ಬೆಂಗಳೂರಿನಿಂದ ಕೇರಳಕ್ಕೆ ಹೋಗಿದ್ದ ಯುವಕ ನಿಫಾ ವೈರಸ್​ಗೆ ಬಲಿ; ಈ ಸೋಂಕಿನ ರೋಗ ಲಕ್ಷಣಗಳೇನು, ಇದಕ್ಕಿಲ್ಲವೇ ಮದ್ದು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೆಂಗಳೂರಿನಿಂದ ಕೇರಳಕ್ಕೆ ಹೋಗಿದ್ದ ಯುವಕ ನಿಫಾ ವೈರಸ್​ಗೆ ಬಲಿ; ಈ ಸೋಂಕಿನ ರೋಗ ಲಕ್ಷಣಗಳೇನು, ಇದಕ್ಕಿಲ್ಲವೇ ಮದ್ದು?

ಬೆಂಗಳೂರಿನಿಂದ ಕೇರಳಕ್ಕೆ ಹೋಗಿದ್ದ ಯುವಕ ನಿಫಾ ವೈರಸ್​ಗೆ ಬಲಿ; ಈ ಸೋಂಕಿನ ರೋಗ ಲಕ್ಷಣಗಳೇನು, ಇದಕ್ಕಿಲ್ಲವೇ ಮದ್ದು?

Nipah Virus: ಬೆಂಗಳೂರಿನಿಂದ ಕೇರಳಕ್ಕೆ ಹೋಗಿ ಸಾವನ್ನಪ್ಪಿದ 24 ವರ್ಷದ ಯುವಕನಿಗೆ ನಿಫಾ ವೈರಸ್ ಇರುವುದು ದೃಢಪಟ್ಟಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಖಚಿತಪಡಿಸಿದ್ದಾರೆ.

ಬೆಂಗಳೂರಿನಿಂದ ಕೇರಳಕ್ಕೆ ಹೋಗಿದ್ದ ಯುವಕ ನಿಫಾ ವೈರಸ್​ಗೆ ಬಲಿ
ಬೆಂಗಳೂರಿನಿಂದ ಕೇರಳಕ್ಕೆ ಹೋಗಿದ್ದ ಯುವಕ ನಿಫಾ ವೈರಸ್​ಗೆ ಬಲಿ

ಬೆಂಗಳೂರು: ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್​ಗೆ (Nipah Virus) 24 ವರ್ಷದ ಯುವಕನೊಬ್ಬ ಬಲಿಯಾಗಿರುವುದಾಗಿ ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್ ಖಚಿತಪಡಿಸಿದ್ದಾರೆ. ಆತ ಬೆಂಗಳೂರಿನಿಂದ ಕೇರಳಕ್ಕೆ ಹೋಗಿದ್ದ ಎಂಬುದನ್ನೂ ತಿಳಿಸಿದ್ದಾರೆ. ಹೀಗಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆತಂಕ ಮನೆ ಮಾಡಿದೆ. ಜ್ವರದ ಕಾರಣ ಬೆಂಗಳೂರಿನಿಂದ ಕೇರಳಕ್ಕೆ ಹೋಗಿದ್ದ ಯುವಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಸೆಪ್ಟೆಂಬರ್​ 9ರಂದು ಮಲಪ್ಪುರಂನಲ್ಲಿ ನಿಧನರಾಗಿದ್ದ. ಇದೀಗ ಆತ ನಿಫಾ ಸೋಂಕಿನಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಈ ಬಗ್ಗೆ ಮಾತನಾಡಿದ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು, 'ಮಲಪ್ಪುರಂನಲ್ಲಿ ಸೆಪ್ಟೆಂಬರ್​ 9ರಂದು 24 ವರ್ಷದ ಯುವಕ ನಿಧನರಾಗಿದ್ದರು. ಆತ ಬೆಂಗಳೂರಿನಿಂದ ರಾಜ್ಯಕ್ಕೆ ಬಂದಿದ್ದರು. ಆದರೆ ಆ ಯುವಕನ ಸಾವಿನ ಕುರಿತು ಅನುಮಾನ ಸೃಷ್ಟಿಯಾಗಿತ್ತು. ಹೀಗಾಗಿ, ವೈದ್ಯಕೀಯ ಅಧಿಕಾರಿಯು ಖಾಸಗಿ ಆಸ್ಪತ್ರೆಯಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಆ ಪರೀಕ್ಷೆ ಪಾಸಿಟಿವ್ ಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ 24 ವರ್ಷದ ವ್ಯಕ್ತಿಗೆ ನಿಫಾ ವೈರಸ್ ಸೋಂಕು ದೃಢಪಟ್ಟಿದೆ ಎಂದು ಹೇಳಿದ್ದಾರೆ.

ನಿಫಾ ವೈರಸ್ ಎಂದು ತಿಳಿದ ಕೂಡಲೇ ಸಭೆಯೊಂದನ್ನು ನಡೆಸಿದೆ. ರಾಜ್ಯ ಪ್ರೋಟೋಕಾಲ್​​ಗಳ ಪ್ರಕಾರ 16 ಸಮಿತಿಗಳನ್ನು ರಚನೆ ಮಾಡಲಾಯಿತು. ಮೃತ ವಿದ್ಯಾರ್ಥಿ ಬೆಂಗಳೂರಿನಲ್ಲಿದ್ದ ವಿದ್ಯಾರ್ಥಿ ಆಗಿದ್ದು, ಸದ್ಯಕ್ಕೆ 151 ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಈ ಪೈಕಿ 5 ಮಂದಿಗೆ ಜ್ವರದ ಲಕ್ಷಣಗಳು ಕಂಡು ಬಂದಿವೆ. ಹಾಗಾಗಿ, ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಚಿವೆ ತಿಳಿಸಿದ್ದಾರೆ. ನಿಫಾ ವೈರಸ್ ಖಚಿತವಾದ ಬೆನ್ನಲ್ಲೇ ಕೇರಳ ಮಾತ್ರವಲ್ಲ ಬೆಂಗಳೂರಿನಲ್ಲೂ ಆತಂಕ ದುಪ್ಪಟ್ಟುಗೊಳಿಸಿದೆ. ವೈದ್ಯರು ಸಹ ಅಲರ್ಟ್ ಆಗಿದ್ದಾರೆ.

ಪ್ರಸ್ತುತ ಕರ್ನಾಟಕದಲ್ಲಿ ವೈರಲ್ ಫೀವರ್ ಹಾವಳಿ​​

ಕರ್ನಾಟಕದಲ್ಲಿ ಪ್ರಸ್ತುತ ವೈರಲ್ ಫೀವರ್​ ಸಿಕ್ಕಾಪಟ್ಟೆ ಕಾಡುತ್ತಿದೆ. ಯಾರನ್ನು ಕೇಳಿದರೂ ಮೈಕೈ ನೋವು, ತಲೆನೋವು, ಜ್ವರ ಎನ್ನುತ್ತಿದ್ದಾರೆ. ವಿಪರೀತ ಸುಸ್ತು ಎನ್ನುತ್ತಿದ್ದಾರೆ. ಇದರ ನಡುವೆ ಡೆಂಗ್ಯೂ ಕೂಡ ಎಲ್ಲರನ್ನೂ ಬಾಧಿಸುತ್ತಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ವೈರಲ್ ಫೀವರ್ ಹಾವಳಿ ಜೋರಾಗಿದೆ. ಇದ್ದಕ್ಕಿದ್ದಂತೆ ತಲೆನೋವು, ಮೈಕೈನೋವು, ಜ್ವರ ಕಾಣಿಸಿಕೊಳ್ಳುತ್ತಿದೆ. ಇದು ಎಲ್ಲಾ ವಯಸ್ಸಿನವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಜನರು ಎಚ್ಚರ ವಹಿಸುವುದು ಅತಿ ಮುಖ್ಯವಾಗಿದೆ.

ನಿಫಾ ವೈರಸ್ ಎಂದರೇನು?

ನಿಫಾ ವೈರಸ್ ಎಂಬುದು ಸೋಂಕಿತ ಪ್ರಾಣಿಗಳು ಅಥವಾ ಕಲುಷಿತ ಆಹಾರದ ಮೂಲಕ ಮನುಷ್ಯರಿಗೆ ಹರಡಲಿದೆ. ಇದೊಂದು ಝೋನೋಟಿಕ್ ವೈರಸ್ ಎನ್ನುತ್ತಾರೆ. ಯಾರು ಸೋಂಕಿತರು ಇರುತ್ತಾರೋ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಿಗೆ ನೇರವಾಗಿ ಸೋಂಕು ಹರಡುತ್ತದೆ.

ನಿಫಾ ವೈರಸ್​ ರೋಗ ಲಕ್ಷಣಗಳೇನು?

ನಿಫಾ ವೈರಸ್​ನ ರೋಗ ಲಕ್ಷಣಗಳನ್ನು ಈ ಮುಂದೆ ತಿಳಿಯೋಣ. ನಿಫಾ ವೈರಸ್ ಸೋಂಕು ತಗುಲಿದರೆ ಆರಂಭದಲ್ಲಿ ಜ್ವರ ಕಾಣಿಸುತ್ತದೆ. ನಂತರ ಉಸಿರಾಟದ ತೊಂದರೆ ಎದುರಾಗುತ್ತದೆ. ತಲೆನೋವು ಮತ್ತು ವಾಂತಿ ಆಗುವ ಸಾಧ್ಯತೆಯೂ ಹೆಚ್ಚು. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ನಿಫಾ ವೈರಸ್ ರೋಗ ಲಕ್ಷಣಗಳ ಪಟ್ಟಿಯಲ್ಲಿ ಕೆಲವರಿಗೆ ಮಿದುಳಿನ ಉರಿಯೂತವೂ ಕಾಣಿಸಿಕೊಳ್ಳುತ್ತದೆ. ಕೊನೆಯದಾಗಿ ಸೋಂಕಿತರ ದೇಹದಲ್ಲಿ ಸೆಳೆತವುಂಟಾಗಿ ಕೋಮಾ ಸ್ಥಿತಿಗೆ ಜಾರಿ ಮೃತಪಡಬಹುದು.

ನಿಫಾ ವೈರಸ್​ಗಿಲ್ಲವೇ ಮದ್ದು?

ನಿಫಾ ವೈರಸ್ ಮೊಟ್ಟ ಮೊದಲ ಬಾರಿಗೆ ಪತ್ತೆಯಾಗಿದ್ದು 1998ರಲ್ಲಿ. ಮಲೇಷ್ಯಾ ಹಾಗೂ ಸಿಂಗಾಪುರಗಳಲ್ಲಿ ವೈರಸ್ ಪತ್ತೆಯಾಗಿತ್ತು. ಹಂದಿ ಸಾಕಾಣಿಕೆ ಕೇಂದ್ರಗಳ ಕಾರ್ಮಿಕರಲ್ಲಿ ಜ್ವರದ ರೀತಿ ಈ ಸೋಂಕು ಪತ್ತೆಯಾಗಿತ್ತು. ಬಳಿಕ ಮಾರಣಾಂತಿಕವಾಗಿ ಪರಿಣಮಿಸಿತ್ತು. ಈ ವೈರಸ್ ಬಾವಲಿ ಹಾಗೂ ಹಂದಿಗಳ ದೈಹಿಕ ದ್ರವದ ಮೂಲಕ ಮನುಷ್ಯರ ದೇಹ ಸೇರುತ್ತದೆ. ಹಾಗೂ ಕೆಲವೊಂದಿಷ್ಟು ಪ್ರಕರಣಗಳಲ್ಲಿ ಮನುಷ್ಯರಿಂದ ಮನುಷ್ಯರಿಗೂ ಹರಡಿದ ಉದಾಹರಣೆಗಳು ಸಹ ನಮ್ಮ ಮುಂದಿವೆ. ಈ ಭಯಾನಕ ವೈರಸ್​​​ಗೆ ಯಾವುದೇ ಚಿಕಿತ್ಸೆ ಮತ್ತು ಯಾವುದೇ ಚುಚ್ಚು ಮದ್ದು ಸಹ ಇಲ್ಲ. ಆದರೆ ಈ ರೋಗದ ವಿರುದ್ಧ ಹೋರಾಡಲು ಸೂಕ್ತವಾದ ಚಿಕಿತ್ಸೆಗಳನ್ನು ನೀಡಲಾಗುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.