Harihar News: ಹರಿಹರ ರೈಲ್ವೇ ನಿಲ್ದಾಣಕ್ಕೆ ಹೊಸ ಸ್ಪರ್ಶ, 23 ಕೋಟಿ ರೂ. ಯೋಜನೆಗೆ ಸದ್ಯವೇ ಚಾಲನೆ: ಸಂಸದ ಜಿ.ಎಂ. ಸಿದ್ದೇಶ್ವರ್
Railway News ಹರಿಹರ ರೈಲ್ವೆ ನಿಲ್ದಾಣದ ಅಭಿವೃದ್ದಿಗೆ ಯೋಜನೆ ಸಿದ್ದವಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ದಾವಣಗೆರೆ ಸಂಸದ ಸಿದ್ದೇಶ್ವರ ಅವರ ಮಾರ್ಗದರ್ಶನದಲ್ಲಿ ರೂಪಿಸಲಾಗಿದೆ. ಸದ್ಯವೇ ರೈಲ್ವೆ ನಿಲ್ದಾಣ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ. ಏನೆಲ್ಲಾ ಚಟುವಟಿಕೆ ಎನ್ನುವ ವಿವರ ಇಲ್ಲಿದೆ.
ದಾವಣಗೆರೆ: ಜಂಕ್ಷನ್ ಆಗಿ ಮಾರ್ಪಾಡಾಗಿರುವ ಮಧ್ಯ ಕರ್ನಾಟಕದ ಪ್ರಮುಖ ವಹಿವಾಟು ಕೇಂದ್ರ ಹರಿಹರ ರೈಲ್ವೆ ನಿಲ್ದಾಣದ ಅಭಿವೃದ್ದಿಗೆ ಈಗ ಕಾಲ ಕೂಡಿ ಬಂದಿದೆ.
ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಹರಿಹರ ರೈಲ್ವೇ ನಿಲ್ದಾಣವನ್ನು 23 ಕೋಟಿ ರೂ., ವೆಚ್ಚದಲ್ಲಿ ನೂತನ ನಿಲ್ದಾಣವಾಗಿ ಆಧುನೀಕರಣಗೊಳಿಸಿ, ಅಭಿವೃದ್ಧಿಪಡಿಸಲು ಕೇಂದ್ರ ರೈಲ್ವೇ ಇಲಾಖೆ ಮುಂದಾಗಿದೆ
ಹರಿಹರ ರೈಲ್ವೇ ನಿಲ್ದಾಣವನ್ನು ಆಧುನೀಕರಣಗೊಳಿಸಿ, ಪ್ರಯಾಣಿಕ ಸ್ನೇಹಿ ರೈಲ್ವೇ ನಿಲ್ದಾಣವಾಗಿಸುವಂತೆ 2 ವರ್ಷದಿಂದ ರೈಲ್ವೇ ಸಚಿವಾಲಯಕ್ಕೆ ಮನವಿ ಮಾಡಿ, ಒತ್ತಡ ಹೇರಲಾಗಿತ್ತು. ಪರಿಣಾಮ ಕೇಂದ್ರ ರೈಲ್ವೇ ಸಚಿವಾಲಯವು ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಹರಿಹರ ರೈಲ್ವೇ ನಿಲ್ದಾಣ ಆಧುನೀಕರಣಕ್ಕೆ ಆಯ್ಕೆ ಮಾಡಿ, ವಿಸ್ತೃತ ಮಾಸ್ಟರ್ ಪ್ಲಾಸ್ ಸಿದ್ಧಪಡಿಸಿದೆ ಎಂದು ಕೇಂದ್ರದ ಮಾಜಿ ಸಚಿವರೂ ಆದ ಸಂಸದ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಅವರು ಮಾಹಿತಿ ನೀಡಿದ್ದಾರೆ.
ರೈಲ್ವೇ ಇಲಾಖೆಯು ಅಂದಾಜು 23 ಕೋಟಿ ರೂ.,ವೆಚ್ಚದಲ್ಲಿ ರೈಲ್ವೇ ನಿಲ್ದಾಣ ಅಭಿವೃದ್ಧಿಪಡಿಸಲಿದೆ. ಪ್ರತಿ ರೈಲ್ವೇ ವಿಭಾಗದಲ್ಲಿ 15 ರೈಲ್ವೇ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶವನ್ನು ರೈಲ್ವೇ ಇಲಾಖೆ ಹೊಂದಿದ್ದು, ಪೈಕಿ ಹರಿಹರ ರೈಲ್ವೇ ನಿಲ್ದಾಣವೂ ಒಂದಾಗಿರುವುದು ವಿಶೇಷ. ಪ್ರತಿ ನಿತ್ಯ ಸರಾಸರಿ 5500 ಕ್ಕೂ ಹೆಚ್ಚು ಪ್ರಯಾಣಿಕರು ಹರಿಹರ ರೈಲ್ವೇ ನಿಲ್ದಾಣದ ಮೂಲಕ ವಿವಿಧೆಡೆ ಸಂಚರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಏನೇನು ಸೌಲಭ್ಯ
ರೈಲ್ವೇ ಪ್ರಯಾಣಿಕರ ಹಿತದೃಷ್ಟಿಯಿಂದ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯೋಜನೆಯಡಿ ಈಗ ಹಾಲಿ ಇರುವ ರೈಲ್ವೇ ನಿಲ್ದಾಣವನ್ನು ತೆರವುಗೊಳಿಸಿ, ರೈಲ್ವೇ ನಿಲ್ದಾಣದ ಸ್ವಲ್ಪ ಮುಂದುಗಡೆ ನೂತನ ನಿಲ್ದಾಣ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ಹಾಲಿ ಇರುವ ೫ ಮೀಟರ್ ಅಗಲದ ಫ್ಲಾಟ್‌ಫಾರಂ ೧೫ ಮೀಟರ್‌ಗೆ ವಿಸ್ತರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಫ್ಲಾಟ್‌ಫಾರಂ 1ನ್ನು 2700 ಮೀಟರ್‌ವರೆಗೆ ಹಾಗೂ ಫ್ಲಾಟ್‌ಫಾರಂ 2ನ್ನು 4400 ಮೀಟರ್‌ವರೆಗೂ ವಿಸ್ತರಿಸಿ, ಮೇಲ್ಭಾಗಕ್ಕೆ ಶೆಲ್ಟರ್ ಒದಗಿಸಲಾಗುವುದು. ನಿಲ್ದಾಣದಲ್ಲಿ 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಿ, ಅತ್ಯಾಧುನಿಕ ಎಸ್ಕಲೇಟರ್‌ಗಳನ್ನು ಒದಗಿಸುವುದು ಯೋಜನೆಯಲ್ಲಿ ಪ್ರಮುಖವಾಗಿದೆ. ಫ್ಲಾಟ್‌ಫಾರಂನಲ್ಲಿ ಗ್ರಾನೈಟ್ ಫ್ಲೋರಿಂಗ್ ಮಾಡಲಿದ್ದು, ನಿಲ್ದಾಣದ ಮುಂಭಾಗಕ್ಕೆ ಸರ್ಕ್ಯೂಲೇಟಿಂಗ್ ಏರಿಯಾವನ್ನು ಫೇವರ್ ಬ್ಲಾಕ್‌ನಿಂದ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರತ್ಯೇಕ ದ್ವಾರಗಳು
ಅಲ್ಲದೇ, ಹರಿಹರ ರೈಲ್ವೇ ನಿಲ್ದಾಣಕ್ಕೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಜೊತೆಗೆ ಫ್ಲಾಟ್‌ಫಾರಂಗಳಲ್ಲಿ ಬುಕ್ಕಿಂಗ್ ಆಫೀಸ್ ಮತ್ತು ಸಾರ್ವಜನಿಕರಿಗೆ ಹೈಟೆಕ್ ಶೌಚಾಲಯ ವ್ಯವಸ್ಥೆ, ರೈಲುಗಳ ಆಗಮನ-ನಿರ್ಗಮನದ ಬಗ್ಗೆ ಎಲ್‌ಇಡಿ ಸೈನೇಜ್ ಬೋರ್ಡ್‌ಗಳ ಮೂಲಕ ಡಿಸ್‌ಪ್ಲೇ ಮಾಡಲಾಗುವುದು. ಸಿಸಿ ಕ್ಯಾಮೆರಾ ಅಳವಡಿಸುವುದೂ ಸೇರಿದಂತೆ ಅನೇಕ ರೀತಿ ನಿಲ್ದಾಣವನ್ನು ಅಮೃತ್ ಭಾರತ್ ನಿಲ್ದಾಣದಡಿ ಅಭಿವೃದ್ಧಿಪಡಿಸಲಾಗುತ್ತದೆ. ಒಟ್ಟಾರೆ ಹರಿಹರ ರೈಲ್ವೇ ನಿಲ್ದಾಣದ ಅಭಿವೃದ್ಧಿಗೆ 23 ಕೋಟಿ ಅನುದಾನ ವಿನಿಯೋಗಿಸುತ್ತಿದ್ದು, ಇನ್ನು ಒಂದು ವಾರದಲ್ಲೇ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ವಿವರಿಸಿದ್ದಾರೆ.