Weight Loss: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇಲ್ಲಿದೆ ಸ್ಪೂರ್ತಿದಾಯಕ ಕಥೆ: ನೌಕಾಪಡೆಯ ಎಂಜಿನಿಯರ್ ಫಿಟ್ನೆಸ್ ಕಾಪಾಡಿದ್ದು ಹೀಗೆ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇಲ್ಲಿದೆ ಸ್ಪೂರ್ತಿದಾಯಕ ಕಥೆ: ನೌಕಾಪಡೆಯ ಎಂಜಿನಿಯರ್ ಫಿಟ್ನೆಸ್ ಕಾಪಾಡಿದ್ದು ಹೀಗೆ

Weight Loss: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇಲ್ಲಿದೆ ಸ್ಪೂರ್ತಿದಾಯಕ ಕಥೆ: ನೌಕಾಪಡೆಯ ಎಂಜಿನಿಯರ್ ಫಿಟ್ನೆಸ್ ಕಾಪಾಡಿದ್ದು ಹೀಗೆ

How to Loss Weight: ಇಂದಿನ ಆಹಾರ ಪದ್ಧತಿ ಹಾಗೂ ಜೀವನಶೈಲಿಯಿಂದ ಬಹುತೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಜಿಮ್ ಗಳಿಗೆ ಹೋಗಿ ದೇಹ ದಂಡಿಸುವವರು ಹಲವರಿದ್ದಾರೆ. ಅದೇ ರೀತಿ ಇಲ್ಲೊಬ್ಬರು ನೌಕಾಪಡೆಯ ಮುಖ್ಯ ಇಂಜಿನಿಯರ್ ರಜನೀಶ್ ಎಂಬುವವರು ತಮ್ಮ ತೂಕವನ್ನು ಆರೋಗ್ಯಕರವಾಗಿ ಇಳಿಸಿಕೊಂಡಿದ್ದಾರೆ. ಇವರ ತೂಕ ಇಳಿಸಿದ ಕಥೆ ಇಲ್ಲಿದೆ...

Weight Loss: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇಲ್ಲಿದೆ ಸ್ಪೂರ್ತಿದಾಯಕ ಕಥೆ (ಉದ್ದೇಶಪೂರ್ವಕವಾಗಿ ರಜನೀಶ್‌ ಫೋಟೋ ಬಳಸಿಲ್ಲ)
Weight Loss: ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇಲ್ಲಿದೆ ಸ್ಪೂರ್ತಿದಾಯಕ ಕಥೆ (ಉದ್ದೇಶಪೂರ್ವಕವಾಗಿ ರಜನೀಶ್‌ ಫೋಟೋ ಬಳಸಿಲ್ಲ)

ತೂಕ ಇಳಿಸಲು ಬಹುತೇಕ ಮಂದಿ ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಇದರಲ್ಲಿ ಸಕ್ಸಸ್ ಕಂಡವರೂ ಇದ್ದಾರೆ. ಇದರಲ್ಲಿ ನೌಕಾಪಡೆಯ ಮುಖ್ಯ ಇಂಜಿನಿಯರ್ ಆಗಿರುವ ರಜನೀಶ್ ಅವರ ತೂಕ ಇಳಿಕೆಯ ಕಥೆ ಇಲ್ಲಿದೆ. ಎರಡು ದಶಕಗಳಿಂದ ಹಲವು ಸವಾಲಿನ ಪ್ರಯಾಣವನ್ನು ನಿಭಾಯಿಸಿರುವ ರಜನೀಶ್, ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ರಜನೀಶ್ ಅವರು 105ರಿಂದ 110 ಕೆ.ಜಿಯಷ್ಟು ತೂಕ ಹೊಂದಿದ್ದರು. ಅನಾರೋಗ್ಯಕರ ಆಹಾರ ಪದ್ಧತಿಯಿಂದ ಅವರ ತೂಕ ಹೆಚ್ಚಳವಾಗಲು ಕಾರಣವಾಗಿತ್ತು.

ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ರಜನೀಶ್ ಒಂದು ದಿನ ವೈದ್ಯರನ್ನು ಭೇಟಿ ಮಾಡಿದ್ದಾರೆ. ರಜನೀಶ್ ಅವರ ಹೆಚ್ಚಿನ ತೂಕದಿಂದಾಗಿ ಭವಿಷ್ಯದಲ್ಲಿ ಸಂಭವನೀಯ ಮೊಣಕಾಲಿನ ಸಮಸ್ಯೆ ಉಂಟಾಗುವ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ತನ್ನ ಮೊಣಕಾಲುಗಳಿಗೆ ಯಾವುದೇ ಅಪಾಯವಾಗಬಾರದು ಎಂಬ ಉದ್ದೇಶದಿಂದ ರಜನೀಶ್, ಒಂದು ವರ್ಷದ ಹಿಂದೆ ತಮ್ಮ ತೂಕ ಇಳಿಸುವ ಪ್ರಯಾಣವನ್ನು ಕೈಗೊಂಡರು. ತನ್ನ ಕರ್ತವ್ಯಗಳಿಂದ ಸ್ವಲ್ಪ ವಿರಾಮವನ್ನು ತೆಗೆದುಕೊಂಡು, ಆರೋಗ್ಯಕರ ಜೀವನಶೈಲಿಗಾಗಿ ಪ್ರಯಾಣ ಬೆಳೆಸಿದರು. ತನ್ನ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ಬಹಳ ಎಚ್ಚರಿಕೆಯಿಂದ ತೂಕ ಇಳಿಸಿಕೊಳ್ಳಲು ಮುಂದಾಗಿದ್ದಾರೆ. ತಿಂಗಳಿಗೆ 2 ರಿಂದ 3 ಕೆ.ಜಿ ಯಷ್ಟು ತೂಕ ಇಳಿಸಿಕೊಳ್ಳುತ್ತಾ ಸಾಗಿದ್ದಾರೆ.

ರಜನೀಶ್ ಅನುಸರಿಸಿದ ಆಹಾರಕ್ರಮ

ತೂಕ ಇಳಿಸಲು ರಜನೀಶ್ ಅವರು ತಮ್ಮ ಆಹಾರ ಕ್ರಮವನ್ನು ಬದಲಾಯಿಸಬೇಕಾಯಿತು. ಗೋಧಿ ಮತ್ತು ಅಕ್ಕಿಯನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಇದಲ್ಲದೆ, ಕರಿದ ಆಹಾರ ಪದಾರ್ಥಗಳನ್ನು ಕೂಡ ಬಹುತೇಕ ಕಡಿಮೆ ಮಾಡಿದ್ದರು. ಪ್ರತಿದಿನ 3 ಲೀಟರ್ ನೀರನ್ನು ಕುಡಿಯುತ್ತಿದ್ದರು. ಇದರಿಂದ ತೂಕವನ್ನು ಕಳೆದುಕೊಳ್ಳಲು ಸಹಾಯಕವಾಯಿತು ಎಂದು ತಿಳಿಸಿದ್ದಾರೆ. ಊಟದಲ್ಲಿ ಆರೋಗ್ಯಕರ ಆಹಾರಕ್ಕಷ್ಟೇ ಮೀಸಲಿಟ್ಟರು. ತಮ್ಮ ದಿನನಿತ್ಯದ ಆಹಾರವನ್ನು ಈ ರೀತಿ ಅವರು ಪಟ್ಟಿ ಮಾಡಿದರು:

ಬೆಳಗಿನ ಉಪಹಾರ: ಕಾಫಿ, ಮೊಟ್ಟೆಗಳು ಅಥವಾ ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್ ಜ್ಯೂಸ್ ಗಳನ್ನಷ್ಟೇ ಸೇವಿಸುತ್ತಿದ್ದರು.

ಮಧ್ಯಾಹ್ನದ ಊಟ: ಬೇಯಿಸಿದ ಚಿಕನ್ ಅಥವಾ ಮೀನು. ಜೊತೆಗೆ ತರಕಾರಿಗಳು, ಸಲಾಡ್, ದಾಲ್, ಅಥವಾ ಪ್ರೊಟೀನ್ ಭರಿತ ಕಾಳುಗಳು.

ಸಂಜೆಯ ತಿಂಡಿ: ಕಾಫಿ, ಒಣಹಣ್ಣುಗಳು.

ರಾತ್ರಿ ಭೋಜನ: ಸಲಾಡ್, ದಾಲ್, ತರಕಾರಿಗಳು.

ಒಂದು ಕಾಲದಲ್ಲಿ ಸಿಹಿ ತಿನಿಸು ಅಂದರೆ ಅವರಿಗೆ ಬಹಳ ಪ್ರಿಯವಾಗಿತ್ತು. ಆದರೆ, ತೂಕ ಇಳಿಸುವ ಪ್ರಯಾಣದಲ್ಲಿ ಅತಿಯಾದ ಸಕ್ಕರೆ ಬಳಕೆಯನ್ನು ದೂರವಿಟ್ಟರು. ವಿಶೇಷವಾಗಿ ಸೂರ್ಯಾಸ್ತದ ನಂತರ ಅವರು ಸಕ್ಕರೆ ಮಿಶ್ರಿತ ತಿನಿಸನ್ನು ಸೇವಿಸುವುದನ್ನು ತ್ಯಜಿಸಿದರು.

ಕಠಿಣ ತಾಲೀಮು

ರಜನೀಶ್ ಜಿಮ್ ನಲ್ಲಿ ವೈಯಕ್ತಿಕ ಮಾರ್ಗದರ್ಶನದಲ್ಲಿ ಕಠಿಣ ವ್ಯಾಯಾಮವನ್ನು ಪ್ರಾರಂಭಿಸಿದರು. ವಾರದಲ್ಲಿ 5 ದಿನಗಳು, ಪ್ರತಿದಿನ 90 ನಿಮಿಷಗಳ ಕಾಲ ಜಿಮ್ ನಲ್ಲಿ ಬೆವರು ಹರಿಸಿದರು. ಸಂಜೆ 45 ನಿಮಿಷಗಳ ಕಾಲ ವಾಕಿಂಗ್ ಮಾಡುತ್ತಿದ್ದರು. ಕ್ರಿಕೆಟ್, ಬ್ಯಾಡ್ಮಿಂಟನ್ ಆಟ ಆಡುವುದು ಸೇರಿದಂತೆ, ದೈಹಿಕ ಚಟುವಟಿಕೆಯ ಆಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ರಜನೀಶ್ ಅವರ ದೃಢಸಂಕಲ್ಪ, ತಾನಿಟ್ಟ ದಿಟ್ಟ ಹೆಜ್ಜೆಯು ತೂಕ ಇಳಿಸುವಲ್ಲಿ ಸಹಕಾರಿಯಾಯಿತು. ಕೇವಲ ಒಂಬತ್ತು ತಿಂಗಳಲ್ಲಿ ಆರೋಗ್ಯಯುತವಾಗಿ 20 ಕೆ.ಜಿಯಷ್ಟು ತೂಕವನ್ನು ಕಳೆದುಕೊಂಡರು. ರಜನೀಶ್ ಅವರ ಈ ಫಿಟ್ನೆಸ್ ಪ್ರಯಾಣವು ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡಿತು. ರಕ್ತದೊತ್ತಡವು ಸ್ಥಿರವಾಗಿದ್ದು, ಕೊಲೆಸ್ಟ್ರಾಲ್ ಮಟ್ಟ ಸಹ ಕುಸಿದಿವೆಯಂತೆ.

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ರಜನೀಶ್ ಸಲಹೆ

ಪ್ರತಿಯೊಬ್ಬರೂ ತಮ್ಮ ಬಿಝಿ ಶೆಡ್ಯೂಲ್‌ನಿಂದ ಸ್ವಲ್ಪ ಸಮಯವನ್ನು ತಮ್ಮ ಯೋಗಕ್ಷೇಮಕ್ಕಾಗಿ ಮೀಸಲಿಡಬೇಕು. ಫಿಟ್ನೆಸ್ ಮತ್ತು ಆರೋಗ್ಯದ ಮೇಲೆ ಗಮನ ಕೊಡಬೇಕು. ತೂಕದಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.

ನೀವು ತೂಕ ಇಳಿಸಿಕೊಳ್ಳಲು ಯೋಜಿಸುತ್ತಿದ್ದರೆ ಅಥವಾ ಪ್ರಯತ್ನಿಸುತ್ತಿದ್ದರೆ ರಜನೀಶ್ ಅವರ ಸಲಹೆಗಳನ್ನು ಪ್ರಯತ್ನಿಸಬಹುದು. ಆರೋಗ್ಯಕರವಾಗಿ ಅವರು ತೂಕ ಇಳಿಸಿಕೊಂಡಂತೆ ನೀವು ಕೂಡ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಬಹುದು. ಆದರೆ, ಅನಾರೋಗ್ಯಕರ ತೂಕ ಇಳಿಕೆ ಅಥವಾ ಸರ್ಜರಿ ಮುಂತಾದ ಪ್ರಯತ್ನಗಳಿಗೆ ಕೈ ಹಾಕದೆ ಇರುವುದು ಒಳಿತು.

ಲೇಖನ: ಪ್ರಿಯಾಂಕ ಗೌಡ

Whats_app_banner