ಫಾರಿನ್‌ ಟ್ರಿಪ್‌ ಮಾಡ್ಬೇಕು ಅನ್ನೋ ಕನಸು ನಿಮ್ಗೂ ಇದ್ಯಾ? ಕಡಿಮೆ ಬಜೆಟ್‌ನಲ್ಲಿ ನೋಡಿ ಬರಬಹುದಾದ 8 ದೇಶಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಫಾರಿನ್‌ ಟ್ರಿಪ್‌ ಮಾಡ್ಬೇಕು ಅನ್ನೋ ಕನಸು ನಿಮ್ಗೂ ಇದ್ಯಾ? ಕಡಿಮೆ ಬಜೆಟ್‌ನಲ್ಲಿ ನೋಡಿ ಬರಬಹುದಾದ 8 ದೇಶಗಳಿವು

ಫಾರಿನ್‌ ಟ್ರಿಪ್‌ ಮಾಡ್ಬೇಕು ಅನ್ನೋ ಕನಸು ನಿಮ್ಗೂ ಇದ್ಯಾ? ಕಡಿಮೆ ಬಜೆಟ್‌ನಲ್ಲಿ ನೋಡಿ ಬರಬಹುದಾದ 8 ದೇಶಗಳಿವು

ಫಾರಿನ್‌ ಟ್ರಿಪ್‌ ಮಾಡ್ಬೇಕು ಅನ್ನೋ ಆಸೆ ಯಾರಿಗಿರೊಲ್ಲ ಹೇಳಿ. ಆದರೆ ಕೈಯಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ವಿದೇಶ ಪ್ರವಾಸವನ್ನು ಮುಂದೂಡುವವರೇ ಹೆಚ್ಚು. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಭಾರತದಿಂದ ಅತೀ ಕಡಿಮೆ ದರದಲ್ಲಿ ಕೆಲವು ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ರುದ್ರ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಅಂತಹ ದೇಶಗಳು ಯಾವುವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕಡಿಮೆ ಬಜೆಟ್‌ನಲ್ಲಿ ನೋಡಿ ಬರಬಹುದಾದ 8 ದೇಶಗಳಿವು
ಕಡಿಮೆ ಬಜೆಟ್‌ನಲ್ಲಿ ನೋಡಿ ಬರಬಹುದಾದ 8 ದೇಶಗಳಿವು

ದೇಶ ಸುತ್ತಿ ನೋಡು ಕೋಶ ಓದಿ ನೋಡು ಅಂತಾರೆ. ಕೋಶ ಓದಲು ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಆದರೆ ದೇಶ ಸುತ್ತಬೇಕು ಎಂದರೆ ನಿಮ್ಮ ಜೇಬು ಕೂಡ ಅಷ್ಟೇ ಗಟ್ಟಿ ಇರಬೇಕು. ಹಾಗಂತ ಎಲ್ಲಾ ಪ್ರವಾಸಗಳು ದುಬಾರಿಯೇ ಇರುತ್ತದೆ ಎಂದು ಹೇಳಲಾಗದು. ಜಗತ್ತಿನಾದ್ಯಂತ ಸಾಕಷ್ಟು ಸ್ಥಳಗಳಿದ್ದು ಅಲ್ಲಿಗೆ ನೀವು ಕಡಿಮೆ ದರದಲ್ಲಿ ಪ್ರಯಾಣ ಮಾಡುವ ಮುನ್ನ ಒಂದೊಳ್ಳೆ ಅನುಭವವನ್ನು ಪಡೆಯಬಹುದಾಗಿದೆ. ಹಾಗಾದರೆ ಭಾರತೀಯರು ಕಡಿಮೆ ದರದಲ್ಲಿ ಯಾವೆಲ್ಲ ದೇಶಗಳಿಗೆ ಪ್ರವಾಸ ಕೈಗೊಳ್ಳಬಹುದು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ :

ನೇಪಾಳ

ಈ ದೇಶ ಭಾರತಕ್ಕೆ ಅಂಟಿಕೊಂಡೇ ಇದೆ. ಯಾರ್ಯಾರು ಬಜೆಟ್ ಸ್ನೇಹಿ ವಿದೇಶಿ ಪ್ರವಾಸಕ್ಕೆ ಯೋಜನೆ ರೂಪಿಸುತ್ತಿದ್ದೀರೋ ನಿಮ್ಮೆಲ್ಲರ ಮೊದಲ ಆಯ್ಕೆ ನೇಪಾಳವೇ ಆಗಿರಲಿ. ಕಾಠ್ಮಂಡುವಿನ ಮನಮೋಹಕ ಸೌಂದರ್ಯದಿಂದ ಹಿಡಿದು ಹಿಮಾಲಯ ತಪ್ಪಲಿನ ರಮಣೀಯ ದೃಶ್ಯದ ಸೌಂದರ್ಯವನ್ನು ಸವಿಯಲು ನೀವು ನೇಪಾಳಕ್ಕೆ ಭೇಟಿ ನೀಡಲೇಬೇಕು. ಇಲ್ಲಿ ಚಾರಣ ಕೈಗೊಳ್ಳಬಹುದು, ಟೆಂಪಲ್ ರನ್ ಮಾಡಬಹುದು, ಪರ್ವತಗಳ ಸೌಂದರ್ಯ ಸವಿಯಬಹುದು, ಕಡಿಮೆ ಖರ್ಚಿನಲ್ಲಿ ನೀವು ಸಾಕಷ್ಟು ಮಜಾ ಪಡೆಯಬಹುದಾಗಿದೆ.

ಶ್ರೀಲಂಕಾ

ಕಡಲತೀರಕ್ಕೆ ಹೆಚ್ಚು ಆಕರ್ಷಿತರಾಗುವವರ ಪೈಕಿ ನೀವೂ ಒಬ್ಬರಾಗಿದ್ದರೆ ನಿಮ್ಮ ಬಜೆಟ್ ಸ್ನೇಹಿ ವಿದೇಶಿ ಪ್ರವಾಸಕ್ಕೆ ಶ್ರೀಲಂಕಾ ಉತ್ತಮ ಆಯ್ಕೆ ಎಂದು ಹೇಳಬಹುದಾಗಿದೆ. ಇಲ್ಲಿನ ಸೊಂಪಾದ ಚಹಾ ತೋಟಗಳು, ಪ್ರಾಚೀನ ಕಾಲದ ಕಟ್ಟಡಗಳು, ಐತಿಹಾಸಿಕ ಕಡಲ ತೀರಗಳು, ಹೇಳುತ್ತಾ ಹೋದರೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ರುಚಿಕರವಾದ ಪಾಕ ಪದ್ಧತಿ ಅನ್ವೇಷಿಸ ಬಯಸುವವರೂ ಸಹ ಶ್ರೀಲಂಕಾಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕು.

ಥಾಯ್ಲೆಂಡ್‌

ಶ್ರೀಮಂತ ಸಂಸ್ಕೃತಿ, ಅತ್ಯುತ್ತಮ ಮಾರುಕಟ್ಟೆ ಹಾಗೂ ಎಂದಿಗೂ ಮಾಸದ ಸುಂದರ ಕರಾವಳಿ ತೀರಕ್ಕೆ ಥಾಯ್ಲೆಂಡ್‌ ಎಂದಿಗೂ ಹೆಸರುವಾಸಿಯಾಗಿದೆ. ಥಾಯ್ಲೆಂಡ್‌ಗೆ ಭೇಟಿ ನೀಡುವವರು ಬ್ಯಾಂಕಾಕ್‌ನ ರೋಮಾಂಚಕ ಬೀದಿಗಳು, ಫುಕೆಟ್ ಮತ್ತು ಕೂಹ್ ಸಮುಯಿ ಪ್ರಶಾಂತ ದ್ವೀಪಗಳಿಗೆ ಭೇಟಿ ನೀಡದೇ ಇರುವುದಿಲ್ಲ. ವಸತಿ, ಸಾರಿಗೆ, ಆಹಾರ ಹೀಗೆ ಪ್ರತಿಯೊಂದು ವಿಚಾರದಲ್ಲಿಯೂ ಥಾಯ್ಲೆಂಡ್‌ ಬಜೆಟ್ ಸ್ನೇಹಿ ಪ್ರವಾಸಿಸ್ಥಳ ಎನಿಸಿದೆ.

ವಿಯೆಟ್ನಾಂ

ನೋಡಿದಷ್ಟೂ ಸಾಲದು ಎನ್ನುವ ಭೂದೃಶ್ಯಗಳು, ಇಲ್ಲಿನ ರೋಮಾಂಚಕ ಇತಿಹಾಸ ಹಾಗೂ ಬಾಯಲ್ಲಿ ನೀರೂರಿಸುವ ಪಾಕ ಪದ್ಧತಿ, ಕೈಗೆಟುಕ ದರದಲ್ಲಿ ಲಭ್ಯವಿರುವ ವಸ್ತುಗಳನ್ನು ಹೊಂದಿರುವ ಮಾರುಕಟ್ಟೆ ಬೀದಿಗಳು ವಿಯೆಟ್ನಾಂಗೆ ಪ್ರವಾಸ ಕೈಗೊಳ್ಳಲು ಪ್ರತಿಯೊಬ್ಬರನ್ನು ಪ್ರೇರೇಪಿಸುತ್ತದೆ. ಹ್ಯಾಲೊಂಗ್ ಕೊಲ್ಲಿಯ ರಮಣೀಯ ಅದ್ಭುತಗಳು ಕೂಡ ನಿಮಗೆ ಸಂತಸವನ್ನು ಒದಗಿಸುತ್ತದೆ.

ಕಾಂಬೋಡಿಯಾ

ಸಾಂಪ್ರದಾಯಿಕ ಅಂಕೋರ್ ವಾಟ್ ದೇವಾಲಯದಿಂದಾಗಿಯೇ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಕಾಂಬೋಡಿಯಾ ತನ್ನ ಸಾಂಸ್ಕೃತಿಕ ವೈಭವಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ಕಾಂಬೋಡಿಯಾದ ರೋಮಾಂಚಕ ರಾಜಧಾನಿ ನೊಮ್ಪೆನ್‌ನಿಂದ ಹಿಡಿದು ಸಿಹಾನೌಕ್ವಿಲ್ಲೆಯ ಪ್ರಶಾಂತ ತೀರದವರೆಗೂ ನೋಡಿದಷ್ಟೂ ಸಾಲದು ಎಂಬಂತಹ ಸೌಂದರ್ಯವನ್ನು ಕಾಂಬೋಡಿಯಾ ಹೊಂದಿದೆ.

ಇಂಡೋನೇಷ್ಯಾ

ಬೆರಗುಗೊಳಿಸುವ ಕಡಲತೀರ, ಸೊಂಪಾದ ಕಾಡು ಹಾಗೂ ರೋಮಾಂಚಕ ಸಂಸ್ಕೃತಿಯು ಪ್ರವಾಸಿಗರನ್ನು ಇಂಡೋನೇಷ್ಯಾದತ್ತ ಸೆಳೆಯುವಂತೆ ಮಾಡುತ್ತದೆ. ಜಕಾರ್ತದ ವೈಭವ, ಬಾಲಿಯ ಮೆರಗು ಹಾಗೂ ಲೋಂಬೋಕ್ನ ಪ್ರಶಾಂತ ತೀರಗಳು ಇವೆಲ್ಲವೂ ಕೈಗೆಟುಕವ ದರದಲ್ಲಿ ನಿಮಗೆ ಸಿಗಲಿದೆ. ಇಲ್ಲಿನ ಪ್ರಾಚೀನ ದೇವಾಲಯಗಳು ಕೂಡ ಕಣ್ಣಿಗೆ ಹಬ್ಬ ನೀಡುವಂತಿವೆ.

ಮಲೇಷ್ಯಾ

ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ, ಬೆರಗುಗೊಳಿಸುವ ಭೂದೃಶ್ಯಗಳು ಹಾಗೂ ರೋಮಾಂಚಕ ನಗರಗಳನ್ನು ವೀಕ್ಷಿಸಲು ಒಮ್ಮೆಯಾದರೂ ಮಲೇಷ್ಯಾಗೆ ಭೇಟಿ ನೀಡಲೇಬೇಕು. ಇಲ್ಲಿನ ಕೌಲಾಲಂಪುರ ಬೀದಿಯ ಸೌಂದರ್ಯ, ಲಂಕಾವಿ ಹಾಗೂ ಪೆನಾಂಗ್ನ ರಮಣೀಯ ಕಡಲತೀರ.. ಅಬ್ಬಬ್ಬಾ, ಒಂದಕ್ಕಿಂತ ಒಂದು ಚಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೈಗೆಟಕುವ ದರದಲ್ಲಿ ಮಲೇಷ್ಯಾ ಪ್ರವಾಸ ಕೈಗೊಳ್ಳುವ ಮೂಲಕ ನೀವು ಈ ಎಲ್ಲಾ ಸುಂದರ ಸ್ಥಳಗಳನ್ನು ಅನ್ವೇಷಿಸಬಹುದಾಗಿದೆ.

ಫಿಲಿಪ್ಪೀನ್ಸ್‌

ನಿಸರ್ಗ ರಮಣೀಯ ಕಡಲತೀರ, ಅತ್ಯದ್ಭುತ ನಗರಗಳ ವೈಭೋಗ ಹಾಗೂ ಇಲ್ಲಿ ಆತಿಥ್ಯವನ್ನು ಸವಿದವನೇ ಭಾಗ್ಯವಂತ. ಬಜೆಟ್ ಸ್ನೇಹಿತ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಫಿಲಿಪ್ಪೀನ್ಸ್‌ ಕೂಡ ನಿಮ್ಮ ವಿದೇಶೀ ಪ್ರವಾಸಕ್ಕೆ ಉತ್ತಮ ಆಯ್ಕೆಯಾಗಿದೆ.

Whats_app_banner