ಪ್ರತಿದಿನ ಕನಿಷ್ಠ 2 ಲೀಟರ್ ನೀರು ಕುಡಿದ್ರೆ ಈ 10 ಆರೋಗ್ಯ ಪ್ರಯೋಜನಗಳಿವೆ
ನಮ್ಮ ದೇಹಕ್ಕೆ ಗಾಳಿ ಹಾಗೂ ಆಹಾರ ಎಷ್ಟು ಮುಖ್ಯವೋ ಅದರಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವುದು ನೀರು. ಜೀವ ಜಲ ಎಂದೇ ಕರೆಸಿಕೊಳ್ಳುವ ನೀರು, ನಮ್ಮ ಆರೋಗ್ಯ ನಿರ್ವಹಣೆಯನ್ನು ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ದೇಹದ ಪ್ರತಿಯೊಂದು ಅಂಗಾಗದ ನಿರ್ವಹಣೆ, ಕಾರ್ಯಚಟುವಟಿಕೆಗಳಿಗೆ ಕನಿಷ್ಠ 2 ಲೀಟರ್ ನೀರು ಅತೀ ಅಗತ್ಯ.
ದಣಿದಾಗ ಬಾಯಾರಿಕೆ ಎನಿಸಿದಾಗ ಮಾತ್ರವೇ ನೀರು ಕುಡಿಯಬೇಕಾ ? ಉಳಿದ ಸಮಯದಲ್ಲಿ ಶರೀರಕ್ಕೆ ನೀರಿನ ಅಗತ್ಯ ಬೀಳುವುದಿಲ್ಲವೇ ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಬಾಯಾರಿಕೆ ಎನ್ನಿಸದಿದ್ದರೂ ನಿತ್ಯವೂ ನಿಯಮಿತ ಅವಧಿಯಲ್ಲಿ ನೀರು ಕುಡಿಯುವ ರೂಢಿ ಮಾಡಿಕೊಳ್ಳಬೇಕು. ಅದರಲ್ಲೂ ಬೇಸಿಗೆಯ ಧಗೆಯಲ್ಲಿ ಶರೀರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶವನ್ನು ಒದಗಿಸದಿದ್ದರೆ ಅನೇಕ ಖಾಯಿಲೆಗಳಿಗೆ ತುತ್ತಾಗಬೇಕಾದೀತು. ನೀರು ನಮ್ಮ ದೇಹವನ್ನು ಹೈಡ್ರೇಟ್ ಮಾಡುವುದು ಮಾತ್ರವಲ್ಲ, ದೇಹದ ಉಷ್ಣತೆಯನ್ನು ನಿಯಂತ್ರಿಸುವ ಕಾರ್ಯವನ್ನೂ ಮಾಡುತ್ತದೆ. ಈ ಕಾರಣಕ್ಕಾಗಿಯೇ ಕನಿಷ್ಠವೆಂದರೂ ಪ್ರತಿದಿನವೂ 2 ಲೀಟರ್ ನೀರನ್ನು ಕುಡಿಯಲೇ ಬೇಕು. ಇದು ಉತ್ತಮ ಆರೋಗ್ಯವನ್ನು ಹೊಂದಲು ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಲು ಸಹಕಾರಿಯಾಗಿದೆ. ಯಾಕಾಗಿ ನೀರು ಕುಡಿಯಬೇಕು ಎಂಬ ನಿಮ್ಮ ಪ್ರಶ್ನೆಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
1) ದೇಹದ ಉಷ್ಣತೆಯ ನಿಯಂತ್ರಣ:
ನಮ್ಮ ಶರೀರದೊಳಗೆ ಏಕಕಾಲದಲ್ಲೇ ಅನೇಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಈ ವೇಳೆ ಅಗತ್ಯವಾದಷ್ಟು ನೀರಿನ ಅಂಶ ದೇಹಕ್ಕೆ ಸೇರಿಕೊಂಡರೆ ಬೆವರುವಿಕೆ ಸೇರಿದಂತೆ ದೇಹವನ್ನು ತಂಪಾಗಿಸುವ ಹಲವು ಕಾರ್ಯಗಳು ಸುಸೂತ್ರವಾಗಿ ನಡೆಯುತ್ತವೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದಾಗ ಅಥವಾ ಕಠಿಣ ಪರಿಶ್ರಮದ ದೈಹಿಕ ಚಟುವಟಿಕೆಗಳ ನಂತರ ದೇಹ ತಂಪಾಗಲು ಇದು ನೆರವಾಗುತ್ತದೆ.
2) ದೇಹದಲ್ಲಿನ ತ್ಯಾಜ್ಯ ನಿರ್ವಹಣೆಗೆ ನೆರವು:
ನಾವು ಯಾವಾಗಲೂ ನಮ್ಮ ದೇಹಕ್ಕೆ ನಿರ್ಜಲೀಕರಣದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಅಂದರೆ ನಮ್ಮ ದೇಹದ ಎಲ್ಲಾ ಅಂಗಾಂಗಗಳು ಪ್ರತಿ ಕ್ಷಣ ಸರಾಗವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ನಮ್ಮ ದೇಹದಲ್ಲಿ ಸಾಕಷ್ಟು ನೀರಿನ ಪ್ರಮಾಣ ಇರುವಂತೆ ಎಚ್ಚರ ವಹಿಸಬೇಕು. ಇದರಿಂದಾಗಿ ದೇಹದಲ್ಲಿರುವ ವಿಷ ಮತ್ತು ತ್ಯಾಜ್ಯ ವಸ್ತುಗಳನ್ನು ಬೆವರು, ಮಲ ಮತ್ತು ಮೂತ್ರದ ಮೂಲಕ ಹೊರಹಾಕಲು ಸಾಧ್ಯವಾಗುತ್ತದೆ. ನಮ್ಮ ಮೂತ್ರಪಿಂಡಗಳು ನೀರಿನ ಅಂಶವನ್ನು ಬಳಕೆ ಮಾಡಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿ, ನಮ್ಮಲ್ಲಿನ ವಿಷಕಾರಿ ತ್ಯಾಜ್ಯಗಳನ್ನು ಮತ್ತು ಅವಶ್ಯಕತೆ ಇಲ್ಲದ ಅಂಶಗಳನ್ನು ದೇಹದಿಂದ ಹೊರ ಹಾಕುತ್ತವೆ.
3)ಜೀರ್ಣಕ್ರಿಯೆಗೆ ಉತ್ತೇಜನ:
ನಾವು ಸೇವಿಸುರುವ ಆಹಾರವು ಜೀರ್ಣವಾಗಲು, ಜೀರ್ಣಾಂಗದ ಮೂಲಕ ಹಾದುಹೋಗಲು ಅಗತ್ಯ ಪ್ರಮಾಣದ ನೀರು ಸೇವನೆ ಅವಶ್ಯಕ. ಅಲ್ಲದೆ ಜೀರ್ಣಕ್ರಿಯೆಯ ಮೂಲಕ ಆಹಾರದಿಂದ ಪೋಷಕಾಂಶಗಳನ್ನು ವಿಭಜಿಸಿ, ಅಗತ್ಯ ಅಂಶಗಳನ್ನು ಶರೀರದ ವಿವಿಧ ಅಂಗಗಳಿಗೆ ನೀಡುವುದು ಹಾಗೂ ಅನಗತ್ಯವಾದುವುಗಳನ್ನು ಶರೀರದಿಂದ ಹೊರಹಾಕಲು ನೀರು ನೆರವಾಗುತ್ತದೆ. ಇವೆಲ್ಲವುಗಳ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದಾಗುವ ಪ್ರಮುಖ ಲಾಭಗಳೆಂದರೆ ಕರುಳಿನ ಚಲನೆಯನ್ನು ನಿರ್ವಹಿಸುವುದು ಹಾಗೂ ಮಲಬದ್ಧತೆಯನ್ನು ತಡೆಗಟ್ಟುವುದಾಗಿದೆ.
4) ಜೀವಕೋಶಗಳಿಗೆ ಪೋಷಕಾಂಶಗಳ ರವಾನೆ:
ಜೀವಸತ್ವಗಳು, ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳು ಸೇರಿದಂತೆ ಪ್ರಮುಖ ಪೋಷಕಾಂಶಗಳನ್ನು ದೇಹದ ಎಲ್ಲಾ ಜೀವಕೋಶಗಳಿಗೆ ತಲುಪಿಸುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಹೀರಿಕೊಳ್ಳುವದಕ್ಕೆ ಹಾಗೂ ಶರೀರದ ಎಲ್ಲ ಭಾಗಗಳಿಗೆ ವಿತರಣೆಯಾಗುವುದಕ್ಕೂ ಇದು ನೆರವಾಗುತ್ತದೆ.
5) ದೂರವಾಗಲಿದೆ ಸಂಧಿವಾತ:
ಕೀಲುಗಳಲ್ಲಿನ ಕಾರ್ಟಿಲೆಜ್ ಮತ್ತು ಮೂಳೆಗಳ ನಡುವಿನ ಘರ್ಷಣೆಯನ್ನು ಕಡಿಮೆ ಮಾಡುವಲ್ಲಿ ನಾವು ಕುಡಿಯುವ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಕೀಲುಗಳಲ್ಲಿನ ಬಿಗಿತವನ್ನು ಕಡಿಮೆ ಮಾಡುವುದು ಮತ್ತು ಸಂಧಿವಾತದಂತಹ ಕಾಯಿಲೆಗಳಿಂದ ದೂರವಿರಲು ಇದು ಸಹಾಯ ಮಾಡುತ್ತದೆ.
6) ಮಾನಸಿಕ ಆರೋಗ್ಯದ ಕಾಳಜಿ :
ಮಾನಸಿಕವಾಗಿ ಸದೃಢವಾಗಿರಲು ಮತ್ತು ಮೆದುಳಿನ ಕಾರ್ಯವನ್ನೂ ಚುರುಕುಗೊಳಿಸಲು ಅಗತ್ಯವಾದಷ್ಟು ನೀರನ್ನು ಕುಡಿಯಲೇ ಬೇಕು. ನಿರ್ಜಲೀಕರಣವು ಆಯಾಸವನ್ನು ಉಂಟುಮಾಡಬಹುದು. ಸ್ಮರಣಾಶಕ್ತಿಯ ಅಭಿವೃಧ್ಧಿಗೆ ಮತ್ತು ಗಮನವನ್ನು ಕೇಂದ್ರೀಕರಿಸುವಲ್ಲಿ ಶರೀರಕ್ಕೆ ಅಗತ್ಯವಿರುವಷ್ಟು ನೀರನ್ನು ನಾವು ಪೂರೈಸಲೇಬೇಕು.
7) ಚರ್ಮದ ಆರೋಗ್ಯಕ್ಕಿದು ರಾಮಬಾಣ:
ಬೇರೆ ಅಂಗಗಳಂತೆ ನಮ್ಮ ಚರ್ಮಕ್ಕೂ ಕೂಡ ನೀರಿನ ಅವಶ್ಯಕತೆ ಹೆಚ್ಚು. ನೀರು ಕುಡಿದರೆ ದೇಹದ ಹಲವು ಬೇಡದಿರುವ ಲವಣಗಳು ಮೂತ್ರದ ಮೂಲಕ ಹೊರ ಹೋಗುವಂತೆ ಚರ್ಮದ ಮೂಲಕವೂ ಬೆವರಾಗಿ ಹೊರಹೋಗುತ್ತದೆ. ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ನೀರು ಅತ್ಯಗತ್ಯ. ಚರ್ಮದ ಶುಷ್ಕತೆ, ಮಂದತೆ ಮತ್ತು ಚರ್ಮ ಸುಕ್ಕುಗಟ್ಟುವುದನ್ನು ತಡೆಯುವ ಮೂಲಕ ಆರೋಗ್ಯಕರ ಮೈಬಣ್ಣವನ್ನು ಹೊಂದುವಲ್ಲಿ ನೀರು ಸಹಕಾರಿ.
8) ಹೆಚ್ಚಲಿದೆ ವ್ಯಾಯಾಮದ ಕಾರ್ಯಕ್ಷಮತೆ:
ಆರೋಗ್ಯಕರ ಜೀವನ ನಡೆಸಲು ನಿಮ್ಮ ದೇಹಕ್ಕೆ ವ್ಯಾಯಾಮ ತುಂಬಾ ಮುಖ್ಯ. ಇದರಿಂದ ದೇಹದ ಕ್ಯಾಲರಿಗಳನ್ನು ಕರಗಿಸಲು ಸಾಧ್ಯವಾಗುತ್ತದೆ. ನೀರು ಕುಡಿಯುವುದರಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಗಳು ಕರಗಿ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯ ಗುಣಮಟ್ಟ ಹೆಚ್ಚಾಗುತ್ತದೆ. ಇದು ಮಾಂಸಖಂಡಗಳನ್ನು, ಅಂಗಾಂಶಗಳನ್ನು, ಕೀಲುಗಳನ್ನು ಸರಿಯಾಗಿ ಚಲಿಸಲು ಸಹಾಯ ಮಾಡಿಕೊಡುತ್ತದೆ. ಅಲ್ಲದೆ ಇಂತಹ ಚಟುವಟಿಕೆಯ ಸಮಯದಲ್ಲಿ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ.
9) ರಕ್ತದೊತ್ತಡ ನಿಯಂತ್ರಿಸುತ್ತದೆ:
ಆರೋಗ್ಯಕರ ರಕ್ತದೊತ್ತಡ ಮಟ್ಟವನ್ನು ಹೊಂದುವುದಕ್ಕಾಗಿ ಸಾಕಷ್ಟು ನೀರು ಕುಡಿಯುವುದು ಅತೀ ಅಗತ್ಯವಾಗಿದೆ. ಶರೀರದಲ್ಲಿ ನೀರಿನ ಅಂಶ ಕಡಿಮೆಯಾದಾಗ ಕಡಿಮೆ ರಕ್ತದೊತ್ತಡ, ತಲೆತಿರುಗುವಿಕೆ ಮತ್ತು ಮೂರ್ಛೆ ತಪ್ಪುವಂತಹ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು.
10) ನಿರ್ಜಲೀಕರಣವನ್ನು ತಡೆಯಲು ಸಹಕಾರಿ:
ದೀರ್ಘಕಾಲದ ನಿರ್ಜಲೀಕರಣವು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ನೀರಿನ ಕೊರತೆಯುಂಟಾದಾಗ ಅದು ಮೂತ್ರಪಿಂಡದಲ್ಲಿ ಕಲ್ಲುಗಳು ಕಾಣಿಸಿಕೊಳ್ಳುವುದು, ಮೂತ್ರ ಹಾಗೂ ಮೂತ್ರನಾಳದ ಸೋಂಕು ಸೇರಿದಂತೆ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡಬಹುದು. ಪ್ರತಿದಿನ ಕನಿಷ್ಠ 2 ಲೀಟರ್ ನೀರನ್ನು ಕುಡಿಯುವುದು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ದೇಹದ ಎಲ್ಲ ಅಂಗಾಂಗಗಳೂ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ.