Bhagyalakshmi Serial: ಗಂಡು ಮಕ್ಳು ಮನೆ ಬಿಟ್ಟು ಹೋದ್ರೆ ನಾವು ಮಣ್ಣು ತಿನ್ನೊಲ್ಲ, ಅನ್ನವನ್ನೇ ತಿನ್ನೋದು; ತಾಂಡವ್‌ಗೆ ಕುಸುಮಾ ಮಾತಿನ ಚಾಟಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಡಿಸೆಂಬರ್ 14ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.
Bhagyalakshmi Kannada Serial: ಭಾಗ್ಯಾ, ಮಗಳೊಂದಿಗೆ ಮಾಡಿದ ಚಾಲೆಂಜ್‌ನಲ್ಲಿ ಗೆದ್ದಿದ್ದಾಳೆ. ಸೊಸೆ ಜೊತೆ ಕುಸುಮಾ ಕೂಡಾ ಗೆಲುವು ಸಾಧಿಸಿದ್ದಾಳೆ. ಸ್ಪರ್ಧೆಯಲ್ಲಿ ಗೆದ್ದರೆ ಭಾಗ್ಯಾ ಸ್ಕೂಲ್ ಬಿಟ್ಟು ಹೋಗಬೇಕು ಎಂಬ ಕಂಡಿಷನ್ ಹಾಕಿ ಕನ್ನಿಕಾ ಬೆಪ್ಪಾಗಿದ್ದಾಳೆ. ಯಾವುದೂ ಬಹುಮಾನ ಬರಲಿಲ್ಲ ಎಂದು ನಿರಾಸೆಯಾಗಿದ್ದ ಭಾಗ್ಯಾಗೆ ಪೋಷಕ ಶಿಕ್ಷಕರ ಸಂಘದ ವತಿಯಿಂದ ವಿಶೇಷ ಸನ್ಮಾನ ಮಾಡಲಾಗಿದೆ.
ಕನ್ನಿಕಾಗೆ ಚಳಿ ಬಿಡಿಸಿದ ಕುಸುಮಾ
ಪತಿ ತಾಂಡವ್ ಬದಲಿಗೆ ಅತ್ತೆ ಕುಸುಮಾ ಇಂದಿನ ಕಾರ್ಯಕ್ರಮದಲ್ಲಿ ಮಾತನಾಡಬೇಕೆಂದು ಭಾಗ್ಯಾ ಆಸೆ ಪಟ್ಟಂತೆ ಕುಸುಮಾ ಮಾತನಾಡಲು ಶುರು ಮಾಡುತ್ತಾಳೆ. ಸೊಸೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾಳೆ. ಸೊಸೆ ವಿಚಾರವಾಗಿ ಜನರು ನನ್ನನ್ನು ಅಣಕಿಸಿದ್ದನ್ನು ನೆನೆದು ಬೇಸರ ವ್ಯಕ್ತಪಡಿಸುತ್ತಾಳೆ. ಇಂದು ನನ್ನ ಸೊಸೆ ಗೆಲ್ಲಲು ಒಬ್ಬರ ಪ್ರೋತ್ಸಾಹ ಬಹಳ ಕಾರಣ ಅವರು ಇಲ್ಲದಿದ್ದರೆ ಆಕೆ ಗೆಲ್ಲುತ್ತಿರಲಿಲ್ಲ ಎನ್ನುವ ಕುಸುಮಾ ಕನ್ನಿಕಾಳತ್ತ ನೋಡುತ್ತಾಳೆ. ಒಂದೊಂದಾಗೇ ಆಕೆ ಮಾಡಿದ್ದನ್ನೆಲ್ಲಾ ಬಾಯಿ ಬಿಡುತ್ತಾಳೆ. ಒಂದು ವೇಳೆ ಇಂದು ನನ್ನ ಸೊಸೆ ಸೋತಿದ್ದರೆ, ಅವಳು ನಾಳೆಯಿಂದ ಶಾಲೆಗೆ ಬರಬಾರದು ಎಂದು ಈ ಮೇಡಂ ಷರತ್ತು ವಿಧಿಸಿದ್ದರು. ನನ್ನ ಸೊಸೆಯನ್ನು ಕನ್ನಿಕಾ ಶಾಲೆಯಿಂದ ಓಡಿಸಲು ಏನೆಲ್ಲಾ ಶ್ರಮ ಪಟ್ಟರು, ಆದರೆ ಅದೆಲ್ಲಾ ಏನೂ ಪ್ರಯೋಜನವಾಗಲಿಲ್ಲ. ನನ್ನ ಸೊಸೆ ಗೆದ್ದಿದ್ದಾಳೆ. ಎಂದಿನಂತೆ ನಾಳೆಯಿಂದ ಶಾಲೆಗೆ ಬರುತ್ತಾಳೆ.
ಮಗ ತಾಂಡವ್‌ಗೂ ಮಾತಿನ ಚಾಟಿ ಏಟು
ಒಂದು ಹೆಣ್ಣಾಗಿ, ಸಮಾಜದಲ್ಲಿ ಉನ್ನತ ಸ್ಥಾನಮಾನ ಇರುವ ನೀವು ಮತ್ತೊಂದು ಹೆಣ್ಣಿಗೆ ಪ್ರೋತ್ಸಾಹ ನೀಡಬೇಕು, ಆದರೆ ಅದರ ಬದಲಿಗೆ ಶಾಲೆಯಿಂದ ಓಡಿಸುವುದು ಹೇಗೆ ಎಂದು ನೀವು ಯೋಚಿಸುವುದು ತಪ್ಪು, ಇನ್ಮುಂದೆ ಭಾಗ್ಯಾ ಓದಿಗೆ ನಿಮ್ಮಿಂದ ಏನಾದರೂ ತೊಂದರೆ ಆದಲ್ಲಿ ನಾನು ಸುಮ್ಮನೆ ಇರುವುದಿಲ್ಲ ಎಂದು ಕುಸುಮಾ ವೇದಿಕೆ ಮೇಲಿಂದಲೇ ಕನ್ನಿಕಾಗೆ ಎಚ್ಚರಿಸುತ್ತಾಳೆ. ಹಾಗೇ ಮಗನ ಬಗ್ಗೆ ಕೂಡಾ ಪರೋಕ್ಷವಾಗಿ ಮಾತನಾಡುವ ಕುಸುಮಾ, ಹೆಣ್ಣು ಧೈರ್ಯದಿಂದ ಬದುಕಬೇಕು. ಎಷ್ಟೋ ಮನೆಯಲ್ಲಿ ಗಂಡು ಮಕ್ಕಳು ಹೆಂಡತಿ, ಮಕ್ಕಳು, ತಾಯಿಯನ್ನು ಬಿಟ್ಟು ಹೋಗಿರುತ್ತಾರೆ, ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡು ನಡು ರಾತ್ರಿ ಮನೆ ಬಿಟ್ಟು ಹೋಗುತ್ತಾರೆ. ಅವರು ಬಿಟ್ಟು ಹೋದರು ಎಂದ ಮಾತ್ರಕ್ಕೆ ನಾವೇನು ಮಣ್ಣು ತಿನ್ನುವುದಿಲ್ಲ, ಅನ್ನವನ್ನೇ ತಿನ್ನುತ್ತೇವೆ. ನಾವು ಮನೆಯಲ್ಲಿರದಿದ್ದರೆ ನಾವು ದುಡಿಯದಿದ್ದರೆ ಮನೆ ನಡೆಯುವುದಿಲ್ಲ ಎಂಬ ಅಹಂ ಕೆಲವು ಗಂಡಸರಿಗೆ ಇದೆ. ಆದರೆ ಅವರು ಇರಲಿ, ಇರದಿರಲಿ ನಾವು ಹೇಗೆ ಬದುಕಬೇಕೋ ಹಾಗೆ ಬದುಕುತ್ತೇವೆ ಎಂಬ ಕುಸುಮಾ ಮಾತುಗಳು ತಾಂಡವ್‌ಗೆ ತಿವಿದಂತೆ ಆಗುತ್ತದೆ.
ಕನ್ನಿಕಾಗೆ ಪೋಷಕ ಶಿಕ್ಷಕರ ಸಂಘದಿಂದ ಎಚ್ಚರಿಕೆ
ಕಾರ್ಯಕ್ರಮ ಮುಗಿದ ನಂತರ ಪೋಷಕ ಶಿಕ್ಷಕರ ಸಂಘದ ನಿರ್ದೇಶಕ ರಾಮ್ ರಾವ್ ಕಾಮತ್ ಕನ್ನಿಕಾ ಬಳಿ ಬಂದು ಆಕೆ ಮಾಡಿದ ಕೆಲಸದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ನಿಮ್ಮ ತಂದೆಗೆ, ಶಾಲೆಗೆ ಸಮಾಜದಲ್ಲಿ ಒಳ್ಳೆ ಹೆಸರಿದೆ ಆದರೆ ನೀವು ಈ ರೀತಿ ಮಾಡಬಾರದಿತ್ತು, ಇದೇ ರೀತಿ ಮುಂದುವರೆದರೆ ನಿಮ್ಮ ಶಾಲೆಯನ್ನು ನಮ್ಮ ಸಂಘದಿಂದ ಹೊರಗೆ ಇಡುತ್ತೇವೆ ಎಂದು ಎಚ್ಚರಿಕೆ ಕೊಡುತ್ತಾರೆ. ಕನ್ನಿಕಾ ತಂದೆ ಕೂಡಾ ಆಕೆಗೆ ಕರೆ ಮಾಡಿ ನಡೆದ ವಿಚಾರದ ಬಗ್ಗೆ ಮಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಇತ್ತ ತಾಂಡವ್ ಸ್ಕೂಲ್ ಗೇಟ್‌ನಿಂದ ಹೊರ ಬರುತ್ತಿದ್ದಂತೆ ಆತನಿಗಾಗಿ ಕಾಯುತ್ತಿದ್ದ ಕುಸುಮಾ ಮತ್ತೆ ಮಾತುಗಳಿಂದ ಚಾಟಿ ಬೀಸುತ್ತಾಳೆ. ಪೂಜಾ, ತನ್ವಿ ಹಾಗೂ ಭಾಗ್ಯಾ ಜೊತೆ ಕುಸುಮಾ, ಬಹುಮಾನ ಹಿಡಿದು ಮನೆಗೆ ಬರುತ್ತಾಳೆ. ನಾಳೆಯಿಂದ ನೀನು ಧೈರ್ಯವಾಗಿ ಶಾಲೆಗೆ ಹೋಗಬಹುದು, ಹಾಗೇ ತನ್ವಿ ಕೂಡಾ ಬಾಲ ಬಿಚ್ಚದೆ ಸುಮ್ಮನೆ ಶಾಲೆಗೆ ಹೋಗಬೇಕು ಎಂದು ಕುಸುಮಾ ಎಚ್ಚರಿಸುತ್ತಾಳೆ.
ಅಮ್ಮನ ಮಾತುಗಳನ್ನು ಕೇಳಿ ತಾಂಡವ್ ಬದಲಾಗಿ ಮನೆಗೆ ಬರುತ್ತಾನಾ? ಭಾಗ್ಯಾಳನ್ನು ಓಡಿಸಲು ಕನ್ನಿಕಾ ಮತ್ತೆ ಯಾವ ಪ್ಲಾನ್ ಮಾಡುತ್ತಾಳೆ ಕಾದು ನೋಡಬೇಕು.