Stroke: ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳೇನು, ಸ್ಟ್ರೋಕ್ ಸಂಭವಿಸಿದಾಗ ತಕ್ಷಣಕ್ಕೆ ಏನು ಮಾಡ್ಬೇಕು; ಇಲ್ಲಿದೆ ಮಾಹಿತಿ
ಬೇಸಿಗೆಯಲ್ಲಿ ಅತಿಯಾದ ಬಿಸಿಲು, ಬಿಸಿಗಾಳಿ ಹೀಗೆ ಹಲವು ಕಾರಣಗಳಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳ ಜೊತೆಗೆ ಸ್ಟ್ರೋಕ್‌ನಂತಹ ಗಂಭೀರ ಸಮಸ್ಯೆಗಳು ಕೂಡ ಕಾಣಿಸಬಹುದು. ಸ್ಟ್ರೋಕ್ ಅಥವಾ ಪಾರ್ಶ್ವವಾಯು ಸಂಭವಿಸುವುದಕ್ಕೂ ಮುನ್ನ ಯಾವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಅದನ್ನು ಗುರುತಿಸುವುದು ಹೇಗೆ? ಇದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
ರಕ್ತಹೆಪ್ಪುಗಟ್ಟುವಿಕೆ ಅಥವಾ ರಕ್ತಸ್ರಾವದಿಂದಾಗಿ ಮೆದುಳಿನ ಯಾವುದಾದರೊಂದು ಭಾಗಕ್ಕೆ ರಕ್ತಸಂಚಾರ ನಿಂತು ಹೋಗಿ, ಆ ಭಾಗದ ಮೆದುಳು ನಿರ್ಜೀವವಾಗುತ್ತದೆ ಮತ್ತು ಆ ಭಾಗದಿಂದ ನಿಯಂತ್ರಿಸಲ್ಪಡುವ ಶರೀರದ ಕೆಲಸಗಳು ನಿಷ್ಕ್ರಿಯವಾಗುತ್ತವೆ. ಇದನ್ನೇ ಸ್ಟ್ರೋಕ್ ಅಥವಾ ಪಾರ್ಶ್ವವಾಯು ಎನ್ನುತ್ತಾರೆ. ಇದನ್ನು ಮೆದುಳಿನ ಆಘಾತ ಎಂದೂ ಕರೆಯುವುದಿದೆ. ನಿಮಗೆ ಗೊತ್ತಾ? ಪ್ರಪಂಚದಾದ್ಯಂತ ಅತಿಹೆಚ್ಚು ಸಾವು ಉಂಟಾಗುವ ಕಾಯಿಲೆಗಳಲ್ಲಿ ಹೃದಯಾಘಾತದ ನಂತರದ ಸ್ಥಾನ ಸ್ಟ್ರೋಕ್‌ಗಿದೆ. ಆದರೆ ಒಂದು ಸಾಮಾಧಾನಕರ ವಿಚಾರ ಎಂದರೆ ಸ್ಟ್ರೋಕ್ ಅನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಇದರಿಂದ ಪರಿಹಾರ ಕಂಡುಕೊಳ್ಳಬಹುದು.
ಪಾರ್ಶ್ವವಾಯುವಿನಲ್ಲಿ ಒಟ್ಟು ಎರಡು ವಿಧಗಳಿವೆ. ಮೆದುಳಿಗೆ ರಕ್ತವನ್ನು ಸಾಗಿಸುವ ಅಪಧಮನಿಯಲ್ಲಿನ ತಡೆಯಿಂದ ಇಸ್ಕೀಮಿಕ್ ಸ್ಟ್ರೋಕ್ ಉಂಟಾಗುತ್ತದೆ. ಮೆದುಳಿನ ಯಾವುದೇ ಸ್ಥಳದಲ್ಲಿ ರಕ್ತಸ್ರಾವವಾದರೆ ಹೆಮರಾಜಿಕ್ ಸ್ಟ್ರೋಕ್ ಸಂಭವಿಸುತ್ತದೆ. ಇದು ವ್ಯಕ್ತಿಯ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗಬಹುದು.
ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಹೇಗೆ?
ಪಾರ್ಶ್ವವಾಯು ರೋಗ ಲಕ್ಷಣಗಳನ್ನು ತಿಳಿದುಕೊಂಡರೆ ರೋಗಿಯ ಜೀವರಕ್ಷಣೆ ಸಾಧ್ಯವಾಗುತ್ತದೆ. ಆದರೆ ರೋಗಲಕ್ಷಣಗಳನ್ನು ಗುರುತಿಸುವುದು ಹೇಗೆ? ಅದಕ್ಕಾಗಿಯೇ ಸರಳ ಸೂತ್ರವೊಂದನ್ನು ಅನುಸರಿಸಬೇಕಾಗುತ್ತದೆ. ಆ ಸೂತ್ರದ ಹೆಸರೇ ಫಾಸ್ಟ್ (FAST). ʻಎಫ್'(F) ಎಂದರೆ ಮುಖದಲ್ಲಿ ನಗಲು ಸಾಧ್ಯವಾಗದಿರುವುದು. ʻಎʼ(A) ಎಂದರೆ ತೋಳಿನ ದೌರ್ಬಲ್ಯ. ʻಎಸ್'(S) ಎಂದರೆ ಮಾತಿನ ತೊಂದರೆ ಎಂದರೆ ಹಠಾತ್ ಸರಿಯಾಗಿ ಮಾತನಾಡಲು ಕಷ್ಟವಾಗುವುದು, ಅಥವಾ ಅಸ್ಪಷ್ಟ ಮಾತು. ʻಟಿ' (T) ಎಂದರೆ ಸಮಯವನ್ನು ಸೂಚಿಸುತ್ತದೆ. ಆದಷ್ಟು ಬೇಗ ಆಸ್ಪತ್ರೆಗೆ ಹೋಗುವುದರ ಸೂಚಕವಾಗಿದೆ.
ನೆನಪಿಡಬೇಕಾದ ಪ್ರಮುಖ ವಿಷಯವೆಂದರೆ ಪಾರ್ಶ್ವವಾಯು ಹೇಳಿ ಕೇಳಿ ಬರುವ ರೋಗವಲ್ಲ, ಅದು ಇದ್ದಕ್ಕಿದ್ದಂತೆ ಸಂಭವಿಸುತ್ತದೆ. ಗೊಂದಲ ಉಂಟಾಗುವುದು, ನಡೆಯಲು ತೊಂದರೆಯಾಗುವುದು, ತಲೆತಿರುಗುವಿಕೆ ಮತ್ತು ಕೆಲವೊಮ್ಮೆ ತೀವ್ರ ತಲೆನೋವು ಅಥವಾ ದೃಷ್ಟಿಯ ಸಮಸ್ಯೆ ಕಾಡುವುದೂ ಸಹ ಪಾರ್ಶ್ವವಾಯುವಿನ ಲಕ್ಷಣಗಳಾಗಿವೆ. ಇಂತಹ ರೋಗಲಕ್ಷಣಗಳು ಕಂಡರೆ ಕೂಡಲೇ ನಿಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸುವುದು ಇಲ್ಲವೇ ಹತ್ತಿರದ ಆಸ್ಪತ್ರೆಗೆ ಹೋಗುವುದು ಸೂಕ್ತ. ಅದಕ್ಕೂ ಮುನ್ನ ವ್ಯಕ್ತಿಗೆ ತಿನ್ನಲು ಅಥವಾ ಕುಡಿಯಲು ಕೊಟ್ಟರೆ ಸರಿಯಾಗಬಹುದೇ ಅಂತ ಯೋಚಿಸಬೇಡಿ. ಇಂತಹ ಸಂದರ್ಭದಲ್ಲಿ ಕುಡಿಯಲು, ತಿನ್ನಲು ಕೊಡುವುದರ ಬದಲು ರೋಗಿಯನ್ನು ಆದಷ್ಟು ಶಾಂತವಾಗಿ ಇರುವಂತೆ ನೋಡಿಕೊಳ್ಳಿ.
ಪಾರ್ಶ್ವವಾಯು ಸಂಭವಿಸಲು ಕಾರಣ
ಪಾರ್ಶ್ವವಾಯು ಇದ್ದಕ್ಕಿದ್ದಂತೆ ಬರುವುದಾದರೂ, ಅದು ಬರುವ ಸಾಧ್ಯತೆಯನ್ನು ಹೆಚ್ಚಿಸುವ ಅಪಾಯಕಾರಿ ಅಂಶಗಳು ಯಾವುವು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸಿಗರೇಟ್ ಚಟ, ಆಲ್ಕೋಹಾಲ್ ಸೇವನೆ, ಮಾದಕದ್ರವ್ಯ ಬಳಕೆ ಮಾಡುವವರಿಗೆ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚಾಗಿದೆ. ಮಧುಮೇಹ ರೋಗಿಗಳಂತೂ ಸ್ವಲ್ಪ ಜಾಗರೂಕರಾಗಿರಬೇಕು. ರಕ್ತದಲ್ಲಿ ಕೊಬ್ಬಿನ ಅಂಶ ಜಾಸ್ತಿ ಇರುವವರು, ಹೃದಯ ಸಂಬಂಧಿ ಕಾಯಿಲೆಗಳು ಇರುವವರು ಹಾಗೂ ಅಧಿಕ ರಕ್ತದೊತ್ತಡ ಇರುವವರೂ ಸಹ ಪಾರ್ಶ್ವವಾಯುಗೆ ತುತ್ತಾಗುವ ಸಾಧ್ಯತೆ ಹೆಚ್ಚು. ವಂಶ ಪಾರಂಪರ್ಯವಾಗಿ ವಂಶವಾಹಿನಿಗಳಲ್ಲಿಯೂ ಬರುವ ಸಾಧ್ಯತೆ ಇರುತ್ತದೆ. ಸ್ಥೂಲಕಾಯ, ಬೊಜ್ಜು ಜಾಸ್ತಿ ಇರುವವರಿಗೆ ಮತ್ತು ವಿಲಾಸಿ ಜೀವನಶೈಲಿಯುಳ್ಳವರು ಈ ಬಗ್ಗೆ ಚಿಂತಿಸಲೇಬೇಕು. ಅತಿಯಾದ ಮಾನಸಿಕ ಒತ್ತಡವಿರುವವರು ಹಾಗೂ ಅತಿಯಾದ ನೋವು ನಿವಾರಕಗಳ ಸೇವನೆ ಮಾಡುವವರಿಗೂ ಪಾರ್ಶ್ವವಾಯು ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಪಾರ್ಶ್ವವಾಯು ತಡೆಗಟ್ಟುವುದು ಹೇಗೆ?
ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಮತೋಲಿತ ಆಹಾರಸೇವನೆ ಬಹು ಮುಖ್ಯವಾಗುತ್ತದೆ. ಶರೀರಕ್ಕೆ ಅಗತ್ಯವಿರುವ ಪೋಷಕಾಂಶಯುಕ್ತ ಆಹಾರ ಕ್ರಮವನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ. ನಿಯಮಿತ ವ್ಯಾಯಾಮ, ಒತ್ತಡವನ್ನು ಕಡಿಮೆ ಮಾಡಲು ಮನಸ್ಸನ್ನು ಹತೋಟಿಯಲ್ಲಿಡುವುದರ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಧೂಮಪಾನ, ಮಧ್ಯಪಾನಗಳಿಂದ ದೂರವಿರುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕು. ಇನ್ನು ಮಧುಮೇಹ, ಹೃದಯಾಘಾತದಂತಹ ಅನಾರೋಗ್ಯಗಳಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರ ಜೊತೆಗೆ ಸರಿಯಾದ ಔಷಧಿಗಳನ್ನೇ ತೆಗೆದುಕೊಳ್ಳಬೇಕು. ರಕ್ತದೊತ್ತಡ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಬೇಕು. ರೋಗಲಕ್ಷಣಗಳು ಕಂಡರೆ, ಇಲ್ಲವೇ ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಕೂಡಲೇ ಸೂಕ್ತ ವೈದ್ಯರನ್ನು ಸಂಪರ್ಕಿಸಬೇಕು.
ಒಟ್ಟಿನಲ್ಲಿ ಸ್ಟ್ರೋಕ್ ಅಥವಾ ಪಾರ್ಶ್ವವಾಯು ಉಳಿದ ರೋಗಗಳಂತಲ್ಲ, ಅತಿ ಸುಲಭವಾಗಿ ಗುರುತಿಸಬಹುದಾದ ಕಾಯಿಲೆ. ಆದ್ದರಿಂದಲೇ ರೋಗ ಲಕ್ಷಣಗಳು ಕಂಡಲ್ಲಿ ತಕ್ಷಣವೇ ಸೂಕ್ತ ಚಿಕಿತ್ಸೆ ಲಭ್ಯವಾದರೆ ಅಂಗವೈಕಲ್ಯವೋ ಇಲ್ಲವೇ ಜೀವಕ್ಕೆ ಹಾನಿ ಸಂಭವಿಸುವುದೂ ತಪ್ಪುತ್ತದೆ.
ಬರಹ: ಭಾಗ್ಯ ದಿವಾಣ