ಹೆಬ್ಬಾಳ - ಸಿಲ್ಕ್‌ ಬೋರ್ಡ್‌ ನಡುವೆ ಸುಗಮ ಸಂಚಾರಕ್ಕೆ ಸುರಂಗ ಮಾರ್ಗ ಪ್ರಸ್ತಾವನೆಗೆ ಸಿಕ್ಕಿತು ಸಂಪುಟದ ಒಪ್ಪಿಗೆ, 12 ಸಾವಿರ ಕೋಟಿ ರೂ ಯೋಜನೆ-bengaluru news karnataka capital to get tunnel road to connect hebbal to silk board check details uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಹೆಬ್ಬಾಳ - ಸಿಲ್ಕ್‌ ಬೋರ್ಡ್‌ ನಡುವೆ ಸುಗಮ ಸಂಚಾರಕ್ಕೆ ಸುರಂಗ ಮಾರ್ಗ ಪ್ರಸ್ತಾವನೆಗೆ ಸಿಕ್ಕಿತು ಸಂಪುಟದ ಒಪ್ಪಿಗೆ, 12 ಸಾವಿರ ಕೋಟಿ ರೂ ಯೋಜನೆ

ಹೆಬ್ಬಾಳ - ಸಿಲ್ಕ್‌ ಬೋರ್ಡ್‌ ನಡುವೆ ಸುಗಮ ಸಂಚಾರಕ್ಕೆ ಸುರಂಗ ಮಾರ್ಗ ಪ್ರಸ್ತಾವನೆಗೆ ಸಿಕ್ಕಿತು ಸಂಪುಟದ ಒಪ್ಪಿಗೆ, 12 ಸಾವಿರ ಕೋಟಿ ರೂ ಯೋಜನೆ

Hebbal to Silk board Tunnel Road; ಸಿಲ್ಕ್‌ ಬೋರ್ಡ್ ಸುರಂಗ ಮಾರ್ಗದ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ಸಚಿವ ಸಂಪುಟ ಅನುಮೋದಿಸಿದೆ. 12500 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ ಯೋಜನೆ ಇದಾಗಿದ್ದು, ಶೀಘ್ರವೇ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ.

ಹೆಬ್ಬಾಳ - ಸಿಲ್ಕ್‌ ಬೋರ್ಡ್‌ ನಡುವೆ ಸುಗಮ ಸಂಚಾರಕ್ಕೆ ಸುರಂಗ ಮಾರ್ಗ ಪ್ರಸ್ತಾವನೆಗೆ ಸಂಪುಟದ ಒಪ್ಪಿಗೆ ಸಿಕ್ಕಿತು. (ಸಾಂಕೇತಿಕ ಚಿತ್ರ)
ಹೆಬ್ಬಾಳ - ಸಿಲ್ಕ್‌ ಬೋರ್ಡ್‌ ನಡುವೆ ಸುಗಮ ಸಂಚಾರಕ್ಕೆ ಸುರಂಗ ಮಾರ್ಗ ಪ್ರಸ್ತಾವನೆಗೆ ಸಂಪುಟದ ಒಪ್ಪಿಗೆ ಸಿಕ್ಕಿತು. (ಸಾಂಕೇತಿಕ ಚಿತ್ರ) (canva)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಅಂದ ಕೂಡಲೇ ನಿತ್ಯ ಪ್ರಯಾಣಿಕರಿಗೆ ಥಟ್ಟಂತ ನೆನಪಾಗುವುದು ಸಂಚಾರ ದಟ್ಟಣೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಉಪಕ್ರಮಗಳನ್ನು ಜಾರಿಗೊಳಿಸುವುದನ್ನು ಮುಂದುವರಿಸುತ್ತಲೇ ಇದೆ. ಈ ಬಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಲ್ಲಿಸಿದ ಹೆಬ್ಬಾಳ - ಸಿಲ್ಕ್‌ ಬೋರ್ಡ್ ಸುರಂಗ ಮಾರ್ಗದ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಂಡಿದೆ.

ಬೆಂಗಳೂರು ಉತ್ತರ ಭಾಗದಿಂದ ದಕ್ಷಿಣ ಭಾಗವನ್ನು ಸಂಪರ್ಕಿಸುವ ಸುರಂಗ ಮಾರ್ಗ ನಿರ್ಮಿಸುವ ಬೃಹತ್ ಯೋಜನೆಗೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ (ಆಗಸ್ಟ್ 22) ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್‌ ಸುದ್ದಿಗಾರರಿಗೆ ಈ ಯೋಜನೆಯ ವಿವರಗಳನ್ನು ನೀಡಿದರು.

ಹೆಬ್ಬಾಳ - ಸಿಲ್ಕ್‌ ಬೋರ್ಡ್‌ ಸುರಂಗ ಮಾರ್ಗ, 12690 ಕೋಟಿ ರೂಪಾಯಿ ಯೋಜನೆ

ಹೆಬ್ಬಾಳ ಮೇಲ್‌ಸೇತುವೆ ಎಸ್ಟೀಮ್ ಮಾಲ್ ಸಮೀಪದಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್‌ನ ಮೇಲ್ಸೇತುವೆ ತನಕ ಸುಮಾರು 18 ಕಿ.ಮೀ. ಉದ್ದದರ ಸುರಂಗ ಮಾರ್ಗ ನಿರ್ಮಿಸುವ ಯೋಜನೆಗೆ 12690 ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಭೂಗತ ವಾಹನ ಸುರಂಗ ಮಾರ್ಗವನ್ನು ಟ್ವಿನ್‌ ಟ್ಯೂಬ್ ಮಾದರಿಯಲ್ಲಿ ನಿರ್ಮಿಸಲು ಸಚಿವ ಸಂಪುಟ ತಾತ್ವಿಕ ಅನುಮೋದನೆ ನೀಡಿದೆ ಎಂದು ಸಚಿವ ಎಚ್‌ ಕೆ ಪಾಟೀಲ್ ವಿವರಿಸಿದರು.

ಬೆಂಗಳೂರು ನಗರದ ಹೆಚ್ಚು ವಾಹನ ದಟ್ಟಣೆಯ 11 ಕಾರಿಡಾರ್‌ಗಳನ್ನು ಆಯ್ಕೆ ಮಾಡಿ ಸುಮಾರು 190 ಕಿ.ಮೀ ಉದ್ದದ ಭೂಗತ ವಾಹನ ಸುರಂಗ ಮಾರ್ಗ ನಿರ್ಮಾಣ ಮಾಡುವುದು ಸೂಕ್ತ ಎಂಬ ಪರಿಣತರ ಅಭಿಪ್ರಾಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಬೆಂಗಳೂರು ಹೃದಯ ಭಾಗದಲ್ಲಿ ಒಟ್ಟು ಸುಮಾರು 99.50 ಕಿ.ಮೀ ಉದ್ದದ 17 ಮೇಲ್ಸೇತುವೆ ನಿರ್ಮಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಬೆಂಗಳೂರು ಬೀದಿ ಬೆಳಗಲು ಎಲ್‌ಇಡಿ ದೀಪ ಅಳವಡಿಕೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂಧನ ವೆಚ್ಚ ಉಳಿತಾಯವಾಗುವ ಮೊತ್ತದಲ್ಲಿ ಸಾಂಪ್ರದಾಯಿಕ ವಿದ್ಯುತ್‌ ಬೀದಿ ದೀಪಗಳನ್ನು ತೆರವುಗೊಳಿಸಿ ಎಲ್ಲ ಕಡೆ ಎಲ್‌ಇಡಿ ಬೀದಿ ದೀಪಗಳನ್ನು ವಾರ್ಷಿಕ ಪಾವತಿ ಯೋಜನೆಯಡಿ ಮುಂದಿನ 7 ವರ್ಷಗಳ ಅವಧಿಗೆ 684 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಕೂಡ ಸಚಿವ ಸಂಪುಟ ಅನುಮೋದಿಸಿದೆ. ಇದರಿಂದಾಗಿ ವಾರ್ಷಿಕವಾಗಿ 300 ಕೋಟಿ ರೂಪಾಯಿಯಷ್ಟು ಇಂಧನ ವೆಚ್ಚವನ್ನು ಉಳಿತಾಯ ಮಾಡುವ ಉದ್ದೇಶವಿದೆ. ಏಳು ವಲಯಗಳಲ್ಲಿ ನಾಲ್ಕು ಪ್ಯಾಕೇಜ್‌ಗಳಾಗಿ ಈ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸುವ ಅಂಶ ಪ್ರಸ್ತಾವನೆಯಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರಲಿವೆ 52 ಹೊಸ ಇಂದಿರಾ ಕ್ಯಾಂಟೀನ್: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 52 ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆ ಮತ್ತು 20 ಕೋಟಿ ರೂಪಾಯಿ ಅನುದಾನದ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ 50 ಹೆಚ್ಚುವರಿ ಇಂದಿರಾ ಕ್ಯಾಂಟೀನ್‌ಗಳು ಅಡುಗೆ ಕೋಣೆ ಸಹಿತ ನಿರ್ಮಾಣವನ್ನು ಅನುಷ್ಠಾನಗೊಳಿಸಲು ಮೆಸರ್ಸ್ ಎಕ್ಸೆಲ್ ಪ್ರಿಕಾಸ್ಟ್ ಸಲ್ಯೂಶನ್‌ ಪ್ರೈವೇಟ್ ಲಿಮಿಟೆಡ್‌ಗೆ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯ ಕಲಂ 4(ಜಿ) ಅನುಸಾರ ವಿನಾಯಿತಿ ನೀಡುವುದಕ್ಕೆ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.