KreditBee Loan: ಪುರುಷ ಗ್ಯಾರಂಟಿದಾರ ಇಲ್ಲಾಂದ್ರೆ ಸಾಲಕೊಡೊಲ್ಲ ಅಂದ ಕ್ರೆಡಿಟ್‌ಬೀಗೆ ಬಿಸಿಮುಟ್ಟಿಸಿದ ಯುವ ಮಹಿಳಾ ಉದ್ಯಮಿ
ಕನ್ನಡ ಸುದ್ದಿ  /  ಜೀವನಶೈಲಿ  /  Kreditbee Loan: ಪುರುಷ ಗ್ಯಾರಂಟಿದಾರ ಇಲ್ಲಾಂದ್ರೆ ಸಾಲಕೊಡೊಲ್ಲ ಅಂದ ಕ್ರೆಡಿಟ್‌ಬೀಗೆ ಬಿಸಿಮುಟ್ಟಿಸಿದ ಯುವ ಮಹಿಳಾ ಉದ್ಯಮಿ

KreditBee Loan: ಪುರುಷ ಗ್ಯಾರಂಟಿದಾರ ಇಲ್ಲಾಂದ್ರೆ ಸಾಲಕೊಡೊಲ್ಲ ಅಂದ ಕ್ರೆಡಿಟ್‌ಬೀಗೆ ಬಿಸಿಮುಟ್ಟಿಸಿದ ಯುವ ಮಹಿಳಾ ಉದ್ಯಮಿ

KreditBee Loan: ಪುರುಷ ಸಹ ಅರ್ಜಿದಾರ ಅಥವಾ ಗ್ಯಾರಂಟಿದಾರರು ಇಲ್ಲದೆ ಇದ್ದರೆ ಮಹಿಳಾ ಉದ್ಯಮಿಗಳಿಗೆ ಸಾಲ ನೀಡುವುದಿಲ್ಲ ಎಂದು ಕ್ರೆಡಿಟ್‌ಬೀ ನಡವಳಿಕೆ ಕುರಿತು ಲಿಂಕ್ಡ್‌ಇನ್‌ನಲ್ಲಿ ಮುಂಬೈನ ಮಹಿಳಾ ಉದ್ಯಮಿಯೊಬ್ಬರು ಬೇಸರವ್ಯಕ್ತಪಡಿಸಿದ್ದಾರೆ. ಮಹಿಳೆಯರು ಸಾಲ ಮರುಪಾವತಿಸುವಷ್ಟು ಸಮರ್ಥರಾಗಿದ್ದೇವೆ ಎಂದು ಅವರು ಆಕ್ರೋಶದ ನುಡಿಗಳನ್ನಾಡಿದ್ದಾರೆ.

ಪುರುಷ ಗ್ಯಾರಂಟಿದಾರ ಇಲ್ಲಾಂದ್ರೆ ಸಾಲಕೊಡೊಲ್ಲ ಅಂದ ಕ್ರೆಡಿಟ್‌ಬೀಗೆ ಬಿಸಿಮುಟ್ಟಿಸಿದ ಕರ್ಲ್‌ ಕೇರ್‌ ಸಂಸ್ಥೆಯ ಸ್ಥಾಪಕಿ ಮತ್ತು ಸಿಇಒ ಸಿಮ್ರಾನ್‌ ಸೈನಾನಿ
ಪುರುಷ ಗ್ಯಾರಂಟಿದಾರ ಇಲ್ಲಾಂದ್ರೆ ಸಾಲಕೊಡೊಲ್ಲ ಅಂದ ಕ್ರೆಡಿಟ್‌ಬೀಗೆ ಬಿಸಿಮುಟ್ಟಿಸಿದ ಕರ್ಲ್‌ ಕೇರ್‌ ಸಂಸ್ಥೆಯ ಸ್ಥಾಪಕಿ ಮತ್ತು ಸಿಇಒ ಸಿಮ್ರಾನ್‌ ಸೈನಾನಿ

KreditBee Loan: ಹೊಸ ಉದ್ಯಮ ಸ್ಥಾಪಿಸಲು ಸಾಲ ಕೇಳಲು ಹೋದಾಗ ಹಣಕಾಸು ಸಂಸ್ಥೆಗಳು ಸಾಕಷ್ಟು ಕಾಡುತ್ತವೆ. ಕ್ರೆಡಿಟ್‌ಬೀ ಎಂಬ ಡಿಜಿಟಲ್‌ ಸಾಲದಾತ ಕಂಪನಿಯಿಂದ ಮಹಿಳಾ ಉದ್ಯಮಿಯೊಬ್ಬರು ಸಾಲ ಪಡೆಯಲು ಹೋದಾಗ ಕೆಟ್ಟ ಅನುಭವವಾಗಿದೆ. ಇವರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ "ಪುರುಷ ಸಹ ಗ್ಯಾರಂಟಿದಾರ ಇಲ್ಲ" ಎನ್ನುವ ಕಾರಣ ನೀಡಿ ಇವರಿಗೆ ಸಾಲ ನೀಡಲು ಕ್ರೆಡಿಟ್‌ಬೀ ನಿರಾಕರಿಸಿತ್ತು. ಈ ಅನುಭವವನ್ನು ಕರ್ಲ್‌ ಕೇರ್‌ ಸಂಸ್ಥೆಯ ಸ್ಥಾಪಕಿ ಮತ್ತು ಸಿಇಒ ಸಿಮ್ರಾನ್‌ ಸೈನಾನಿ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕ್ರೆಡಿಟ್‌ಬೀ ಜತೆ ನಡೆಸಿದ ಚಾಟಿಂಗ್‌ನ ಸ್ಕ್ರೀನ್‌ಶಾಟ್‌ ಅನ್ನೂ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅರ್ಜಿ ಸಲ್ಲಿಸುವಾಗ ಸಹ ಅರ್ಜಿದಾರರ ವಯಸ್ಸು 55 ವರ್ಷಕ್ಕಿಂತ ಕಡಿಮೆ ಇರಬೇಕು ಎಂಬ ನಿಯಮವನ್ನೂ ಹೇಳಿದ್ದಾರೆ. ಸೈನಾನಿಯ ತಂದೆಗೆ 62 ವರ್ಷ ವಯಸ್ಸಾಗಿರುವ ಕಾರಣ ಗ್ಯಾರಂಟಿದಾರರಾಗಲು ಸಾಧ್ಯವಾಗಿರಲಿಲ್ಲ.

ಕ್ರೆಡಿಟ್‌ಬೀಗೆ ಬಿಸಿಮುಟ್ಟಿಸಿದ ಯುವ ಮಹಿಳಾ ಉದ್ಯಮಿ

"ನಿಮಗೆ ಗೊತ್ತೆ? ಭಾರತದ ಮಹಿಳಾ ಉದ್ಯಮಿಗೆ ಪುರುಷ ಸಹ ಅರ್ಜಿದಾರ ಇಲ್ಲವೆಂಬ ಕಾರಣ ನೀಡಿ ಸಾಲ ನಿರಾಕರಿಸಲಾಗಿದೆ. ಹೌದು, ನೀವು ಎಷ್ಟು ಕ್ರೆಡಿಟ್‌ ಮೌಲ್ಯ ಹೊಂದಿದ್ದೀರಿ, ನಿಮ್ಮ ಕ್ರೆಡಿಟ್‌ ಸ್ಕೋರ್‌ ಎಷ್ಟು? ಯಾವ ಹುದ್ದೆಯಲ್ಲಿದ್ದೀರಿ, ಯಾವ ಸ್ಥಿತಿಯಲ್ಲಿದ್ದೀರಿ, ನಿಮ್ಮ ಸಾಮರ್ಥ್ಯ ಏನು? ಇತ್ಯಾದಿಗಳೆಲ್ಲ ಲೆಕ್ಕಕ್ಕೆ ಇಲ್ಲ. ಕ್ರೆಡಿಟ್‌ಬೀಯಂತಹ ಸಂಸ್ಥೆಗಳು ನೀವು ಪುರುಷ ಗ್ಯಾರಂಟಿದಾರರನ್ನು ನೀಡುವವರೆಗೆ ನಿಮಗೆ ಸಾಲ ನೀಡುವುದಿಲ್ಲ" ಎಂದು ಸಸಿಮ್ರಾನ್‌ ಸೈನಾನಿ ಲಿಂಕ್ಡ್‌ಇನ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಿಮಗೆ ತಂದೆ ಸಹಾಯ ಮಾಡಬಹುದಲ್ವ? ಎಂದು ನೀವು ಯೋಚಿಸಬಹುದು. ಅವರ ವಯಸ್ಸು 55ಕ್ಕಿಂತ ಕಡಿಮೆ ಇರಬೇಕಂತೆ. ನನ್ನ ತಂದೆಗೆ 62 ವರ್ಷ ವಯಸ್ಸು. ಏನ್ಮಾಡೋದು" ಎಂದು ಸೈನಾನಿ ಪೋಸ್ಟ್‌ ಮಾಡಿದ್ದಾರೆ.

ತಂದೆಯ ವಯಸ್ಸು 55ಕ್ಕಿಂತ ಹೆಚ್ಚಿದೆ. ಮನೆಯಲ್ಲಿ ಬೇರೆ ಯಾರಾದರೂ ಪುರುಷರು ಇಲ್ವ ಎಂದು ಕೇಳಬಹುದು. ಆದರೆ, ಈಕೆಗೆ ಸಹೋದರ ಇಲ್ಲ. "ನನ್ನನ್ನು ಕ್ಷಮಿಸಿ ಮೇಡಂ, ನಮ್ಮ ಕ್ರೆಡಿಟ್‌ಬೀ ನಿಯಮದ ಪ್ರಕಾರ ಸಹ ಅರ್ಜಿದಾರರು ಇಲ್ಲದೆ ಇದ್ದರೆ ಮಹಿಳಾ ಅರ್ಜಿದಾರರಿಗೆ ಸಾಲ ನೀಡಲು ಸಾಧ್ಯವಿಲ್ಲ. ನಮ್ಮ ಕಂಪನಿಯ ನಿಯಮ ಹೀಗೆ ಇದೆ. ನಿಮಗೆ ಏನಾದರೂ ಸಾಲ ಬೇಕೇಬೇಕು ಎಂದಾದರೆ ಪುರುಷ ಗ್ಯಾರಂಟಿದಾರ ಬೇಕು" ಎಂದು ಕ್ರೆಡಿಟ್‌ಬೀ ಪ್ರತಿನಿಧಿ ಚಾಟಿಂಗ್‌ನಲ್ಲಿ ತಿಳಿಸಿದ್ದರು.

"ಎಲ್ಲಾ ಸಾಲದಾತರಿಗೆ ನಾನು ಹೇಳುವುದು ಇಷ್ಟೇ. ಮಹಿಳೆಯರು ತಾವು ಪಡೆದ ಸಾಲವನ್ನು ಹಿಂತುರುಗಿಸಲು ಸಮರ್ಥರಿದ್ದಾರೆ. ಇದಕ್ಕಾಗಿ ಸಹ ಅರ್ಜಿದಾರರ ಅಗತ್ಯವಿಲ್ಲ" ಎಂದು ಅವರು ಬರೆದಿದ್ದಾರೆ.

ಪ್ರತ್ಯೇಕ ಕಾಮೆಂಟ್‌ವೊಂದರಲ್ಲಿ ಕ್ರೆಡಿಟ್‌ಬೀ ಪ್ರತಿಕ್ರಿಯೆ ನೀಡಿದೆ. ನಾವು ಯಾವುದೇ ಅಂತಹ ನಿಯಮಗಳನ್ನು ಹೊಂದಿಲ್ಲ ಎಂದು ಕಂಪನಿ ತಿಳಿಸಿದೆ. "ಡಿಯರ್‌ ಸಿಮ್ರಾನ್‌, ನಾವು ಅಂತಹ ಅಭ್ಯಾಸಗಳನ್ನು, ನಿಯಮಗಳನ್ನು ಹೊಂದಿಲ್ಲ. ನಾವು ಆರ್‌ಬಿಐ ನಿಯಮಗಳಿಗೆ ಮತ್ತು ಉದ್ಯಮಗಳ ಷರತ್ತುಗಳಿಗೆ ಬದ್ಧರಾಗಿದ್ದೇವೆ. ದಯವಿಟ್ಟು ನಿಮ್ಮ ಸಂಪರ್ಕ ವಿವರವನ್ನು ಹಂಚಿಕೊಳ್ಳಿ,. ತಕ್ಷಣ ನಾವು ಪ್ರತಿಕ್ರಿಯೆ ನೀಡುತ್ತೇವೆ" ಎಂದು ಕ್ರೆಡಿಟ್‌ ಬೀ ಪ್ರತಿಕ್ರಿಯೆ ನೀಡಿದೆ.

ಸಾಕಷ್ಟು ಮಹಿಳಾ ಉದ್ಯಮಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ. "ನನ್ನ ಕ್ರೆಡಿಟ್‌ ಸ್ಕೋರ್‌ ಅತ್ಯುತ್ತಮವಾಗಿದ್ದರೂ ಪುರುಷ ಸಹ-ಗ್ಯಾರಂಟಿದಾರ ಇಲ್ಲದ ಕಾರಣಕ್ಕೆ ಹಲವು ಬಾರಿ ರಿಜೆಕ್ಟ್‌ ಆಗಿವೆ" ಎಂದು ಉದ್ಯಮಿ ಶಿಲ್ಪಾ ವದ್ರೆವು ಕಾಮೆಂಟ್‌ ಮಾಡಿದ್ದಾರೆ. ಇದೇ ರೀತಿ ಸಾಕಷ್ಟು ಜನರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕ್ರೆಡಿಟ್ ಬೀ ಸ್ಪಷ್ಟೀಕರಣ: ಕ್ರೆಡಿಟ್‌ಬೀನಲ್ಲಿ ನಾವು ಎಲ್ಲ ಜನರ ಆರ್ಥಿಕ ಅಗತ್ಯಗಳನ್ನು ಒದಗಿಸಲು ಬದ್ಧರಾಗಿದ್ದೇವೆ. ನಮ್ಮ ಕ್ರೆಡಿಟ್ ಅಂಡರ್ರೈಟಿಂಗ್ ಪ್ರಕ್ರಿಯೆಯು ಸಮಂಜಸ ಕಾರ್ಯಕ್ಷಮತೆ ಮತ್ತು ಪ್ರಾಯೋಗಿಕ ಡೇಟಾದೊಂದಿಗೆ ಸಮ್ಮಿಳಿತವಾಗಿದ್ದು, ಇದು ಭೌಗೋಳಿಕತೆ, ವಯಸ್ಸು ಅಥವಾ ಲಿಂಗ ಪಕ್ಷಪಾತ ನಡೆಸುವುದಿಲ್ಲ. ಅದೇ ರೀತಿ ಯಾವುದೇ ರೀತಿಯಲ್ಲಿ ತಾರತಮ್ಯ ಮಾಡುವ ಉದ್ದೇಶವೂ ಇಲ್ಲ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

ಕಂಪನಿಯು ಇದುವರೆಗೆ ದೇಶದ 20 ಲಕ್ಷದಷ್ಟು ಮಹಿಳಾ ಗ್ರಾಹಕರಿಗೆ ಸೇವೆಯನ್ನು ಒದಗಿಸಿದೆ. ಎಲ್ಲ ರೀತಿಯ ಹಿಮ್ಮಾಹಿತಿಯನ್ನು ಗೌರವಿಸುತ್ತೇವೆ ಮತ್ತು ಸುಧಾರಣೆಗೆ ಬದ್ಧರಾಗಿ ಮುಂದುವರಿಯುತ್ತಿದ್ದೇವೆ. ಈ ಕೇಸ್‌ನಲ್ಲಿ ಗ್ರಾಹಕರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಕ್ರೆಡಿಟ್‌ಬೀ ವಕ್ತಾರರು ತಿಳಿಸಿದ್ದಾರೆ.

Whats_app_banner