PM Kisan: ಯುಗಾದಿ ಹಬ್ಬಕ್ಕೆ ರಾಜ್ಯದ ರೈತರಿಗೆ ಸಿಹಿ ಸುದ್ದಿ: 6ನೇ ಕಂತಿನ ಹಣ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತೆ ರಾಜ್ಯ ಸರ್ಕಾರವು ಅರ್ಹ ರೈತರಿಗೆ ತಲಾ 2000 ರೂಪಾಯಿ ಧನ ಸಹಾಯ ನೀಡುತ್ತಾ ಬಂದಿದ್ದು, 6ನೇ ಕಂತಿನ ಹಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯುಗಾದಿ ಹಬ್ಬದ ಮುನ್ನಾ ದಿನವಾದ ಮಂಗಳವಾರ ಬಿಡುಗಡೆ ಮಾಡಿದ್ದಾರೆ.
ಬಾಗಲಕೋಟೆ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ರಾಜ್ಯ ಸರ್ಕಾರವು ಅರ್ಹ ರೈತರಿಗೆ ತಲಾ 2000 ರೂಪಾಯಿ ಧನ ಸಹಾಯ ನೀಡುತ್ತಾ ಬಂದಿದ್ದು, 6ನೇ ಕಂತಿನ ಹಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯುಗಾದಿ ಹಬ್ಬದ ಮುನ್ನಾ ದಿನವಾದ ಮಂಗಳವಾರ ಬಿಡುಗಡೆ ಮಾಡಿದ್ದಾರೆ.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ ಮೂರು ಕಂತಿನಂತೆ ಒಟ್ಟು 6,000 ರೂಪಾಯಿ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿತು. ಇದರ ಬೆನ್ನಲ್ಲೆ ರೈತರಿಗೆ ಕರ್ನಾಟಕ ರಾಜ್ಯ ಸರ್ಕಾರವು ವಾರ್ಷಿಕವಾಗಿ ಎರಡು ಕಂತುಗಳಂತೆ ಒಟ್ಟು 4,000 ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಈವರೆಗೆ ಐದು ಕಂತುಗಳ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಇದೀಗ 6ನೇ ಕಂತಿನ ಹಣ ಬಿಡುಗಡೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ರನ್ನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಿಡುಗಡೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದ ಸಿಎಂ ಬೊಮ್ಮಾಯಿ, 48,75,000 ರೈತರ ಖಾತೆಗೆ 975 ಕೋಟಿ ರೂ. ಇಂದು ಹಣ ಬಿಡುಗಡೆ ಆಗಿದೆ. ನಿಮ್ಮ ಮೊಬೈಲ್ ಗಳನ್ನು ಪರಿಶೀಲಿಸಿ. ಕಿಸಾನ್ ಸಮ್ಮಾನ್ ಯೋಜನೆಯ ರಾಜ್ಯ ಸರ್ಕಾರದ ಆರನೇ ಕಂತಿನ ಹಣ ಬಿಡುಗಡೆಯನ್ನು ರನ್ನನ ನಗರ ಮುಧೋಳದಲ್ಲಿ ಮಾಡಬೇಕೆಂದು ಇಲ್ಲಿಗೆ ಬಂದಿದ್ದೇನೆ ಎಂದರು.
15 ದಿನಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಳಗಾವಿಯಿಂದ ಇಡೀ ದೇಶಕ್ಕೆ 22 ಸಾವಿರ ಕೋಟಿ ರೂ ಬಿಡುಗಡೆ ಮಾಡಿದ್ದರು. ಇಡೀ ರಾಜ್ಯದ ಜನತೆಗೆ ನಮ್ಮ ಪಾಲು ಬಿಡುಗಡೆ ಮಾಡಲಾಗಿದೆ. ಕಳೆದ ನಾಲ್ಕು ವರ್ಷದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ 16 ಸಾವಿರ ಕೋಟಿ ರೂ ನೀಡಿ 54,74,000 ರೈತರಿಗೆ ರಾಜ್ಯ ಸರ್ಕಾರ ನೀಡಿದೆ ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಮಯದ ಅರಿವಿನೊಂದಿಗೆ ಯಾವುದೇ ಪಕ್ಷಬೇಧವಿಲ್ಲದೇ ನಾವು ಕೆಲಸ ಮಾಡುತ್ತಿದ್ದೇವೆ. ಮಲ್ಟೂರು ಮಹಾಲಕ್ಷ್ಮಿ ಯೋಜನೆಗೆ ಒಂದು ವರ್ಷದ ಹಿಂದೆ ಬಂದು ಅಡಿಗಲ್ಲು ಹಾಕಿದ್ದೆ. ಈಗ ಬಂದು ಉದ್ಘಾಟನೆ ಮಾಡುತ್ತಿದ್ದೇನೆ. ಒಂದೇ ವರ್ಷದಲ್ಲಿ ಯೋಜನೆಯನ್ನು ಸಂಪೂರ್ಣ ಮಾಡಿ, ಈ ತಾಲ್ಲೂಕಿನ ಜನತೆಗೆ ಲೋಕಾರ್ಪಣೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಹಿಂದಿನ ಸರ್ಕಾರದ ಧೀಮಂತ ನಾಯಕ ಎನಿಸಿಕೊಂಡ ಈ ಜಿಲ್ಲೆಯ ಬಾದಾಮಿ ಶಾಸಕರು, ಮಾಜಿ ಮುಖ್ಯಮಂತ್ರಿಗಳು ಅಡಿಗಲ್ಲು ಹಾಕಿ, ಲೋಕಾರ್ಪಣೆ ಮಾಡಿದ ಒಂದೇ ಒಂದು ಯೋಜನೆಯನ್ನು ತೋರಿಸಿ ಎಂದು ಸಿಎಂ ಬೊಮ್ಮಾಯಿ ಸವಾಲು ಹಾಕಿದರು.
ಸಮಯದ ಅರಿವಿನಿಂದ ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಪೂರೈಸಬೇಕೆಂದು ಛಲದಿಂದ ಕೆಲಸ ಮಾಡಿದ್ದು ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು. ಈ ಭಾಗದಲ್ಲಿ ಏಳು ಏತ ನೀರಾವರಿ ಚಾಲನೆ ಕೊಟ್ಟು, ಪಕ್ಷಬೇದವಿಲ್ಲದೇ ಕೆಲಸ ಮಾಡಿದ್ದೇವೆ. 34 ಹೆಕ್ಟೇರ್ ಪ್ರದೇಶದ ಕೆರೂರು ಏತ ನೀರಾವರಿ ಯೋಜನೆಯನ್ನು 780 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಮೋದನೆ ನೀಡಿ, ಹಣ ಒದಗಿಸಿ ಅಡಿಗಲ್ಲು ಹಾಕಿದ್ದೇವೆ. ಬದಾಮಿ ತಾಲ್ಲೂಕಿನ ರೈತರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಮಾಡಿದ್ದೇವೆ ಎಂದರು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಯೋಜನೆಗಳ ಅಭಿವೃದ್ಧಿ ಮಾಡಬಹುದಾಗಿತ್ತು. ಕೃಷ್ಣ ಮೇಲ್ದಂಡೆ ಯೋಜನೆ 3 ನೇ ಹಂತವನ್ನು ಮಾಡಿ ರೈತರ ಸಂಕಷ್ಟವನ್ನು ನೀಗಿಸಬಹುದಾಗಿತ್ತು. ಆದರೆ ಅವರು ಮಾಡಲಿಲ್ಲ. ಜನರ ಭೂಮಿ ಸ್ವಾಧೀನ ಪಡಿಸಿಕೊಂಡು ಏಕಸ್ವಾಮ್ಯದ ದರವನ್ನು ನೀಡಿ ಎಂದು ಜನರು ಐದು ವರ್ಷದಿಂದ ಕೇಳಿದರು. ಈ ಭಾಗದ ಜನ ಸಂಪನ್ಮೂಲ ಸಚಿವರು ಮಾಡಲಿಲ್ಲ. ಸರಿಯಾಗಿ ಸಭೆ ನಡೆಸಲಿಲ್ಲ. ಇಲ್ಲಿ 1.25 ಲಕ್ಷ ಎಕರೆ ಭೂಮಿಯನ್ನು ನಾವು ಭೂ ಸ್ವಾಧೀನ ಮಾಡಿಕೊಂಡು, 20 ಹಳ್ಳಿಗಳನ್ನು ಸ್ಥಳಾಂತರಿಸಬೇಕಿದೆ. ಕಂದಾಯ ಸಚಿವ ಅಶೋಕ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ರೈತರಿಗೆ 20% ದರ ಹೆಚ್ಚಳ ಮಾಡಿ ಚೆಕ್ ವಿತರಣೆ ಮಾಡುತ್ತಿದ್ದೇವೆ. ಇದು ಬದಲಾವಣೆ, ಇದು ವ್ಯತ್ಯಾಸ. ಇದು ನಮ್ಮ ಉತ್ತರ ಕರ್ನಾಟಕದ ಅಭಿವೃದ್ಧಿಯ, ನೀರಾವರಿಯ ಬದ್ಧತೆ ಎಂದು ಹೇಳಿದರು.
ಕಾಂಗ್ರೆಸ್ ನವರು ಘೋಷಣೆ ಮಾಡುತ್ತಾರೆ. ನಾವು ಅನುಷ್ಠಾನ ಮಾಡುತ್ತೇವೆ. ಅವರು ಗ್ಯಾರಂಟಿ ಕಾರ್ಡ್ ಕೊಟ್ಟರೆ, ನಮ್ಮ ಕೆಲಸವೇ ನಮ್ಮ ಗ್ಯಾರಂಟಿ. ಬೋಗಸ್ ಗ್ಯಾರಂಟಿ ಕೊಡದೇ ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಕೆಲಸಗಳು ಮಾತನಾಡಬೇಕು ಎಂದರು.
ಮುಧೋಳ ಅಭಿವೃದ್ಧಿ ಆಗಿದ್ದು ಗೋವಿಂದ ಕಾರಜೋಳ ಶಾಸಕರಾದ ಮೇಲೆ. ಯಾವುದೇ ಅಭಿವೃದ್ಧಿ ಚಿಂತನೆ ನಿಮಗೆ ಇರಲಿಲ್ಲ. ನಿಮ್ಮ ಕಾಲದಲ್ಲಿ ಆದ ಅಭಿವೃದ್ಧಿ ಪಟ್ಟಿ ಬಿಡುಗಡೆ ಮಾಡಿ. ನಮ್ಮ ಅಭಿವೃದ್ಧಿ ಕಾರ್ಯವನ್ನು ಜನರ ಮುಂದೆ ಇಡುತ್ತೇವೆ. ಜನರೇ ತೀರ್ಮಾನ ಮಾಡಲಿ ಎಂದು ಮುಖ್ಯಮಂತ್ರಿ ಸವಾಲೆಸದರು.
ಎಸ್.ಸಿ, ಎಸ್.ಎಸ್ಟಿ ಮೀಸಲಾತಿಯ. 40 ವರ್ಷದ ಬೇಡಿಕೆ ನಿಮ್ಮ ಕಿವಿಗೆ ಕೇಳಲಿಲ್ಲ. ಕಾಲಗಳು ಉರುಳಿದ ಬಳಿಕ ನಮ್ಮ ಅವಧಿ ಬಂತು. ನಾವು ಇದನ್ನು ಮಾಡಬೇಕು ಅಂತ ತೀರ್ಮಾನಕ್ಕೆ ಕುಳಿತರೆ, ಜೇನು ಗೂಡಿಗೆ ಕೈ ಹಾಕಬೇಡಿ ಎಂದರು. ನಾನು ಜೇನಿನ ಹಾನಿಯನ್ನು ತುಳಿತಕ್ಕೊಳಗಾದ ಜನರಿಗೆ ಕೊಡುವ ನಿಟ್ಟಿನಲ್ಲಿ ನಾನು ಮೀಸಲಾತಿ ತೀರ್ಮಾನ ಮಾಡಿದ್ದೇನೆ. ನಿಯತ್ತು, ನೀತಿಯಿಂದ ನಾನು ಕೆಲಸ ಮಾಡಿದ್ದೇನೆ ಎಂದರು.
ಜಲಜೀವನ ಮಿಷನ್ ಮೂಲಕ ಎಲ್ಲ ಮನೆಗಳಿಗೆ ನೀರು ಕೊಡುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದರು. ಹಿಂದಿನ ಯಾವುದೇ ಪ್ರಧಾನಿ ಅಂತಹ ಧೈರ್ಯ ಮಾಡಿರಲಿಲ್ಲ. ಕೊಡಬೇಕು ಎನ್ನುವ ಮನಸ್ಸು ಇರಲಿಲ್ಲ. ದೇಶದಲ್ಲಿ 12 ಕೋಟಿ ಹೊಸದಾಗಿ ಮನೆ ಮನೆಗೆ ನೀರು ಕೊಡಲಾಗಿದೆ. ರಾಜ್ಯದಲ್ಲಿ ಸ್ವತಂತ್ರ ಬಂದು 72 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನೀರು ಕೊಡಲಾಗಿತ್ತು. ಆದರೆ ನಾವು ಕಳೆದ ಮೂರುವರೆ ವರ್ಷದಲ್ಲಿ 40 ಲಕ್ಣ ಮನೆಗಳಿಗೆ ಕುಡಿಯುವ ನೀರು ಕೊಟ್ಟಿದ್ದೇವೆ. ಇದು ನಮ್ಮ ಗ್ಯಾರಂಟಿ ಎಂದರು.
ರಾಜ್ಯದಲ್ಲಿ ರೈತ ವಿದ್ಯಾನಿಧಿ ಮಾಡಿದ್ದೇವೆ. ಕೃಷಿ ಆದಾಯ ಸಾಕಾಗುವುದಿಲ್ಲ. ರೈತರ ಮಕ್ಕಳು ಹೆಚ್ಚಿನ ವಿಧ್ಯಾಭ್ಯಾಸ ಮಾಡಿ, ಉನ್ನತ ಹುದ್ದೆಗಳಿಗೆ ಸೇರಬೇಕು ಎನ್ನುವುದು ನನ್ನ ಕನಸು. ರೈತರ ಮಕ್ಕಳು ಜಿಲ್ಲಾಧಿಕಾರಿಗಳಾಗಿ ಮುಖ್ಯಮಂತ್ರಿಗಳ ಜತೆಗೆ ಕುಳಿತುಕೊಳ್ಳಬೇಕು. ಜನರು ಸಮಸ್ಯೆಗಳ ಜೊತೆಗೆ ಜೀವನ ಮಾಡುವುದರ ಕಷ್ಟ ಎಷ್ಟು ಎನ್ನುವುದು ನನಗೆ ಗೊತ್ತಿದೆ. ಜನರ ಬಳಿ ನಿರಂತರ ಸಂಪರ್ಕ ಇದ್ದಾಗ ಸಮಸ್ಯೆಗಳು ಗೊತ್ತಾಗುತ್ತದೆ. ಆ ಸಮಸ್ಯೆಗಳಿಗೆ ಪರಿಹಾರ ನಾವು ಆಗಬೇಕು. ಜನಪರ ಸರ್ಕಾರ ನಮ್ಮದು ಎಂದರು.
ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿ, ರಾಜ್ಯದ ಆರ್ಥಿಕ ಚೈತನ್ಯವನ್ನು ತಂದು, ರಾಜ್ಯದ ಬೊಕ್ಕಸಕ್ಕೆ ಅಧಿಕ ಆದಾಯವನ್ನು ತಂದಿದ್ದೇವೆ. ಅದರಿಂದ ಈ ಎಲ್ಲ ಕಾರ್ಯಕ್ರಮವನ್ನು ನಾವು ಮಾಡಿದ್ದೇವೆ.
ಮಾರ್ಚ್ 23 ರಂದು ವಿಧಾನಸೌಧದ ಮುಂದೆ ಹತ್ತು ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ 5 ಲಕ್ಷ ರೂಪಾಯಿ, 1 ಒಂದು ಲಕ್ಷ ಸಹಾಯಧನ ಹಣವನ್ನು ಬಿಡುಗಡೆ ಮಾಡುತ್ತಿದ್ದೇನೆ. ಕಳೆದ ವಾರ ಹತ್ತು ಸಾವಿರ ಸಂಘಗಳಿಗೆ ಬಿಡುಗಡೆ ಮಾಡಲಾಗಿದೆ. ಏಪ್ರಿಲ್ ನಲ್ಲಿ 30 ಸಾವಿರ ಸಂಘಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಅವರು ಉತ್ಪಾದನೆ ಮಾಡಿದ ವಸ್ತುಗಳಿಗೆ ಮಾರುಕಟ್ಟೆ ಜೋಡಣೆ ಮಾಡಿ ತಿಂಗಳ ಆದಾಯ ಬರುವ ರೀತಿಯಲ್ಲಿ ಮಾಡುತ್ತಿದ್ದೇವೆ. ಯವಕರ ಸಂಘಗಳಿಗೂ ಐದು ಲಕ್ಷ ರೂ ನೀಡಿ ಯುವಶಕ್ತಿಗೆ ಬಲ ಕೊಡುವ ಕೆಲಸ ಮಾಡುತ್ತಿದ್ದೇವೆ. ಕಳೆದ ನಾಲ್ಕು ವರ್ಷದಲ್ಲಿ ಖಾಸಗಿ, ಸರ್ಕಾರಿ ವಲಯದಲ್ಲಿ 13 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯನ್ನು ಮಾಡಿದ್ದೇವೆ. ಆರ್ಥಿಕವಾಗಿ ಸಬಲವಾದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಆ ರೀತಿಯ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಭತ್ಯೆ ಕೊಡುತ್ತೇವೆಂದು ಬೋಗಸ್ ಸುಳ್ಳು ಆಶ್ವಾಸನೆ ಕೊಟ್ಟು ಕೈ ಕೊಡುತ್ತಾರೆ. ರಾಜಸ್ಥಾನ, ಛತ್ತೀಸಗಡದಲ್ಲಿ ಹಣ ಕೊಡುತ್ತೇವೆಂದರು. ಇಲ್ಲಿಯವರೆಗೂ ಕೊಟ್ಟಿಲ್ಲ. ಸಿದ್ದರಾಮಯ್ಯರ ಅನ್ನಭಾಗ್ಯಕ್ಕಿಂತ ಮೊದಲು ಅಕ್ಕಿಯನ್ನು ಕೊಡುತ್ತಿದ್ದರು. ಪ್ರಧಾನಮಂತ್ರಿ ಮೋದಿಯವರದ್ದು 30 ರೂ. ಮೂರು ರೂ ಚೀಲಕ್ಕೆ 3 ರೂ ಸಿದ್ದರಾಮಯ್ಯರು ಕೊಡುತ್ತಿದ್ದರು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಇವರು ಮಾಡಿದ್ದಾರೆ. ಕಾಂಗ್ರೆಸ್ ನವರು ಅಧಿಕಾರಕ್ಕೆ ಬರುವ ಮುಂಚೆ 10 ಕೆ.ಜಿ ಅಕ್ಕಿ ಕೊಡುತ್ತಿದ್ದರು. ಇವರು ಬಂದು ಅದನ್ನು ಕಡಿಮೆ ಮಾಡಿ, ಈಗ 10 ಕೆ.ಜಿ ಕೊಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳಿ, ಜನರನ್ನು ಮೋಸ ಮಾಡುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಮಾಡುತ್ತಿದ್ದೇವೆ. ನೀರಾವರಿ, ಕೈಗಾರಿಕೆ, ಉದ್ಯೋಗ ಸೃಷ್ಟಿ, ವಿದ್ಯಾಸಂಸ್ಥೆಗಳನ್ನು ಸ್ಥಾಪನೆ ಮಾಡುವ ಉದ್ದೇಶದಿಂದ ಮಾಡಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲೆ ಇದ್ದರೆ, ಕಿತ್ತೂರು ಕರ್ನಾಟಕ, ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ವೈಭವವನ್ನು ಮತ್ತೊಮ್ಮೆ ಪುನರ್ ಸ್ಥಾಪಿಸಲು ಬದ್ಧನಿದ್ದೇನೆ. ಕನ್ನಡ ಸಾಹಿತ್ಯ ಲೋಕದ ಆದಿಕವಿಗಳು ರನ್ನ, ಪಂಪರು. ರನ್ನನ ನಾಡಿನಿಂದ ಇಡೀ ಮನುಕುಲಕ್ಕೆ ವಿಕಾಸವಾಗಿದೆ. ರನ್ನನ ಗತವೈಭವವನ್ನು ಪುನರ್ ಸ್ಥಾಪನೆಗೆ ವಿಶೇಷ ಕಾರ್ಯಕ್ರಮ ಮುಧೋಳ ತಾಲ್ಲೂಕಿನಲ್ಲಿ ಮಾಡುವ ತೀರ್ಮಾನ ಮಾಡಿದ್ದೇನೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣದ ಕನಸು ನಮ್ಮದು ಎಂದರು.
ಮುಧೋಳ ಒಂದು ಮಾದರಿ ಕ್ಷೇತ್ರ. ಗೋವಿಂದ ಕಾರಜೋಳ ಅವರು ಬಹಳ ಬುದ್ಧಿವಂತರು. ಅವರು ಹೇಗೆ ಕೆಲಸ ತೆಗೆದುಕೊಳ್ಳುತ್ತಾರೆ ಗೊತ್ತಾಗುವುದಿಲ್ಲ. ಈ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂ ಕೆಲಸ ಮಾಡಿದ್ದೇನೆ. ಎಲ್ಲ ಕಾಯಕ ಇರುವ ಸಮಾಜಕ್ಕೆ ಉತ್ತೇಜನ ಕೊಡಲು ನಿಗಮ ಮಂಡಳಿ ಮಾಡಿ ವಿಶೇಷ ಅನುದಾನ ನೀಡಿ ಅವರನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದರು.