ಸಿಂಪಲ್ಲಾಗೊಂದು ಪುದೀನಾ ರಸಂ ರೆಸಿಪಿ; ಅನ್ನದೊಂದಿಗೂ ತಿನ್ನಬಹುದು, ಸೂಪ್‌ನಂತೆಯೂ ಕುಡಿಯಬಹುದು
ಊಟದಲ್ಲಿ ರಸಂ ಇದ್ದರೆ ತೃಪ್ತಿ ಎನಿಸುತ್ತದೆ. ರಸಂ ಸೇವಿಸುವುದು ಅರೋಗ್ಯಕ್ಕೂ ಒಳ್ಳೆಯದು. ರಸಂ ತಯಾರಿಸುವುದು ಬಹಳ ಸುಲಭ, ಕಡಿಮೆ ಸಮಯದಲ್ಲಿ ಕಡಿಮೆ ಸಾಮಗ್ರಿಗಳನ್ನು ಬಳಸಿ ತಯಾರಿಸುವ ರಸಂ ಅನ್ನದೊಂದಿಗೂ ತಿನ್ನಬಹುದು. ಅಥವಾ ಸೂಪ್‌ನಂತೆ ಕೂಡಾ ಸೇವಿಸಬಹುದು. ಪುದೀನಾ ರಸಂ ರೆಸಿಪಿ ಇಲ್ಲಿದೆ.
ಇವತ್ತು ಏನು ಸಾಂಬಾರ್ ಮಾಡೋದಪ್ಪಾ? ಎಲ್ಲರ ಮನೆಯಲ್ಲೂ ಅಮ್ಮಂದಿರ ಬಾಯಲ್ಲಿ ಬರೋ ಮಾತು ಇದು. ಪ್ರತಿದಿನ ಸಾಂಬಾರ್ ಮಾಡೋದು ದೊಡ್ಡ ಟಾಸ್ಕ್, ಆದರೆ ವಿಧಿ ಇಲ್ಲ, 2-3 ದಿನಗಳಿಗಾಗಿ ಸಾಂಬಾರ್ ಮಾಡೋಕೆ ಸಾಧ್ಯವಿಲ್ಲ. ಅದು ಆರೋಗ್ಯಕ್ಕೂ ಒಳ್ಳೆಯದಲ್ಲ. ಆದರೆ ಸಾಂಬಾರ್ ಮಾಡುವಷ್ಟು ತಾಳ್ಮೆ ಇಲ್ಲ, ಜೊತೆಗೆ ಸಮಯವೂ ಇಲ್ಲ ಅಂದ್ರೆ ಏನು ಮಾಡೋದು? ಅಂತ ಸಮಯದಲ್ಲೇ ನಮಗೆ ನೆನಪಾಗೋದು ರಸಂ.
ಮದುವೆ, ದೇವಸ್ಥಾನ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಅನೇಕ ಕಡೆ ಊಟದಲ್ಲಿ ಸಾಂಬಾರ್ ಜೊತೆಗೆ ಕೊನೆಯಲ್ಲಿ ರಸಂ ಇದ್ದೇ ಇರುತ್ತದೆ. ಅದರ ರುಚಿಯನ್ನು ವರ್ಣಿಸಲು ಸಾಧ್ಯವೇ ಇಲ್ಲ. ರಸಂ ಚಳಿಗಾಲಕ್ಕೆ ಕೂಡಾ ಬಹಳ ಒಳ್ಳೆಯದು. ಬಿಡುವಿದ್ದಾಗ ಒಮ್ಮೆ ರಸಂ ಪುಡಿ ಮಾಡಿಟ್ಟುಕೊಂಡರೆ ಸಾಕು, ಅವಶ್ಯಕತೆ ಇದ್ದಾಗ ರುಚಿಯಾದ ರಸಂ ತಯಾರಿಸಬಹುದು, ಬ್ಯಾಚುಲರ್‌ಗಳಿಗೆ, ಕಚೇರಿ ಕೆಲಸಕ್ಕೆ ಹೋಗುವ ಮಹಿಳೆಯರು ಸುಲಭವಾಗಿ ಇದನ್ನು ತಯಾರಿಸಬಹುದು. ಇಲ್ಲಿ ಪುದೀನಾ ರಸಂ ತಯಾರಿಸುವ ವಿಧಾನ ತಿಳಿಸಲಾಗಿದೆ.
ಪುದೀನಾ ರಸಂ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಬೇಳೆ - 1 ಕಪ್
- ಟೊಮೆಟೊ - 1
- ಪುದೀನಾ - 1 ಕಟ್ಟು
- ಧನಿಯಾ - 1 ಟೇಬಲ್ ಚಮಚ
- ಜೀರ್ಗೆ - 1 ಟೇಬಲ್ ಚಮಚ
- ಕಾಳು ಮೆಣಸು - 1 ಟೀ ಚಮಚ
- ಒಣ ಮೆಣಸಿನಕಾಯಿ - 8
- ಹುಣಸೆಹಣ್ಣು - ನಿಂಬೆ ಗಾತ್ರ
- ಉಪ್ಪು - ರುಚಿಗೆ ತಕ್ಕಷ್ಟು
- ಒಗ್ಗರಣೆಗೆ
- ಎಣ್ಣೆ - 1 ಟೇಬಲ್ ಸ್ಪೂನ್
- ಹಿಂಗು - 1/4 ಟೀ ಚಮಚ
- ಕರಿಬೇವು - 1 ಎಸಳು
- ಜೀರ್ಗೆ- 1 ಟೀ ಚಮಚ
- ಅರಿಶಿನ - ಚಿಟಿಕೆ
ಇದನ್ನೂ ಓದಿ: ಭಾನುವಾರದ ನಾನ್ ವೆಜ್ ಊಟಕ್ಕೊಂದು ಸಿಂಪಲ್ ಚಿಕನ್ ಗ್ರೇವಿ ರೆಸಿಪಿ; ರುಬ್ಬುವ ಕೆಲಸವೇ ಇಲ್ಲ, ಮಾಡಿ ನೋಡಿ
ಪುದೀನಾ ರಸಂ ತಯಾರಿಸುವ ವಿಧಾನ
1̤ ಬೇಳೆಯನ್ನು ಒಂದೆರಡು ಬಾರಿ ತೊಳೆಯಿರಿ, ಟೊಮೆಟೋ ತುಂಡುಗಳನ್ನು ಸೇರಿಸಿ ಕುಕ್ಕರ್‌ನಲ್ಲಿ 3 ಸೀಟಿ ಕೂಗಿಸಿಕೊಳ್ಳಿ
2. ಕುಕ್ಕರ್ ತಣ್ಣಗಾಗುವಷ್ಟರಲ್ಲಿ ಒಂದು ಪ್ಯಾನ್‌ಗೆ ಧನಿಯಾ ಕಾಳು, ಜೀರ್ಗೆ, ಕಾಳು ಮೆಣಸು, ಒಣಮೆಣಸಿನಕಾಯಿ ಹಾಕಿ ಸುವಾಸನೆ ಬರುವರೆಗೂ ಕಡಿಮೆ ಉರಿಯಲ್ಲಿ ಡ್ರೈ ರೋಸ್ಟ್ ಮಾಡಿ
3. ಒಂದೆರಡು ನಿಮಿಷದ ನಂತರ ಸ್ಟೌವ್ ಆಫ್ ಮಾಡಿ ಹುರಿದ ಮಿಶ್ರಣ ತಣ್ಣಗಾಗಲು ಬಿಡಿ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ
4. ಅದರೊಂದಿಗೆ ಪುದೀನಾ ಸೇರಿಸಿ ಮತ್ತೆ ತರಿಯಾಗಿ ಗ್ರೈಂಡ್ ಮಾಡಿಕೊಳ್ಳಿ ( ನೀರು ಸೇರಿಸಬೇಡಿ)
5. ಕುಕ್ಕರ್ ಮುಚ್ಚಳ ತೆಗೆದು ಬೇಳೆಯನ್ನು ತಿರುವಿ ಅದರೊಂದಿಗೆ ರಸಂ ಪುಡಿ, ಪುದೀನಾ ಮಿಶ್ರಣ ಸೇರಿಸಿ
6. ಹುಣಸೆ ನೀರು, ಉಪ್ಪು ಸೇರಿಸಿ ಒಮ್ಮೆ ತಿರುವಿ ರಸಂ ಕುದಿಯಲು ಬಿಡಿ
7. ರಸಂ ಕುದಿಯಲು ಆರಂಭವಾಗುತ್ತಿದ್ದಂತೆ ಮತ್ತೊಂದು ಪಾತ್ರೆಯಲ್ಲಿ ಸಾಸಿವೆ, ಜೀರ್ಗೆ, ಹಿಂಗು, ಕರಿಬೇವು, ಅರಿಶಿನ ಒಗ್ಗರಣೆ ಮಾಡಿ ಅದನ್ನು ರಸಂಗೆ ಸೇರಿಸಿ
8. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ರಸಂ ರೆಡಿ
9. ಚಳಿಗಾಲಕ್ಕೆ ರಸಂ ಬಹಳ ಒಳ್ಳೆಯದು, ಇದನ್ನು ಅನ್ನದೊಂದಿಗೆ ಕೂಡಾ ತಿನ್ನಬಹುದು , ಅಥವಾ ಸೂಪ್‌ನಂತೆ ಕೂಡಾ ಕುಡಿಯಬಹುದು
ಇದನ್ನೂ ಓದಿ: ಬದನೆಕಾಯಿ ಕಟ್ಲೆಟ್ ರೆಸಿಪಿ
ವಿಭಾಗ