Virat Kohli: ವಿರಾಟ್ ಕೊಹ್ಲಿಯನ್ನು ಸಾವಿರಾರು ಕೋಟಿಗೆ ಒಡೆಯನನ್ನು ಮಾಡಿದ್ದೇ ಈತ; ರೋಹಿತ್- ಸಲ್ಮಾನ್​ಗೂ ನೆಂಟ ಈ ಬಂಟಿ ಸಜ್ದೇಹ್
ಕನ್ನಡ ಸುದ್ದಿ  /  ಕ್ರೀಡೆ  /  Virat Kohli: ವಿರಾಟ್ ಕೊಹ್ಲಿಯನ್ನು ಸಾವಿರಾರು ಕೋಟಿಗೆ ಒಡೆಯನನ್ನು ಮಾಡಿದ್ದೇ ಈತ; ರೋಹಿತ್- ಸಲ್ಮಾನ್​ಗೂ ನೆಂಟ ಈ ಬಂಟಿ ಸಜ್ದೇಹ್

Virat Kohli: ವಿರಾಟ್ ಕೊಹ್ಲಿಯನ್ನು ಸಾವಿರಾರು ಕೋಟಿಗೆ ಒಡೆಯನನ್ನು ಮಾಡಿದ್ದೇ ಈತ; ರೋಹಿತ್- ಸಲ್ಮಾನ್​ಗೂ ನೆಂಟ ಈ ಬಂಟಿ ಸಜ್ದೇಹ್

ವಿರಾಟ್​ ಕೊಹ್ಲಿ ಟೀಮ್​ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ. ಆಸ್ತಿ ಮೌಲ್ಯವು ಸುಮಾರು 1,040 ಕೋಟಿ. ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಕೊಹ್ಲಿ ಕೂಡ ಒಬ್ಬರು. ಆದರೆ, ಇಷ್ಟೆಲ್ಲಾ ಸಂಪಾದನೆ ಕಾರಣ ಈ ವ್ಯಕ್ತಿ ಎಂಬುದನ್ನು ಮರೆಯುವಂತಿಲ್ಲ.

ವಿರಾಟ್ ಕೊಹ್ಲಿ, ಬಂಟಿ ಸಜ್ದೇಹ್, ಸಲ್ಮಾನ್ ಖಾನ್, ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ, ಬಂಟಿ ಸಜ್ದೇಹ್, ಸಲ್ಮಾನ್ ಖಾನ್, ರೋಹಿತ್ ಶರ್ಮಾ

ಪ್ರಪಂಚ ತುಂಬಾ ಚಿಕ್ಕದು. ಯಾರು, ಯಾವಾಗ, ಹೇಗೆ ಭೇಟಿಯಾಗುತ್ತಾರೆ, ಪರಿಚಯ ಆಗುತ್ತಾರೆ, ಸಂಬಂಧ ಹೊಂದಿರುತ್ತಾರೆ ಎಂಬುದು ಗೊತ್ತೇ ಆಗೋದಿಲ್ಲ. ಈ ಜಗತ್ತಿನಲ್ಲಿ ಎಲ್ಲರೂ ಸಹ ಒಂದಲ್ಲ, ಒಂದು ರೀತಿಯಲ್ಲಿ ಪರಿಚಿತರೇ. ಈ ಮಾತನ್ನು ಸಾಕಷ್ಟು ಸಲ ಕೇಳಿದ್ದೇವೆ. ನಮ್ಮ ಅನುಭವಕ್ಕೂ ಬಂದಿದ್ದೂ ಇದೆ. ಇಂತಹ ಸಂಬಂಧಗಳ ಕೊಂಡಿ ಕ್ರಿಕೆಟ್​​ನಲ್ಲೂ ಇದೆ ಎಂಬುದು ವಿಶೇಷ.

ವಿರಾಟ್​ ಕೊಹ್ಲಿ (Virat Kohli) ಟೀಮ್​ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ. ಆಸ್ತಿ ಮೌಲ್ಯವು ಸುಮಾರು 1,040 ಕೋಟಿ. ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಕೊಹ್ಲಿ ಕೂಡ ಒಬ್ಬರು. ಆದರೆ, ಇಷ್ಟೆಲ್ಲಾ ಸಂಪಾದನೆ ಕಾರಣ ಈ ವ್ಯಕ್ತಿ ಎಂಬುದನ್ನು ಮರೆಯುವಂತಿಲ್ಲ. ಹೌದು, ಹೆಸರು ಬಂಟಿ ಸಜ್ದೇಹ್ (Bunty Sajdeh)​. ಭಾರತದಲ್ಲಿ ಪ್ರಸಿದ್ಧ ವ್ಯಕ್ತಿಯಾಗಿರುವ ಈತ, ಕ್ರೀಡಾ ವ್ಯಕ್ತಿಗಳ ಜೊತೆಗೆ ಬಾಲಿವುಡ್ ಸೆಲೆಬ್ರಿಟಿಗಳೊಂದಿಗೂ ಸಂಪರ್ಕ ಹೊಂದಿದ್ದಾರೆ.

ಈತನ ಹಿನ್ನೆಲೆ ಏನು?

ಮುಂಬೈನ ಕ್ಯಾಂಪಿಯನ್ ಶಾಲೆಯಲ್ಲಿ ಓದಿದ ಬಂಟಿ, ಹೆಚ್​ಆರ್ ಕಾಲೇಜು ಮತ್ತು ಆಸ್ಟ್ರೇಲಿಯಾದ ಬಾಂಡ್ ವಿಶ್ವವಿದ್ಯಾಲಯದಲ್ಲಿ ಕಾಮರ್ಸ್ ಮತ್ತು ಎಕನಾಮಿಕ್ಸ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದರು. ಆತನ ವೃತ್ತಿಪರ ಪ್ರಯಾಣವು ಪರ್ಸೆಪ್ಟ್ ಎಂಟರ್‌ಟೈನ್‌ಮೆಂಟ್‌ನಲ್ಲಿ ಪ್ರತಿಭಾ ಸ್ವಾಧೀನ ಸಲಹೆಗಾರರಾಗಿ ಪ್ರಾರಂಭವಾಯಿತು. ನಂತರ ಗ್ಲೋಬೋಸ್ಪೋರ್ಟ್‌ನಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡರು.

ಅಲ್ಲಿ ಅವರು ಮನರಂಜನೆಯ ಮುಖ್ಯಸ್ಥರಾಗಿ ಉತ್ತಮ ಸಾಧನೆ ಮಾಡಿದರು. ಇದಾದ ನಂತರ ಕ್ರೀಡೆಯ ಮೇಲಿನ ಪ್ರೀತಿ ಮತ್ತು ಉತ್ಸಾಹವು ಅವರನ್ನು 2008ರಲ್ಲಿ ಕಾರ್ನರ್ ಸ್ಟೋನ್ ಅನ್ನು ಸ್ಥಾಪಿಸಲು ನೆರವು ನೀಡಿತು. ಬಂಟಿ ಅವರ ಕೆಲಸದ ಪ್ರಭಾವವು ಮನರಂಜನಾ ಉದ್ಯಮದ ಕಡೆಯೂ ಸೆಳೆಯಿತು. ಡಿಸೆಂಬರ್ 2020ರಲ್ಲಿ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ (Karan Johar) ಜೊತೆ ಕೈ ಜೋಡಿಸಿದರು.

ಇಬ್ಬರು ಸೇರಿ ಧರ್ಮ ಕಾರ್ನರ್‌ಸ್ಟೋನ್ ಏಜೆನ್ಸಿ (Dharma Cornerstone Agency) ಸ್ಥಾಪಿಸಿದರು. ಇದು ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ಅವರಂತಹ ಉನ್ನತ ಮಟ್ಟದ ಸ್ಟಾರ್​​ಗಳಿಗೆ ಸಹಿ ಹಾಕುವ ಮೂಲಕ ತ್ವರಿತವಾಗಿ ಪ್ರಾಮುಖ್ಯತೆ ಗಳಿಸಿತು. ಬಂಟಿ 50 ಕೋಟಿ ನಿವ್ವಳ ಮೌಲ್ಯ ಹೊಂದಿದ್ದು, ಅವರ ಸಂಸ್ಥೆ ಕೊಹ್ಲಿ, ಕೆಎಲ್ ರಾಹುಲ್, ರೋಹಿತ್, ಗಿಲ್, ಶಿಖರ್ ಧವನ್, ಜಡೇಜಾ, ಸಾನಿಯಾ ಮಿರ್ಜಾರಂಥ ಕೆಲವು ಪ್ರಮುಖ ಅಥ್ಲೀಟ್‌ಗಳನ್ನು ನಿರ್ವಹಿಸುವ ಸಂಸ್ಥೆಯಾಗಿದೆ. ಇದು ಪ್ರಮುಖ ವ್ಯಕ್ತಿಗಳಿಗೆ ಬ್ರಾಂಡಿಂಗ್​ ಹುಡುಕಿಕೊಡುವ ಕಂಪನಿ ಕಾರ್ನರ್ ಸ್ಟೋನ್. ಈ ಕಂಪನಿಯ ಸಿಇಒ ಅವರು.

ರೋಹಿತ್​​-ಸಲ್ಮಾನ್​ ಖಾನ್​ಗೆ ಸಂಬಂಧ ಹೇಗೆ?

ಬಂಟಿ ಸಜ್ದೇಹ್ ಅವರ ಖ್ಯಾತಿ ಹೆಚ್ಚಿಸಲು ಇದೂ ಒಂದು ಕಾರಣ. ಬಾಲಿವುಡ್ ಮತ್ತು ಕ್ರಿಕೆಟ್ ಕ್ಷೇತ್ರಗಳಲ್ಲಿ ಮತ್ತಷ್ಟು ವಿಸ್ತರಿಸಿತು. ಬಂಟಿ ಸಹೋದರಿ ರಿತಿಕಾ ಸಜ್ದೇಹ್ (Ritika Sajdeh), ಕಾರ್ನರ್‌ಸ್ಟೋನ್‌ಗೆ ಕ್ರೀಡಾ ವ್ಯವಸ್ಥಾಪಕಿ. ಆಕೆ ಬೇರೆ ಯಾರೂ ಅಲ್ಲ, ರೋಹಿತ್​ ಶರ್ಮಾ (Rohit Sharma) ಪತ್ನಿ. ಮದುವೆಗೂ ಮುನ್ನ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೂ ಮ್ಯಾನೇಜರ್ ಆಗಿದ್ದರು ರಿತಿಕಾ. ರೋಹಿತ್​ ಸೋದರ ಮಾವ ಬಂಟಿ. ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರೊಂದಿಗೂ ಸಂಬಂಧ ಹೊಂದಿದ್ದಾರೆ. ಏಕೆಂದರೆ ಅವರು ಸೊಹೈಲ್ ಖಾನ್ ಅವರ ಸೋದರ ಮಾವ.

ಕೊಹ್ಲಿಯನ್ನು ಸಾವಿರಾರು ಕೋಟಿಯ ಒಡೆಯನನ್ನು ಮಾಡಿದ್ದೇ ಈತ

ವ್ಯಾಪಕ ಸಂಪರ್ಕ ಮತ್ತು ಸಮರ್ಪಿತ ಪ್ರಯತ್ನಗಳೊಂದಿಗೆ ಕೊಹ್ಲಿ ಅವರಂತಹ ಪ್ರಮುಖರ ಬ್ರಾಂಡ್ ಇಮೇಜ್ ಕಾಪಾಡಿಕೊಳ್ಳುವಲ್ಲಿ ಬಂಟಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಕೊಹ್ಲಿಗಾಗಿ ಪ್ರಮುಖ ಬ್ರ್ಯಾಂಡ್​ ಒಪ್ಪಂದಗಳನ್ನು ಕುದುರಿಸಿದರು. ಭಾರತೀಯ ಜಾಹೀರಾತು ಉದ್ಯಮದಲ್ಲಿ ಹೊಸ ಶಕೆ ಪ್ರಾರಂಭಿಸಲು ಪ್ರೇರೇಪಿಸಿದರು.

ಪೂಮಾ, ಪೆಪ್ಸಿ, ಎಂಆರ್​​ಎಫ್​, ಟಿಸ್ಸೋಟ್, ಕೋಲ್ಗೇಟ್, ಸ್ಯಾಮ್ಸೋನೈಟ್, ಆಡಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್​ನಂತಹ ಹೆಸರಾಂತ ಬ್ರಾಂಡ್‌ಗಳೊಂದಿಗೆ ಜಾಹೀರಾತು ಒಪ್ಪಂದ ಮಾಡಿಕೊಂಡ ಕೊಹ್ಲಿ, ಆದಾಯ ಏರಿಕೆಗೆ ಕೊಡುಗೆ ನೀಡಿತು. ಈಗವರ ನಿವ್ವಳ ಮೌಲ್ಯ 1,040 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಬಂಟಿ ಸಜ್ದೇಹ್ ಅವರ ಪಟ್ಟುಬಿಡದ ಕಾರ್ಯನೀತಿ ಮತ್ತು ಕಾರ್ಯತಂತ್ರದ ಕುಶಾಗ್ರಮತಿಯು ಕೊಹ್ಲಿಯ ಯಶಸ್ಸು ಮತ್ತು ಆರ್ಥಿಕ ಸಮೃದ್ಧಿಗೆ ದಾರಿ ಮಾಡಿಕೊಟ್ಟಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.