Indian Railway Heroes: ಈರುಳ್ಳಿ ನೆರವಿನಿಂದ ವ್ಯಕ್ತಿ ಜೀವ ಉಳಿಸಿದ ಟಿಟಿ, ಭಾರತೀಯ ರೈಲ್ವೆಗೆ ಪ್ರಣಾಮ, ನನ್ನಮ್ಮ 100 ವರ್ಷ ಬದುಕಿದ್ರು
Indian Railway Heroes: ಬೆಟರ್ ಇಂಡಿಯಾವು ಇತ್ತೀಚೆಗೆ ರೈಲ್ವೆ ಟಿಟಿಯೊಬ್ಬರು ಈರುಳ್ಳಿ ನೆರವಿನಿಂದ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದ ಕಥೆಯನ್ನು ಹಂಚಿಕೊಂಡಿದೆ. ಸೋಷಿಯಲ್ ಮೀಡಿಯಾ ಜಮಾನಕ್ಕೂ ಮುನ್ನವೂ ರೈಲ್ವೆಯು ತುರ್ತು ಪರಿಸ್ಥಿತಿಗಳಲ್ಲಿ ಸಕಾಲದಲ್ಲಿ ಸ್ಪಂದಿಸುತ್ತಿತ್ತು ಎನ್ನುವುದಕ್ಕೆ ಇದು ಸಾಕ್ಷಿ.
Indian Railway Heroes: ಈಗ ರೈಲ್ವೆ ಪ್ರಯಾಣದಲ್ಲಿ ಏನಾದರೂ ತೊಂದರೆಯಾದರೆ ತಕ್ಷಣ ಪ್ರಯಾಣಿಕರು ಎಕ್ಸ್ (ಟ್ವಿಟ್ಟರ್) ಹ್ಯಾಂಡಲ್ ಮೂಲಕ ಭಾರತೀಯ ರೈಲ್ವೆಯನ್ನು, ರೈಲ್ವೆ ಸಚಿವರನ್ನು ಟ್ಯಾಗ್ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಾರೆ. ತಕ್ಷಣ ರೈಲ್ವೆಯು ಸ್ಪಂದಿಸುತ್ತದೆ. ಇತ್ತೀಚೆಗೆ ತನ್ನ ಫ್ರೆಂಡ್‌ಗೆ ನೋವು ನಿವಾರಕ ಮಾತ್ರೆ ಮತ್ತು ಸ್ಯಾನಿಟರಿ ಬೇಕೆಂದು ವ್ಯಕ್ತಿಯೊಬ್ಬರು ರೈಲಿನಲ್ಲಿ ಪ್ರಯಾಣಿಸುತ್ತ ರೈಲ್ವೆ ಸಚಿವಾಲಯಕ್ಕೆ ಎಕ್ಸ್‌ನಲ್ಲಿ ಟ್ಯಾಗ್ ಮಾಡಿದ್ದರು. ಬೆಂಗಳೂರು- ಬಳ್ಳಾರಿ-ಹೊಸಪೇಟೆ ರೈಲಿನಲ್ಲಿ ವಿಶಾಲ್ ಎನ್ನುವವರು ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಈತನ ಗೆಳತಿಗೆ ಮುಟ್ಟಿನ ನೋವು ಕಾಣಿಸಿಕೊಂಡಿದೆ. ಆ ರೈಲು ರಾತ್ರಿ 10.14 ಗಂಟೆಗೆ ಹೊರಟು ಮರುದಿನ 9.40ಕ್ಕೆ ಬಳ್ಳಾರಿ ತಲುಪಬೇಕಿತ್ತು. ಆದರೆ, ಈ ಸಂದರ್ಭದಲ್ಲಿ ಈತನ ಗೆಳತಿಯಲ್ಲಿ ಸ್ಯಾನಿಟರಿ ಪ್ಯಾಡ್ ಇರಲಿಲ್ಲ. ತಕ್ಷಣ ಈ ಕ್ಷಣದಲ್ಲಿ ಏನು ಮಾಡಬೇಕೆಂದು ವಿಶಾಲ್‌ಗೆ ತೋಚಲಿಲ್ಲ. ರೈಲಿನಿಂದ ಇಳಿದು ಸ್ಯಾನಿಟರಿ ಪ್ಯಾಡ್ ಮತ್ತು ನೋವು ನಿವಾರಕ ಮಾತ್ರೆ ತರುವಂತೆ ಇರಲಿಲ್ಲ. ರೈಲು ಯಶವಂತಪುರ ಬಿಟ್ಟ ಸಮಯದಲ್ಲಿ ಇವರು ಟ್ವೀಟ್ ಮಾಡಿ ರೈಲ್ವೆ ಸಚಿವಾಲಯಕ್ಕೆ ವಿಷಯ ತಿಳಿಸಿದ್ದರು. 11 ಗಂಟೆಗೆ ಈತ ಟ್ವೀಟ್ ಮಾಡಿದ್ದ. 11:06 ಗಂಟೆಗೆ ಮಾರುತ್ತರ ಬಂತು. ಆ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಯೊಬ್ಬರು ಇವರು ಕುಳಿತ ಸೀಟ್‌ಗೆ ಬಂದು ಮಾಹಿತಿ ಖಚಿತಪಡಿಸಿಕೊಂಡರು. ರಾತ್ರಿ ಎರಡು ಗಂಟೆಗೆ ರೈಲು ಅರಸಿಕೆರೆ ನಿಲ್ದಾಣಕ್ಕೆ ಬಂದಾಗ ಈಕೆಗೆ ಬೇಕಾದ ಎಲ್ಲಾ ವಸ್ತುಗಳು ರೆಡಿ ಇತ್ತು. ಈ ಹಿಂದೆಯೂ ಭಾರತೀಯ ರೈಲ್ವೆಯು ತಕ್ಷಣ ಸ್ಪಂದಿಸಿ ಸಾಕಷ್ಟು ಜನರಿಗೆ ನೆರವಾಗಿದೆ. ಆದರೆ, ಟ್ವಿಟ್ಟರ್, ಫೇಸ್ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಇಲ್ಲದ ಸಂದರ್ಭದಲ್ಲಿ ರೈಲ್ವೆ ಹೇಗೆ ಸಹಾಯ ಮಾಡುತ್ತಿತ್ತು? ದಿ ಬೆಟರ್ ಇಂಡಿಯಾ ಹಂಚಿಕೊಂಡ ಒಂದು ವರದಿಯನ್ನು ಓದಿದರೆ ನಿಮಗೂ ರೈಲ್ವೆಯ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಗಬಹುದು.
ಈರುಳ್ಳಿ ನೆರವಿನಿಂದ ವ್ಯಕ್ತಿ ಜೀವ ಉಳಿಸಿದ ರೈಲ್ವೆ ಟಿಟಿ
ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಹೇಳಿದ ಕಥೆಯ ಆಧಾರದಲ್ಲಿ ಬೆಟರ್ ಇಂಡಿಯಾ ಆ ಈರುಳ್ಳಿ ಕಥೆ ಹಂಚಿಕೊಂಡಿದೆ. "ನನ್ನ ತಾಯಿಯ ಜೀವವನ್ನು ಸೋಷಿಯಲ್ ಮೀಡಿಯಾ ಇಲ್ಲದ ಕಾಲದಲ್ಲಿ ಭಾರತೀಯ ರೈಲ್ವೆ ಹೇಗೆ ಕಾಪಾಡಿತ್ತು" ಎಂದು ಸಂತನೂ ದೇಶ್‌ಗುಪ್ತಾ ಹೇಳಿದ್ದಾರೆ. 1993ರ ಮೇ ತಿಂಗಳಿನಲ್ಲಿ ತಿರುವನಂತಪುರಂನಿಂದ ನಾಗ್ಪುರಕ್ಕೆ ಕೇರಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂತನೂ ಮತ್ತು ಆತನ ತಾಯಿ ಪ್ರಯಾಣಿಸುತ್ತಿದ್ದರು. 78 ವರ್ಷ ವಯಸ್ಸಿನ ತಾಯಿಗೆ ತಕ್ಷಣ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಯಿತು. ಆಕೆಯ ಆರೋಗ್ಯ ಕೆಟ್ಟಿತು. ಆಂಧ್ರಪ್ರದೇಶದ ಸಮೀಪ ಎಲ್ಲೋ ಈತನ ತಾಯಿಗೆ ತೀವ್ರ ಅನಾರೋಗ್ಯ ಕಾಡಿತು. ವಾಂತಿ ಮಾಡಲಾರುಂಬಿಸಿದರು. ಈ ಸಂದರ್ಭದಲ್ಲಿ ಈತ ರೈಲಿನ ಟಿಕೆಟ್ ಕಲೆಕ್ಟರ್ (ಟಿಟಿಇ) ಮತ್ತು ರೈಲಿನ ಸೂಪರಿಂಟೆಂಡೆಂಟ್ ಅವರನ್ನು ಸಂಪರ್ಕಿಸಿದರು. ಈತನಿಗೆ ಅವರು ಮುಂದಿನ ಜಂಕ್ಷನ್‌ನಲ್ಲಿ ನೆರವು ನೀಡುವುದಾಗಿ ತಿಳಿಸಿದರು. ನೆನಪಿಡಿ, ಆಗ ಸೋಷಿಯಲ್ ಮೀಡಿಯಾ ಇರಲಿಲ್ಲ. ಆ ಸಮಯದಲ್ಲಿ ಮೊಬೈಲ್ ಫೋನ್ ಕೂಡ ಅಪರೂಪವಾಗಿತ್ತು. ರೈಲಿನಿಂದ ದೂರ ಪ್ರದೇಶಗಳಿಗೆ ಸಂವಹನ ನಡೆಸಲು ಸಾಕಷ್ಟು ಸವಾಲು ಇತ್ತು.
ಆದರೆ, ಅಲ್ಲಿ ಟಿಟಿಯ ನಿರ್ಧಾರ ಈತನಿಗೆ ಅಚ್ಚರಿ ತಂದಿತ್ತು. ಇದೇ ಸಮಯದಲ್ಲಿ ಕೊಂಚ ಮೆಡಿಕಲ್ ಹಿನ್ನಲೆಯ ಸೂಪರಿಂಟೆಂಡೆಂಟ್ ಕೂಡ ನೆರವಾದರು. ಶಂತನೂ ಅವರಿಗೆ ಒಂದಿಷ್ಟು ಮಾಹಿತಿಯನ್ನು ಪೇಪರ್‌ನಲ್ಲಿ ಬರೆಯಲು ತಿಳಿಸಿದರು. ಆತನ ತಾಯಿಯ ವಯಸ್ಸು, ಕಾಯಿಲೆಯ ಲಕ್ಷಣಗಳು, ಕುಳಿತಿರುವ ಸೀಟು, ಕೋಚ್ ನಂಬರ್ ಇತ್ಯಾದಿ ವಿವರಗಳನ್ನು ಒಂದು ಕಾಗದದಲ್ಲಿ ಬರೆಸಿದರು. ಒಂದು ತುಂಡು ಪೇಪರ್‌ನಲ್ಲಿ ಇದನ್ನೆಲ್ಲ ಬರೆದು ಇದನ್ನು ಒಂದು ದೊಡ್ಡ ಈರುಳ್ಳಿಗೆ ಕಟ್ಟಿದರು. ಈ ಈರುಳ್ಳಿ ಬಾಲ್ ಮೇಲೆ ಇನ್ನಷ್ಟು ಪೇಪರ್ ಸುತ್ತಿದರು.
ರೈಲು ವೇಗವಾಗಿ ಸಾಗುತ್ತಿರುವಾಗಲೇ ರೈಲು ಹಳ್ಳಿಯ ಪಕ್ಕದಲ್ಲಿದ್ದ ಲೈನ್‌ಮ್ಯಾನ್‌ಗೆ ಈ ಈರುಳ್ಳಿ ಬಾಲ್ ಅನ್ನು ಬಿಸಾಕಿದರು. ಮುಂದಿನ ಅರ್ಧ ಗಂಟೆಯಿಂದ ಒಂದು ಗಂಟೆಯೊಳಗೆ ನಿಮ್ಮ ತಾಯಿಗೆ ಬೇಕಾದ ಮೆಡಿಸಿನ್‌ಗಳು ದೊರಕುತ್ತದೆ ಎಂದು ರೈಲಿನವರು ಭರವಸೆ ನೀಡಿದರು. ಈಗ ಇಸ್ರೋದಲ್ಲಿ ವಿಜ್ಞಾನಿಯಾಗಿರುವ ಆ ಪ್ರಯಾಣಿಕ ಶಂತನೂ ಅವರಿಗೆ ಸಂದೇಹಗಳು ಸಾಕಷ್ಟು ಇದ್ದವು. ಈ ಈರುಳ್ಳಿಯಿಂದ ವೈದ್ಯಕೀಯ ನೆರವು ಹೇಗೆ ದೊರಕುತ್ತದೆ ಎಂದು ಅಚ್ಚರಿಗೊಂಡಿದ್ದರು.
ಆದರೆ, ಈರುಳ್ಳಿ ಬಾಲ್ ಕ್ಯಾಚ್ ಹಿಡಿದ ಲೈನ್‌ಮ್ಯಾನ್ ಅದನ್ನು ತಕ್ಷಣ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಕೊಂಡೊಯ್ದಿದ್ದ. ಅಲ್ಲಿ ತಕ್ಷಣ ವೈದ್ಯಕೀಯ ನೆರವಿನ ಸಂದೇಶ ರವಾನಿಸಲಾಗಿತ್ತು. ಮುಂದಿನ ನಿಲ್ದಾಣಕ್ಕೆ ಇವರು ತಲುಪಿದಾಗ ಅಲ್ಲಿ ವೈದ್ಯಕೀಯ ನೆರವು ಇವರಿಗಾಗಿ ಕಾಯುತ್ತಿತ್ತು. "ಈ ಸಮಯದಲ್ಲಿ ಭಾರತೀಯ ರೈಲ್ವೆಯ ಸಿಬ್ಬಂದಿಗಳು ನೀಡಿದ ವೈದ್ಯಕೀಯ ನೆರವಿಗೆ ಧನ್ಯವಾದ. ನನ್ನ ತಾಯಿ ಸುಮಾರು 100 ವರ್ಷ ಬದುಕಿದರು" ಎಂದು ಶಂತನೂ ಟ್ವೀಟ್ ಮಾಡಿದ್ದಾರೆ.