮ್ಮ ನಂಬಿಕೆ ಎಂದರು.
- ಅವರ ಜನ್ಮ ದಿನಾಚರಣೆಗೆ ಬಂದಾಗ ಅವರ ಪ್ರತಿಮೆ ಮಾಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಅದರಂತೆ ಕರ್ನಾಟಕ ಅಡಿಪಾಯ ಹಾಕಿದ ನಾಯಕನನ್ನು ನೆನೆಯಲು ವಿಧಾನಸೌಧದಲ್ಲಿ ಪ್ರತಿಮೆ ಅನಾವರಣ ಮಾಡಲಾಗಿದೆ ಎಂದರು.
ಕೆಸಿ ರೆಡ್ಡಿಯವರ ಬಗ್ಗೆ ನಿಮಗೆಷ್ಟು ಗೊತ್ತು?
- ಕೆಸಿ ರೆಡ್ಡಿಯವರ ಪೂರ್ಣ ಹೆಸರು ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ (1902-1976). ಇವರು ಸ್ವಾತಂತ್ರ್ಯ ನಂತರ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದರು.
- ಇವರು ಕೋಲಾರ ಜಿಲ್ಲೆಯ ಕೆಜಿಎಫ್‌ನಿಂದ ಸುಮಾರು ಆರು ಕಿ.ಮೀ. ದೂರದ ಕ್ಯಾಸಂಬಳ್ಳಿಯವರು. ಇವರು ತಮ್ಮ ತಾಯಿಯ ತವರು ಮನೆ ರಾಜಪೇಟೆಯಲ್ಲಿ 1902ರ ಮೇ 4ರಂದು ಜನಿಸಿದರು.
- ಆರಂಭಿಕ ಶಿಕ್ಷಣವನ್ನು ಕೆಜಿಎಫ್‌ನಲ್ಲಿ ಪಡೆದ ಇವರು ಬಳಿಕ ಬೆಂಗಳೂರಿನ ಲಂಡನ್ ಮಿಶನ್ ಬಾಯ್ಸ್ ಸ್ಕೂಲ್‌ಗೆ ಸೇರಿದರು. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಹಳೆಯ ಮೈಸೂರು ರಾಜ್ಯಕ್ಕೆ ಮೊದಲಿಗರಾಗಿ ಉತ್ತೀರ್ಣರಾಗಿದ್ದರು. ಇವರು ಸಂಸ್ಕೃತ ಅಭ್ಯಾಸ ಮಾಡಿದ್ದು, ಸಂಸ್ಕೃತ ಪದಗಳನ್ನು ತಪ್ಪಾಗಿ ಉಚ್ಚರಿಸುವುದು ಮಹಾ ಪಾಪ ಎಂದು ಹೇಳುತ್ತಿದ್ದರಂತೆ.
- ಮದ್ರಾಸ್‌ನಲ್ಲಿ ಪಚ್ಚಿಯಪ್ಪ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ಅಲ್ಲಿ ರಾಜಾರಾಮಸ್ವಾಮಿ ಮೊದಲಿಯರ ಪ್ರಶಸ್ತಿ ಪಡೆದರು.
- ಮದ್ರಾಸ್‌ನಲ್ಲಿ ಮೊದಲ ಬಾರಿ ಗಾಂಧೀಜಿಯನ್ನು ನೋಡಿ ಪ್ರಭಾವಿತರಾದರು.
- 1937ರಲ್ಲಿ ಕೋಲಾರದ ಬೌರಿಂಗ್ ಪೇಟೆಯಲ್ಲಿ ಹರಿಜನ ವಿದ್ಯಾರ್ಥಿನಿಲಯ ಸ್ಥಾಪಿಸಿದರು.
- ಸ್ವಾತಂತ್ರ್ಯ ಸಂಗ್ರಾಮ ಹಾಗೂ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರದ 6 ಸ್ಥಾಪನೆಗಾಗಿ ನಡೆದ ಚಟುವಟಿಕೆಗಳೆರಡರಲ್ಲೂ ಮುಂಚೂಣಿಯ ಪಾತ್ರ ವಹಿಸಿದ ಕ್ಯಾಸಂಬಳ್ಳಿ ಚೆಂಗಲರಾಯರೆಡ್ಡಿಯವರು ಮೈಸೂರು ರಾಜ್ಯದ ಪ್ರಥಮ ಮುಖ್ಯ ಮಂತ್ರಿ ಎಂಬ ವಿಶಿಷ್ಟ ಪ್ರಸಿದ್ಧಿ ಗಳಿಸಿದವರು.
- ಮುಖ್ಯಮಂತ್ರಿಯಾಗಿ ಅವರು ಕಾರ್ಯನಿರ್ವಹಿಸಿದ ಕಾಲಮಾನ ಅತ್ಯಂತ ವಿಶಿಷ್ಟ. ಆಗಿನ ಎಲ್ಲ ಸಂಗತಿಗಳೂ ಸಂಕ್ರಮಣಾವಸ್ಥೆಯಲ್ಲಿದ್ದವು. ಅದು ಮೈಸೂರು ಸಂಸ್ಥಾನವು ರಾಜರ ಆಳ್ವಿಕೆಯಿಂದ ಹೊಸ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಸಂಕ್ರಮಣಗೊಳ್ಳುತ್ತಿದ್ದ ಕಾಲ. ರಾಜ್ಯಗಳು ಕೇಂದ್ರದೊಂದಿಗೆ ತಮ್ಮ ಸಂಬಂಧವನ್ನು ನಿಶ್ಚಿತಪಡಿಸಿಕೊಳ್ಳಬೇಕಾಗಿದ್ದ ಕಾಲ. ಜನರು, ಜನಪ್ರತಿನಿಧಿಗಳು ಪ್ರಜಾತಂತ್ರದ ರೀತಿ ನೀತಿಗಳನ್ನು ಮೈಗೂಡಿಸಿಕೊಳ್ಳಬೇಕಾಗಿದ್ದಂತಹ ಕಾಲ. ಇಂತಹ ಕಾಲಘಟ್ಟದಲ್ಲಿ ಮುಖ್ಯಮಂತ್ರಿ, ಸ್ಥಾನಕ್ಕೆ ಬಂದ ರೆಡ್ಡಿಯವರು ಮತ್ತು ಅವರ ಮಂತ್ರಿಮಂಡಲ ಎದುರಿಸಬೇಕಾಗಿದ್ದ ಸಮಸ್ಯೆಗಳು ಬಿಕ್ಕಟ್ಟುಗಳ ಒಂದು ಸ್ಪಷ್ಟ ಚಿತ್ರ ವಿಧಾನಸಭಾ ಕಲಾಪಗಳಲ್ಲಿ ಪ್ರತಿಬಿಂಬಿಸಿದೆ.
- ಹಿಂದಿನ ದಶಕಗಳಲ್ಲಿ ಯಾವ ಆಡಳಿತಕ್ಕೂ ಎದುರಾಗದಂತಹ ವ್ಯಾಪಕವಾದ, ಜಟಿಲವಾದ ಹಾಗೂ ಮೂಲಭೂತವಾದ ಸಮಸ್ಯೆಗಳನ್ನು ರೆಡ್ಡಿಯವರ ಸರ್ಕಾರ ಎದುರಿಸಬೇಕಾಗಿತ್ತು. ಕಾಲಾನುಕಾಲಕ್ಕೆ ಹುಟ್ಟಿಕೊಳ್ಳುತ್ತಿದ್ದ ರಾಜಕೀಯ ಸಂವಿಧಾನಿಕ, ಆರ್ಥಿಕ ಹಾಗೂ ಆಡಳಿತಾತ್ಮಕ ಸಮಸ್ಯೆಯನ್ನು ಎದುರಿಸಬೇಕಾಗಿತ್ತು. ಮೈಸೂರು ಸರ್ಕಾರ ಇಷ್ಟು ವರ್ಷ ತನ್ನದೇ ಆದ ಒಂದು ವ್ಯವಸ್ಥೆಯನ್ನು ಅನುಸರಿಸಿಕೊಂಡು ಬಂದಿತ್ತು. ಆದರೆ ಭಾರತದ ಒಕ್ಕೂಟದೊಂದಿಗೆ ಸೇರಿಕೊಂಡ ನಂತರ ಅದು ತನ್ನ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡುವುದು ಅನಿವಾರ್ಯವಾಯಿತು.
- ರಾಜ್ಯದ ಸಂಬಂಧವಾಗಿ ನಾವು ಮಾಡುವ ಯಾವುದೇ ಚಿಂತನೆ ಆಲೋಚನೆಗಳು ಇಡೀ ಭಾರತದ ಐಕ್ಯತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡಿರಬೇಕು ಎಂಬುದು ರೆಡ್ಡಿಯವರ ಸ್ಪಷ್ಟ ನಿಲುವಾಗಿತ್ತು ಕೇಂದ್ರ ಮತ್ತು ರಾಜ್ಯಗಳ ಸಹಕಾರ, ಸಾಮರಸ್ಯದ ಅಗತ್ಯ ಕುರಿತು ಅವರು ಪ್ರಸ್ತಾವಿಸಿದ ವಿಚಾರಗಳು ಅತ್ಯಂತ ಮನನೀಯವಾಗಿದೆ. ಮೈಸೂರು ರಾಜ್ಯದ ಇತಿಹಾಸ, ಘನತೆ ಹಾಗೂ ಈ ರಾಜ್ಯದ ಸಾಧನೆ ಮತ್ತು ವಿಶಿಷ್ಟತೆಗಳ ಸ್ಪಷ್ಟ ಅರಿವನ್ನು ಹೊಂದಿದ್ದ ರೆಡ್ಡಿಯವರು, ಇದರ ಹಿತವನ್ನು ಬಲಿ ಕೊಡುವ ಕೆಲಸವನ್ನು ಎಂದೂ ಮಾಡಲಿಲ್ಲ, ಕೇಂದ್ರದ ಒತ್ತುವರಿಯಿಂದ ಮೈಸೂರು ರಾಜ್ಯದ ಅಥವಾ ಇತರ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಸಂದರ್ಭದಲ್ಲಿ ಕೇಂದ್ರದ ರೀತಿ ನೀತಿಗಳನ್ನು ಸ್ಪಷ್ಟವಾಗಿ ವಿರೋಧಿಸಿದರು. (ರೆಫರೆನ್ಸ್: ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹ ಮಾಲಿಕೆ, ಕೆಸಿ ರೆಡ್ಡಿ, ಪ್ರಕಟಣೆ, ಸಂಶೋಧನಾ ಮತ್ತು ಉಲ್ಲೇಖನಾ ಶಾಖೆ, ವಿಧಾನಸಭೆ ಸಚಿವಾಲಯ ಕರ್ನಾಟಕ).
- ರೆಡ್ಡಿಯವರು ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ, ಅವರ ಮಾವ, ಶ್ರೀ.ಎಚ್.ಆರ್. ಗುರುವರೆಡ್ಡಿ ಯವರ ತರಹ, ಸಕ್ರಿಯ ಪಾತ್ರತೆಗೆದುಕೊಂಡಿದ್ದರು. ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಸಕ್ರಿಯಪಾತ್ರ ವಹಿಸಿದ್ದರು. ಅವರ ಮಂತ್ರಿಮಂಡಲದಲ್ಲಿ ಶ್ರೀ.ಭಾಷ್ಯಂ, ಎಂಬ ನಿಷ್ಠಾವಂತ, ಹಾಗೂ ದೇಶಪ್ರೇಮಿ, ಮಂತ್ರಿಯಿದ್ದರು. ಭಾಷ್ಯಂ, ತಮಗೆ ಕೊಡಲಾಗಿದ್ದ 'ಸರ್ಕಾರಿ ವಸತಿಗೃಹವನ್ನು, ತಿರಸ್ಕರಿಸಿದರು. ಚೆಂಗಲರಾಯ ರೆಡ್ಡಿಯವರ ಮಂತ್ರಿಮಂಡಲದಲ್ಲಿ ಒಮ್ಮೆ ಭಿನ್ನಾಭಿಪ್ರಾಯ ತಲೆದೋರಿ ರೆಡ್ಡಿಯವರಿಗೆ ಮಾನಸಿಕ ಆಘಾತವಾಯಿತು. ಮುಂದೆ ಅವರು ಪಂಡಿತ್ ನೆಹರೂರವರ, ಮಂತ್ರಿಮಂಡಲದ ಸದಸ್ಯರಾಗಿದ್ದರು. 'ಮಧ್ಯಪ್ರದೇಶದ ಗವರ್ನರ್' ಆಗಿ, ಸೇವೆ ಸಲ್ಲಿಸಿದರು. (ವಿಕಿಪೀಡಿಯಾ)