ಜಪಾನಿಯರ ಫಿಟ್ನೆಸ್‌ ಗುಟ್ಟಿದು; ಈ ರೀತಿಯ ವ್ಯಾಯಾಮ ರೂಢಿಸಿಕೊಂಡರೆ ಉತ್ತಮ ಆರೋಗ್ಯ ಖಂಡಿತ ಸಾಧ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  ಜಪಾನಿಯರ ಫಿಟ್ನೆಸ್‌ ಗುಟ್ಟಿದು; ಈ ರೀತಿಯ ವ್ಯಾಯಾಮ ರೂಢಿಸಿಕೊಂಡರೆ ಉತ್ತಮ ಆರೋಗ್ಯ ಖಂಡಿತ ಸಾಧ್ಯ

ಜಪಾನಿಯರ ಫಿಟ್ನೆಸ್‌ ಗುಟ್ಟಿದು; ಈ ರೀತಿಯ ವ್ಯಾಯಾಮ ರೂಢಿಸಿಕೊಂಡರೆ ಉತ್ತಮ ಆರೋಗ್ಯ ಖಂಡಿತ ಸಾಧ್ಯ

Japanese exercises: ಇತ್ತೀಚಿನ ದಿನಗಳಲ್ಲಿ ಫಿಟ್‌ ಆಗಿರಲು ಹರಸಾಹಸ ಪಡುತ್ತಾರೆ. ಹೊಸ ಹೊಸ ವ್ಯಾಯಾಮ, ದಿನಚರಿಗಳನ್ನು ಅಳವಡಿಸಿಕೊಳ್ಳುತ್ತಾರೆ. ಜಪಾನಿನ ಫಿಟ್ನೆಸ್‌ ವಿಧಾನ ವಿಶಿಷ್ಟವಾಗಿದೆ. ಅವರು ಪಾಲಿಸುವ ವಿವಿಧ ವ್ಯಾಯಾಮ ಮತ್ತು ಆಹಾರಕ್ರಮಗಳನ್ನು ತಿಳಿಯಲು ಮುಂದೆ ಓದಿ.

ಈ ರೀತಿಯ ವ್ಯಾಯಾಮ ರೂಢಿಸಿಕೊಂಡರೆ ಉತ್ತಮ ಆರೋಗ್ಯ ಖಂಡಿತ ಸಾಧ್ಯ
ಈ ರೀತಿಯ ವ್ಯಾಯಾಮ ರೂಢಿಸಿಕೊಂಡರೆ ಉತ್ತಮ ಆರೋಗ್ಯ ಖಂಡಿತ ಸಾಧ್ಯ

ಪ್ರಪಂಚದಲ್ಲಿ ಫಿಟ್ನೆಸ್‌ಗಾಗಿ ಹಲವು ವಿಧಾನಗಳನ್ನು ಪಾಲಿಸಲಾಗುತ್ತದೆ. ವಿವಿಧ ವ್ಯಾಯಾಮ, ಆಹಾರ ಪದ್ಧತಿಗಳನ್ನು ರೂಢಿಸಿಕೊಳ್ಳಲಾಗುತ್ತದೆ. ಏನೇ ಆದ್ರೂ ಎಲ್ಲರೂ ಕಾಳಜಿವಹಿಸುವುದು, ಚಿಂತಿಸುವುದು ಅವರ ಆರೋಗ್ಯದ ಬಗ್ಗೆಯೇ ಆಗಿದೆ. ಉತ್ತಮ ಆರೋಗ್ಯ ಪಡೆದು ಗಟ್ಟಿಮುಟ್ಟಾಗಿರುವುದೆಂದರೆ ಇತ್ತಿಚಿನ ದಿನಗಳಲ್ಲಿ ಸುಲಭದ ಮಾತಲ್ಲ. ಏಕೆಂದರೆ ಬೊಜ್ಜು, ರಕ್ತದೊತ್ತಡ, ಮಧುಮೇಹ ಮುಂತಾದವುಗಳಿಗೆ ಮಾನವ ತುತ್ತಾಗುತ್ತಿದ್ದಾನೆ. ತೂಕ ಇಳಿಸಿ, ಫಿಟ್‌ ಆಗಿರುವುದೆಂದರೆ ಹೊಟ್ಟೆಯ ಭಾಗದಲ್ಲಿ ಶೇಖರಣೆಯಾಗುವ ಕೊಬ್ಬನ್ನು ಕರಗಿಸುವುದಾಗಿದೆ. ಬೊಜ್ಜು ಹಲವಾರು ರೋಗಗಳಿಗೆ ಕಾರಣವಾಗಿದೆ. ಹೀಗಾಗಿ ತೂಕ ಕಳೆದುಕೊಳ್ಳಲು ಹರಸಾಹಸ ಪಡುತ್ತಾರೆ. ಜಪಾನಿಯರ ವ್ಯಾಯಾಮಗಳು ತೂಕ ನಷ್ಟಕ್ಕೆ ಉತ್ತಮವಾಗಿದೆ. ಏಕೆಂದರೆ ಆ ವ್ಯಾಯಾಮಗಳು ಸಾಂಪ್ರದಾಯಿಕ ಅಭ್ಯಾಸಗಳು ಮತ್ತು ಆಧುನಿಕ ಫಿಟ್ನೆಸ್‌ ತಂತ್ರಗಳನ್ನು ಒಳಗೊಂಡಿರುವುದರಿಂದ ವಿಶಿಷ್ಟವಾಗಿದೆ. ಆ ವ್ಯಾಯಾಮಗಳಲ್ಲಿ ದೇಹದ ವಿವಿಧ ಸ್ನಾಯುಗಳಿಗೂ ಚಟುವಟಿಕೆ ದೊರೆಯುವುದರಿಂದ ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಜಪಾನಿಯರು ವಿಶೇಷವಾಗಿ ವಿನ್ಯಾಸಗೊಳಿಸಿರುವ ವ್ಯಾಯಮಗಳು ತೂಕ ಇಳಿಕೆಯ ಪ್ರಯತ್ನದಲ್ಲಿರುವವರಿಗೆ ಉತ್ತಮವಾಗಿದೆ.

ಜಪಾನಿಯರ ಫಿಟ್ನೆಸ್‌ ವಿಧಾನಗಳು ವಿಶಿಷ್ಟವಾಗಿದೆ. ವಿವಿಧ ವ್ಯಾಯಾಮ ಮತ್ತು ದಿನಚರಿಯನ್ನು ಹೊಂದಿರುವುದರಿಂದ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ನಿಮ್ಮ ಫಿಟ್ನೆಸ್‌ ಕಲ್ಪನೆಗೆ ಹೊಸ ಬದಲಾವಣೆಗಳನ್ನು ನೀಡಬಹುದಾದ 5 ಜಪಾನಿಯರ ವ್ಯಾಯಾಮಗಳು ಇಲ್ಲಿವೆ.

  • ರೋಲ್‌–ಅಪ್‌

ಇದೊಂದು ಸರಳ ಹಾಗೂ ಅಷ್ಟೇ ಪರಿಣಾಮಕಾರಿಯಾದ ವ್ಯಾಯಾಮ. ಇದು ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸುತ್ತದೆ. ಜೊತೆಗೆ ಆ ಭಾಗದ ಸ್ನಾಯುಗಳಿಗೆ ಶಕ್ತಿಯನ್ನು ತುಂಬುತ್ತದೆ. ಮೊದಲಿಗೆ ಯೋಗಾ ಮ್ಯಾಟ್‌ ಮೇಲೆ ನೇರವಾಗಿ ಮಲಗಿಕೊಳ್ಳಿ. ಕೈಗಳನ್ನು ಮೇಲಕ್ಕೆ ಎತ್ತಿ. ನಿಧಾನವಾಗಿ ಮೇಲೇಳುತ್ತಾ, ನಿಮ್ಮ ಕಾಲುಗಳ ಕಡೆಗೆ ಬಾಗಿ. ನಂತರ ಕಾಲ್ಬೆರಳನ್ನು ಹಿಡಿದುಕೊಳ್ಳಿ. ಈ ರೀತಿ 10 ಸಲ ಮಾಡಿ.

ಇದನ್ನೂ ಓದಿ | ವೇಗವಾಗಿ ತಿಂದು ಮುಗಿಸುವ ಅಭ್ಯಾಸ ನಿಮಗೂ ಇದೆಯಾ? ಆರೋಗ್ಯಕ್ಕೆ ಹಾನಿಯಾದೀತು ಜೋಕೆ, ನಿಧಾನವಾಗಿ ತಿನ್ನಲು ಇಲ್ಲಿವೆ ಸಲಹೆ

  • ಟವಲ್‌ ವ್ಯಾಯಾಮ

ಡಾ. ತೋಶಿಕಿ ಫುಕುಟ್ಸುಜಿ ಕಂಡುಹಿಡಿದ ಈ ವ್ಯಾಯಾಮವು ಬೆನ್ನು ಮೂಳೆಯನ್ನು ಬಲಪಡಿಸುತ್ತದೆ. ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸುತ್ತದೆ. ಟವಲ್‌ ಅನ್ನು ತೆಗೆದುಕೊಂಡು ಸಿಲಿಂಡರ್‌ನಂತೆ ರೋಲ್‌ ಮಾಡಿ. ಸುರುಳಿ ಸುತ್ತಿದ ಟವಲ್‌ ಅನ್ನು ಮ್ಯಾಟ್‌ನ ಮಧ್ಯದಲ್ಲಿ ಇಡಿ. ಅದರ ಮೇಲೆ ನೇರವಾಗಿ ಮಲಗಿಕೊಳ್ಳಿ. ಸೊಂಟದ ಕೆಳಭಾಗಕ್ಕೆ ಬರುವಂತೆ ಸರಿಯಾಗಿ ಹೊಂದಿಸಿಕೊಳ್ಳಿ. ತಲೆಯ ಮೇಲೆ ನೆಲಕ್ಕೆ ಕೈಗಳನ್ನು ಊರಿ. ಪ್ರತಿದಿನ ಐದು ನಿಮಿಷಗಳ ಕಾಲ ಈ ವ್ಯಾಯಾಮ ಮಾಡಿ.

  • ಟೈಸೊ

ಇದು ಜಪಾನಿಯರ ಸಾಂಪ್ರದಾಯಿಕ ದಿನಚರಿಯಾಗಿದೆ. ಇದರಲ್ಲಿ ಸ್ಟ್ರೆಚಿಂಗ್‌, ಏರೋಬಿಕ್‌, ವ್ಯಾಯಾಮಗಳಿವೆ. ಇವು ದೇಹಕ್ಕೆ ಶಕ್ತಿ ತುಂಬುವ ಚಟುವಟಿಕೆಗಳಾಗಿವೆ. ಇದರಲ್ಲಿ ಮೊದಲಿಗೆ 5 ನಿಮಿಷ ಜಾಗಿಂಗ್ ಮಾಡಿ. ನಂತರ ಕೈಯನ್ನು ವೃತ್ತಾಕಾರವಾಗಿ ತಿರುಗಿಸಿ, ಲೆಗ್‌ ಸ್ವಿಂಗ್‌ ವ್ಯಾಯಾಮ ಮಾಡಿ. 10 ನಿಮಿಷಗಳ ಕಾಲ ಬ್ರಿಸ್ಕ್‌ ವಾಕ್‌ (ಚುರುಕು ನಡಿಗೆ) ಮಾಡಿ.

  • ಬಾಲ್‌ ಟ್ವಿಸ್ಟ್‌

ರಷ್ಯಾದ ಟ್ವಿಸ್ಟ್‌ ವ್ಯಾಯಾಮದ ರೀತಿಯ ವ್ಯಾಯಾಮ ಇದಾಗಿದೆ. ಇದು ಹೊಟ್ಟೆಯ ಭಾಗದ ಕೊಬ್ಬನ್ನು ನೇರವಾಗಿ ಕರಗಿಸುತ್ತದೆ. ಸ್ನಾಯು, ಬೆನ್ನು ಮತ್ತು ಕೈಗಳಿಗೆ ಬಲವನ್ನು ಹೆಚ್ಚಿಸುತ್ತದೆ. ಟ್ವಿಸ್ಟ್‌ ವ್ಯಾಯಾಮದ ಬಾಲ್‌ ತೆಗೆದುಕೊಳ್ಳಿ. ನೆಲದ ಮೇಲೆ ಕಾಲನ್ನು ಚಾಚಿ ಕುಳಿತುಕೊಳ್ಳಿ. ಮೊಣಕಾಲನ್ನು ಬಾಗಿಸಿ. ಈಗ ಕೈನಲ್ಲಿ ಬಾಲ್‌ ಅನ್ನು ಹಿಡಿದುಕೊಳ್ಳಿ. ಬೆನ್ನನ್ನು ನೇರವಾಗಿರಿಸಿಕೊಂಡು, ಎಡ ಮತ್ತು ಬಲಕ್ಕೆ ನಿಮ್ಮ ದೇಹವನ್ನು ತಿರುಗಿಸಿ. 20 ಸಲದಂತೆ ಮೂರು ಸೆಟ್‌ಗಳಲ್ಲಿ ಪುನಾರಾವರ್ತಿಸಿ.

  • ರಿವರ್ಸ್‌ ಕ್ರಂಚಸ್‌

ಕಿಬ್ಬೊಟ್ಟೆ ಮತ್ತು ಹೊಟ್ಟೆಯ ಸುತ್ತ ಬೆಳೆದಿರುವ ಕೊಬ್ಬನ್ನು ಕರಗಿಸಲು ಈ ವ್ಯಾಯಾಮ ಉತ್ತಮವಾಗಿದೆ. ಬೆನ್ನಿನ ಮೇಲೆ ನೇರವಾಗಿ ಮಲಗಿಕೊಳ್ಳಿ. ಮೊಣಕಾಲನ್ನು ಎದೆಯ ಸಮೀಪ ತೆಗೆದುಕೊಂಡು ಬನ್ನಿ. ನೆಲದಿಂದ ಸೊಂಟವನ್ನು ಮೇಲಕ್ಕೆತ್ತಲು ಪ್ರಾರಂಭಿಸಿ. ಆಗ ಸರಾಗವಾಗಿ ಉಸಿರಾಡಿ. ಸುಮಾರು 20 ರಿಂದ 25 ಸಲ ಹೀಗೆ ಮಾಡಿ.

ಜಪಾನಿಯರ ಫಿಟ್ನೆಸ್‌ ವ್ಯಾಯಾಮಗಳು ತೂಕ ನಷ್ಟಕ್ಕೆ, ಹೊಟ್ಟೆ ಭಾಗದ ಕೊಬ್ಬು ಕರಗಿಸಲು ಉತ್ತಮವಾಗಿದೆ. ದೇಹದ ಸಂಪೂರ್ಣ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.

Whats_app_banner