Darshan Thoogudeepa; ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಪಟ್ಟಿ ಸಲ್ಲಿಕೆಗೆ ಸಿದ್ಧತೆ, ದರ್ಶನ್ ಎ1 ಆರೋಪಿ, ಪವಿತ್ರ ಗೌಡ ಅಲ್ಲ
Bengaluru News; ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿರುವುದಾಗಿ ಕಮೀಷನರ್ ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ನಟ ದರ್ಶನ್ ಎ1 ಆರೋಪಿಯೇ ಹೊರತು ಪವಿತ್ರಾಗೌಡ ಅಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಎಲ್ಲ ವರದಿಗಳು ಕಾಮಾಕ್ಷಿ ಪಾಳ್ಯ ಪೊಲೀಸರ ಕೈ ಸೇರಿವೆ. ಹೈದರಾಬಾದ್ ನ ಎಎಫ್ ಎಸ್ ಎಲ್ ವರದಿಗಳು ಮಾತ್ರ ಬರಬೇಕಿದೆ ಇಂದು ಸಂಜೆ ಅಥವಾ ನಾಳೆ ತಲುಪುವ ಸಾಧ್ಯತೆಗಳಿವೆ.
ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಾಸ್ಯ ನಟ ಚಿಕ್ಕಣ್ಣ ಭೇಟಿ ಮಾಡಿರುವ ಮಾಹಿತಿ ಇದೆ. ಕಾನೂನು ಪ್ರಕಾರ ಯಾವ ಕ್ರಮ ಕೈಗೊಳ್ಳಬೇಕು ಎಂದು ಪರಿಶೀಲನೆ ಮಾಡಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಜೂನ್ 8 ರಂದು ರೇಣುಕಾಸ್ವಾಮಿ ಕೊಲೆ ನಡೆಯುವುದಕ್ಕೂ ಮುನ್ನ ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ದರ್ಶನ್ ಜೊತೆಗೆ ನಟ ಚಿಕ್ಕಣ್ಣ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈಗಾಗಲೇ ಅವರಿಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಹಾಗೆಯೇ ಅವರನ್ನು ಸಾಕ್ಷಿಧಾರರನ್ನಾಗಿ ಮಾಡಿ ನ್ಯಾಯಾಧೀಶರ ಎದುರು ಸೆಕ್ಷನ್ 164ರ ಅಡಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅವರು ಸಾಕ್ಷಿದಾರರಾಗಿದ್ದು ಕೊಲೆ ಆರೋಪಿಯನ್ನು ಭೇಟಿ ಮಾಡುವಂತಿಲ್ಲ. ಆದ್ದರಿಂದ ಚಿಕ್ಕಣ್ಣ ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೆ ತನಿಖೆ ನಡೆಯುತ್ತಾ ಹೋದಂತೆ ಇಡೀ ಕೃತ್ಯದ ಸೂತ್ರಧಾರ ದರ್ಶನ್ ಎನ್ನುವುದು ಸಾಬೀತಾಗುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಎ1 ಆರೋಪಿ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರದೂಷ್ ಮೊಬೈಲ್‍ನಲ್ಲಿ ರೇಣುಕಾಸ್ವಾಮಿ ಹತ್ಯೆ ಚಿತ್ರ
ಈ ಮಧ್ಯೆ ಪಟ್ಟಣಗೆರೆ ಶೆಡ್‍ನಲ್ಲಿ ರೇಣುಕಾಸ್ವಾಮಿ ಹತ್ಯೆಯ ಚಿತ್ರಗಳು ದರ್ಶನ್ ಸ್ನೇಹಿತ ಪ್ರದೂಷ್ ಮೊಬೈಲ್‍ನಲ್ಲಿ ಪತ್ತೆಯಾಗಿವೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳನ್ನು ಪ್ರದೂಷ್ ತೆಗೆದಿದ್ದು ಕೇಸ್ ದಾಖಲಾದ ನಂತರ ಅಳಿಸಿ ಹಾಕಿದ್ದ ಎನ್ನುವುದು ತಿಳಿದು ಬಂದಿತ್ತು. ಇದೀಗ ಮತ್ತೆ ಆತನ ಮೊಬೈಲ್ ರಿಟ್ರೀವ್ ಮಾಡಿದಾಗ ರೇಣುಕಾಸ್ವಾಮಿಯ ರಕ್ತಸಿಕ್ತ ಮೂರು ಫೋಟೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ
ತನ್ನ ಅಭಿಮಾನಿ ಸಂಘದ ರಾಘವೇಂದ್ರಗೆ ಕರೆ ಮಾಡಿ ರೇಣುಕಾಸ್ವಾಮಿ ಪತ್ತೆ ಹಚ್ಚಿ ಅಪಹರಿಸಲು ಸುಪಾರಿ ಕೊಟ್ಟಿದ್ದು, ಪಟ್ಟಣಗೆರೆ ಶೆಡ್‍ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ, ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದು, ಶವ ವಿಲೇವಾರಿಗೆ ಹಣ ಕೊಟ್ಟಿದ್ದು, 40 ಲಕ್ಷ ಹಣ ತರಿಸಿಕೊಂಡಿದ್ದು ಸೇರಿದಂತೆ ಅನೇಕ ಸಾಕ್ಷ್ಯಗಳಿದ್ದು ದರ್ಶನ್‍ರನ್ನು ಎ1 ಆರೋಪಿ ಮಾಡಲು ಇಷ್ಟು ಸಾಕು ಎಂದು ಪೊಲೀಸರು ಹೇಳುತ್ತಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)