Dakshina Kannada: ಕರಾವಳಿಯಲ್ಲಿ ಮಳೆ; ಸುಳ್ಯದಲ್ಲಿ ಏಕಾಏಕಿ ಭೂಮಿ ಕುಸಿತ
Sullia Rain: ಭಾರಿ ಮಳೆಯಿಂದಾಗಿ ಸುಳ್ಯದ ಪರಿವಾರಕಾನ ಬಳಿ ಭೂಕುಸಿತಗೊಂಡು ಬೃಹತ್ ಹೊಂಡ ನಿರ್ಮಾಣವಾಗಿದೆ. ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗ ಭಾರಿ ಮಳೆಗೆ ಏಕಾಏಕಿ ಭೂಮಿ ಕುಸಿದಿದೆ.
ಮಂಗಳೂರು: ಕರಾವಳಿಯ ಹಲವೆಡೆ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಶನಿವಾರ ರಾತ್ರಿಯೂ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದೆ. ಕೆಲ ದಿನಗಳಲ್ಲಿ ದೀಪಾವಳಿ ಹಬ್ಬದ ಸಿದ್ಧತೆಯಲ್ಲಿರುವಾಗಲೇ ಮಳೆ ಸುರಿಯುತ್ತಿರುವುದು ಉತ್ಸಾಹ ಕುಗ್ಗುವಂತೆ ಮಾಡಿದರೆ, ಕೃಷಿ ಕಾರ್ಯಗಳಿಗೆ ವರುಣ ಸಮಸ್ಯೆ ತಂದೊಡ್ಡುತ್ತಿದ್ದಾನೆ.
ಈ ಮಧ್ಯೆ, ಸುಳ್ಯದಲ್ಲಿ ಶನಿವಾರ ಸಂಜೆ(ನವೆಂಬರ್ 04) ಸುರಿದ ಮಳೆಗೆ ಪರಿವಾರಕಾನ ಬಳಿ ಭೂಮಿ ಕುಸಿತಗೊಂಡು ಬೃಹತ್ ಹೊಂಡ ನಿರ್ಮಾಣವಾಗಿದೆ. ಪರಿವಾರಕಾನ ಬಳಿಯ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗ ಭಾರಿ ಮಳೆಗೆ ಏಕಾಏಕಿ ಭೂಮಿ ಕುಸಿದು ಬೃಹತ್ ಹೊಂಡ ನಿರ್ಮಾಣವಾಗಿದೆ. ಸುಮಾರು ಹತ್ತು ಅಡಿಯಷ್ಟು ಉದ್ದಕ್ಕೆ ಗುಂಡಿ ನಿರ್ಮಾಣವಾಗಿದ್ದು ,ಪಕ್ಕದಲ್ಲಿ ಇರುವ ವಿದ್ಯುತ್ ಕಂಬ ಬೀಳುವ ಆತಂಕ ಎದುರಾಗಿದೆ. ಘಟನೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ. ಸಾಮಾನ್ಯವಾಗಿ ಈ ಭಾಗದಲ್ಲಿ ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಸಾಗುವ ವಾಹನಗಳು ಕೆಲವೊಮ್ಮೆ ತಂಗುವುದುಂಟು. ಹೋಟೆಲ್‌ಗೆಂದು ಬರುವವರು ಹಾಗೂ ವಿಶ್ರಾಂತಿಗೆಂದು ವಾಹನಗಳನ್ನು ನಿಲ್ಲಿಸುವವರೂ ಇದ್ದಾರೆ. ಆದರೆ ಅದೃಷ್ಟವಶಾತ್ ಘಟನೆ ವೇಳೆ ಯಾರೂ ಇರದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ.
ಭಾರಿ ಮಳೆಯ ಮುನ್ಸೂಚನೆ
ಹವಾಮಾನ ಇಲಾಖೆಯು ಕರಾವಳಿಯಾದ್ಯಂತ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಗುಡುಗು ಮಿಂಚಿನಿಂದ ಕೂಡಿದ ಭಾರಿ ಮಳೆ ಕೆಲ ಭಾಗಗಳಲ್ಲಿ ಆಗಲಿದೆ ಎಂದು ಹೇಳಿರುವ ಇಲಾಖೆ ಸೋಮವಾರವೂ ಇದೇ ವಾತಾವರಣ ಮುಂದುವರಿಯಲಿದೆ ಎಂದಿದೆ.
ಕಾಸರಗೋಡಿನಲ್ಲಿ ಸಿಡಿಲಿನಿಂದ ಹಾನಿ
ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಕೆಲವೆಡೆ ಮಳೆಯಿಂದ ಶುಕ್ರವಾರ, ಶನಿವಾರ ಹಾನಿಗಳೂ ಸಂಭವಿಸಿದೆ. ಕೆದಂಬಾಡಿ ಗ್ರಾಮದ ಕನ್ನಡಮೂಲೆ ಎಂಬಲ್ಲಿ ಸಿಡಿಲು ಬಡಿದು ಭಾಸ್ಕರ ರೈ ಅವರ ಮನೆಗೆ ಹಾನಿಯಾಗಿದೆ. ನೆಲ್ಯಾಡಿಯಲ್ಲಿ ಸಿಡಿಲಬ್ಬರದಿಂದ ಕೃತಕ ನೆರೆ ಉಂಟಾಗಿದೆ. ಕಾಸರಗೋಡು ಜಿಲ್ಲೆಯ ಉಪ್ಪಳ ಅಂಬಾರು ಕೃಷ್ಣನಗರದಲ್ಲಿ ಮೊಹಮ್ಮದ್ ಆಲಿ ಎಂಬವರ ಮನೆಯ ತೆಂಗಿನ ಮರ ಸುಟ್ಟುಹೋಗಿದೆ. ಅವರ ಪತ್ನಿ ನಜೀಮಾ ಅವರು ಸಿಡಿಲಾಘಾತದಿಂದ ಕುಸಿದಿದ್ದಾರೆ. ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕರಾವಳಿಯಲ್ಲಿ ಹಿಂಗಾರು ಮಳೆ ಮುಂದುವರಿಯುವ ಸಾಧ್ಯತೆ ಇರುವ ಕಾರಣ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಅನ್ನು ಎರಡು ದಿನದ ಮಟ್ಟಿಗೆ ಘೋಷಿಸಿದೆ. ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 23.6 ಡಿಗ್ರಿ ಸೆಲ್ಸಿಯಸ್ ಇತ್ತು.