ಬಾಳೆಹೂವನ್ನು ಬೇಡ ಎಂದು ಎಸಿಬೇಡಿ, ಇದರಿಂದ ರುಚಿಯಾದ ಚಟ್ನಿ ಮಾಡಬಹುದು, ಇದು ಟೇಸ್ಟ್‌ಗಷ್ಟೇ ಅಲ್ಲ ಆರೋಗ್ಯಕ್ಕೂ ಬಹಳ ಉತ್ತಮ
ಕನ್ನಡ ಸುದ್ದಿ  /  ಜೀವನಶೈಲಿ  /  ಬಾಳೆಹೂವನ್ನು ಬೇಡ ಎಂದು ಎಸಿಬೇಡಿ, ಇದರಿಂದ ರುಚಿಯಾದ ಚಟ್ನಿ ಮಾಡಬಹುದು, ಇದು ಟೇಸ್ಟ್‌ಗಷ್ಟೇ ಅಲ್ಲ ಆರೋಗ್ಯಕ್ಕೂ ಬಹಳ ಉತ್ತಮ

ಬಾಳೆಹೂವನ್ನು ಬೇಡ ಎಂದು ಎಸಿಬೇಡಿ, ಇದರಿಂದ ರುಚಿಯಾದ ಚಟ್ನಿ ಮಾಡಬಹುದು, ಇದು ಟೇಸ್ಟ್‌ಗಷ್ಟೇ ಅಲ್ಲ ಆರೋಗ್ಯಕ್ಕೂ ಬಹಳ ಉತ್ತಮ

ಬಾಳೆದಿಂಡಿನಿಂದ ಪಲ್ಯ, ಚಟ್ನಿ ಮಾಡೋದನ್ನು ನೀವು ಕೇಳಿರಬಹುದು ಅಥವಾ ತಿಂದಿರಬಹುದು. ಇದರಿಂದ ಮಾತ್ರವಲ್ಲ ಬಾಳೆ ಹೂವಿನಿಂದ ರುಚಿಕರ ಚಟ್ನಿ ಮಾಡಬಹುದು. ಅನ್ನ, ದೋಸೆ, ಇಡ್ಲಿ ಜೊತೆ ಈ ಚಟ್ನಿ ಸಖತ್ ಆಗಿರುತ್ತೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೂ ಹಲವು ಪ್ರಯೋಜನಗಳಿವೆ. ಬಾಳೆ ಹೂವಿನ ಚಟ್ನಿ ಮಾಡೋದು ಹೇಗೆ ನೋಡಿ.

ಬಾಳೆಹೂವಿನ ಚಟ್ನಿ ರೆಸಿಪಿ
ಬಾಳೆಹೂವಿನ ಚಟ್ನಿ ರೆಸಿಪಿ

ಬಾಳೆಹಣ್ಣು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ಹಲವರಿಗೆ ತಿಳಿದಿದೆ. ಬಾಳೆಕಾಯಿಯನ್ನು ಕೂಡ ವಿವಿಧ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಆದರೆ ಇಷ್ಟೇ ಅಲ್ಲ, ಒಟ್ಟಾರೆ ಬಾಳೆಗಿಡವೇ ಆರೋಗ್ಯಕ್ಕೆ ಹೇಳಿ ಮಾಡಿಸಿದ್ದು, ಇದರ ಪ್ರತಿ ಭಾಗದಿಂದಲೂ ದೇಹದ ವಿವಿಧ ಅಂಗಾಂಶಗಳಿಗೆ ಪ್ರಯೋಜನಗಳಿವೆ.

ಸಾಮಾನ್ಯವಾಗಿ ಬಾಳೆಗೊನೆ ಕತ್ತರಿಸಿದ ಮೇಲೆ ಎಸೆಯುವ ಬಾಳೆಹೂ ಪೋಷಕಾಂಶ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ಕೂಡ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳಿವೆ. ಇದನ್ನು ನೇರವಾಗಿ ತಿನ್ನಲು ಸಾಧ್ಯವಿಲ್ಲ. ಅದರ ಬದಲಿಗೆ ರುಚಿಕರ ಚಟ್ನಿ ಮಾಡಬಹುದು. ಈ ಚಟ್ನಿ ರುಚಿಯೂ ಅದ್ಭುತ, ಮಾಡುವುದು ಸುಲಭ. ಹಾಗಾದರೆ ಬಾಳೆಹೂವಿನ ಚಟ್ನಿ ಮಾಡೋಕೆ ಏನೆಲ್ಲಾ ಬೇಕು, ಮಾಡುವುದು ಹೇಗೆ ನೋಡಿ.

ಬಾಳೆಹೂ ಚಟ್ನಿ

ಬೇಕಾಗುವ ಸಾಮಗ್ರಿಗಳು: ಬಾಳೆಹಣ್ಣು – 1ಕಪ್‌ ಅಥವಾ ಒಂದು ಸಂಪೂರ್ಣ ದಂಟು, ಕರಿಬೇವು – 5 ರಿಂದ 6 ಎಸಳು, ಇಂಗು – ಚಿಟಿಕೆ, ಒಣಮೆಣಸು – 10, ಬೆಳ್ಳುಳ್ಳಿ – 4 ಎಸಳು, ಸಾಸಿವೆ – ಅರ್ಧ ಚಮಚ, ಕಡಲೆಬೇಳೆ – 2ಚಮಚ, ಉಪ್ಪು – ರುಚಿಗೆ, ಎಣ್ಣೆ – ಒಂದೆರಡು ಚಮಚ, ಹುಣಸೆಹಣ್ಣು – ನಿಂಬೆಗಾತ್ರದ್ದು, ಎಳ್ಳು – 1 ಚಮಚ, ಮೆಂತ್ಯ – ಅರ್ಧ ಚಮಚ, ಜೀರಿಗೆ – 1ಚಮಚ, ಕೊತ್ತಂಬರಿ – 1 ಚಮಚ

ಬಾಳೆಹೂವಿನ ಚಟ್ನಿ ಮಾಡುವ ವಿಧಾನ

ಬಾಳೆಹೂಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಈಗ ಒಲೆಯ ಮೇಲೆ ಬಾಣಲಿ ಇಟ್ಟು ಕೊತ್ತಂಬರಿ, ಮೆಂತ್ಯ, ಜೀರಿಗೆ, ಎಳ್ಳು ಹಾಗೂ ಕಡಲೆಬೇಳೆಯನ್ನು ಘಮ್ಮೆಂದು ಪರಿಮಳ ಬರುವವರೆಗೂ ಹುರಿದುಕೊಳ್ಳಿ. ಇದಕ್ಕೆ ಇಂಗು ಕೂಡ ಸೇರಿಸಿಕೊಳ್ಳಿ. ಇದನ್ನು ತೆಗೆದು ಬದಿಗಿರಿಸಿ. ಅದೇ ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಮೇಲೆ ಬಾಳೆಹೂಗಳನ್ನು ಹಾಕಿ ಹುರಿದುಕೊಳ್ಳಿ. ನಂತರ ಹುರಿದುಕೊಂಡ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಬಾಣಲಿ ಒಲೆಯ ಮೇಲಿಟ್ಟು ಒಗ್ಗರಣೆಗೆ ಸಿದ್ಧ ಮಾಡಿಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಕಡಲೆಬೇಳೆ, ಒಣಮೆಣಸು, ಬೆಳುಳ್ಳು, ಕರಿಬೇವಿನ ಸೊಪ್ಪು ಹಾಗೂ ಚಿಟಿಕೆ ಇಂಗು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ರುಬ್ಬಿಕೊಂಡ ಬಾಳೆಹೂವಿನ ಚಟ್ನಿ ಮೇಲೆ ಸುರಿದು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಅನ್ನದ ಜೊತೆ ಕಲೆಸಿ ತಿಂದ್ರೆ ಆಹಾ ಸ್ವರ್ಗ ಎನ್ನಿಸೋದು ಖಂಡಿತ. ಇದು ಬಾಯಲ್ಲಿ ನೀರೂರಿಸುವುದು ಮಾತ್ರವಲ್ಲ, ಇದರ ಮೂಲಕ ಬಾಳೆಹೂವಿನಲ್ಲಿರುವ ಪೋಷಕಾಂಶಗಳು ನೇರವಾಗಿ ದೇಹವನ್ನು ತಲುಪುತ್ತವೆ.

ಬಾಳೆಹೂವು ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಬಿ 6 ಮತ್ತು ಮೆಗ್ನೀಷಿಯಂನಲ್ಲಿ ಸಮೃದ್ಧವಾಗಿದೆ. ಮಹಿಳೆಯರು ತಪ್ಪದೇ ಬಾಳೆಹೂವಿನ ಖಾದ್ಯಗಳನ್ನು ಸೇವಿಸಬೇಕು.‍ ಋತುಚಕ್ರದ ಸಮಸ್ಯೆಗಳ ನಿವಾರಣೆಗೆ ಬಾಳೆಹೂ ಬಹಳ ಉತ್ತಮ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪುರುಷರು ಬಾಳೆಹೂವನ್ನು ತಿನ್ನುವುದರಿಂದ ಲೈಂಗಿಕ ಆರೋಗ್ಯ ಸುಧಾರಿಸುತ್ತದೆ. ಬಾಳೆ ಹೂವು ಫಲವತ್ತತೆಯ ಸಮಸ್ಯೆಗಳಿಂದ ರಕ್ಷಿಸುತ್ತದೆ.

Whats_app_banner