ಮನೆಗೆ ಕೋಳಿ ಮಾಂಸ ತಂದು ತೊಳೆಯುವ ಅಭ್ಯಾಸ ಇದ್ರೆ ಇಂದೇ ನಿಲ್ಲಿಸಿ, ಚಿಕನ್ ಕ್ಲೀನ್ ಮಾಡೋದೆ ಅಪಾಯ; ಯಾಕೆ ಅಂತ ನೋಡಿ
ಚಿಕನ್ ಖಾದ್ಯ ಮಾಡಲು ಮನೆಗೆ ಚಿಕನ್ ತಂದಾಗ ಅದನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ತೊಳೆದು ಸ್ವಚ್ಛ ಮಾಡುತ್ತೇವೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ, ಚಿಕನ್ ತೊಳೆಯುವುದರಿಂದ ಫುಡ್ ಪಾಯಿಸನ್ ಆಗುತ್ತೆ ಎನ್ನಲಾಗುತ್ತಿದೆ. ಹಾಗಾದರೆ ಚಿಕನ್ ತೊಳೆಯದೇ ಬಳಸಬೇಕಾ, ತೊಳೆಯುವುದಾದರೆ ಹೇಗೆ ತೊಳೆಯಬೇಕು ಇಲ್ಲಿದೆ ಉತ್ತರ.
ಮಾಂಸಾಹಾರಿಗಳಿಗೆ ಪ್ರತಿದಿನ ಮಾಂಸಾಹಾರ ಇಲ್ಲ ಎಂದರೆ ಊಟ ಸೇರುವುದಿಲ್ಲ. ಅದರಲ್ಲೂ ಹಲವರು ಚಿಕನ್ ಪ್ರಿಯರು. ಪ್ರತಿದಿನ ತಟ್ಟೆಯ ತುದಿಗೆ ಚಿಕನ್ ತುಂಡುಗಳು ಇರಬೇಕು ಎಂದು ಬಯಸುವವರೇ ಹೆಚ್ಚು. ಹಾಗಾಗಿ ಭಾರತದಲ್ಲಿ ಚಿಕನ್ ಮಾಂಸಕ್ಕೆ ಬೇಡಿಕೆ ಹೆಚ್ಚು. ಕೆಲವರು ವಾರಕ್ಕೊಮ್ಮೆ ತಿಂದರೆ ಕೆಲವೊಮ್ಮೆ ವಾರದಲ್ಲಿ ಮೂರ್ನ್ಕಾಲು ದಿನ ಚಿಕನ್ ಮಾಡುತ್ತಾರೆ.
ಹೊರಗಡೆಯಿಂದ ಚಿಕನ್ ತಂದು ಅಡುಗೆ ಮಾಡುವ ಮುನ್ನ ಅದನ್ನು ಚೆನ್ನಾಗಿ ತೊಳೆಯುವ ಅಭ್ಯಾಸ ನಮ್ಮಲ್ಲಿ ಹಲವರಿಗಿದೆ. ಆದರೆ ಈ ರೀತಿ ತೊಳೆಯುವುದು ಒಳ್ಳೆಯ ಅಭ್ಯಾಸವಲ್ಲ, ಇದರಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.
ಹಿಂದೆಲ್ಲಾ ಚಿಕನ್ ಮಾಂಸಗಳು ವಿತ್ ಸ್ಕಿನ್ ಅಂದರೆ ಚರ್ಮ ಸಹಿತವಾಗಿ ನೀಡುತ್ತಿದ್ದರು. ಇದರಲ್ಲಿ ಕೋಳಿ ರೆಕ್ಕೆ, ಪುಕ್ಕಗಳು ಅಂಟಿಕೊಂಡಿರುತ್ತಿದ್ದವು. ಇಲ್ಲದೇ ಹೊರಗಡೆಯಿಂದ ರಕ್ತದ ಕಲೆಗಳು ಅಂಟಿಕೊಂಡಂತೆ ಕಾಣುತ್ತಿದ್ದ ಕಾರಣ ಅವುಗಳನ್ನು ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಲಾಯಿತು. ಆದರೆ ಈಗ ಹಾಗಲ್ಲ. ಇತ್ತೀಚಿನ ದಿನಗಳಲ್ಲಿನ ತಂತ್ರಜ್ಞಾನವು ಚಿಕನ್ ಅನ್ನು ಚೆನ್ನಾಗಿ ಸ್ವಚ್ಛ ಮಾಡಿ,ಸ್ಕಿನ್ ಔಟ್ ಮಾಡಿ ಮಿಷನ್‌ನಲ್ಲಿ ಚಿಕನ್ ತುಂಡು ಮಾಡಿಕೊಡಲಾಗುತ್ತಿದೆ. ಇತ್ತೀಚಿನ ಬಹುತೇಕ ಚಿಕನ್ ಅಂಗಡಿಗಳಲ್ಲಿ ಮಾಂಸವನ್ನು ಚೆನ್ನಾಗಿ ಸ್ವಚ್ಛ ಮಾಡಿ ನೀಡುತ್ತಿದ್ದಾರೆ. ಇದರಿಂದ ಗರಿ, ರೆಕ್ಕೆಪುಕ್ಕಗಳು ಇರುವುದಿಲ್ಲ. ಅದೆಲ್ಲಾ ಸರಿ ಕೋಳಿ ಮಾಂಸವನ್ನು ಯಾಕೆ ತೊಳೆಯಬಾರದು ಎಂದು ನಿಮ್ಮ ಮನಸ್ಸಿಗೆ ಅನ್ನಿಸಿರಬಹುದು. ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕೋಳಿಯನ್ನು ಮನೆಯಲ್ಲಿ ಏಕೆ ತೊಳೆಯಬಾರದು?
ಕೋಳಿ ಅಂಗಡಿಯಲ್ಲೇ ಚೆನ್ನಾಗಿ ಸ್ವಚ್ಛ ಮಾಡಿದ ಕೋಳಿ ಮಾಂಸವನ್ನು ನಾವು ಪುನಃ ಮನೆಯಲ್ಲಿ ಬಂದು ತೊಳೆಯುತ್ತವೆ. ಇದರಿಂದ ಮಾಂಸದ ತುಂಡುಗಳು ಚೆನ್ನಾಗಿ ಸ್ವಚ್ಛವಾಗುತ್ತವೆ ಎಂದು ನಾವು ಭಾವಿಸುತ್ತೇವೆ. ಆದರೆ ಸತ್ತ ಕೋಳಿಯ ಮಾಂಸದಲ್ಲಿ ಹಲವು ಬಗೆಯ ಸೂಕ್ಷ್ಮಾಣು ಜೀವಿಗಳಿರುತ್ತವೆ. ಇವುಗಳಲ್ಲಿ ಕೆಲವು ಬಹಳ ಅಪಾಯಕಾರಿ. ಉದಾಹರಣೆಗೆ ಸಾಲ್ಮೊನೆಲ್ಲಾ ಮತ್ತು ಕ್ಯಾಂಪಿಲೋಬ್ಯಾಕ್ಟರ್. ಈ ಬ್ಯಾಕ್ಟೀರಿಯಾಗಳು ಫುಡ್ ಪಾಯಿಸನ್, ಅತಿಸಾರ, ಹೊಟ್ಟೆ ನೋವು ಇತ್ಯಾದಿಗಳನ್ನು ಉಂಟುಮಾಡುತ್ತವೆ. ಇಂತಹ ಬ್ಯಾಕ್ಟೀರಿಯಾಗಳಿರುವ ಮಾಂಸವನ್ನು ನಾವು ನೀರಿನಲ್ಲಿ ತೊಳೆದಾಗ, ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯಬಹುದು. ನೀರಿನ ಜೊತೆಗೆ ಅವುಗಳನ್ನು ಮಾಂಸದ ತುಂಡುಗಳ ಮೇಲೆ ಒಂದು ಸ್ಥಳದಿಂದ ಇನ್ನೊಂದಕ್ಕೆ ಸಾಗಿಸಲಾಗುತ್ತದೆ. ಇದು ಮಾಲಿನ್ಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಅಲ್ಲದೆ, ಕೋಳಿ ತೊಳೆಯುವಾಗ ಆ ನೀರು ಕೈ, ಬಟ್ಟೆ ಮತ್ತು ಅಡುಗೆಮನೆಯ ಸ್ಲ್ಯಾಬ್‌ನಲ್ಲಿ ಮೇಲೆಲ್ಲಾ ತಾಕುತ್ತದೆ. ನೀರಿನ ಹನಿಗಳು 50 ಸೆಂ.ಮೀ ವರೆಗೆ ಚೆಲ್ಲಬಹುದು. ಆ ನೀರಿನ ಮೂಲಕ ಬ್ಯಾಕ್ಟೀರಿಯಾಗಳು ಬೇರೆ ವಸ್ತುಗಳು ಹಾಗೂ ಆಹಾರ ಪದಾರ್ಥಗಳನ್ನೂ ಸೇರಿಕೊಳ್ಳಬಹುದು.
ಚಿಕನ್ ಸ್ವಚ್ಛ ಮಾಡಲು ಈ ವಿಧಾನ ಅನುಸರಿಸಿ
ಈ ಸಮಸ್ಯೆ ತಪ್ಪಿಸಲು, ಮಾಂಸವನ್ನು ತೊಳೆಯಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಚಿಕನ್ ಮೇಲಿನ ಅಂಟಾದ ದ್ರವವನ್ನು ತೆಗೆಯಲು ನೀರಿನ ಬದಲಿಗೆ ಟಿಶ್ಯೂ ಅಥವಾ ಪೇಪರ್ ಟವಲ್ ಅನ್ನು ಬಳಸಬೇಕು. ಇದರಿಂದ ಒಮ್ಮೆ ಒರೆಸಿದರೆ ಸಾಕು. ನಂತರ ನಿಮ್ಮ ಕೈಗಳನ್ನು ಸೋಪಿನಿಂದ ತೊಳೆಯಿರಿ. ಅಲ್ಲದೆ, ನೀವು ಬೇಯಿಸದ ಚಿಕನ್ ಅನ್ನು ಫ್ರಿಜ್‌ನಲ್ಲಿ ಇಡಲು ಬಯಸಿದರೆ, ಅದನ್ನು ಗಾಳಿಯಾಡದ ಡಬ್ಬದಲ್ಲಿ ಇರಿಸಿ. ಇಂತಹ ಮಾಂಸಗಳನ್ನು ಡೀಪ್ ಫ್ರಿಜ್‌ನಲ್ಲಿಡಲು ಸೂಕ್ತ ಸ್ಥಳವನ್ನು ಕಾಯ್ದಿರಿಸಬೇಕು. ಅವುಗಳನ್ನು ಎಲ್ಲಾ ಸಾಮಾನ್ಯ ಆಹಾರಗಳೊಂದಿಗೆ ಇಡಬಾರದು. ಅಲ್ಲದೆ, ಇವುಗಳನ್ನು ಸ್ವಚ್ಛಗೊಳಿಸಿ ಸಂಗ್ರಹಿಸಿದ ನಂತರ, ನಿಮ್ಮ ಕೈಗಳನ್ನು ಮತ್ತು ಮಾಂಸವನ್ನು ಇರಿಸಲಾಗಿರುವ ಸಿಂಕ್ ಅನ್ನು ಸಾಬೂನು ನೀರಿನಿಂದ ಚೆನ್ನಾಗಿ ತೊಳೆಯಬೇಕು.
ಕೋಳಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲಲು, ಅದನ್ನು ಚೆನ್ನಾಗಿ ಬೇಯಿಸಬೇಕು. ಕನಿಷ್ಠ 165 ಡಿಗ್ರಿ ತಾಪಮಾನದಲ್ಲಿ ಅದನ್ನು ಬೇಯಿಸಿ.
ಈ ರೀತಿ ಚಿಕನ್ ತುಂಡುಗಳನ್ನು ತೊಳೆಯದೇ ಇರುವುದು ಮಾಂಸದ ಅಂಗಡಿಯಲ್ಲಿ ಈಗಾಗಲೇ ಸ್ವಚ್ಛ ಮಾಡಿ ಕೊಟ್ಟ ಕೋಳಿ ಮಾಂಸಕ್ಕೆ ಮಾತ್ರ, ವಿತ್ ಸ್ಕಿನ್ ಅಥವಾ ರೆಕ್ಕೆ ಪುಕ್ಕಗಳು ಹಿಡಿದುಕೊಂಡಂತಿದ್ದರೆ ಅದನ್ನು ನೀರಿನಿಂದ ಸ್ವಚ್ಛ ಮಾಡಲೇಬೇಕು. ಆದರೆ ಆ ನೀರು ಎಲ್ಲಾ ಕಡೆ ಚಿಮುಕಿಸದಂತೆ ನೋಡಿಕೊಳ್ಳಿ. ಕೋಳಿಮಾಂಸವನ್ನು ತೊಳೆದ ನಂತರ ಕೈ ಹಾಗೂ ಪಾತ್ರೆಯನ್ನು ಚೆನ್ನಾಗಿ ತೊಳೆಯಿರಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದ್ದು, ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ)