Abhishek Ambareesh Marriage: ಗೃಹಸ್ಥಾಶ್ರಮಕ್ಕೆ ಕಾಲಿಡಲು ಯಂಗ್ ರೆಬೆಲ್ ಸ್ಟಾರ್ ರೆಡಿ..ಇದು ಲವ್ ಅಥವಾ ಅರೇಂಜ್ ಮ್ಯಾರೇಜ್..?
ಮೂಲಗಳ ಪ್ರಕಾರ ಅಭಿಷೇಕ್, ಅಮ್ಮ ಸುಮಲತಾ ನೋಡಿರುವ ಹುಡುಗಿಯನ್ನು ಮೆಚ್ಚಿದ್ದಾರಂತೆ. ಡಿಸೆಂಬರ್ 11 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಿಶ್ಚಿತಾರ್ಥ ನಡೆಸಲು ದಿನಾಂಕ ಫಿಕ್ಸ್ ಆಗಿದ್ದು, ಮುಂದಿನ ವರ್ಷ ಮದುವೆ ನಡೆಯಲಿದೆಯಂತೆ.
ಚಿತ್ರರಂಗದ ನಟ-ನಟಿಯರು ಒಬ್ಬೊಬ್ಬರಾಗೇ ಹಸೆಮಣೆ ಏರುತ್ತಿದ್ದಾರೆ. ಇತ್ತೀಚೆಗೆ ಟಾಲಿವುಡ್ ನಟ ನಾಗಶೌರ್ಯ, ಕುಂದಾಪುರ ಹುಡುಗಿಯನ್ನು ಬೆಂಗಳೂರಿನಲ್ಲಿ ಮದುವೆಯಾಗಿದ್ದರು. ಅದಿತಿ ಪ್ರಭುದೇವ ನವೆಂಬರ್ 27 ರಂದು ಮದುವೆಯಾಗುತ್ತಿದ್ದಾರೆ. ಈಗ ನಟ ಅಭಿಷೇಕ್ ಅಂಬರೀಶ್‌ಗೆ ಕಂಕಣ ಭಾಗ್ಯ ಕೂಡಿ ಬಂದಿದೆ.
'ಅಮರ್' ಚಿತ್ರದ ಮೂಲಕ ನಟನೆಗೆ ಬಂದ ಅಭಿಷೇಕ್ ಅಂಬರೀಶ್, ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಅಭಿಷೇಕ್, ಮದುವೆಗೆ ಸಿದ್ಧರಾಗುತ್ತಿದ್ದಾರೆ ಎಂಬ ಮಾತು ಸ್ಯಾಂಡಲ್‌ವುಡ್ ಅಂಗಳದಲ್ಲಿ ಕೇಳಿಬರ್ತಿದೆ. ಹಾಗಿದ್ರೆ ಯಂಗ್ ರೆಬೆಲ್ ಸ್ಟಾರ್ ಕೈ ಹಿಡಿಯುತ್ತಿರುವ ಹುಡುಗಿ ಯಾರು..? ಆಕೆ ಸಿನಿಮಾ ನಟಿಯಾ..? ಸಿನಿಮಾರಂಗದಿಂದ ಹೊರಗಿನ ಹುಡುಗಿಯಾ..? ಅಭಿ ಅವರದ್ದು ಲವ್ ಮ್ಯಾರೇಜಾ..? ಅಮ್ಮ ನೋಡಿದ ಹುಡುಗೀನಾ ಎಂಬ ಪ್ರಶ್ನೆಗಳು ಹರಿದಾಡುತ್ತಿವೆ. ಆದರೆ ಇದರ ಬಗ್ಗೆ ಸುಮಲತಾ ಆಗಲೀ ಅಭಿಷೇಕ್ ಆಗಲೀ ತುಟಿ ಬಿಚ್ಚಿಲ್ಲ.
ಆದರೆ ಮೂಲಗಳ ಪ್ರಕಾರ ಅಭಿಷೇಕ್, ಅಮ್ಮ ಸುಮಲತಾ ನೋಡಿರುವ ಹುಡುಗಿಯನ್ನು ಮೆಚ್ಚಿದ್ದಾರಂತೆ. ಡಿಸೆಂಬರ್ 11 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಿಶ್ಚಿತಾರ್ಥ ನಡೆಸಲು ದಿನಾಂಕ ಫಿಕ್ಸ್ ಆಗಿದ್ದು, ಮುಂದಿನ ವರ್ಷ ಮದುವೆ ನಡೆಯಲಿದೆಯಂತೆ. ಆದರೆ ಇದುವರೆಗೂ ಈ ವಿಚಾರ ಅಧಿಕೃತವಾಗಿ ಅನೌನ್ಸ್ ಆಗಿಲ್ಲ. ಎಂಗೇಜ್‌ಮೆಂಟ್‌ವರೆಗೂ ಹುಡುಗಿ ಯಾರು ಎಂಬ ವಿಚಾರವನ್ನು ಸಸ್ಪೆನ್ಸ್ ಆಗಿ ಇಡಬೇಕೆಂದು ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ನಿರ್ಧರಿಸಿದ್ದಾರೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಒಟ್ಟಿನಲ್ಲಿ ಎಲ್ಲವೂ ಅಧಿಕೃತವಾಗಿ ಘೋಷಣೆ ಆಗುವರೆಗೂ ಕಾಯಬೇಕಿದೆ.
ಅಭಿಷೇಕ್ ಸಿನಿಮಾಗಳ ಬಗ್ಗೆ ಹೇಳುವುದಾರೆ ಸದ್ಯಕ್ಕೆ ಅವರು 'ಬ್ಯಾಡ್ ಮ್ಯಾನರ್ಸ್' ಸಿನಿಮಾವನ್ನು ಮುಗಿಸಿದ್ದಾರೆ. ಈ ಚಿತ್ರವನ್ನು ಸೂರಿ ನಿರ್ದೇಶಿಸಿದ್ದು ಚಿತ್ರದಲ್ಲಿ ಅಭಿಷೇಕ್, ರುದ್ರ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ಹಾಗೂ ಪ್ರಿಯಾಂಕಾ ಕುಮಾರ್ ಅಭಿ ಜೊತೆ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ತೆರೆ ಕಂಡಿದ್ದು, ಅಪಾರ ಮೆಚ್ಚುಗೆ ಪಡೆದಿದೆ.
ಬ್ಯಾಡ್ ಮ್ಯಾನರ್ಸ್ ಸಿನಿಮಾ ತೆರೆ ಕಾಣುವ ಮುನ್ನವೇ ಅಭಿಷೇಕ್, ಮಹೇಶ್ ನಿರ್ದೇಶನದಲ್ಲಿ ಹೊಸ ಚಿತ್ರ ಮಾಡುತ್ತಿದ್ದಾರೆ. ಆಗಸ್ಟ್ 27, ಸುಮಲತಾ ಹುಟ್ಟುಹಬ್ಬದಂದು ಈ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಿತ್ತು. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್, ಕಂಠೀರವ ಸ್ಟುಡಿಯೋದಲ್ಲಿನ ಅಂಬರೀಷ್ ಅವರ ಸಮಾಧಿ ಬಳಿ ರಿಲೀಸ್ ಮಾಡಲಾಗಿತ್ತು. ಈ ಚಿತ್ರದಲ್ಲಿ ಅಭಿಷೇಕ್ ಹೊಸ ಗೆಟಪ್‌ನಲ್ಲಿ ಎದುರಾಗುತ್ತಿದ್ದು, ವಾರಿಯರ್ ಅವತಾರ ಎತ್ತಿದ್ದಾರೆ. ಈವರೆಗೂ ಲವರ್ ಬಾಯ್ ಲುಕ್‌ನಲ್ಲಿ ಮಿಂಚಿದ್ದ ಅಭಿ, ಈ ಸಿನಿಮಾ ಮೂಲಕ ಹೊಸ ಪ್ರಯೋಗ ಮತ್ತು ಪ್ರಯತ್ನಕ್ಕೆ ಇಳಿದಿದ್ದು, ಅವರ ಅಭಿಮಾನಿವಲಯದಲ್ಲಿಯೂ ಮೆಚ್ಚುಗೆ ವ್ಯಕ್ತವಾಗಿದೆ.
"ಸಾವಿರ ವರ್ಷಗಳ ಹಿಂದಿನ ಕಥೆಯೊಂದನ್ನು ಆಯ್ಕೆ ಮಾಡಿಕೊಂಡು ಈ ಸಿನಿಮಾ ಮಾಡುತ್ತಿದ್ದೇನೆ. ಐತಿಹಾಸಿಕ ಕಥೆ ಜೊತೆಗೆ ಕಾಲ್ಪನಿಕ ಸ್ಪರ್ಶವೂ ಇರಲಿದೆ" ಎಂದು ನಿರ್ದೇಶಕ ಮಹೇಶ್, ತಮ್ಮ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದರು. ಅಭಿಷೇಕ್ ಬಗ್ಗೆಯೂ ಮಾತನಾಡಿದ್ದ ಅವರು, "ಅಭಿ ಅವರ ಕಣ್ಣು, ನೀಳ ಕಾಯ, ಆ ರಗಡ್‌ನೆಸ್ ನೋಡಿ, ಈ ಸಿನಿಮಾಗೆ ಅವರೇ ಸೂಟ್ ಆಗುತ್ತಾರೆ ಅಂತ ಕಥೆ ರೆಡಿ ಮಾಡಿದ್ದೇವೆ. ಅದರಂತೆ ಒಟ್ಟು 12ಕ್ಕೂ ಅಧಿಕ ಗೆಟಪ್‌ಗಳಲ್ಲಿ ಅಭಿ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ಸೆಟ್ಟೇರಲಿದ್ದು, 2023 ಡಿಸೆಂಬರ್ ವೇಳೆಗೆ ರಿಲೀಸ್ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.