ಉಡುಪಿ ಶೈಲಿಯ ಈ ಸಾಂಬಾರ್ ಅನ್ನು ನಿಮ್ಮನೇಲೂ ಮಾಡಿ ನೋಡಿ; ಒಮ್ಮೆ ತಿಂದ್ರೆ ಪ್ರತಿದಿನ ತಿನ್ಬೇಕು ಅನ್ಸುತ್ತೆ, ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಉಡುಪಿ ಶೈಲಿಯ ಈ ಸಾಂಬಾರ್ ಅನ್ನು ನಿಮ್ಮನೇಲೂ ಮಾಡಿ ನೋಡಿ; ಒಮ್ಮೆ ತಿಂದ್ರೆ ಪ್ರತಿದಿನ ತಿನ್ಬೇಕು ಅನ್ಸುತ್ತೆ, ಟ್ರೈ ಮಾಡಿ

ಉಡುಪಿ ಶೈಲಿಯ ಈ ಸಾಂಬಾರ್ ಅನ್ನು ನಿಮ್ಮನೇಲೂ ಮಾಡಿ ನೋಡಿ; ಒಮ್ಮೆ ತಿಂದ್ರೆ ಪ್ರತಿದಿನ ತಿನ್ಬೇಕು ಅನ್ಸುತ್ತೆ, ಟ್ರೈ ಮಾಡಿ

ಉಡುಪಿ ಹೋಟೆಲ್‌ಗಳಲ್ಲಿ ಸಿಗುವ ಸಾಂಬಾರ್ ರುಚಿ ನೋಡಿದ ನಿಮಗೆ ಅದೇ ರೀತಿ ಸಾಂಬಾರ್ ಅನ್ನು ಮನೆಯಲ್ಲೂ ಮಾಡ್ಬೇಕು ಅನ್ನಿಸಿದ್ಯಾ? ಈ ರೀತಿಯಲ್ಲಿ ಉಡುಪಿ ಶೈಲಿಯ ಸಾಂಬಾರ್ ಮಾಡಿದ್ರೆ ಪ್ರತಿದಿನ ಇದನ್ನೇ ತಿನ್ನಬೇಕು ಅನ್ಸುತ್ತೆ. ಈ ಸಾಂಬಾರ್‌ ಅನ್ನಕ್ಕಷ್ಟೇ ಅಲ್ಲ, ಇಡ್ಲಿಗೂ ಜೊತೆಯಾಗುತ್ತೆ. ಇದನ್ನು ಮಾಡೋದು ಕೂಡ ಬಲು ಸುಲಭ.

ಉಡುಪಿ ಸಾಂಬಾರ್
ಉಡುಪಿ ಸಾಂಬಾರ್

ದಕ್ಷಿಣ ಭಾರತದಲ್ಲಿ ಸಾಂಬಾರ್‌ಗಳು ಪ್ರಸಿದ್ಧವಾಗಿವೆ. ಇಲ್ಲಿ ಒಂದಕ್ಕಿಂತ ಒಂದು ಅದ್ಭುತ ರುಚಿಯ ಸಾಂಬಾರ್‌ಗಳು ನಮ್ಮ ಹೊಟ್ಟೆ ತಣಿಸುತ್ತವೆ. ಅದರಲ್ಲೂ ಉಡುಪಿ ಶೈಲಿಯ ಸಾಂಬಾರ್‌ ಅನ್ನು ಒಮ್ಮೆ ತಿಂದರೆ ಅದರ ರುಚಿಗೆ ನಾಲಿಗೆಯಿಂದ ದೂರಾಗೋದೆ ಇಲ್ಲ. ಈ ಸಾಂಬಾರ್ ಅನ್ನು ಬಿಸಿದ ಅನ್ನದ ಜೊತೆ ಕಲೆಸಿ ತಿಂತಾ ಇದ್ರೆ ಆಹಾ, ಅದರ ರುಚಿಯನ್ನು ನೀವು ಸವಿದೇ ನೋಡಬೇಕು.

ಸಾಮಾನ್ಯವಾಗಿ ಉಡುಪಿ ಹೋಟೆಲ್‌ಗಳಲ್ಲಿ ನೀವು ಈ ಸಾಂಬಾರ್ ರುಚಿಯನ್ನು ಸವಿದಿರಬಹುದು. ಸಾಮಾನ್ಯ ತರಕಾರಿ ಸಾಂಬಾರ್‌ನಂತೆ ಇದ್ದರೂ ಇದು ರುಚಿ ಮಾತ್ರ ಅದ್ಭುತ. ಈ ಸಾಂಬಾರ್‌ನ ಪರಿಮಳ ಕೂಡ ಭಿನ್ನವಾಗಿದ್ದು, ಒಂದೆರಡು ತುತ್ತು ಊಟ ಹೆಚ್ಚಿಗೆ ಸೇರುವಂತೆ ಮಾಡುತ್ತದೆ. ಇದನ್ನು ಅನ್ನದ ಜೊತೆ ಮಾತ್ರವಲ್ಲ, ಇಡ್ಲಿ, ದೋಸೆ ಜೊತೆಗೂ ತಿನ್ನಬಹುದು. ಹಾಗಾದರೆ ಉಡುಪಿ ಶೈಲಿ ಸಾಂಬಾರ್ ಮಾಡಲು ಏನೆಲ್ಲಾ ಬೇಕು, ಇದನ್ನು ತಯಾರಿಸೋದು ಹೇಗೆ ನೋಡಿ.

ಉಡುಪಿ ಸಾಂಬಾರ್ ರೆಸಿಪಿ

ಬೇಕಾಗುವ ಸಾಮಗ್ರಿಗಳು: ತೊಗರಿಬೇಳೆ – 1 ಕಪ್‌, ಅರಿಸಿನ – 1 ಚಮಚ, ಕ್ಯಾರೆಟ್ – 1, ನುಗ್ಗೆಕಾಯಿ – 1, ಆಲೂಗೆಡ್ಡೆ – 1, ಚೀನಿಕಾಯಿ – ಅರ್ಧ ತುಂಡು, ಬೆಂಡೆಕಾಯಿ – 4, ಗುಳ್ಳ – 1 (ಬಿಳಿ ಬದನೆ), ಬೀನ್ಸ್ – 5, ಕೊತ್ತಂಬರಿ – 2 ಚಮಚ, ಹಸಿಮೆಣಸು – 2, ಒಣಮೆಣಸು – 6, ಮೆಂತ್ಯೆ – ಕಾಲು ಚಮಚ, ತೆಂಗಿನತುರಿ – 1 ಕಪ್‌, ಜೀರಿಗೆ – 1 ಚಮಚ, ಬೆಲ್ಲದ ಪುಡಿ – 1 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಹುಣಸೆಹಣ್ಣು – ನಿಂಬೆ ಗಾತ್ರದ್ದು, ಉಪ್ಪು – ರುಚಿಗೆ, ಈರುಳ್ಳಿ – 1, ಟೊಮೆಟೊ – 2, ಕರಿಬೇವು – 2 ಎಸಳು, ಕಡಲೆಬೇಳೆ – 1 ಚಮಚ, ಇಂಗು – ಚಿಟಿಕೆ

ಉಡುಪಿ ಶೈಲಿ ಸಾಂಬಾರ್ ಮಾಡುವ ವಿಧಾನ

ತೊಗರಿಬೇಳೆಯನ್ನು ಬೇಯಿಸಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ. ಬೇಯಿಸುವಾಗಲೇ ಚಿಟಿಕೆ ಅರಿಸಿನ ಪುಡಿ ಸೇರಿಸಿ. ಈಗ ಸಾಂಬಾರ್‌ಗೆ ಬೇಕಾಗುವ ಮಸಾಲೆ ತಯಾರಿಸಿ. ಒಲೆಯ ಮೇಲೆ ಪ್ಯಾನ್ ಇಟ್ಟು ಒಂದೆರಡು ಚಮಚ ಎಣ್ಣೆ ಹಾಕಿ. ಈ ಎಣ್ಣೆಯಲ್ಲಿ ಸಾಸಿವೆ, ಉದ್ದಿನಬೇಳೆ, ಜೀರಿಗೆ, ಕಡಲೆಬೇಳೆ, ಕರಿಬೇವು, ಕೊತ್ತಂಬರಿ ಸೊಪ್ಪು ಹಾಗೂ ಇಂಗು ಸೇರಿಸಿ ಹುರಿದುಕೊಳ್ಳಿ. ಇದನ್ನು ತಣ್ಣಗಾಗಲು ಪಕ್ಕಕ್ಕೆ ತೆಗೆದಿಡಿ. ನಂತರ ಇದನ್ನು ತೆಂಗಿನತುರಿ ಜೊತೆ ನುಣ್ಣಗೆ ರುಬ್ಬಿಕೊಳ್ಳಿ. ಈಗ ಸಾಂಬಾರ್ ಮಾಡಲು ಸ್ಟೌ ಮೇಲೆ ಅಗಲವಾದ ಪಾತ್ರೆ ಇಡಿ. ಅದಕ್ಕೆ ಒಂದೆರಡು ಚಮಚ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ, ಕರಿಬೇವು, ಟೊಮೆಟೊ, ಹಸಿಮೆಣಸು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಅದಕ್ಕೆ ಕ್ಯಾರೆಟ್‌, ಬೀನ್ಸ್‌, ಚೀನಿಕಾಯಿ, ಬದನೆಕಾಯಿ, ಬೆಂಡೆಕಾಯಿ, ಆಲೂಗೆಡ್ಡೆ ಸೇರಿಸಿ. ಉಪ್ಪು ಹಾಗೂ ಅರಿಸಿನ ಹಾಕಿ ಹಸಿ ವಾಸನೆ ಹೋಗುವವರೆಗೂ 5 ನಿಮಿಷಗಳ ಕಾಲ ತರಕಾರಿಯನ್ನು ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿ. ಈಗ ಅಗತ್ಯ ಇರುವಷ್ಟು ನೀರು ಸೇರಿಸಿ ತರಕಾರಿಯನ್ನು ಬೇಯಲು ಬಿಡಿ. ತರಕಾರಿ ಬೆಂದ ಮೇಲೆ ಬೇಯಿಸಿದ ಬೇಳೆ ಮಸೆದು ಹಾಕಿ. ಅದಕ್ಕೆ ಬೆಲ್ಲ ಹಾಗೂ ಹುಣಸೆರಸ ಕೂಡ ಸೇರಿಸಿ. ನಂತರ ರುಬ್ಬಿಕೊಂಡ ಮಸಾಲೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದನ್ನು ಕಡಿಮೆ ಉರಿಯಲ್ಲಿ 15 ರಿಂದ 20 ನಿಮಿಷ ಕುದಿಸಿ. ಒಗ್ಗರಣೆಗೆ ಹೇಳಿದ ಸಾಸಿವೆ, ಉದ್ದಿನಬೇಳೆ, ಉದ್ದಿನಬೇಳೆ, ಜೀರಿಗೆ, ಕರಿಬೇವು ಮತ್ತು ಇಂಗು ಈ ಸಾಮಗ್ರಿಗಳನ್ನು ಇನ್ನೊಂದು ಪಾತ್ರೆಯಲ್ಲಿ ಎಣ್ಣೆಗೆ ಹಾಕಿ ಒಗ್ಗರಣೆ ಮಾಡಿ. ಇದನ್ನು ಕುದಿಯುತ್ತಿರುವ ಸಾಂಬಾರ್‌ಗೆ ಸೇರಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ನಿಮ್ಮ ಮುಂದೆ ರುಚಿಯಾದ ಉಡುಪಿ ಶೈಲಿಯ ಸಾಂಬಾರ್ ತಿನ್ನಲು ಸಿದ್ಧವಾಗಿದೆ.

Whats_app_banner