ಕರ್ನಾಟಕ ಹವಾಮಾನ: ಕರಾವಳಿ, ಮೈಸೂರು, ಚಿಕ್ಕಮಗಳೂರು, ಕೊಡಗು, ಹಾಸನದಲ್ಲೂ ಇಂದು ಭಾರೀ ಮಳೆ; ಬೆಂಗಳೂರಲ್ಲೂ ಮಳೆ ನಿರೀಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ: ಕರಾವಳಿ, ಮೈಸೂರು, ಚಿಕ್ಕಮಗಳೂರು, ಕೊಡಗು, ಹಾಸನದಲ್ಲೂ ಇಂದು ಭಾರೀ ಮಳೆ; ಬೆಂಗಳೂರಲ್ಲೂ ಮಳೆ ನಿರೀಕ್ಷೆ

ಕರ್ನಾಟಕ ಹವಾಮಾನ: ಕರಾವಳಿ, ಮೈಸೂರು, ಚಿಕ್ಕಮಗಳೂರು, ಕೊಡಗು, ಹಾಸನದಲ್ಲೂ ಇಂದು ಭಾರೀ ಮಳೆ; ಬೆಂಗಳೂರಲ್ಲೂ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು. ಸೋಮವಾರವೂ ಎಂಟು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಮೈಸೂರು, ಕೊಡಗು ಸಹಿತ ಎಂಟು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಮಂಗಳೂರು ಸುತ್ತಮುತ್ತ ಭಾರೀ ಮಳೆಯ ಮುನ್ಸೂಚನೆ. ಹೀಗಿದೆ ಮೋಡಗಳ ಸನ್ನಿವೇಶ.
( ಚಿತ್ರ: ಲೋಹಿತ್‌ ರಾವ್‌)
ಮಂಗಳೂರು ಸುತ್ತಮುತ್ತ ಭಾರೀ ಮಳೆಯ ಮುನ್ಸೂಚನೆ. ಹೀಗಿದೆ ಮೋಡಗಳ ಸನ್ನಿವೇಶ. ( ಚಿತ್ರ: ಲೋಹಿತ್‌ ರಾವ್‌)

ಬೆಂಗಳೂರು: ಕರ್ನಾಟಕದ ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲೂ ಸೋಮವಾರ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮಲೆನಾಡು ಭಾಗದಲ್ಲೂ ಮಳೆಯಾಗಲಿದೆ. ಎರಡು ದಿನ ಭಾರೀ ಮಳೆ ಸುರಿದು ಭಾನುವಾರಕ್ಕೆ ಬಿಡುವು ನೀಡಿದ್ದ ಮಳೆರಾಯ ಸೋಮವಾರ ಮತ್ತೆ ದಸರಾ ಸಂಭ್ರಮದ ಮೈಸೂರಿಗೆ ಆಗಮಿಸಲಿದ್ದಾನೆ. ಇದರಿಂದ ಸಂಜೆ ನಂತರ ಮತ್ತೆ ಮಳೆಯ ನಡುವೆಯೇ ಮೈಸೂರಿಗರು ಹಾಗೂ ಪ್ರವಾಸಿಗರು ದಸರಾ ವೀಕ್ಷಿಸಬೇಕಾಗಬಹುದು. ಇದಲ್ಲದೇ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಭಾಗದಲ್ಲೂ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ನೆಚ್ಚರಿಕೆ ನೀಡಿದೆ. ಅಲ್ಲದೇ ಎಂಟು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರದಲ್ಲೂ ಸಾಧಾರಣ ಮಳೆಯಾಗುವ ಸೂಚನೆಗಳಿವೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲೆಲ್ಲಿ ಮಳೆ ಸೂಚನೆ

ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಗುಡುಗು ಸಹಿತ ಮಳೆಯೂ ಸುರಿಯಲಿದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಭಾಗದಲ್ಲೂ ಭಾರೀ ಮಳೆಯಾಗಲಿದ್ದು, ಗುಡುಗು ಸಹಿತ ಮಳೆ ಇರಲಿದೆ. ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲೂ ಕೂಡ ಭಾರೀ ಮಳೆಯಾಗುವ ಸೂಚನೆಯಿದೆ. ಇಲ್ಲಿಯೂ ಗುಡುಗು ಸಹಿತ ಮಳೆಯಾಗಬಹುದು. ಈ ಎಂಟೂ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಣೆಯಾಗಿದೆ.

ಉತ್ತರ ಒಳನಾಡಿನ ಕೆಲವು ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವು ಕಡೆ ಗುಡುಗು ಕೂಡ ಕಾಣಿಸಿಕೊಳ್ಳಲಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯು ಗುಡುಗು ಸಹಿತ ಸುರಿಯಲಿದೆ.

ಅದೇ ರೀತಿ ಅಕ್ಟೊಬರ್‌ 8 ರ ಮಂಗಳವಾರವೂ ಕರಾವಳಿ ಜಿಲ್ಲೆಗಳು, ಚಿಕ್ಕಮಗಳೂರು, ಹಾಸನ, ಕೊಡಗು. ಮೈಸೂರು, ಚಾಮರಾನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ. ತುಮಕೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ.

ಬುಧವಾರ ಹಾಗೂ ಗುರುವಾರವೂ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಬೆಂಗಳೂರು ಹವಾಮಾನ

ಬೆಂಗಳೂರು ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಸಾಧಾರಣ ಮಳೆಯಾಗಲಿದ್ದು ಗುಡುಗು ಕೂಡ ಇರಲಿದೆ. ಸೋಮವಾರ ಸಂಜೆ ನಂತರ ಹಾಗೂ ಮಂಗಳವಾರವೂ ಭಾರೀ ಮಳೆಯ ಮುನ್ಸೂಚನೆಯನ್ನು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ನೀಡಲಾಗಿದೆ. ಬೆಂಗಳೂರಿನ ಉಷ್ಣಾಂಶದಲ್ಲೂ ಕುಸಿತ ಕಂಡು ಬಂದಿದೆ. ಬೆಂಗಳೂರಿನ ಗರಿಷ್ಠ ತಾಪಮಾನವು 27 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ತಾಪಮಾನವೂ 20 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಕೊಡಗಲ್ಲಿ ಅತ್ಯಧಿಕ ಮಳೆ

ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಿಗ್ಗೆ ಕೊಡಗಿನಲ್ಲಿ ಉತ್ತಮ ಮಳೆಯಾಗಿದೆ. ಕೊಡಗಿನ ನಾಪೊಕ್ಲುವಿನಲ್ಲಿ ಅತ್ಯಧಿಕ 9 ಸೆ.ಮೀ ಮಳೆ ಸುರಿದಿದೆ.

ಚಾಮರಾಜನಗರ ಜಿಲ್ಲೆ ಬಂಡೀಪುರ, ಉಡುಪಿಯ ಕಾರ್ಕಳ, ಗದಗದ ನರಗುಂದ, ಲಕ್ಷ್ಮೇಶ್ವರ, ರಾಮನಗರ, ಕನಕಪುರ, ಮಾಗಡಿ, ರಾಯಚೂರಿನ ಮಸ್ಕಿ, ಮೈಸೂರಿನ ಎಚ್‌ಡಿಕೋಟೆ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು, ಕುಮಟಾ, ಕದ್ರಾ, ಕಿರವತ್ತಿ, ಯಲ್ಲಾಪುರ, ಬೆಂಗಳೂರು ನಗರ, ಹೊಸಕೋಟೆ, ತುಮಕೂರಿನ ತಿಪಟೂರು, ಹಾವೇರಿನ ಶಿಗ್ಗಾಂವ್‌, ಹಾಸನದ ಕೊಣನೂರು, ಚನ್ನರಾಯಪಟ್ಟಣ, ಚಿಕ್ಕಮಗಳೂರಿನ ಕೊಟ್ಟಿಗೆ ಹಾರ, ಶೃಂಗೇರಿ, ಕೋಲಾರ, ದಾವಣಗೆರೆ ಜಿಲ್ಲೆ ಹೊನ್ನಾಳಿ, ಕಲಬುರಗಿಯ ಸುಲೇಪೇಟೆ, ಕೊಪ್ಪಳದ ಗಂಗಾವತಿ, ಬೀದರ್‌ ನ ಮಂಠಾಳ, ಮಂಡ್ಯದ ನಾಗಮಂಗಲ, ಚಿತ್ರದುರ್ಗದ ಹಿರಿಯೂರು, ಚಾಮರಾಜನಗರದ ಮಲೈಮಹದೇಶ್ವರ ಬೆಟ್ಟದಲ್ಲೂ ಉತ್ತಮ ಮಳೆಯಾಗಿದೆ.

Whats_app_banner