ದೀಪಾವಳಿ 2024: ಹಬ್ಬದ ತಯಾರಿಯಲ್ಲಿ ಸ್ವಯಂ ಕಾಳಜಿ ಮರೆಯುವ ಮಹಿಳೆಯರು; ಕೂದಲು, ತ್ವಚೆಯನ್ನು ಹೀಗೆ ಆರೈಕೆ ಮಾಡಿ
Deepavali 2024: ಬೆಳಕಿನ ಹಬ್ಬದಲ್ಲಿ ಮನೆಯನ್ನು ಅಲಂಕರಿಸಲಾಗುತ್ತದೆ. ತಿಂಡಿಗಳನ್ನು ಮಾಡಲಾಗುತ್ತದೆ. ಮಹಿಳೆಯರು ಎಲ್ಲಾ ತಯಾರಿಯಲ್ಲಿ ಸ್ವಯಂ ಕಾಳಜಿ ಮಾಡುವುದನ್ನು ಮರೆಯುತ್ತಾರೆ. ಹಬ್ಬಕ್ಕೆ ನೀವು ಸುಂದರವಾಗಿ ಕಾಣಿಸಿಕೊಳ್ಳಲು ಕೂದಲು, ತ್ವಚೆಯನ್ನು ಹೀಗೆ ಆರೈಕೆ ಮಾಡಿ. (ಬರಹ: ಅರ್ಚನಾ ವಿ ಭಟ್)
ಕತ್ತಲೆಯನ್ನು ಓಡಿಸುವ ಬೆಳಕಿನ ಹಬ್ಬ ದೀಪಾವಳಿ. ಇದು ಭಾರತದಾದ್ಯಂತ ಬಹಳ ಸಂಭ್ರಮದಿಂದ ಆಚರಿಸುವ ಹಬ್ಬ. ಈ ಹಬ್ಬದ ತಯಾರಿ ವಾರದ ಮೊದಲೇ ಪ್ರಾರಂಭವಾಗುತ್ತದೆ. ಮನೆಯ ಸ್ವಚ್ಛತೆಯಿಂದ ಹಿಡಿದು ಸಿಹಿ ಮತ್ತು ಕರಿದ ತಿಂಡಿಗಳ ತಯಾರಿ ಬಹಳ ಜೋರಾಗಿಯೇ ಇರುತ್ತದೆ.
ಹೆಣ್ಣುಮಕ್ಕಳು ವಾರದ ಮೊದಲೇ ಈ ತಯಾರಿಯಲ್ಲಿ ತೊಡಗಿಕೊಳ್ಳುವುದರಿಂದ ಅವರ ಕೂದಲು ಮತ್ತು ತ್ವಚೆ ಶುಷ್ಕವಾಗಿ ಕಾಂತಿ ಕಳೆದುಕೊಳ್ಳುತ್ತದೆ. ಮೊಡವೆ, ಒಣ ತ್ವಚೆಯಂತಹ ಸಮಸ್ಯೆಗಳು ಎದುರಾಗಬಹುದು. ಮನೆಯ ಜವಾಬ್ದಾರಿಗಳನ್ನು ಹೊತ್ತು ಹಬ್ಬದ ತಯಾರಿ ನಡೆಸುವ ಮಹಿಳೆಯರೇ ಹಬ್ಬದಂದು ಚೆನ್ನಾಗಿ ಕಾಣಿಸದಿದ್ದರೆ ಹೇಗೆ? ಕೂದಲು ಮತ್ತು ತ್ವಚೆಗೆ ಆರೈಕೆ ಮಾಡಲು ಸಮಯ ಸಿಗದಿದ್ದರೆ ಚಿಂತಿಸುವ ಅಗತ್ಯವಿಲ್ಲ. ದೀಪಾವಳಿಗೆ ಸುಂದರವಾಗಿ ಕಾಣಿಸಲು ಕೆಲವು ಸರಳ ಆರೈಕೆಗಳನ್ನು ಮಾಡಿಕೊಳ್ಳುವುದು ಹೇಗೆ ಎಂದು ಆಹಾರ ತಜ್ಞರಾದ ಮುಂಬೈನ ಮೆಡಿಕೋವರ್ ಆಸ್ಪತ್ರೆಯ ಡಯೆಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ರಾಜೇಶ್ವರಿ ಪಾಂಡಾ ಸಲಹೆ ನೀಡಿದ್ದಾರೆ.
ದೀಪಾವಳಿಗೆ ತ್ವಚೆಯ ಆರೈಕೆ ಹೀಗಿರಲಿ
ದೀಪಾವಳಿಯ ದಿನ ಹೊಸ ಬಟ್ಟೆ ಧರಿಸಿ ಎಲ್ಲರ ಮೆಚ್ಚುಗೆಗಳಿಸಬೇಕೆಂಬುದು ಹಲವರ ಬಯಕೆಯಾಗಿರುತ್ತದೆ. ತ್ವಚೆಯ ಆರೈಕೆ ಬಹಳ ಮುಖ್ಯ. ಅದಕ್ಕಾಗಿ ಹೀಗೆ ಮಾಡಿ.
ಹೈಡ್ರೇಟ್ ಆಗಿರಿ: ಚರ್ಮವು ಶುಷ್ಕವಾದರೆ ಕಳೆಗುಂದಿದಂತೆ ಕಾಣಿಸುತ್ತದೆ. ಹಾಗಾಗಿ ನಿಮ್ಮ ಚರ್ಮವನ್ನು ಸದಾ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ. ಈ ಹಬ್ಬದ ತಯಾರಿಯಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ.
ಪೌಷ್ಟಿಕ ಆಹಾರ ಸೇವಿಸಿ: ಹಣ್ಣುಗಳು, ತರಕಾರಿಗಳು ಮತ್ತು ಡ್ರೈಫ್ರೂಟ್ಸ್‌ಗಳನ್ನು ಸೇವಿಸಿ. ಅವು ಉತ್ಕರ್ಷಣ ನಿರೋಧಕಗಳಾಗಿದ್ದು ಫ್ರೀ ರ್‍ಯಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತವೆ.
ಸಕ್ಕರೆ ಮಿತವಾಗಿ ತಿನ್ನಿ: ಅತಿಯಾದ ಸಕ್ಕರೆ ಸೇವನೆಯಿಂದ ಚರ್ಮವು ವಯಸ್ಸಾದಂತೆ ಕಾಣಬಹುದು ಮತ್ತು ಮೊಡವೆಗಳಿಗೆ ಕಾರಣವಾಗಬಹುದು. ಸಕ್ಕರೆ ಬಳಸಿ ತಯಾರಿಸಲಾದ ಸಿಹಿತಿಂಡಿಗಳು ಮತ್ತು ಪಾನೀಯಗಳನ್ನು ಮಿತವಾಗಿ ಸೇವನೆ ಮಾಡಿ.
ಸೂರ್ಯನ ರಕ್ಷಣೆ ಪಡೆಯಿರಿ: ಇದು ಚಳಿಗಾಲವಾದರೂ ಕೂಡಾ, ಸೂರ್ಯನ ಕಿರಣಗಳು ನಿಮ್ಮ ತ್ವಚೆಗೆ ಹಾನಿಯುಂಟುಮಾಡಬಹುದು. ಹಾಗಾಗಿ ದೀಪಾವಳಿ ಖರೀದಿ ಅಥವಾ ಪಾರ್ಟಿಗೆ ಹೊರಗಡೆ ಹೊರಟಾಗ ಮರೆಯದೇ ಸನ್‌ಸ್ಕ್ರೀನ್ ಲೋಷನ್ ಬಳಸಿ.
ಸೌಮ್ಯವಾದ ಕ್ಲೆನ್ಸರ್ ಬಳಸಿ: ಚರ್ಮವು ಶುಷ್ಕವಾಗದಂತೆ ತಡೆಯಲು ಸೌಮ್ಯವಾದ ಕ್ಲೆನ್ಸರ್ ಅನ್ನು ಬಳಸಿ. ಕಠಿಣ ಸೋಪು ಮತ್ತು ಸ್ಕ್ರಬ್‌ಗಳ ಬಳಕೆಯನ್ನು ತಪ್ಪಿಸಿ.
ದೀಪಾವಳಿ ನಂತರದ ಆರೈಕೆ: ಬೆಳಕಿನ ಹಬ್ಬದ ಆಚರಣೆಯ ನಂತರ, ಮೇಕಪ್ ಮತ್ತು ಪಟಾಕಿ ಮಾಲಿನ್ಯದಿಂದ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ತ್ವಚೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಚರ್ಮಕ್ಕೆ ತಾಜಾತನ ನೀಡಲು ಫೇಸ್ ಮಾಸ್ಕ್‌ಗಳನ್ನು ಬಳಸಿ.
ಕೂದಲಿಗೆ ಈ ರೀತಿಯಾಗಿ ಆರೈಕೆ ಮಾಡಿ
ಕೇಶ ವಿನ್ಯಾಸ: ನೀವು ದೀಪಾವಳಿ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದರೆ, ಪಟಾಕಿಯ ಹೊಗೆ, ಮಾಲಿನ್ಯಗಳಿಂದ ಕೂದಲು ಹಾಳಾಗುವುದನ್ನು ತಪ್ಪಿಸಲು ಸರಿಯಾದ ಕೇಶ ವಿನ್ಯಾಸ ಮಾಡಿಕೊಳ್ಳಿ. ಫ್ರೀ ಸ್ಟೈಲ್ ಕೇಶವಿನ್ಯಾಸ ಮಾಡಿಕೊಳ್ಳುವ ಮೊದಲು ಕೂದಲಿಗೆ ಸಾಕಷ್ಟು ಆರೈಕೆ ಮಾಡಿ.
ಸೌಮ್ಯವಾದ ಶ್ಯಾಂಪೂ ಬಳಸಿ: ನಿಮ್ಮ ಕೂದಲಿಗೆ ಸೂಕ್ತವಾಗುವಂತಹ ಶಾಂಪೂ ಮತ್ತು ಕಂಡೀಷನರ್‌ಗಳನ್ನೇ ಬಳಸಿ. ಅದು ನಿಮ್ಮ ಕೂದಲಿನಲ್ಲಿರುವ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುವುದಿಲ್ಲ. ಇದರಿಂದ ಹೇರ್ ಡ್ಯಾಮೇಜ್ ಆಗುವ ಸಾಧ್ಯತೆ ಕಡಿಮೆಯಿರುತ್ತದೆ.
ಡೀಪ್ ಕಂಡೀಷನಿಂಗ್: ದೀಪಾವಳಿಯ ವಾತಾವರಣ ಶುಷ್ಕವಾಗಿರುತ್ತದೆ. ಕೂದಲ ಹಾನಿಯನ್ನು ತಡೆಗಟ್ಟಲು ಡೀಪ್ ಕಂಡೀಷನಿಂಗ್ ಮಾಡಿ. ಉತ್ತಮ ಕಂಡೀಷನರ್ ಬಳಸಿ, ಕೂದಲಿಗೆ ಆರೈಕೆ ಮಾಡಿ.
ಹೇರ್ ಡ್ರೈಯರ್‌ಗಳ ಬಳಕೆ ಮಿತವಾಗಿಸಿ: ಹೇರ್ ಡ್ರೈಯರ್‌ಗಳು ಮತ್ತು ಸ್ಟ್ರೈಟ್‌ನರ್‌ಗಳಂತಹ ಹೀಟ್ ಸ್ಟೈಲಿಂಗ್ ಉಪಕರಣಗಳ ಬಳಕೆಯನ್ನು ಮಿತಿಗೊಳಿಸಿ. ಏಕೆಂದರೆ ಅತಿಯಾದ ಶಾಖದಿಂದ ನಿಮ್ಮ ಕೂದಲು ಹಾನಿಗೊಳಗಾಗುತ್ತದೆ. ಆದ್ದರಿಂದ ಅವುಗಳ ಬಳಕೆಯನ್ನು ಮಿತವಾಗಿ ಮಾಡಿ.
ಸುಂದರವಾಗಿ ಅಲಂಕಾರಗೊಂಡು ಹಬ್ಬದ ಕಳೆಯನ್ನು ಹೆಚ್ಚಿಸಿ.
ಬರಹ: ಅರ್ಚನಾ ವಿ ಭಟ್