ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕ ತಿರಸ್ಕರಿಸುತ್ತಾ?; ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು-bengaluru news decision on rejecting kasturi rangan wg report will be made after discussions karnataka cm siddaramaiah ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕ ತಿರಸ್ಕರಿಸುತ್ತಾ?; ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕ ತಿರಸ್ಕರಿಸುತ್ತಾ?; ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

ಅಂಕೋಲಾ, ಶಿರಾಡಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭೂಕುಸಿತ ಸಂಭವಿಸಿದ್ದು, ಇದರ ಬೆನ್ನಿಗೆ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದ ಸಂರಕ್ಷಣೆ ವಿಚಾರ ಮುನ್ನೆಲೆಗೆ ಬಂದಿದೆ. ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕ ತಿರಸ್ಕರಿಸುತ್ತಾ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದ್ದು, ಅದರ ವಿವರ ಇಲ್ಲಿದೆ.

ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕ ತಿರಸ್ಕರಿಸುತ್ತಾ? ಎಂಬ ಪ್ರಶ್ನೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕ ತಿರಸ್ಕರಿಸುತ್ತಾ? ಎಂಬ ಪ್ರಶ್ನೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. (CMO)

ಮಡಿಕೇರಿ: ಕಸ್ತೂರಿ ರಂಗನ್ ವರದಿ ಆಧರಿಸಿ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟದ 56 ಸಾವಿರಕ್ಕೂ ಹೆಚ್ಚು ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದಕ್ಕೆ 5ನೇ ಕರಡು ಅಧಿಸೂಚನೆ ಪ್ರಕಟಿಸಿದೆ. ಇದರಲ್ಲಿ ಕರ್ನಾಟಕದ 20 ಸಾವಿರಕ್ಕೂ ಹೆಚ್ಚು ಚದರ ಕಿಮೀ ಇದೆ. ಈ ವರದಿಗೆ ಸಂಬಂಧಿಸಿದ ಕರ್ನಾಟಕದ ನಿಲುವು ಏನು ಎಂಬುದು ಸದ್ಯದ ಕುತೂಹಲವಾಗಿದ್ದು, ಮಡಿಕೇರಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋ‍ಷಿಸುವುದಕ್ಕೆ ಶಿಫಾರಸು ಮಾಡಿರುವ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು ಎನ್ನುವುದು ನಮ್ಮ ತೀರ್ಮಾನವಾಗಿದೆ. ಈ ಬಗ್ಗೆ ಅರಣ್ಯ ಸಚಿವರ ಜೊತೆ ಮತ್ತೊಮ್ಮೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಗುರುವಾರ (ಆಗಸ್ಟ್ 2) ಮಡಿಕೇರಿಯಲ್ಲಿ ಭೂಕುಸಿತ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಮಳೆಯ ಕಾರಣ ಪರಿಹಾರ ಕಾರ್ಯ ವಿಳಂಬ, ನಾಶ ನಷ್ಟ ಹೆಚ್ಚಳ

ರಾಜ್ಯದಲ್ಲಿ 746 ಕೋಟಿ ರೂಪಾಯಿ ಮತ್ತು ಮಡಿಕೇರಿ ಜಿಲ್ಲಾ ಪಿಡಿ ಖಾತೆಯಲ್ಲಿ 46 ಕೋಟಿ ಹಣ ಇದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಹಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಳೆ ಬೀಳುತ್ತಲೇ ಇರುವುದರಿಂದ ಭೂ ಕುಸಿತದ ಪ್ರದೇಶವನ್ನು ಸರಿ ಪಡಿಸಲು ಕಷ್ಟ ಆಗುತ್ತಿದೆ. 20 ಕಡೆ ಭೂ ಕುಸಿತ ಆಗಿದ್ದರೆ, ಸಣ್ಣ ಪ್ರಮಾಣದಲ್ಲಿ ಭೂಮಿ ಜಾರಿರುವುದು ಹೆಚ್ಚು ಕಡೆ ಆಗಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಆಗಿಲ್ಲ. ಹಲವರು ಗಾಯಗೊಂಡಿದ್ದಾರೆ.‌ 67 ಮನೆಗಳು ಪೂರ್ಣಹಾನಿ ಆಗಿವೆ. 176 ಮನೆಗಳು ಭಾಗಶಃ ಹಾನಿ ಆಗಿವೆ. 24 ಗಂಟೆಗಳ ಒಳಗೆ ಪೂರ್ಣ ಮತ್ತು ಭಾಗಶಃ ಹಾನಿ ಆಗಿರುವ ಘಟನೆಗಳೂ ನಡೆದಿವೆ.

ಒಂದು ಲಕ್ಷದ 20 ಸಾವಿರ ರೂಪಾಯಿ ಜೊತೆಗೆ ಮನೆ ಕಟ್ಟಿ ಕೊಡಲಾಗುವುದು. ಭಾಗಶಃ ಹಾನಿ ಆಗಿರುವ ಮನೆಗಳಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು.‌ ಇದರಲ್ಲಿ 43 ಸಾವಿರ ರಾಜ್ಯ ಸರ್ಕಾರದ ಹಣ ಇರಲಿದೆ. ಈಗಾಗಲೇ ನೇರ ಸಂತ್ರಸ್ಥರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಇದುವರೆಗೆ 16 ಜಾನವಾರು ಸತ್ತಿವೆ. ತಲಾ 35 ಸಾವಿರ ಪರಿಹಾರ ನೀಡಿದ್ದೇನೆ. 14 ಪರಿಹಾರ ಕ್ಯಾಂಪ್ ಗಳನ್ನು ತೆರೆಯಲಾಗಿದೆ. 10 ಕ್ಯಾಂಪ್ ಗಳಲ್ಲಿ 186 ಮಂದಿ ಇದ್ದಾರೆ. ತೋರಾ ಕ್ಯಾಂಪ್ ನಲ್ಲಿ ಇರುವವರ ಜೊತೆ ನಾನೇ ನೇರವಾಗಿ ಮಾತನಾಡಿದ್ದೇನೆ.

ಬೆಳೆ ಹಾನಿ, ರಸ್ತೆ ಮೂಲಸೌಕರ್ಯ ಹಾನಿ, ಪರಿಹಾರಕ್ಕೆ ಸಿಎಂ ಸೂಚನೆ

28 ಹೆಕ್ಟೇರ್ ನಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಕಾಫಿ ಬೋರ್ಡ್ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. 2708 ವಿದ್ಯುತ್ ಕಂಬಗಳು ಬಿದ್ದು ಹೋಗಿವೆ. 150 ಬಿಟ್ಟು ಉಳಿದೆಲ್ಲಾವನ್ನೂ ಮತ್ತೆ ಅಳವಡಿಸಲಾಗಿದೆ. ಹಾಳಾಗಿದ್ದ 47 ಟ್ರಾನ್ಸ್ ಫಾರ್ಮರ್ ಗಳನ್ನೂ ಹೊಸದಾಗಿ ಅಳವಡಿಸಲಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿಯ ಭೂ ಕುಸಿತದ ದುರಸ್ತಿ ಕಾರ್ಯವನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ. ಶಿರಾಡಿ ಘಾಟಿಗೆ ಭೇಟಿ ನೀಡಿ ಅನಾಹುತಗಳನ್ನು ಪರಿಶೀಲನೆ ನಡೆಸುವುದಾಗಿ ಇದೇ ಸಂದರ್ಭದಲ್ಲಿ ಸಿಎಂ ತಿಳಿಸಿದರು. ಭೂ‌ಕುಸಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರಕ್ಕೆ ಜಿಎಸ್‌ಐ ವರದಿ ನೋಡಿ ನಂತರ ತೀರ್ಮಾನಿಸಲಾಗುವುದು ಎಂದರು.

344 ಕಿಮಿ ಉದ್ದದ ಲೋಕೋಪಯೋಗಿ, ಜಿಲ್ಲಾ ಪಂಚಾಯ್ತಿ ರಸ್ತೆಗಳು ಹಾನಿ ಆಗಿವೆ. ಇವೆಲ್ಲವನ್ನೂ ಆಧ್ಯತೆ ಮೇಲೆ ಸರಿ ಪಡಿಸಲು ಸೂಚಿಸಲಾಗಿದೆ. ಈ ಬಾರಿ ವಾಡಿಕೆಗಿಂತ ಶೇ50 ರಷ್ಟು ಹೆಚ್ಚು ಮಳೆಯಾಗಿದೆ.‌ ನಾವು ಮುಂಜಾಗ್ರತಾ ಕ್ರಮಗಳ ಜೊತೆಗೆ ಅನಾಹುತ ಬಳಿಕ ಪರಿಹಾರ ಕಾರ್ಯಗಳನ್ನು ತುರ್ತಾಗಿ ನಡೆಸಲಾಗುತ್ತಿದೆ.

ಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಮಾಜಿ ಸಚಿವ ನಾಣಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.