ಕರ್ನಾಟಕದಲ್ಲಿ ಮುಂಗಾರು ಮಳೆ; ಗೋಕರ್ಣ, ಸವದತ್ತಿ ದೇಗುಲಗಳು ಜಲಾವೃತ, ಧಾರವಾಡದಲ್ಲಿ ನಡುರಸ್ತೆಯಲ್ಲೇ ಜಪ, ಆಗುಂಬೆ ಸಮೀಪ ಸಿಡಿಲಿಗೆ ವ್ಯಕ್ತಿಬಲಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಮುಂಗಾರು ಮಳೆ; ಗೋಕರ್ಣ, ಸವದತ್ತಿ ದೇಗುಲಗಳು ಜಲಾವೃತ, ಧಾರವಾಡದಲ್ಲಿ ನಡುರಸ್ತೆಯಲ್ಲೇ ಜಪ, ಆಗುಂಬೆ ಸಮೀಪ ಸಿಡಿಲಿಗೆ ವ್ಯಕ್ತಿಬಲಿ

ಕರ್ನಾಟಕದಲ್ಲಿ ಮುಂಗಾರು ಮಳೆ; ಗೋಕರ್ಣ, ಸವದತ್ತಿ ದೇಗುಲಗಳು ಜಲಾವೃತ, ಧಾರವಾಡದಲ್ಲಿ ನಡುರಸ್ತೆಯಲ್ಲೇ ಜಪ, ಆಗುಂಬೆ ಸಮೀಪ ಸಿಡಿಲಿಗೆ ವ್ಯಕ್ತಿಬಲಿ

ಕರ್ನಾಟಕದಲ್ಲಿ ಮುಂಗಾರು ಮಳೆ ಆವರಿಸತೊಡಗಿದ್ದು, 12 ಜಿಲ್ಲೆಗಳಲ್ಲಿ ನಿನ್ನೆ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ಗೋಕರ್ಣ, ಸವದತ್ತಿ ದೇಗುಲಗಳು ಜಲಾವೃತಗೊಂಡಿದ್ದವು. ಇವುಗಳ ನಡುವೆ, ಧಾರವಾಡದಲ್ಲಿ ನಡುರಸ್ತೆಯಲ್ಲೇ ಜಪ ಮಾಡಿದ ವಿಡಿಯೋ ವೈರಲ್ ಆಯಿತು. ಆಗುಂಬೆ ಸಮೀಪ ಸಿಡಿಲಿಗೆ ವ್ಯಕ್ತಿ ಬಲಿಯಾದ ಘಟನೆ ಮತ್ತು ಗಮನಸೆಳೆದ 5 ಘಟನೆಗಳ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಮುಂಗಾರು ಮಳೆ; ಗೋಕರ್ಣ, ಸವದತ್ತಿ ದೇಗುಲಗಳು ಜಲಾವೃತ, ಧಾರವಾಡದಲ್ಲಿ ನಡುರಸ್ತೆಯಲ್ಲೇ ಜಪ, ಆಗುಂಬೆ ಸಮೀಪ ಸಿಡಿಲಿಗೆ ವ್ಯಕ್ತಿ ಮೃತಪಟ್ಟ ಘಟನೆ ವರದಿಯಾಗಿದೆ.
ಕರ್ನಾಟಕದಲ್ಲಿ ಮುಂಗಾರು ಮಳೆ; ಗೋಕರ್ಣ, ಸವದತ್ತಿ ದೇಗುಲಗಳು ಜಲಾವೃತ, ಧಾರವಾಡದಲ್ಲಿ ನಡುರಸ್ತೆಯಲ್ಲೇ ಜಪ, ಆಗುಂಬೆ ಸಮೀಪ ಸಿಡಿಲಿಗೆ ವ್ಯಕ್ತಿ ಮೃತಪಟ್ಟ ಘಟನೆ ವರದಿಯಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆ ವ್ಯಾಪಿಸತೊಡಗಿದ್ದು, ನಿನ್ನೆ (ಜೂನ್ 8) ಯಿಂದ ಇಂದು ಬೆಳಗ್ಗೆ ತನಕ ಸುರಿದ ಮಳೆಗೆ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿವಿಧ ರೀತಿಯ ಅನಾಹುತ, ಅವಾಂತರಗಳಾಗಿವೆ. ವಿಜಯಪುರದ ಢೋಣಿ ನದಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿ ಸೇತುವೆ ಮೇಲೆ ಹರಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿತು. ಸವದತ್ತಿ ದೇವಸ್ಥಾನ ಮತ್ತು ಗೋಕರ್ಣದ ಮಹಾಬಲೇಶ್ವರ ದೇಗುಲದೊಳಗೆ ನೀರು ನುಗ್ಗಿದೆ. ಶಿವಮೊಗ್ಗ ಜಿಲ್ಲೆ ಆಗುಂಬೆ ಸಮೀಪ ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆಯೂ ನಡೆದಿದೆ. ಇನ್ನೊಂದೆಡೆ, ದಾರವಾಡದ ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ಧಾರಾಕಾರ ಮಳೆಗೆ ಜಪಕ್ಕೆ ಕುಳಿತ ವಿಡಿಯೋ ವೈರಲ್ ಆಗಿತ್ತು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕಲಬುರಗಿ ಜಿಲ್ಲೆಯಲ್ಲಿ ಬಿರುಗಾಳಿ ಮಳೆಗೆ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಲವಾರು ಜಾನುವಾರುಗಳು ಮೃತಪಟ್ಟಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತವಾಗಿತ್ತು. ಇದೇ ರೀತಿ, ಉತ್ತರಕನ್ನಡ, ಬಳ್ಳಾರಿ, ವಿಜಯನಗರ, ಕೊಪ್ಪಳ, ಧಾರವಾಡ, ಬೆಳಗಾವಿ, ತುಮಕೂರು, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಬೆಂಗಳೂರು, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ಕೂಡ ಉತ್ತಮ ಮಳೆಯಾಗಿದೆ.

ಗೋಕರ್ಣ, ಸವದತ್ತಿ ದೇವಾಲಯಗಳಿಗೆ ನುಗ್ಗಿದ ಮಳೆ ನೀರು

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ಯಾತ್ರಾಸ್ಥಳವಾಗಿರುವ ಗೋಕರ್ಣದಲ್ಲಿ ಧಾರಾಕಾರ ಮಳೆ ಸುರಿದ ಕಾರಣ ಸಂಗಮ ನಾಲಾದ ಮೂಲಕ ಸಮುದ್ರ ಸೇರುವ ಮಳೆ ನೀರು ಮಹಾಬಲೇಶ್ವರ ಮಂದಿರದ ಸೋಮಸೂತ್ರದಿಂದ ಗರ್ಭ ಗುಡಿಗೆ ನುಗ್ಗಿತ್ತು. ಇದರಿಂದಾಗಿ ನಿನ್ನೆ ರಾತ್ರಿ ಭಕ್ತರಿಗೆ ಕೊಂಚ ತೊಂದರೆಯಾಗಿತ್ತು. ಗೋಕರ್ಣ ಮಂದಿರದ ಸಿಬ್ಬಂದಿ ಸತತ ಎರಡು ಗಂಟೆ ಸಂಗಮ ನಾಲಾ ಸಮುದ್ರ ಸೇರುವಲ್ಲಿನ ಕೋಡಿಯನ್ನು (ಮರಳ ದಿನ್ನೆ) ಕಡಿದು ನೀರು ಸರಾಗವಾಗಿ ಹೋಗುವಂತೆ ಮಾಡಿದ ಬಳಿಕ ದೇವಸ್ಥಾನದಲ್ಲಿ ನೀರಿನ ಪ್ರಮಾಣ ಇಳಿಕೆಯಾಯಿತು. ಇನ್ನೊಂದೆಡೆ, ಬೆಳಗಾವಿ ಜಿಲ್ಲೆಯಲ್ಲಿ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು ಸವದತ್ತಿ ತಾಲೂಕಿನ ಯಲ್ಲಮ್ಮ ಗುಡ್ಡದಲ್ಲಿ ದೇವಸ್ಥಾನಕ್ಕೂ ಮಳೆ ನೀರು ನುಗ್ಗಿದೆ. ಇದರಿಂದಾಗಿ ಭಕ್ತರು ಪರದಾಡಬೇಕಾಯಿತು.

ಕರ್ನಾಟಕದಲ್ಲಿ ಮುಂಗಾರು ಮಳೆ; ಗಮನ ಸೆಳೆದ 5 ಅಂಶಗಳು

1) ಆಲಮಟ್ಟಿ ಜಲಾಶಯಕ್ಕೆ ವರ್ಷದ ಮೊದಲ ಒಳಹರಿವು ಆರಂಭ

ಉತ್ತರಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯಕ್ಕೆ ಈ ವರ್ಷದ ಮೊದಲ ಒಳಹರಿವು ಶುರುವಾಗಿದೆ. 1,768 ಕ್ಯುಸೆಕ್ ನೀರು ಅಣೆಕಟ್ಟೆಗೆ ಹರಿದುಬಂದಿದೆ. ಕಳೆದ ವರ್ಷ ಜೂನ್ ಕಳೆದರೂ ಒಳಹರಿವು ಬಂದಿರಲಿಲ್ಲ. ಸಮಾಧಾನಕಾರ ವಿಷಯ ಎಂದರೆ ಈ ವರ್ಷ, ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಜೂನ್ ಮೊದಲ ವಾರವೇ ಒಳ ಹರಿವು ಆರಂಭವಾಗಿದೆ.

2) ಧಾರವಾಡ ನಗರ ಬಸ್ ನಿಲ್ಧಾಣದ ಎದುರು ಧಾರಾಕಾರ ಮಳೆಯಲ್ಲೇ ವ್ಯಕ್ತಿಯ ಜಪ

ಧಾರವಾಡ ನಗರ ಬಸ್ ನಿಲ್ದಾಣದ ಎದುರು ಧಾರಾಕಾರದಲ್ಲಿ ಸುರಿಯುತ್ತಿದ್ದ ಮಳೆಯಲ್ಲೇ ವ್ಯಕ್ತಿಯೊಬ್ಬ ಜಪ ಮಾಡುತ್ತಾ ಕುಳಿತ ಘಟನೆ ಜನಮನಸೆಳೆಯಿತು. ಕೆಲವರು ಇದರ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದು ವೈರಲ್ ಆಗಿದೆ.

3) ಆಗುಂಬೆ ಸಮೀಪ ಸಿಡಿಲು ಬಡಿದು ವ್ಯಕ್ತಿ ಸಾವು

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಬಿದರಗೋಡು ಗ್ರಾಮದ ಗುಜುಗೊಳ್ಳಿಯಲ್ಲಿ ನಿನ್ನೆ ಅಡಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ನಾಗೇಂದ್ರ (45) ಎಂದು ಗುರುತಿಸಲಾಗಿದೆ. ಮೂರ್ನಾಲ್ಕು ಮಂದಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅಪಾಯದಿಂದ ಪಾರಾಗಿದ್ದಾರೆ.

4) ಪುರಸಭಾ ಸದಸ್ಯನ ರಕ್ಷಣೆ

ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಜಾನಕಿಹಳ್ಳದ ಸೆಳವಿಗೆ ಸಿಕ್ಕಿ ಹರಿದು ಹೋಗುತ್ತಿದ್ದ ಸ್ಕೂಟಿ ಸವಾರನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಪಾರು ಮಾಡಿದ್ದಾರೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಸಂತ್ರಸ್ತ ವ್ಯಕ್ತಿಯನ್ನು ಪುರಸಬಾ ಸದಸ್ಯ ನಿಂಗಪ್ಪ ಗುರುಲಿಂಗಪ್ಪ ಕುಂಟೋಜಿ (35) ಎಂದು ಗುರುತಿಸಲಾಗಿದೆ. ಸೇತುವೆ ಮೇಲೆ ನದಿ ತುಂಬಿ ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ಸ್ಕೂಟಿಯಲ್ಲಿ ಸೇತುವೆ ದಾಟಲು ಹೋಗಿ, ಪ್ರವಾಹದ ಸೆಳೆತಕ್ಕೆ ಕುಂಟೋಜಿ ಸಿಲುಕಿದ್ದರು. ಸ್ಥಳದಲ್ಲಿದ್ದವರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಅವರನ್ನು ರಕ್ಷಿಸಿದ್ದಾರೆ.

5) ಧಾರವಾಡದ ವಿವೇಕಾನಂದ ನಗರದ ಮೋರಿಯಲ್ಲಿ ಶವ ಪತ್ತೆ

ಧಾರವಾಡದಲ್ಲಿ ಧಾರಾಕಾರ ಮಳೆ ಸುರಿದ ಕಾರಣ ಮೋರಿಗಳಲ್ಲಿ ನೀರು ತುಂಬಿ ಹರಿದಿದೆ. ಈ ನಡುವೆ, ವಿವೇಕಾನಂದ ನಗರದ ಮೋರಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಅದು ತೇಲಿ ಬಂದಿರುವುದಾ ಅಥವಾ ಅಲ್ಲೇ ಬಿದ್ದು ಮೃತಪಟ್ಟಿರುವುದಾ ಎಂಬುದು ಧೃಡಪಟ್ಟಿಲ್ಲ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner