ವಿಜಯದಶಮಿ, ದುರ್ಗಾಪೂಜೆ, ರಾವಣ ದಹನ, ಬತುಕಮ್ಮ; ಭಾರತದಾದ್ಯಂತ ಅದ್ಧೂರಿಯಾಗಿ ನಡೆಯುತ್ತೆ ದಸರಾ ವೈಭವ
ಕನ್ನಡ ಸುದ್ದಿ  /  ಜೀವನಶೈಲಿ  /  ವಿಜಯದಶಮಿ, ದುರ್ಗಾಪೂಜೆ, ರಾವಣ ದಹನ, ಬತುಕಮ್ಮ; ಭಾರತದಾದ್ಯಂತ ಅದ್ಧೂರಿಯಾಗಿ ನಡೆಯುತ್ತೆ ದಸರಾ ವೈಭವ

ವಿಜಯದಶಮಿ, ದುರ್ಗಾಪೂಜೆ, ರಾವಣ ದಹನ, ಬತುಕಮ್ಮ; ಭಾರತದಾದ್ಯಂತ ಅದ್ಧೂರಿಯಾಗಿ ನಡೆಯುತ್ತೆ ದಸರಾ ವೈಭವ

ಭಾರತದಲ್ಲಿ ವಾರಗಟ್ಟಲೆ ಅದ್ದೂರಿಯಾಗಿ ನಡೆಯುವ ಹಬ್ಬ ದಸರಾ. ದೇಶದ ವಿವಿಧ ಭಾಗಗಳಲ್ಲಿ ಭಿನ್ನ ವಿಭಿನ್ನವಾಗಿ ಸಂಭ್ರಮದಿಂದ ಹಬ್ಬ ಆಚರಿಸಲಾಗುತ್ತದೆ. ಕರ್ನಾಟಕದಿಂದ ಹೊರಗೆ ಈ ವೈಭವ ಹೇಗಿರುತ್ತದೆ. ದೇಶದ ನವರಾತ್ರಿ ಚಿತ್ರಣ ಇಲ್ಲಿದೆ ನೋಡಿ.

ವಿಜಯದಶಮಿ, ದುರ್ಗಾಪೂಜೆ, ರಾವಣ ದಹನ; ಭಾರತದಾದ್ಯಂತ ಅದ್ಧೂರಿಯಾಗಿ ನಡೆಯುತ್ತೆ ದಸರಾ ವೈಭವ
ವಿಜಯದಶಮಿ, ದುರ್ಗಾಪೂಜೆ, ರಾವಣ ದಹನ; ಭಾರತದಾದ್ಯಂತ ಅದ್ಧೂರಿಯಾಗಿ ನಡೆಯುತ್ತೆ ದಸರಾ ವೈಭವ

ಇನ್ನೇನು ಭಾರತದಲ್ಲಿ ದಸರಾ ಸಂಭ್ರಮ ಮನೆಮಾಡಲಿದೆ. ನವರಾತ್ರಿಯ ವಿಶೇಷ ಸಂದರ್ಭದಲ್ಲಿ ಭಾರತದ ವಿವಿಧ ಭಾಗಗಳಲ್ಲಿ ಭಿನ್ನ-ವಿಭಿನ್ನವಾಗಿ ದಸರಾ ಆಚರಣೆ ಇರುತ್ತದೆ. ಜಾಗತಿಕ ಮನ್ನಣೆ ಗಳಿಸಿರುವ ಮೈಸೂರಿನ ಭವ್ಯ ಜಂಬೂಸವಾರಿಯ ಬಗ್ಗೆ ನಮಗೆಲ್ಲಾ ಗೊತ್ತಿದೆ. ವಿಜಯ ದಶಮಿಯ ಅದ್ಧೂರಿ ಮೆರವಣಿಗೆಯಲ್ಲಿ ಗಜಪಡೆಗಳು ಚಾಮುಂಡೇಶ್ವರಿ ವಿರಾಜಮಾನಳಾಗಿರುವ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವುದೇ ಚಂದ. ಅತ್ತ ಕರಾವಳಿ ನಗರಿ ಮಂಗಳೂರಿನಲ್ಲಿಯೂ ದಸರಾ ನಡೆಯುತ್ತದೆ. ಕುದ್ರೋಳಿಯಲ್ಲಿ ನವರಾತ್ರಿ ದಿನದಲ್ಲಿ ಶಾರದಾ ಮಾತೆಯನ್ನು ಪೂಜಿಸಲಾಗುತ್ತದೆ. ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ ಅರ್ಥಪೂರ್ಣವಾಗಿ ನವರಾತ್ರಿ ಆಚರಿಸಲಾಗುತ್ತದೆ. ಹಾಗಿದ್ದರೆ ದೇಶದ ವಿವಿಧ ಭಾಗಗಳಲ್ಲಿ ದಸರಾ ಸಂಭ್ರಮ ಹೇಗಿರುತ್ತದೆ ಎಂಬುದನ್ನು ನೋಡೋಣ.

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಬರುವ ಅಶ್ವಿನಿ ಮಾಸದ ಶುಕ್ಲ ಪಕ್ಷದ ಹತ್ತನೇ ದಿನದಂದು ವಿಜಯದಶಮಿ ಸಂಭ್ರಮ. ಹೆಚ್ಚಿನ ಭಾಗಗಳಲ್ಲಿ ವಿಜಯದಶಮಿ ಎಂದೇ ಕರೆಯಲಾಗುತ್ತದೆ. ಇದೇ ದಿನ ಮೈಸೂರು ಜಂಬೂ ಸವಾರಿ ನಡೆಯುತ್ತದೆ. ಕೆಲವು ಭಾಗಗಳಲ್ಲಿ ದುರ್ಗಾ ಪೂಜೆ ಎಂದೂ ಕರೆಯಲಾಗುತ್ತದೆ. ದಸರಾ ಹಬ್ಬದೊಂದಿಗೆ ಹಬ್ಬದ ಋತು ಆರಂಭವಾಗುತ್ತದೆ. ಪಶ್ಚಿಮ ಬಂಗಾಳದಿಂದ ಹಿಡಿದು ಹಿಮಾಚಲ ಪ್ರದೇಶ, ದೆಹಲಿ, ರಾಜಸ್ಥಾನ, ಗುಜರಾತ್‌ ಹೀಗೆ ಅದ್ಧೂರಿ ಸಂಭ್ರಮ ಮನೆ ಮಾಡಿರುತ್ತದೆ. ಹಾಗಿದ್ದರೆ ಭಾರತದ ಯಾವ ಪ್ರದೇಶದಲ್ಲಿ ಸಂಭ್ರಮ ಹೇಗಿರುತ್ತದೆ? ದಸರಾ ವೈಭವ ನೋಡಲು ಎಲ್ಲಿಗೆ ಹೋಗಬಹುದು ಎಂಬುದನ್ನು ನೋಡೋಣ.

ಹೈದರಾಬಾದ್, ತೆಲಂಗಾಣ

ತೆಲಂಗಾಣ ಹಾಗೂ ರಾಜಧಾನಿ ಹೈದರಾಬಾದ್‌ನಲ್ಲಿ ದಸರಾ ಹಬ್ಬ ಇನ್ನೂ ಅದ್ಧೂರಿಯಾಗುತ್ತದೆ. ನವರಾತ್ರಿ ಸಮಯದಲ್ಲಿ ಇಲ್ಲಿ ಬತುಕಮ್ಮ ಹಬ್ಬವನ್ನು ಆಚರಿಸಲಾಗುತ್ತದೆ. ಮಹಿಳೆಯರು ಪ್ರಧಾನವಾಗಿ ನವರಾತ್ರಿಯ ಬತುಕಮ್ಮ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ. ನಗರವಿಡೀ ಅಲಂಕಾರ ಹಾಗೂ ಜನರ ಓಡಾಟದಿಂದ ಜಗಮಗವಾಗಿರುತ್ತದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಜನರು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ತೆಲಂಗಾಣದಲ್ಲಿ ದಸರಾ ಹಬ್ಬವು ಸಂಪ್ರದಾಯ, ಸಂಸ್ಕೃತಿ ಮತ್ತು ಸಂತೋಷದ ಮಿಶ್ರಣವಾಗಿದೆ.

ಕೋಲ್ಕತ್ತಾ, ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ ದಸರಾವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ಇಲ್ಲಿನ ಜನರು 10 ದಿನಗಳ ಪೂಜೆಯ ನಂತರ ಪವಿತ್ರ ಗಂಗಾ ನದಿಯಲ್ಲಿ ದುರ್ಗಾ ದೇವಿಯ ವಿಗ್ರಹಗಳನ್ನು ನಿಮಜ್ಜನ ಮಾಡುತ್ತಾರೆ. ಇದು ದುಷ್ಟತನದ ವಿರುದ್ಧ ದುರ್ಗೆಯ ವಿಜಯವನ್ನು ಸಂಕೇತಿಸುತ್ತದೆ. ಹೀಗಾಗಿ ಇಲ್ಲಿಯೂ ವಿಜಯದಶಮಿ ಎಂದು ಕರೆಯಲಾಗುತ್ತದೆ. ಸಾಂಸ್ಕೃತಿಕ ಪ್ರದರ್ಶನಗಳನ್ನು ವೀಕ್ಷಿಸಲು ಜನ ಸೇರುವುದು ಸಾಮಾನ್ಯ. ವರ್ಣರಂಜಿತ ಗಾಳಿಪಟಗಳನ್ನು ಹಾರಿಸುವುದು ಸಾಮಾನ್ಯ. ಬಂಗಾಳಿ ಸಾಂಪ್ರದಾಯಿಕ ಸಿಹಿತಿಂಡಿಗಳಾದ 'ಸಂದೇಶ್' ಮತ್ತು 'ರಸಗುಲ್ಲಾ' ಈ ಸಮಯದ ಪ್ರಮುಖ ತಿಂಡಿ.

ಅಹಮದಾಬಾದ್, ಗುಜರಾತ್

ಗುಜರಾತ್‌ನ ಅಹಮದಾಬಾದ್‌ನಲ್ಲಿಯೂ ಅದ್ಧೂರಿ ದಸರಾ ಆಚರಣೆ ನಡೆಯುತ್ತದೆ. ಇಲ್ಲಿಯೂ ರಾವಣ ದಹನ ಪ್ರಮುಖ ಆಕರ್ಷಣೆ. ಮೆರವಣಿಗೆ, ಸಾಂಪ್ರದಾಯಿಕ ನೃತ್ಯಗಳು, ಸಂಗೀತ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತವೆ. ಢೋಕ್ಲಾ ಮತ್ತು ಫಾಫ್ಡಾದಂತಹ ರುಚಿಕರವಾದ ತಿಂಡಿಗಳು ಹಬ್ಬದ ಸಂಭ್ರಮ ಹೆಚ್ಚಿಸುತ್ತವೆ. ಗುಜರಾತ್‌ನ ಪ್ರಮುಖ ನಗರ ಅಹಮದಾಬಾದ್‌ನಲ್ಲಿ ದಸರಾ ಸಮಯದಲ್ಲಿ ಸಬರಮತಿ ಆಶ್ರಮ, ಅದಲಾಜ್ ಸ್ಟೆಪ್‌ವೆಲ್, ವಸ್ತ್ರಪುರ ಸರೋವರ ಸೇರಿದಂತೆ ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಭೇಟಿ ನೀಡಬಹುದು.

ಕುಲು, ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದ ಕುಲಂತಪೀಠ ಎಂದೂ ಕರೆಯಲ್ಪಡುವ ಕುಲುವಿನಲ್ಲಿ (ದೇವರ ಕಣಿವೆ) ಅದ್ಧೂರಿ ದಸರಾ ಆಚರಣೆ ಇದೆ. 1972ರಲ್ಲಿ ಕುಲು ದಸರಾವು ಅಂತಾರಾಷ್ಟ್ರೀಯ ಮಾನ್ಯತೆ ಪಡೆಯಿತು. ಮೈಸೂರಿನಂತೆ ಅದ್ಧೂರಿತನಕ್ಕೆ ಸಾಕ್ಷಿಯಾಗುವ ಈ ವೈಭವಕ್ಕೆ ಜಗತ್ತಿನ ಮೂಲೆಮೂಲೆಗಳಿಂದ ಸುಮಾರು 4 ಲಕ್ಷದಿಂದ 5 ಲಕ್ಷ ಜನರು ಸಾಕ್ಷಿಯಾಗುತ್ತಾರೆ. ಅದ್ಧೂರಿಯಾಗಿ ಅಲಂಕರಿಸಿದ ರಥಗಳ ಮೆರವಣಿಗೆ ನಡೆಸಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ನೃತ್ಯಗಳು ಮತ್ತು ಸಂಗೀತ ಹಬ್ಬವೇ ನಡೆಯುತ್ತದೆ.

ವಾರಣಾಸಿ, ಉತ್ತರ ಪ್ರದೇಶ

ಉತ್ತರ ಪ್ರದೇಶದಲ್ಲಿಯೂ ದಸರಾ ಆಚರಣೆ ಜೋರಾಗಿರುತ್ತದೆ. ಧಾರ್ಮಿಕ ಹಿನ್ನೆಲೆಯಿರುವ ವಾರಣಾಸಿಯಲ್ಲಿ ರಾವಣನ ವಿರುದ್ಧ ಶ್ರೀರಾಮನ ವಿಜಯದ ಸಾಂಪ್ರದಾಯಿಕ ಆಚರಣೆಗಾಗಿ ಜನರು ದಶಾಶ್ವಮೇಧ ಘಾಟ್‌ನಲ್ಲಿ ಸೇರುತ್ತಾರೆ. ಅದ್ಧೂರಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಅಂತಿಮ ದಿನದಂದು, ರಾವಣನ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ. ಇದು ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ.

ನಾಸಿಕ್, ಮಹಾರಾಷ್ಟ್ರ

ಮಹಾರಾಷ್ಟ್ರ ಕೂಡಾ ದಸರಾ ಆಚರಣೆಗಳಿಗೆ ಹೆಸರುವಾಸಿ. ಗೋದಾವರಿ ನದಿಯಲ್ಲಿ ರಾಮ, ಸೀತೆ, ಲಕ್ಷ್ಮಣನ ವಿಗ್ರಹಗಳನ್ನು ವಿಸರ್ಜಿಸಲು ಜನರು ನಗರದ ಪ್ರಸಿದ್ಧ ರಾಮಕುಂಡ್ ಘಾಟ್‌ನಲ್ಲಿ ಸೇರುತ್ತಾರೆ. ಹತ್ತು ದಿನಗಳ ಅದ್ಧೂರಿ ಉತ್ಸವದಲ್ಲಿ ಮೆರವಣಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಮಾನ್ಯ. ರಂಗೋಲಿ ಅಲಂಕಾರ ಹಬ್ಬದ ಸಂಭ್ರಮ ಹೆಚ್ಚಿಸುತ್ತದೆ. ಇಲ್ಲಿಯೂ ರಾವಣ ದಹನ ಪ್ರಮುಖ ಹಂತ. ರಾಜ್ಯದ ವಿವಿಧ ಭಾಗಳ ಜನರು ಇಲ್ಲಿ ಸೇರುತ್ತಾರೆ.

ದೆಹಲಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅದ್ಧೂರಿ ದಸರಾ ಆನಂದಿಸಬಹುದು. ರಾವಣನ ವಿರುದ್ಧ ರಾಮನ ವಿಜಯವನ್ನು ಆಚರಿಸುವ ಸಲುವಾಗಿ ರಾವಣನ ಬೃಹತ್ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ. ಸಿಹಿತಿಂಡಿಗಳು ಹಾಗೂ ಉಡುಗೊರೆಗಳ ವಿನಿಮಯ ನಡೆಯುತ್ತದೆ. ಸಂಜೆಯಾಗುತ್ತಿದ್ದಂತೆ ಬಾನಂಗಳದಲ್ಲಿ ಪಟಾಕಿಗಳು ಚಿತ್ತಾರ ಮಾಡುತ್ತವೆ.

ಕೋಟಾ, ರಾಜಸ್ಥಾನ

ರಾಜಸ್ಥಾನದ ಕೋಟಾದಲ್ಲಿ ದಸರಾವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ರಾವಣ ದಹನ ಪ್ರಮುಖ ಆಕರ್ಷಣೆ. ಪಟಾಕಿಗಳು, ಸಾಂಪ್ರದಾಯಿಕ ಜಾನಪದ ನೃತ್ಯಗಳು ಮತ್ತು ಸಂಗೀತ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸುತ್ತವೆ.

Whats_app_banner