ಬದಲಾಗಿದೆ ವಾತಾವರಣ, ಚಳಿಯ ಜತೆ ಮಳೆಯೂ ಸೇರಿ ಕೆಡಿಸಬಹುದು ಆರೋಗ್ಯ; ಈ ಸಮಯದಲ್ಲಿ ಹೀಗಿರಲಿ ಜೀವನಶೈಲಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬದಲಾಗಿದೆ ವಾತಾವರಣ, ಚಳಿಯ ಜತೆ ಮಳೆಯೂ ಸೇರಿ ಕೆಡಿಸಬಹುದು ಆರೋಗ್ಯ; ಈ ಸಮಯದಲ್ಲಿ ಹೀಗಿರಲಿ ಜೀವನಶೈಲಿ

ಬದಲಾಗಿದೆ ವಾತಾವರಣ, ಚಳಿಯ ಜತೆ ಮಳೆಯೂ ಸೇರಿ ಕೆಡಿಸಬಹುದು ಆರೋಗ್ಯ; ಈ ಸಮಯದಲ್ಲಿ ಹೀಗಿರಲಿ ಜೀವನಶೈಲಿ

ಮಳೆಗಾಲ ಕಳೆದು ಚಳಿಗಾಲ ಆರಂಭವಾದ ಬೆನ್ನಲ್ಲೇ ಮತ್ತೆ ಮಳೆ ಶುರುವಾಗಿದೆ. ಚಳಿ, ಮಳೆಯ ನಡುವೆ ಬದಲಾದ ಈ ವಾತಾವರಣವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಸಮಯಲ್ಲಿ ಕೊಂಚ ವ್ಯತ್ಯಾಸವಾದ್ರೂ ಜ್ವರ, ನೆಗಡಿಯಂತಹ ಸಮಸ್ಯೆಗಳ ಜೊತೆಗೆ ಕೆಲವು ಇತರ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲು ನಿಮ್ಮ ಜೀವನಶೈಲಿಯನ್ನು ಹೀಗೆ ಬದಲಿಸಿಕೊಳ್ಳಿ.

ಹವಾಮಾನ ಬದಲಾವಣೆಯ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ
ಹವಾಮಾನ ಬದಲಾವಣೆಯ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ (PC: Canva)

ಋತುಮಾನಗಳು ಬದಲಾದಂತೆ ವಾತಾವರಣದಲ‍್ಲಿ ಮಾತ್ರವಲ್ಲ, ದೇಹದಲ್ಲೂ ಬದಲಾವಣೆಗಳಾಗುತ್ತವೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಇದೀಗ ಚಳಿಗಾಲ ಆರಂಭವಾಗಿದೆ ಅಷ್ಟೇ, ಈ ನಡುವೆಯೇ ಹವಾಮಾನ ವೈಪರೀತ್ಯದ ಕಾರಣದಿಂದ ಮಳೆ ಕೂಡ ಶುರುವಾಗಿದೆ. ಕೆಲವೆಡೆ ಶೀತ ವಾತಾವರಣವಿದ್ದರೆ, ಕೆಲವಡೆ ಸುಡುವ ಸೆಖೆಯ ವಾತಾವರಣವಿದೆ.

ಈ ರೀತಿಯ ವಾತಾವರಣದ ಬದಲಾವಣೆಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಶೀತ, ನೆಗಡಿಯಂತಹ ಸಾಮಾನ್ಯ ಕಾಯಿಲೆಗಳ ಜೊತೆಗೆ ಗಂಟುನೋವು, ಕೀಲುನೋವಿನಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಅಲ್ಲದೇ ಕೆಲವೊಂದು ಆರೋಗ್ಯ ಸಮಸ್ಯೆ ಇರುವವರು ಈ ವಾತಾವರಣದಲ್ಲಿ ಕೊಂಚ ಎಡವಿದ್ರೂ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು. ಹಾಗಾದರೆ ಚಳಿ, ಮಳೆಯ ಈ ವಾತಾವರಣದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ನೋಡಿ.

ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ

ಚಳಿ ಹಾಗೂ ಮಳೆ ಒಟ್ಟಾಗಿ ಹವಾಮಾನ ಬದಲಾವಣೆಯಾಗಿದ್ದು ಈ ಸಮಯದಲ್ಲಿ ರೋಗಗಳು ಹರಡುವುದು ಸಾಮಾನ್ಯ. ರೋಗಗಳು ಬಾರದಂತೆ ತಡೆಯಲು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಅರಿಸಿನ, ಕಾಳುಮೆಣಸು, ಜೀರಿಗೆಯಂತಹ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಹೆಚ್ಚು ಸೇರಿಸಿ.

ಮಳೆಯಲ್ಲಿ ನೆನೆಯಬೇಡಿ

ಮಳೆ ಎಂದರೆ ಬಹುತೇಕರಿಗೆ ಖುಷಿ. ಅಪರೂಪಕ್ಕೆ ಮಳೆ ಬಂತು ಎಂದು ತಪ್ಪಿಯೂ ನೆನೆಯಬೇಡಿ, ಇದರಿಂದ ಆರೋಗ್ಯ ಕೆಡುವುದು ಖಂಡಿತ. ಇನ್ನೂ ನಾಲ್ಕೈದು ದಿನಗಳ ಕಾಲ ಮಳೆ ಇರುವುದರಿಂದ ಕೊಡೆ ಹಿಡಿದುಕೊಂಡೇ ಹೊರ ಹೋಗಿ.

ಬೀದಿ ಬದಿ ಆಹಾರ ಸೇವನೆ ತಪ್ಪಿಸಿ

ಮಳೆ, ಚಳಿ ಒಟ್ಟಾಗಿರುವ ಈ ವಾತಾವರಣದಲ್ಲಿ ಬಿಸಿ ಬಿಸಿಯಾದ ಮಸಾಲೆಯಕ್ತ ಆಹಾರ ಸೇವನೆಯನ್ನ ನಾಲಿಗೆ ಬಯಸುವುದು ಸಹಜ. ಆದರೆ ಬೀದಿಬದಿ ಹಾಗೂ ಮಸಾಲೆಯಕ್ತ ಆಹಾರ ಸೇವಿಸುವುದರಿಂದ ಹೊಟ್ಟೆ ಕೆಡುವುದು ಮಾತ್ರವಲ್ಲ ಇದರಿಂದ ಇನ್ನಿತರ ಸಮಸ್ಯೆಗಳು ಎದುರಾಗಬಹುದು.

ಬೆಚ್ಚಗಿನ ಬಟ್ಟೆ ಧರಿಸಿ

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದು ಬಹಳ ಮುಖ್ಯ. ಆದರೆ ಈಗ ಮಳೆ–ಚಳಿ ಎರಡೂ ಇದ್ದು ಚಳಿಯ ಪ್ರಮಾಣ ಏರಿಕೆಯಾಗಿದೆ, ಆ ಕಾರಣಕ್ಕೆ ಸ್ವೆಟರ್‌, ಜಾಕೆಟ್ ಧರಿಸಿ ದೇಹವನ್ನು ಬೆಚ್ಚಗಿರಿಸಿಕೊಳ್ಳಿ.

ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಿ

ಹವಾಮಾನ ಬದಲಾವಣೆಯು ಸೊಳ್ಳೆಯಂತಹ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಸೊಳ್ಳೆ ಕಚ್ಚುವುದರಿಂದ ಜ್ವರದಂತಹ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚು. ಆ ಕಾರಣಕ್ಕೆ ಸೊಳ್ಳೆ ಕಚ್ಚದಂತೆ ನೋಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ.

ಸಾಕಷ್ಟು ನೀರು ಕುಡಿಯಿರಿ

ಬದಲಾದ ವಾತವರಣವು ಬಾಯಾರಿಕೆಯನ್ನ ಕಡಿಮೆ ಮಾಡಬಹುದು. ಆದರೆ ನೀವು ಹೆಚ್ಚು ಹೆಚ್ಚು ನೀರು ಕುಡಿಯಬೇಕು. ಡೀಹೈಡ್ರೇಷನ್ ಆಗದಂತೆ ನೋಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ. ನೀರು ಕಡಿಮೆ ಕುಡಿಯುವುದು ಕೂಡ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು.

ಪೋಷಕಾಂಶ ಸಮೃದ್ಧ ಆಹಾರ ಸೇವನೆ

ಈ ಸಮಯದಲ್ಲಿ ವಿಟಮಿನ್‌, ಮಿನರಲ್ಸ್, ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಸೊಪ್ಪುಗಳನ್ನು ತಿನ್ನುವ ಮುನ್ನ ಚೆನ್ನಾಗಿ ತೊಳೆಯಬೇಕು.

ಕಷಾಯ ಕುಡಿಯಿರಿ

ಮೊದಲೇ ಹೇಳಿದಂತೆ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿ ದೇಹವು ಕ್ರಿಯಾಶೀಲವಾಗಿರಲು ಕಷಾಯಗಳು ಹಾಗೂ ಗ್ರೀನ್ ಟೀ ಸೇವನೆಗೆ ಆದ್ಯತೆ ಇದೆ. ಶುಂಠಿ, ಕಾಳುಮೆಣಸು, ಅರಿಸಿನ, ಈರುಳ್ಳಿ ಸೇರಿಸಿ ತಯಾರಿಸಿದ ಕಷಾಯವನ್ನು ಹೆಚ್ಚು ಕುಡಿಯಿರಿ.

ಸ್ವಚ್ಛತೆ ಕಾಪಾಡಿಕೊಳ್ಳುವುದು

ಮನೆಯ ಒಳಗೆ ಹಾಗೂ ಹೊರಗೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ. ಸೊಳ್ಳೆಗಳು ಹರಡದಂತೆ ನೋಡಿಕೊಳ್ಳುವುದು ಕೂಡ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗವಾಗಿದೆ.

ತಾಜಾ ಆಹಾರ ಸೇವಿಸಿ

ಈ ಸಮಯದಲ್ಲಿ ಆಲಸ್ಯ ಕಾಡುವುದು ಸಹಜ. ಹಾಗಂತ ಕಲುಷಿತ, ಹಳಸಲು ಆಹಾರ ಸೇವಿಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಪ್ರತಿ ಬಾರಿ ತಾಜಾ ಹಾಗೂ ಬಿಸಿಬಿಸಿ ಆಹಾರ ಸೇವನೆಗೆ ಒತ್ತು ನೀಡಿ.

Whats_app_banner