ಏನಿದು ಕ್ರೋನಿಕ್ ಮೈಲಾಯ್ಡ್ ಲ್ಯುಕೇಮಿಯಾ ಕ್ಯಾನ್ಸರ್‌, ರಕ್ತಕ್ಕೆ ಹರಡುವ ಈ ಮಾರಕ ಕಾಯಿಲೆಯ ನಿರ್ವಹಣೆ ಹೇಗೆ? ಇಲ್ಲಿದೆ ತಜ್ಞರ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  ಏನಿದು ಕ್ರೋನಿಕ್ ಮೈಲಾಯ್ಡ್ ಲ್ಯುಕೇಮಿಯಾ ಕ್ಯಾನ್ಸರ್‌, ರಕ್ತಕ್ಕೆ ಹರಡುವ ಈ ಮಾರಕ ಕಾಯಿಲೆಯ ನಿರ್ವಹಣೆ ಹೇಗೆ? ಇಲ್ಲಿದೆ ತಜ್ಞರ ಉತ್ತರ

ಏನಿದು ಕ್ರೋನಿಕ್ ಮೈಲಾಯ್ಡ್ ಲ್ಯುಕೇಮಿಯಾ ಕ್ಯಾನ್ಸರ್‌, ರಕ್ತಕ್ಕೆ ಹರಡುವ ಈ ಮಾರಕ ಕಾಯಿಲೆಯ ನಿರ್ವಹಣೆ ಹೇಗೆ? ಇಲ್ಲಿದೆ ತಜ್ಞರ ಉತ್ತರ

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಇದರಿಂದ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಕ್ಯಾನ್ಸರ್‌ನ ವಿಧಗಳಲ್ಲಿ ಕ್ರೋನಿಕ್ ಮೈಲಾಯ್ಡ್ ಲ್ಯುಕೇಮಿಯಾ ಒಂದು. ಇದು ಬೋನ್ ಮ್ಯಾರೋದಲ್ಲಿ ರಕ್ತ ರೂಪುಗೊಳ್ಳುವ ಕೋಶದಲ್ಲಿ ಕಾಣಿಸುವ ಕ್ಯಾನ್ಸರ್ ಆಗಿದ್ದು, ಇದರ ನಿರ್ವಹಣೆಯ ಬಗ್ಗೆ ಡಾ. ಸಚಿನ್ ಜಾಧವ್ ವಿವರಿಸಿದ್ದಾರೆ.

ಕ್ರೋನಿಕ್ ಮೈಲಾಯ್ಡ್ ಲ್ಯುಕೇಮಿಯಾ ಕ್ಯಾನ್ಸರ್‌
ಕ್ರೋನಿಕ್ ಮೈಲಾಯ್ಡ್ ಲ್ಯುಕೇಮಿಯಾ ಕ್ಯಾನ್ಸರ್‌

ಇತ್ತೀಚಿನ ದಿನಗಳಲ್ಲಿ ದೇಹದ ವಿವಿಧ ಭಾಗಗಳಲ್ಲಿ ಕ್ಯಾನ್ಸರ್ ಹರಡುವ ಪ್ರಮಾಣ ಹೆಚ್ಚಾಗುತ್ತಿದೆ. ಮೂಳೆ, ರಕ್ತದಲ್ಲೂ ಕ್ಯಾನ್ಸರ್‌ನ ಕೋಶಗಳು ಅಭಿವೃದ್ಧಿಯಾಗುತ್ತಿವೆ, ಅಂತಹ ಕ್ಯಾನ್ಸರ್‌ಗಳು ಸದ್ದೇ ಇಲ್ಲದೇ ದೇಹವನ್ನು ಆವರಿಸಿ, ಪ್ರಾಣಕ್ಕೆ ಕಂಟಕವಾಗಿರುವುದು ಸುಳ್ಳಲ್ಲ. ಅವುಗಳಲ್ಲಿ ಕ್ರೋನಿಕ್ ಮೈಲಾಯ್ಡ್ ಲ್ಯುಕೇಮಿಯಾ ಕೂಡ ಒಂದು. ಇದು ರಕ್ತಕ್ಕೆ ಹರಡುವ ಕಾಯಿಲೆಯಾಗಿದ್ದು, ಈ ಕ್ಯಾನ್ಸರ್‌ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಏನಿದು ಕ್ರೋನಿಕ್ ಮೈಲಾಯ್ಡ್ ಲ್ಯುಕೇಮಿಯಾ ಕ್ಯಾನ್ಸರ್‌?

ಬೋನ್ ಮ್ಯಾರೋ ಅಥವಾ ಮೂಳೆ ಮಜ್ಜೆಯ ರಕ್ತ ರೂಪುಗೊಳ್ಳುವ ಕೋಶದಲ್ಲಿ ಕಾಣಿಸುವ ಹಾಗೂ ರಕ್ತಕ್ಕೆ ಹರಡಬಲ್ಲ ಒಂದು ವಿಧದ ಕ್ಯಾನ್ಸರ್‌ನ ಹೆಸರು ಕ್ರೋನಿಕ್ ಮೈಲಾಯ್ಡ್ ಲ್ಯುಕೇಮಿಯಾ (ಸಿಎಂಎಲ್). ಸದ್ಯ ಪ್ರಪಂಚದಾದ್ಯಂತ 12 ಲಕ್ಷದಿಂದ 15 ಲಕ್ಷ ಮಂದಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೂ ಕ್ರೋನಿಕ್ ಮೈಲಾಯ್ಡ್ ಲ್ಯುಕೇಮಿಯಾ ಪ್ರಕರಣಗಳು ಹೆಚ್ಚಾಗುತ್ತಿವೆ. 30-40 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಈ ಕಾಯಿಲೆಯು ಪತ್ತೆಯಾಗುತ್ತಿರುವುದನ್ನು ಗಮನಿಸಲಾಗಿದೆ. ಸಿಎಂಎಲ್ ಕಾಯಿಲೆಗೂ ಆರಂಭಿಕ ಪತ್ತೆ ಹಾಗೂ ಸೂಕ್ತ ರೀತಿಯ ಚಿಕಿತ್ಸೆ ಬಹಳ ಮುಖ್ಯ. ಕ್ರೋನಿಕ್ ಮೈಲಾಯ್ಡ್ ಲ್ಯುಕೇಮಿಯಾ ಕುರಿತ ಇನ್ನಷ್ಟು ವಿಚಾರ ಇಲ್ಲಿದೆ ನೋಡಿ.

ಕ್ರೋನಿಕ್ ಮೈಲಾಯ್ಡ್ ಲ್ಯುಕೇಮಿಯಾ ಬಗ್ಗೆ ಮಾತನಾಡುವ ಬೆಂಗಳೂರಿನ ಇಂಟರ್‌ನ್ಯಾಷನಲ್ ಹೆಮಟಾಲಜಿ ಕನ್ಸೋರ್ಟಿಯಂನ ಅಧ್ಯಕ್ಷ ಡಾ. ಸಚಿನ್ ಜಾಧವ್, ‘ಸಿಎಮ್ಎಲ್ ಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರು ಮತ್ತು ರೋಗಿಗಳು ಮುಕ್ತವಾಗಿ ಸಂವಹನ ನಡೆಸುವುದು ಬಹಳ ಮುಖ್ಯ. ಜೊತೆಗೆ ನಿಯಮಿತವಾಗಿ ಆಗಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆಯ ಪರಿಣಾಮಗಳನ್ನು ತಿಳಿದುಕೊಳ್ಳುವುದು ಹಾಗೂ ಅದಕ್ಕೆ ತಕ್ಕಂತೆ ಚಿಕಿತ್ಸಾ ಯೋಜನೆಯನ್ನು ಬದಲಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ರೋಗಿಗಳು ಇಎಲ್ಎನ್ ಮಾರ್ಗಸೂಚಿಗಳ ಪ್ರಕಾರ ಬಿಸಿಆರ್- ಎಬಿಎಲ್ ಮಟ್ಟ ಸರಿಯಾಗಿ ಇರುವಂತೆ ನೋಡಿಕೊಳ್ಳಲು ಆಗಾಗ್ಗೆ ಆ ಕುರಿತು ನಿಗಾ ವಹಿಸಬೇಕು. ರೋಗಿಗಳು ಕಾಲಕಾಲಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವುದು ಕೂಡ ಕಡ್ಡಾಯ. ಸಿಎಂಎಲ್ ಗೆ ಚಿಕಿತ್ಸೆ ನೀಡುವುದಷ್ಟೇ ಮುಖ್ಯವಲ್ಲ, ಅದರ ಜೊತೆಗೆ ಆ ರೋಗದೊಂದಿಗೆ ಬರುವ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ನಿರ್ವಹಿಸುವುದು ಕೂಡ ಬಹಳ ಮುಖ್ಯ‘ ಎಂದು ಹೇಳುತ್ತಾರೆ.

ಅವರ ಪ್ರಕಾರ ‘ಲಭ್ಯವಿರುವ ಆರೈಕೆ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕು. ರೋಗದ ಕುರಿತು ಸಂಪೂರ್ಣವಾಗಿ ಅರಿತುಕೊಳ್ಳುವುದು ಹಾಗೂ ರೋಗಿಯ ದೇಹಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವುದು ಈ ಸಿಎಂಎಲ್ ವಿಚಾರದಲ್ಲಿ ಹೆಚ್ಚು ಗಮನಾರ್ಹ‘.

ನಿಯಮಿತವಾಗಿ ನಿಗಾ ವಹಿಸುವ ಮೂಲಕ ಬೆಳವಣಿಗೆಯನ್ನು ತಿಳಿದುಕೊಳ್ಳುವುದು ಹೇಗೆ?

ಸಿಎಂಎಲ್ ಅನ್ನು ಸೂಕ್ತವಾಗಿ ನಿರ್ವಹಿಸುವ ಒಂದು ವಿಧಾನವೆಂದರೆ ನಿಯಮಿತವಾದ ಬಿಸಿಆರ್- ಎಬಿಎಲ್ ಮಟ್ಟವನ್ನು ಪರೀಕ್ಷೆ ಮಾಡುವುದು. ಈ ಪರೀಕ್ಷೆಗಳ ಮೂಲಕ ಬಿಸಿಆರ್- ಎಬಿಎಲ್ ಪ್ರೊಟೀನ್ ಮಟ್ಟವನ್ನು ಪತ್ತೆ ಹಚ್ಚಲಾಗುತ್ತದೆ. ಅದರಿಂದ ಚಿಕಿತ್ಸೆಯ ಪ್ರಗತಿಯನ್ನು ತಿಳಿಯಬಹುದಾಗಿದೆ. ಯುರೋಪಿಯನ್ ಲ್ಯುಕೇಮಿಯಾನೆಟ್ (ಇಎಲ್ಎನ್) ಮಾರ್ಗಸೂಚಿಗಳ ಪ್ರಕಾರ ಬಿಸಿಆರ್-ಎಬಿಎಲ್ ಮಟ್ಟವನ್ನು ತಿಳಿಯುವುದರಿಂದಲೇ ನಿಮ್ಮ ಚಿಕಿತ್ಸೆಯು ಪರಿಣಾಮಕಾರಿಯಾಗಿದೆಯೇ ಇಲ್ಲವೇ ಎಂಬುದು ಗೊತ್ತಾಗುತ್ತದೆ. ನಿಮ್ಮ ಬಿಸಿಆರ್-ಎಬಿಎಲ್ ಫಲಿತಾಂಶಗಳ ಮೇಲೆ ಕಣ್ಣಿಡುವ ಮೂಲಕ ನಿಮ್ಮ ಚಿಕಿತ್ಸೆ ಸೂಕ್ತವಾಗಿ ಕಾರ್ಯ ನಿರ್ಹವಿಸುತ್ತಿದೆಯೇ ಅಥವಾ ಏನಾದರೂ ಬದಲಾವಣೆ ಮಾಡಬೇಕೇ ಎಂದು ರೋಗಿಗಳು ಮತ್ತು ವೈದ್ಯರು ಸಮಾಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬಹುದು.

ಸಿಎಂಎಲ್ ಅನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಸದಾ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಮತ್ತು ನಿಮ್ಮ ವೈದ್ಯರ ಜೊತೆಗೆ ನಿರಂತರವಾಗಿ ಮುಕ್ತವಾಗಿ ಸಂವಹನ ನಡೆಸಬೇಕು. ಬಿಸಿಆರ್ –ಎಬಿಎಲ್ ಮಟ್ಟದ ಮೇಲೆ ನಿಗಾ ವಹಿಸುವಿಕೆ, ನಿಮ್ಮ ದೇಹ ತೋರಬಹುದಾದ ಪ್ರತಿರೋಧ ಅಥವಾ ಕಿರಿಕಿರಿ, ಚಿಕಿತ್ಸೆಯ ಬೆಳವಣಿಗೆ ಮತ್ತು ದೀರ್ಘಕಾಲದ ನಿರ್ವಹಣೆಯ ಕುರಿತು ಉತ್ತಮ ಪ್ರಶ್ನೆಗಳನ್ನು ಕೇಳುವ ಮೂಲಕ ನೀವು ಸೂಕ್ತ ಮಾಹಿತಿ ಪಡೆಯಬಹುದು ಮತ್ತು ಉತ್ತಮ ಆರೈಕೆಯನ್ನು ಪಡೆದುಕೊಳ್ಳಬಹುದು.

ಡಾ. ಸಚಿನ್ ಜಾಧವ್ (ಎಡಚಿತ್ರ)
ಡಾ. ಸಚಿನ್ ಜಾಧವ್ (ಎಡಚಿತ್ರ)

ಪ್ರಸ್ತುತ ಚಿಕಿತ್ಸಾ ಕ್ರಮದಲ್ಲಿ ದೇಹ ತೋರಬಹುದಾದ ಪ್ರತಿರೋಧದ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು

ಸಿಎಂಎಲ್ ಚಿಕಿತ್ಸೆಯ ಒಂದು ಮೂಲಾಧಾರವೆಂದರೆ ಟೈರೋಸಿನ್ ಕೈನೇಸ್ ಇನ್ಹಿಬಿಟರ್‌ಗಳು (ಟಿಕೆಐ). ರೋಗಿಗಳು ಕೆಲವೊಮ್ಮೆ ಈ ಸಂದರ್ಭದಲ್ಲಿ ದೇಹದ ಪ್ರತಿರೋಧ ಅಥವಾ ಕಿರಿಕಿರಿಯನ್ನು ಎದುರಿಸಬೇಕಾಗಿ ಬರಬಹುದು. ಕ್ಯಾನ್ಸರ್ ಕೋಶಗಳು ಚಿಕಿತ್ಸೆಗೆ ಹೊಂದಿಕೊಂಡಾಗ ಮತ್ತು ಚಿಕಿತ್ಸೆಯು ಯಶಸ್ವಿಯಾಗಿ ಪರಿಣಾಮ ಬೀರುವುದನ್ನು ನಿಲ್ಲಿಸಿದಾಗ ಪ್ರತಿರೋಧ ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲಿ ಬಿಸಿಆರ್–ಎಬಿಎಲ್ ಮಟ್ಟದಲ್ಲಿ ಏರಿಕೆ ಉಂಟಾಗಿರುತ್ತದೆ. ಪ್ರಸ್ತುತ ಚಿಕಿತ್ಸೆಗಳು ಹಾಗೇ ಮುಂದುವರಿದರೆ ಪ್ರತಿರೋಧ ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸಂಕೀರ್ಣವಾದ ಅಡ್ಡಪರಿಣಾಮಗಳು ಎದುರಾಗಬಹುದು. ನಿರಂತರ ವಾಕರಿಕೆ, ಸ್ನಾಯು ನೋವು ಅಥವಾ ತೀವ್ರ ಆಯಾಸದಂತಹ ಸಮಸ್ಯೆಗಳು ಉಂಟಾಗಬಹುದು. ಈ ಲಕ್ಷಣಗಳನ್ನು ಗುರುತಿಸಿಕೊಳ್ಳುವುದು ಬಹಳ ಮುಖ್ಯ. ಯಾಕೆಂದರೆ ಅದರಿಂದ ನಿಮ್ಮ ಚಿಕಿತ್ಸಾ ಕ್ರಮದಲ್ಲಿ ಬದಲಾವಣೆ ಮಾಡುವ ಸೂಚನೆ ಸಿಗುತ್ತದೆ.

ಸಿಎಂಎಲ್ ಚಿಕಿತ್ಸಾ ವಿಧದಲ್ಲಿನ ಹೊಸ ಬೆಳವಣಿಗೆಗಳು ಏನೇನಿವೆ?

ಸಿಎಂಎಲ್ ಚಿಕಿತ್ಸೆಯು ಅಭಿವೃದ್ಧಿ ಹೊಂದುತ್ತಿದೆ. ಕೆಲವು ಹೊಸ ಥೆರಪಿಗಳು ಅಥವಾ ಚಿಕಿತ್ಸಾ ವಿಧಾನಗಳು ಹೆಚ್ಚಿನ ಸುರಕ್ಷತೆಯನ್ನು ಮತ್ತು ಪರಿಣಾಮಕಾರಿತ್ವವನ್ನು ಒದಗಿಸುತ್ತಿವೆ. ಈ ಚಿಕಿತ್ಸೆಗಳು ಉತ್ತಮವಾಗಿ ಕೆಲಸ ಮಾಡಬಹುದು, ಅದರಲ್ಲೂ ರೋಗದ ಮುಂದಿನ ಹಂತಗಳಲ್ಲಿ ಉತ್ತಮ ಫಲಿತಾಂಶ ತೋರಬಹುದು. ಈ ವಿಚಾರದಲ್ಲಿ ನಿಮ್ಮ ವೈದ್ಯರೊಂದಿಗೆ ಚರ್ಚಿಸಬೇಕು. ಯಾಕೆಂದರೆ ಅದರಿಂದ ಯಾವುದೇ ಅಡ್ಡ ಪರಿಣಾಣಗಳಿವೆಯೇ ತಿಳಿದುಕೊಳ್ಳಿ. ಅದರಿಂದ ಜೀವನಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ. ಹೀಗೆ ಮಾಹಿತಿ ತಿಳಿದುಕೊಳ್ಳುವುದರಿಂದ ವಿವೇಕಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮತ್ತು ಅದಕ್ಕೆ ಅನುಗುಣವಾಗಿ ಚಿಕಿತ್ಸೆ ಪಡೆಯಬಹುದು.

ಸಿಎಂಎಲ್ ಸೂಕ್ತ ರೀತಿಯಲ್ಲಿ ನಿರ್ವಹಣೆಗೊಳಪಟ್ಟಿದೆ ಎಂದು ತಿಳಿಯುವುದು ಹೇಗೆ?

ಸಿಎಂಎಲ್ ಅನ್ನು ನಿರ್ವಹಿಸುವುದು ಒಂದು ಕ್ರಿಯಾಶೀಲ ಪ್ರಕ್ರಿಯೆಯಾಗಿದೆ. ನಿಯಮಿತವಾಗಿ ನಿಗಾವಹಿಸುವ ಮತ್ತು ಅದಕ್ಕೆ ತಕ್ಕಂತೆ ಹೊಂದಾಣಿಕ ಮಾಡಬೇಕಾದ ಅಗತ್ಯ ಇರುತ್ತದೆ. ಚಿಕಿತ್ಸೆ ಪಡೆಯುವುದಷ್ಟೇ ಸೂಕ್ತವಾಗಿ ನಿರ್ವಹಣೆ ಮಾಡುವ ಕ್ರಮ ಅಲ್ಲ, ಜೊತೆಗೆ ನಿಮ್ಮ ಕಾಯಿಲೆ ಮತ್ತು ಚಿಕಿತ್ಸಾ ಪ್ರತಿಕ್ರಿಯೆಯನ್ನು ತಿಳಿಯಲು ಆಗಾಗ್ಗೆ ವೈದ್ಯರನ್ನು ಭೇಟಿ ಮಾಡುವುದು ಮತ್ತು ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಕೂಡ ಬಹಳ ಮುಖ್ಯ. ಇಎಲ್ಎನ್ ಮಾರ್ಗಸೂಚಿಗಳ ಪ್ರಕಾರ ನಿಮ್ಮ ಬಿಸಿಆರ್ ಎಬಿಎಲ್ ಮಟ್ಟವನ್ನು ತಿಳಿಯಲು 3, 6 ಮತ್ತು 12ನೇ ತಿಂಗಳಿನಲ್ಲಿ ಪರೀಕ್ಷೆ ನಡೆಸಬೇಕು. ಆ ಬಳಿಕ 3ರಿಂದ 6 ತಿಂಗಳಲ್ಲಿ ಮತ್ತೆ ಪರೀಕ್ಷೆ ನಡೆಸಬೇಕು.

ನಿಮ್ಮ ಸ್ಥಿತಿಯಲ್ಲಿ ಉಂಟಾಗುವ ಯಾವುದೇ ಬದಲಾವಣೆಯನ್ನು ಆರಂಭಿಕ ಹಂತದಲ್ಲಿಯೇ ತಿಳಿಯಲು ಮತ್ತು ಸೂಕ್ತ ರೀತಿಯ ಚಿಕಿತ್ಸೆಯನ್ನು ಪಡೆದುಕೊಳ್ಳಲು ನಿರಂತರವಾಗಿ ಮಾನಿಟರ್ ಮಾಡುವುದು ಅಥವಾ ನಿಗಾವಹಿಸುವುದು ಮುಖ್ಯ. ಜೊತೆಗೆ ನಿಮ್ಮ ಪರೀಕ್ಷಾ ಫಲಿತಾಂಶಗಳ ಆಧಾರದಲ್ಲಿ ಮತ್ತು ಆರೋಗ್ಯದಲ್ಲಿ ಉಂಟಾಗುವ ಯಾವುದೇ ಬದಲಾವಣೆ ಆಧಾರದಲ್ಲಿ ಚಿಕಿತ್ಸಾ ಕ್ರಮದಲ್ಲಿ ಏನೇನು ಹಾಗೂ ಯಾವಾಗ ಬದಲಾವಣೆ ಮಾಡಬೇಕಾಗುತ್ತದೆ ಎಂಬುದರ ಬಗ್ಗೆಯೂ ತಿಳಿದುಕೊಳ್ಳಿ. ಯಾವಾಗ ತೀವ್ರ ರೀತಿಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಜೊತೆಗೆ ನಿಮ್ಮ ಜೀವನದ ಗುಣಮಟ್ಟ ಕಾಪಾಡಿಕೊಂಡು ಪರಿಣಾಮಕಾರಿಯಾಗಿ ಚಿಕಿತ್ಸೆ ಪಡೆದು ಸೂಕ್ತ ರೀತಿಯಲ್ಲಿ ರೋಗ ನಿರ್ವಹಣೆ ಮಾಡುವುದು ಅರಿತಾಗ ಜೀವನ ಸುಗಮವಾಗುತ್ತದೆ.

Whats_app_banner