ನಿದ್ರಾಹೀನತೆ ಸಮಸ್ಯೆಗೆ ಇಲ್ಲಿದೆ ಪರಿಹಾರ: ಮಲಗಿದ ತಕ್ಷಣ ನಿದ್ದೆ ಬರಲು ಸಹಾಯ ಮಾಡುವ ಯೋಗಾಸನಗಳಿವು
ಯೋಗಾಸನವು ನಿದ್ರಾಹೀನತೆ ಮತ್ತು ನಿದ್ದೆಯ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಕ್ರಮಬದ್ಧ ಉಸಿರಾಟ ಮತ್ತು ಧ್ಯಾನ ಮನಸ್ಸು ಶಾಂತಗೊಳಿಸುವುದನ್ನು ಉತ್ತೇಜಿಸುತ್ತದೆ. ಇದರಿಂದ ನಿದ್ದೆಯ ಗುಣಮಟ್ಟ, ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ. ಅಷ್ಟೇ ಅಲ್ಲದೇ ಅಂಗಾಶಗಳ ದುರಸ್ತಿ, ನೆನಪಿನ ಶಕ್ತಿ ಮತ್ತು ಹಾರ್ಮೋನ್ ಸಮತೋಲನಕ್ಕೆ ಸಹಾಯ ಮಾಡುತ್ತದೆ.
ಇಂದಿನ ವೇಗದ ದಿನಗಳಲ್ಲಿ ಉತ್ತಮ ನಿದ್ದೆಯೆಂಬುದು ಕನಸೇ ಆಗಿದೆ. ಒತ್ತಡ, ಆತಂಕ ಮತ್ತು ಆಧುನಿಕ ಜೀವನ ಪದ್ಧತಿ ಇವೆಲ್ಲವೂ ನಿದ್ದೆಯ ಮಾದರಿಗೆ ಅಡ್ಡಪಡಿಸುತ್ತವೆ. ಇದರಿಂದ ನಿದ್ರಾಹೀನತೆ ಮತ್ತು ನಿದ್ದೆಯ ಸಮಸ್ಯೆಗಳು ಎದುರಾಗುತ್ತವೆ. ನಿದ್ದೆಯ ಕೊರತೆಯಿಂದ ಇಂದು ಮನುಷ್ಯ ಹಲವಾರು ಕಾಯಿಲೆಗಳನ್ನು ಎದುರಿಸುತ್ತಿದ್ದಾನೆ. ವಿಶ್ರಾಂತಿಗಾಗಿ ಔಷಧ ತೆಗೆದುಕೊಳ್ಳುವುದನ್ನು ಕಾಣಬಹುದಾಗಿದೆ. ನಿದ್ರಾಹೀನತೆ ಮತ್ತು ನಿದ್ದೆಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಯೋಗವು ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಬೆಡ್ ಟೈಮ್ ಯೋಗಗಳು ನಿದ್ದೆಯ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತಿವೆ.
ನಿದ್ದೆಯ ಪ್ರಾಮುಖ್ಯತೆ
ನಿದ್ದೆ ಪ್ರತಿಯೊಬ್ಬರಿಗೂ ಅಗತ್ಯವಾಗಿ ಬೇಕೇ ಬೇಕು. ನಿದ್ದೆಯ ಕೊರತೆಯಿಂದ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ತಲೆದೂರುತ್ತವೆ. ನಿದ್ದೆಯ ಸಮಯದಲ್ಲಿ ದೇಹವು ವಿಶ್ರಾಂತಿಗೆ ಒಳಪಡುತ್ತದೆ. ಇದು ಆರೋಗ್ಯ ಕಾಪಾಡುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ನಿದ್ದೆಯ ಸಮಯದಲ್ಲಿ ದೇಹವು ಅಂಗಾಂಶಗಳನ್ನು ಸರಿಪಡಿಸುತ್ತದೆ, ನೆನಪುಗಳನ್ನು ಕ್ರೋಢಿಕರಿಸುತ್ತದೆ ಮತ್ತು ಹಾರ್ಮೋನ್‌ಗಳನ್ನು ಸಮತೋಲನಗೊಳಿಸುತ್ತದೆ. ನಿದ್ದೆಯ ಕೊರತೆಯಿಂದ ಮೂಡ್ ಸ್ವಿಂಗ್, ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ, ಒತ್ತಡ, ಆತಂಕ ಮತ್ತು ಮರೆವಿನ ಕಾಯಿಲೆ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ನಿದ್ದೆ ಅತ್ಯಂತ ಅವಶ್ಯಕವಾಗಿದೆ. ಕೆಲವು ಯೋಗಾಸನಗಳು ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತವೆ. ನಿದ್ದೆಗಾಗಿ ದೇಹ ಮತ್ತು ಮನಸ್ಸನ್ನು ಸಿದ್ಧಪಡಿಸುತ್ತವೆ.
ನಿದ್ದೆಯ ಗುಣಮಟ್ಟ ಹೆಚ್ಚಿಸಲು ಸಹಾಯ ಮಾಡುವ ಯೋಗಾಸನಗಳು
ಬಾಲಾಸನ: ಮಗುವಿನ ಭಂಗಿಯು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಬಾಲಾಸನ ಮಾಡುವ ಮೊದಲು ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಕೈಯನ್ನು ಮುಂದಕ್ಕೆ ಚಾಚಿ. ನಿಧಾನವಾಗಿ ಬಾಗುತ್ತ ನಿಮ್ಮ ಹಣೆಯನ್ನು ನೆಲಕ್ಕೆ ತಾಗಿಸಿ. ಸರಾಗವಾಗಿ ಉಸಿರಾಡಿ.
ಪಶ್ಚಿಮೋತ್ತನಾಸನ: ಮೊದಲಿಗೆ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ನೇರವಾಗಿ ಕುಳಿತುಕೊಳ್ಳಿ. ನಂತರ ಎರಡೂ ಕೈಗಳನ್ನು ನೇರವಾಗಿ ಮೇಲಕ್ಕೆತ್ತಿ. ನಿಧಾನವಾಗಿ ಮುಂದಕ್ಕೆ ಬಾಗುತ್ತಾ ಕೈಗಳೆರಡನ್ನು ಪಾದದ ಬಳಿಗೆ ತೆಗೆದುಕೊಂಡು ಹೋಗಿ. ಅದೇ ಸಮಯದಲ್ಲಿ ತಲೆಯನ್ನು ಮಂಡಿಗೆ ತಾಗಿಸಿ. ಈ ಭಂಗಿಯು ಬೆನ್ನುಮೂಳೆಯನ್ನು ವಿಸ್ತರಿಸುತ್ತದೆ. ಇದು ವಿಶ್ರಾಂತಿಗೆ ಉತ್ತೇಜನವನ್ನು ನೀಡುತ್ತದೆ.
ವಿಪರೀತ ಕರಣಿ: ಮೊದಲು ಗೋಡೆಗೆ ಎದುರಾಗಿ ನೇರವಾಗಿ ಕುಳಿತುಕೊಳ್ಳಿ. ಈಗ ಬೆನ್ನನ್ನು ನೆಲಕ್ಕೆ ತಾಗಿಸಿ. ಎರಡೂ ಕಾಲುಗಳನ್ನು ಎತ್ತಿ ಗೋಡೆಗೆ ಚಾಚಿ. 90 ಡಿಗ್ರಿ ಕೋನದಲ್ಲಿರುವಂತೆ ಮಾಡಿ. ಕೈಗಳನ್ನು ಬದಿಗಳಲ್ಲಿ ಇರಿಸಿ. ಸ್ವಲ್ಪ ಹೊತ್ತು ಅದೇ ಸ್ಥಿತಿಯಲ್ಲಿರಿ. ಮಲಗಿ ಮಾಡುವ ಈ ಸರಳ ಆಸನವು ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದು ಊದಿಕೊಂಡ ಪಾದಗಳು ಮತ್ತು ಕಾಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಹೀಲಿಂಗ್ ವಾಕ್: ಇದು ನಿದ್ದೆಗೆ ಮೊದಲು ಮಾಡಬಹುದಾದ ಸರಳ ವ್ಯಾಯಾಮ. ನಿಮ್ಮ ಭುಜದ ಸಮಾನಂತರದಲ್ಲಿ ಕೈಗಳನ್ನು ಮೇಲಕ್ಕೆತ್ತಿ. ಅದೇ ಸ್ಥಿತಿಯಲ್ಲಿ ನಡೆಯಲು ಪ್ರಾರಂಭಿಸಿ. 1 ರಿಂದ 3 ನಿಮಿಷಗಳ ಕಾಲ ವಾಕ್ ಮಾಡಿ. ಇದು ಸ್ನಾಯುಗಳಿಗೆ ಬಲವನ್ನು ತುಂಬುತ್ತದೆ. ಇದು ನಿದ್ದೆಯ ಮಾದರಿಯನ್ನು ಸುಧಾರಿಸುತ್ತದೆ. ಆರಂಭದಲ್ಲಿ ಇದು ಸಾಧ್ಯವಾಗದೇ ಇರಬಹುದು. ಕ್ರಮೇಣ ಅಭ್ಯಾಸವಾಗುತ್ತದೆ.
ಪ್ರಾಣಾಯಾಮ: ಪ್ರಾಣಾಯಾಮವು ಮನಸ್ಸನ್ನು ಶಾಂತಗೊಳಿಸಲು ಮತ್ತು ದೇಹವನ್ನು ನಿದ್ದೆಗೆ ಸಿದ್ಧಪಡಿಸಲು ಬಹಳ ಪರಿಣಾಮಕಾರಿಯಾಗಿದೆ. ಕ್ರಮಬದ್ಧವಾದ ಉಸಿರಾಟವು ಒತ್ತಡ, ಆತಂಕಗಳನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಮೂಲಕ ದೇಹವು ವಿಶ್ರಾಂತ ಸ್ಥಿತಿಯನ್ನು ತಲುಪುವಂತೆ ಮಾಡುತ್ತದೆ. ಪ್ರಾಣಾಯಾಮವನ್ನು ಈ ರೀತಿಯಾಗಿ ಮಾಡಿ. ಮೊದಲು 4 ಎಣಿಕೆಗಳವರೆಗೆ ಮೂಗಿನ ಮೂಲಕ ಉಸಿರನ್ನು ಎಳೆದುಕೊಳ್ಳಿ. 7 ಎಣಿಕೆಗಳವರೆಗೆ ಉಸಿರನ್ನು ಹಿಡಿದಿಟ್ಟುಕೊಳ್ಳಿ. 8 ಎಣಿಕೆಗಳವರೆಗೆ ಬಾಯಿಯ ಮೂಲಕ ಉಸಿರನ್ನು ಹೊರ ಹಾಕಿ. ಇದೇ ರೀತಿ ಕೆಲವು ಸಮಯ ಪುನರಾವರ್ತಿಸಿ.
ನಾಡಿ ಶೋಧನ: ಇದು ಸಹ ಒಂದು ಉಸಿರಾಟದ ತಂತ್ರವಾಗಿದೆ. ಸಮತೋಲಿತ ಉಸಿರಾಟವು ಶಾಂತತೆಯ ಭಾವವನ್ನು ಸೃಷ್ಟಿಸುತ್ತದೆ. ಹೆಬ್ಬೆರಳಿನಿಂದ ಒಂದು ಬದಿಯ ಮೂಗನ್ನು ಮುಚ್ಚಿ ಮತ್ತೊಂದು ಮೂಗಿನಿಂದ ಉಸಿರು ಎಳೆದುಕೊಳ್ಳಿ. ಉಂಗುರದ ಬೆರಳಿನಿಂದ ಮುಚ್ಚಿ. ನಂತರ ಹೆಬ್ಬೆರಳನ್ನು ತೆಗೆದು ನಿಧಾನವಾಗಿ ಉಸಿರು ಹೊರಹಾಕಿ. ಕೆಲವು ಸಮಯದವರೆಗೆ ಇದನ್ನು ಪುನಾರಾವರ್ತಿಸಿ.
ಧ್ಯಾನ ಮಾಡಿ: ಧ್ಯಾನವು ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ನಿದ್ದೆಗೆ ಮೊದಲು ಸಣ್ಣ ಧ್ಯಾನದಲ್ಲಿ ತೊಡಗಿಸಿಕೊಳ್ಳಿ. ಉಸಿರಾಟದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ. ನಿದ್ದೆಗೆ ಅನುಕೂಲಕರವಾದ ಆಂತರಿಕ ಶಾಂತಿಯನ್ನು ಇದು ಉತ್ತೇಜಿಸುತ್ತದೆ. ನಿದ್ದೆಯ ಗುಣಮಟ್ಟವನ್ನು ಸುಧಾರಿಸಲು ಮತ್ತು ನಿದ್ರಾಹೀನತೆಯನ್ನು ದೂರಮಾಡುತ್ತದೆ. ದೇಹ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ನೀಡಲು ಸಹಾಯ ಮಾಡುತ್ತದೆ. ನಿದ್ದೆ ಮತ್ತು ಆರೋಗ್ಯವನ್ನು ಸುಧಾರಿಸುತ್ತದೆ. ದಿನವಿಡೀ ಚೈತನ್ಯವನ್ನು ತುಂಬಲು ಸಹಾಯ ಮಾಡುತ್ತದೆ.