Telangana Results: ತೆಲಂಗಾಣ ಚುನಾವಣಾ ಫಲಿತಾಂಶ ಘೋಷಣೆಗೆ ಮೊದಲೇ ರೇವಂತ ರೆಡ್ಡಿಯನ್ನು ಭೇಟಿಯಾದ ಡಿಜಿಪಿ ಅಮಾನತು, ವಿವರಣೆ ಕೇಳಿದ ಆಯೋಗ
ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ತೆಲಂಗಾಣ ಡಿಜಿಪಿ ಅಂಜನಿ ಕುಮಾರ್ ಅವರನ್ನು ಭಾರತ ಚುನಾವಣಾ ಆಯೋಗ ಅಮಾನತುಗೊಳಿಸಿದೆ. ಉಳಿದ ಇಬ್ಬರು ಅಧಿಕಾರಿಗಳಿಂದ ವಿವರಣೆಯನ್ನು ಕೇಳಿದೆ.
ತೆಲಂಗಾಣ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆ ಆಗುವ ಮೊದಲೇ ಕಾಂಗ್ರೆಸ್ ಅಧ್ಯಕ್ಷ ಎ ರೇವಂತ ರೆಡ್ಡಿ ಅವರನ್ನು ಭೇಟಿ ಮಾಡಿ ಅವರನ್ನು ಅಭಿನಂದಿಸಿ, ಸರ್ಕಾರ ರಚನೆ ಕಾರ್ಯಕ್ರಮಗಳ ಕುರಿತು ಸಮಾಲೋಚನೆ ನಡೆಸಿದ ಡಿಜಿಪಿ ಅಂಜನಿ ಕುಮಾರ್ ಅವರನ್ನು ಭಾರತದ ಚುನಾವಣಾ ಆಯೋಗ ಅಮಾನತುಗೊಳಿಸಿದೆ.
ಮಾದರಿ ನೀತಿ ಸಂಹಿತೆ ಚಾಲ್ತಿಯಲ್ಲಿರುವಾಗ ಅದನ್ನು ಪೊಲೀಸ್ ಉನ್ನತಾಧಿಕಾರಿಗಳು ಉಲ್ಲಂಘಿಸಿರುವುದು ಸ್ಪಷ್ಟವಾದ ಕಾರಣ ಆಯೋಗ ಈ ಕ್ರಮ ತೆಗೆದುಕೊಂಡಿದೆ.
ಏನಿದು ಪ್ರಕರಣ
ತೆಲಂಗಾಣ ಡಿಜಿಪಿ ಅಂಜನಿ ಕುಮಾರ್ ಮತ್ತು ಇತರೆ ಇಬ್ಬರ ಅಧಿಕಾರಿಗಳು ಇಂದು (ಡಿ.3) ಬೆಳಗ್ಗೆ ರೇವಂತ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ್ದರು. ಡಿಜಿಪಿ ಅಂಜನಿ ಕುಮಾರ್ ಜತೆಗೆ ರಾಜ್ಯ ಪೊಲೀಸ್ ನೋಡೆಲ್ ಆಫೀಸರ್ ಸಂಜಯ್ ಜೈನ್ ಮತ್ತು ನೋಡಲ್ (ವೆಚ್ಚ) ವಿಭಾಗದ ಅಧಿಕಾರಿ ಮಹೇಶ್ ಭಾಗವತ್ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು.
ತೆಲಂಗಾಣದಲ್ಲಿ ಸ್ಪರ್ಧಿಸುತ್ತಿರುವ ಒಟ್ಟು 2290 ಅಭ್ಯರ್ಥಿಗಳ ಪೈಕಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಯನ್ನು ಮತ್ತು ಕಣದಲ್ಲಿರುವ 16 ರಾಜಕೀಯ ಪಕ್ಷಗಳ ಪೈಕಿ ಒಂದು ರಾಜಕೀಯ ಪಕ್ಷದ ತಾರಾ ಪ್ರಚಾರಕರನ್ನು ಭೇಟಿಯಾಗಲು ಪೊಲೀಸ್ ಮಹಾನಿರ್ದೇಶಕರು ನಿರ್ಧರಿಸಿದ್ದು, ಮತ ಎಣಿಕೆ ವೇಳೆ ಅಭ್ಯರ್ಥಿಯ ನಿವಾಸದಲ್ಲಿ ಪುಷ್ಪಗುಚ್ಛದೊಂದಿಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ ಭೇಟಿ ಆಗಿದ್ದರು. ಮತದಾನ ಪ್ರಕ್ರಿಯೆ ಇನ್ನೂ ನಡೆಯುತ್ತಿರುವಾಗ ಅಧಿಕಾರಿಗಳು ಈ ರೀತಿ ಒಲವು ತೋರಿಸುವುದು ಕರ್ತವ್ಯದ ವೇಳೆ ದುರುದ್ದೇಶದ ಸಂದೇಶವನ್ನು ರವಾನಿಸುತ್ತದೆ" ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತಪ್ಪು ಸಂದೇಶ ರವಾನಿಸಿದ ಡಿಜಿಪಿ
ಈ ರೀತಿ ಭೇಟಿ ಮಾಡುವ ಮೂಲಕ ಡಿಜಿಪಿಯವರು ತಾವು ನಿಷ್ಪಕ್ಷಪಾತವಾಗಿ ವರ್ತಿಸುತ್ತಿಲ್ಲ ಎಂಬ ಸಂದೇಶವನ್ನು ಜನತೆಗೆ ರವಾನಿಸಿದ್ದಾರೆ. ಡಿಜಿಪಿಯವರು ಇಡೀ ರಾಜ್ಯದ ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿದ್ದು, ಅವರ ವರ್ತನೆ ಮಾದರಿ ಆಗಿರಬೇಕು. ಇಲ್ಲಿ ಅವರು ಪೊಲೀಸ್ ಮುಖ್ಯಸ್ಥರಾಗಿ ಅವರು ವರ್ತಿಸಿಲ್ಲ ಎಂಬ ಆರೋಪ ಎದುರಾಗಿದೆ. ಇದನ್ನು ಆಯೋಗ ಗಮನಿಸಿದೆ.
ಅಧಿಕಾರಿಗಳ ವರ್ತನೆಯು ಇಡೀ ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವಂಥದ್ದು. ದುರ್ವರ್ತನೆ ತೋರಿದ ಡಿಜಿಪಿ, ತನ್ನ ಜತೆಗೆ ಅಧೀನ ಅಧಿಕಾರಿಗಳನ್ನೂ ಕರೆದೊಯ್ದು ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಆಯೋಗದ ಮೂಲಗಳು ತಿಳಿಸಿವೆ.
ಇಬ್ಬರು ಅಧಿಕಾರಿಗಳಿಂದ ವಿವರಣೆ ಕೇಳಿದ ಆಯೋಗ
ರೇವಂತ್ ರೆಡ್ಡಿ ಅವರನ್ನು ಭೇಟಿಯಾದ ಸಂದರ್ಭದ ಕುರಿತು ಇತರ ಇಬ್ಬರು ಅಧಿಕಾರಿಗಳಾದ ರಾಜ್ಯ ಪೊಲೀಸ್ ನೋಡಲ್ ಅಧಿಕಾರಿ ಸಂಜಯ್ ಕುಮಾರ್ ಜೈನ್ ಮತ್ತು ನೋಡಲ್ ಅಧಿಕಾರಿ (ವೆಚ್ಚ) ಮಹೇಶ್ ಎಂ. ಭಾಗವತ್ ಅವರಿಂದ ಚುನಾವಣಾ ಆಯೋಗವು ವಿವರಣೆಯನ್ನು ಕೇಳಿದೆ.
ಡಿಜಿಪಿ ನಂತರದ ಸ್ಥಾನದ ಹಿರಿಯ ಅಧಿಕಾರಿ ಸಹಜವಾಗಿಯೇ ಡಿಜಿಪಿ ಹೊಣೆಗಾರಿಕೆ ನಿರ್ವಹಿಸಲಿದ್ದಾರೆ ಎಂದು ಆಯೋಗದ ಮೂಲಗಳು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ವಿಭಾಗ