Poll Strategist: ಐದು ರಾಜ್ಯ ಚುನಾವಣೆಗಳಲ್ಲಿ ‘ಚುನಾವಣಾ ತಂತ್ರಗಾರ’ರೆಂಬ ಕಿಂಗ್‌ಮೇಕರ್‌ಗಳಿಗೇ ಹೆಚ್ಚು ಬೇಡಿಕೆ, ಯಾರಿವರು, ಏನಿವರ ಕೆಲಸ
ಕಳೆದ 10 ವರ್ಷಗಳ ಚುನಾವಣೆಯಲ್ಲಿ ಚುನಾವಣಾ ತಂತ್ರಗಾರರದ್ದೇ ಕಾರುಬಾರು. ಬಹುತೇಕ ಗೆಲುವುಗಳಲ್ಲಿ ಇವರ ಚುನಾವಣಾ ತಂತ್ರಗಾರಿಕೆ ಕೆಲಸ ಮಾಡಿರುವುದನ್ನು ರಾಜಕಾರಣಿಗಳು ಗುರುತಿಸಿದ್ದಾರೆ. ಪೂರ್ಣ ನಂಬಿಕೆಯೊಂದಿಗೆ ಇವರನ್ನು ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ರಾಜಕಾರಣಿಗಳು ಇನ್ನೂ ತಯಾರಾಗಿಲ್ಲ. ಗೆಲ್ಲಬೇಕು ಎಂಬ ಕಾರಣಕ್ಕೆ ಇವರ ಮೊರೆ ಹೋಗುತ್ತಿರುವುದು ಕಂಡುಬಂದಿದೆ.
ದೇಶದ ರಾಜಕಾರಣವನ್ನು ಗಮನಿಸಿದರೆ 2010 ರ ಮೊದಲು ಪರಿಣತ ರಾಜಕಾರಣಿಗಳು ತಮ್ಮ ಜೀವಿತಾವಧಿಯ ರಾಜಕೀಯ ಅನುಭವವನ್ನು ಧಾರೆ ಎರೆದು ಪಕ್ಷ ಸಂಘಟನೆ ಮಾಡಿ, ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದ್ದರು. ಆಗೆಲ್ಲ ಮಾಸ್ ಲೀಡರ್ ಎಂದು ಗುರುತಿಸುವುದಕ್ಕೆ ಸಾಧ್ಯವಾಗಬಲ್ಲ ನಾಯಕತ್ವ ಕಾಣಸಿಗುತ್ತಿತ್ತು. ರಾಜಕಾರಣಿಗಳನ್ನೇ ಕಿಂಗ್ ಮೇಕರ್‌ಗಳು ಎಂದು ಗುರುತಿಸುತ್ತಿದ್ದ ಕಾಲವದು. ಅವರ ಕಾರ್ಯವೈಖರಿಯೇ, ಕಾರ್ಯ ವಿಧಾನ ಬೇರೆಯದೇ ರೀತಿಯದ್ದು. ಅದೇನೂ ನಿಶ್ಚಿತ ರೂಪದಲ್ಲಿರುತ್ತಿರಲಿಲ್ಲ. ಹಾಗೆಂದು ಈಗ ನಿಶ್ಚಿತ ರೂಪದಲ್ಲಿದೆ ಎಂದಲ್ಲ.
ಆದರೆ, ಕಳೆದ 10 ವರ್ಷದ ಚುನಾವಣಾ ರಾಜಕಾರಣವನ್ನು ಒಮ್ಮೆ ಗಮನಿಸಿ ನೋಡಿ. ತಂತ್ರಜ್ಞಾನವನ್ನು ಬಳಸಿಕೊಂಡು ಚುನಾವಣಾ ರಾಜಕಾರಣ ಬದಲಾದ ಬಗೆ ನಿಜಕ್ಕೂ ಬೆರಗು ಹುಟ್ಟಿಸುವಂಥದ್ದು. ಯುವತಲೆಮಾರು ರಾಜಕಾರಣದಿಂದ ದೂರ ಉಳಿದಿದೆ ಎಂಬ ಆರೋಪದಲ್ಲಿ ಈಗ ಹುರುಳು ಇಲ್ಲ ಎಂಬ ರೀತಿಯಲ್ಲಿ ಯುವಜನರು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಅದರಲ್ಲೂ ವಿಶೇಷವಾಗಿ ಉನ್ನತ ಶಿಕ್ಷಣ ಪಡೆದವರು ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡು ರಾಜಕಾರಣಿಗಳ ಕಾರ್ಯಗಳನ್ನು ನಿರ್ವಹಿಸುವ ಮಟ್ಟಿಗೆ ಬೆಳೆದಿದ್ದಾರೆ. ಐಐಟಿ, ಐಐಎಂಗಳಂತ ಭಾರತದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಎ ಮತ್ತು ಇತರೆ ಪದವಿ ಪಡೆದವರು ಈ ರೀತಿ ಕೆಲಸಗಳನ್ನು ಮಾಡುವ ಕಂಪನಿಗಳನ್ನು ಹುಟ್ಟುಹಾಕಿ ರಾಜಕಾರಣದಲ್ಲಿ ತಮ್ಮ ಛಾಪನ್ನು ಉದ್ಯಮಿಗಳಾಗಿ ಗುರುತಿಸಿಕೊಂಡಿದ್ಧಾರೆ. ಇವರನ್ನು ಚುನಾವಣಾ ತಂತ್ರಗಾರರು (Poll Strategist) ಎಂದು ಗುರುತಿಸುತ್ತಾರೆ. ಇವರೇ ಸದ್ಯ ‘ಕಿಂಗ್ ಮೇಕರ್’.
ಈ ಚುನಾವಣಾ ತಂತ್ರಗಾರರ ವಿಚಾರಕ್ಕೆ ಬಂದರೆ ಮೊದಲು ಗಮನ ಸೆಳೆಯುವುದು 2012ರ ಗುಜರಾತ್ ವಿಧಾನಸಭಾ ಚುನಾವಣೆ. ಅಂದು ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿ ಚುನಾವಣೆ ಎದುರಿಸಿದ್ದರು. ನರೇಂದ್ರ ಮೋದಿ ಎಂಬ ಬ್ರ್ಯಾಂಡ್ ಅನ್ನು ರೂಪಿಸುವಲ್ಲಿ ನೆರವಿಗೆ ಬಂದದ್ದು ಈಗ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಐ-ಪಿಎಸಿ) ಎಂಬ ಕಂಪನಿ ಮುನ್ನಡೆಸುತ್ತಿರುವ ಪ್ರಶಾಂತ್ ಕಿಶೋರ್.
ಪ್ರಶಾಂತ್ ಕಿಶೋರ್ ಅವರು ಬಿಹಾರ ಮೂಲದವರು. ಆಫ್ರಿಕಾದಲ್ಲಿ ವಿಶ್ವಸಂಸ್ಥೆಯ ಆರೋಗ್ಯ ತಜ್ಞರಾಗಿ ಕೆಲಸ ಮಾಡುತ್ತಿದ್ದರು. 2011ರಲ್ಲಿ ಆ ಉದ್ಯೋಗ ಬಿಟ್ಟು ಭಾರತಕ್ಕೆ ಬಂದರು. ಅದಕ್ಕೆ ಕಾರಣ ಇಲ್ಲದಿಲ್ಲ. ನರೇಂದ್ರ ಮೋದಿ ಅವರನ್ನು 2012ರ ಗುಜರಾತ್ ಚುನಾವಣೆಯಲ್ಲಿ ಉತ್ತಮ ಆಡಳಿತದ ಮುಖವಾಗಿ ಬಿಂಬಿಸುವ ಬಹುದೊಡ್ಡ ಯೋಜನೆ ಅವರ ಹೆಗಲೇರಿತ್ತು. ಆಗ ಅವರು ಬಿಜೆಪಿಯದ್ದೇ ಆದ ಆಂತರಿಕ ವ್ಯವಸ್ಥೆಯ ಭಾಗವಾಗಿ ಕೆಲಸ ಮಾಡಿದ್ದರು.
ಬಿಜೆಪಿ ಜತೆಗೆ ಕೆಲಸ ಮಾಡಿಕೊಂಡೇ 2013ರಲ್ಲಿ ಸಿಟಿಜನ್ಸ್ ಫಾರ್ ಅಕೌಂಟೆಬಲ್ ಗವರ್ನೆನ್ಸ್ (ಸಿಎಜಿ) ಎಂಬ ಕಂಪನಿಯ ಸಹ ಸಂಸ್ಥಾಪಕರಾದರು ಪ್ರಶಾಂತ್ ಕಿಶೋರ್. ಇದೇ ಸಂಸ್ಥೆ 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಬ್ರ್ಯಾಡಿಂಗ್‌ಗೆ ಕೆಲಸ ಮಾಡಿತ್ತು. ಆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಮೊದಲ ಬಾರಿಗೆ ಪ್ರಧಾನಿ ಅಭ್ಯರ್ಥಿ ಎಂದು ಚುನಾವಣೆಗೆ ಮೊದಲೇ ಘೋಷಿಸುವ ಪ್ರಯೋಗ ನಡೆಯಿತು. ಅದು ಯಶಸ್ವಿಯಾಯಿತು ಕೂಡ.
ಆದರೆ, 2019ರ ಲೋಕಸಭೆ ಚುನಾವಣೆ ಹೊತ್ತಿಗೆ ಪ್ರಶಾಂತ್ ಕಿಶೋರ್ ಬಿಜೆಪಿಯಿಂದ ದೂರ ಸರಿದರು. 2018ರಲ್ಲಿ ಬಿಹಾರದಲ್ಲಿ ನಿತೀಶ್ ಕುಮಾರ್ ಜತೆಗೂಡಿ ಕೆಲಸ ಮಾಡಿದರು. ಜೆಡಿಯು ಬಿಹಾರದಲ್ಲಿ ಹೆಚ್ಚಿನ ಸಾಧನೆ ಮಾಡುವುದಕ್ಕೆ ಅಗತ್ಯ ತಂತ್ರಗಾರಿಕೆ ರೂಪಿಸಿ ಯಶಸ್ವಿಯಾದರು. ಇದೇ ವೇಳೆ, ಪ್ರಶಾಂತ್ ಕಿಶೋರ್ ಜತೆಗೆ ಕೆಲಸ ಮಾಡಿದವರು ಹಲವರು ತಮ್ಮದೇ ಆದ ಕಂಪನಿಗಳನ್ನು ಹುಟ್ಟುಹಾಕಿಕೊಂಡರು. ಇನ್ನು ಕೆಲವು ಹೊಸಬರು ಕೂಡ ಚುನಾವಣಾ ತಂತ್ರಗಾರಿಕೆಯ ಕನ್ಸಲ್ಟೆನ್ಸಿ ಶುರುಮಾಡಿಕೊಂಡರು.
ಚುನಾವಣಾ ತಂತ್ರಗಾರಿಕೆಯ ಉದ್ಯಮದ ಹಾದಿ…
ಚುನಾವಣಾ ತಂತ್ರಗಾರಿಕೆ ಒಂದು ಉದ್ಯಮವಾಗಿ ಬೆಳೆಯುತ್ತಿದ್ದು, ಪ್ರತಿ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಪಕ್ಷ, ರಾಜಕೀಯ ನಾಯಕರು ತಮ್ಮ ಛಾಪನ್ನು ಮತದಾರರ ಮೇಲೆ ಬೀರಲು ತಂತ್ರಗಾರರ ನೆರವು ಪಡೆಯತೊಡಗಿದ್ದಾರೆ.
ಪ್ರಶಾಂತ್ ಕಿಶೋರ್ ಜತೆಗೆ ಕೆಲಸ ಮಾಡಿದ್ದ ಅಬ್ಬಿನ್ ಥೀಪುರ ಮತ್ತು ತಂಡ ಪೊಲಿಟಿಕ್ ಮಾರ್ಕರ್ (Politique Marquer) 2019 ರಿಂದ ಚುನಾವಣಾ ತಂತ್ರಗಾರಿಕೆ ಕನ್ಸೆಲ್ಟೆನ್ಸಿ ಕೆಲಸ ಶುರುಮಾಡಿದೆ. ಕರ್ನಾಟಕವೂ ಸೇರಿ ಹಲವು ರಾಜ್ಯಗಳ ರಾಜಕಾರಣಿಗಳು ಈ ಸಂಸ್ಥೆಯ ನೆರವು ಪಡೆಯುತ್ತಿದ್ದಾರೆ.
ಇದೇ ರೀತಿ ರಾಜಕೀಯ ತಂತ್ರಗಾರ, ಮಾಜಿ ಆಮ್ ಆದ್ಮಿ ಪಾರ್ಟಿ ನಾಯಕ ಅಂಕಿತ್ ಲಾಲ್ 2020ರಲ್ಲಿ ಪೊಲಿಟಿಕ್ ಅಡ್ವೈಸರ್ಸ್ (Politique Advisors) ಎಂಬ ಕಂಪನಿ ಶುರುಮಾಡಿದರು. ಈ ಕಂಪನಿ ಬಿಹಾರದಲ್ಲಿ ನಿತೀಶ್ ಕುಮಾರ್ ಜತೆಗೆ ಒಪ್ಪಂದ ಮಾಡಿಕೊಂಡು ಕೆಲಸ ಮಾಡಿದೆ.
ನರೇಶ್ ಅರೋರಾ ಅವರ ಡಿಸೈನ್‌ಬಾಕ್ಸ್ಡ್ (DesignBoxed) ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಾರಿಕೆಯನ್ನು ರೂಪಿಸುತ್ತಿದೆ. ಪೇಸಿಎಂ, ‘ಕಿವಿ ಮೇಲೆ ಹೂವು’ ಮುಂತಾದ ಅಭಿಯಾನವನ್ನು ರೂಪಿಸಿ ಗಮನಸೆಳೆದಿದೆ.
ಪ್ರಶಾಂತ್ ಕಿಶೋರ್ ಜತೆಗೆ ಕೆಲಸ ಮಾಡಿದ ಸುನಿಲ್ ಕನುಗೋಲು ಅವರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದಕ್ಕೆ ಬೇಕಾದ ತಂತ್ರಗಾರಿಕೆ ರೂಪಿಸಿದವರು.
ಹೀಗೆ ಯಶಸ್ವಿಯಾದವರ ಪಟ್ಟಿ ಬೆಳೆಯುತ್ತ ಸಾಗುತ್ತದೆ. ಆದರೆ, ಈ ಚುನಾವಣಾ ಗೆಲುವಿನ ಯಶಸ್ಸಿನ ಜತೆಗೆ ಅವರಿಗೆ ಸವಾಲುಗಳು ಮತ್ತು ಸೋಲುಗಳೂ ಎದುರಾಗುತ್ತವೆ ಎಂಬುದು ಸುಳ್ಳಲ್ಲ. ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆ, ಗುಜರಾತ್, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಗೆದ್ದರೂ, ಗೋವಾದಲ್ಲಿ ವಿಫಲವಾಗಿದೆ. ಈ ರೀತಿ ಸೋಲು, ಸವಾಲು ಪ್ರತಿಯೊಬ್ಬ ತಂತ್ರಗಾರನಿಗೂ ಆಗಿರುವಂಥದ್ದು, ಆಗುವಂಥದ್ದು. ವಿಶೇಷ ಎಂದರೆ ಇವರಲ್ಲಿ ಬಹುತೇಕ ಚುನಾವಣಾ ತಂತ್ರಗಾರರು ಬಿಜೆಪಿಯ ಚುನಾವಣಾ ಪ್ರಚಾರ ಮತ್ತು ತಂತ್ರಗಾರಿಕೆಗೆ ಕೆಲಸ ಮಾಡಿದ ಅನುಭವಿಗಳು.
ರಾಜಕಾರಣಿಗಳಿಗೆ ಪಕ್ಷ, ಕಾರ್ಯಕರ್ತರ ಮೇಲಿನ ಹಿಡಿತ ತಪ್ಪಿ ಹೋಗುವ ಭಯ
ಚುನಾವಣಾ ತಂತ್ರಗಾರರ ಕಾರ್ಯವೈಖರಿ ಹೇಗಿರುತ್ತದೆ ಎಂದರೆ ಅವರು ಪಕ್ಷದ ನೀತಿ, ನಿರೂಪಣೆಗಳ ಮೇಲೆ ಪ್ರಭಾವ ಬೀರಬಲ್ಲರು. ಅವರು ಹೇಳಿದಂತೆ ಎಲ್ಲರೂ ಕೇಳಬೇಕಾಗುತ್ತದೆ. ಒಂದು ಯೋಜನೆ ರೂಪಿಸಿಕೊಂಡ ಬಳಿಕ ಅದರ ಯಶಸ್ಸಿಗಾಗಿ ಅವರು ಹೇಳಿದ ಚೌಕಟ್ಟಿನಲ್ಲಿ ಪ್ರತಿಯೊಬ್ಬ ರಾಜಕಾರಣಿಯೂ ಕೆಲಸ ಮಾಡಬೇಕು.
ಆಗ ಪಕ್ಷ ಸಂಘಟನೆಯ ಸಿದ್ಧಾಂತ, ನೀತಿಗಳ ವಿರುದ್ಧವಾಗಿ ಅಥವಾ ಅದನ್ನು ಮೀರಿದ ಪ್ರಭಾವ ಬೀರುವ ಸಾಧ್ಯತೆ ಇದೆ. ಆ ರೀತಿ ಆದರೆ, ಪಕ್ಷದ ಮೇಲಿನ ಹಿಡಿತ ಈ ಚುನಾವಣಾ ತಂತ್ರಗಾರಿಕೆಯ ಕಂಪನಿ ಕೈಗೆ ಹೋಗಿಬಿಡಬಹುದು ಎಂಬ ಆತಂಕ ರಾಜಕಾರಣಿಗಳದ್ದು.
ಇಂತಹ ಆತಂಕಕ್ಕೆ ಇತ್ತೀಚಿನ ನಿದರ್ಶನ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ನದ್ದು. ಅದು ಪ್ರಶಾಂತ್ ಕಿಶೋರ್ ಅವರ ಐ-ಪಿಎಸಿ ಜತೆಗಿನ ಒಪ್ಪಂದವನ್ನು ಇತ್ತೀಚೆಗೆ ರದ್ದುಗೊಳಿಸಿತು. ಬಳಿಕ ಕೆಟಿ ರಾಮ ರಾವ್, ಅವರಿಗೆ ಪಕ್ಷದ ಕಾರ್ಯನಿರ್ವಹಣೆಯ ನಿಯಂತ್ರಣ ಬಿಟ್ಟುಕೊಡಬೇಕಂತೆ. ಅವರು ನಮಗೆ ಪಾಠ ಹೇಳಲಿ. ಆದರೆ ನಿಯಂತ್ರಣ ಕೇಳಿದರೆ ಕೊಡಲಾಗದು ಎಂದು ಹೇಳಿದ್ದರು.
ಚುನಾವಣಾ ತಂತ್ರಗಾರರು ಯಾವುದೇ ವಿಷಯಗಳ ನಿರೂಪಣೆಯನ್ನು ಬದಲಾಯಿಸಬಲ್ಲರೇ ಹೊರತು, ಸ್ವತಃ ವಿವೇಚನೆ ಬಳಸಿ ನಿರ್ಧಾರ ತೆಗೆದುಕೊಳ್ಳುವ ಮತದಾರರ ಮೇಲೆ ಪರಿಣಾಮ ಬೀರಲಾರರು. ಅದೇ ರೀತಿ ನಿರ್ಧಾರ ತೆಗೆದುಕೊಳ್ಳಲು ಸಮಯ ತೆಗೆದುಕೊಳ್ಳುವ ಮತದಾರರ ಮೇಲೆ ಪ್ರಭಾವ ಬೀರುವುದಕ್ಕೆ ಪ್ರಯತ್ನಿಸಬಹುದು. ಇಡೀ ರಾಜಕೀಯ ಪಕ್ಷದ ಕಾರ್ಯಾಚರಣೆಯ ಹಿಡಿತ ಬಯಸಿದಾಗ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ನಡುಕ ಉಂಟಾಗುವುದು ಸಹಜ. ಆದಾಗ್ಯೂ, ಗೆಲ್ಲಬೇಕು ಎಂಬ ಕಾರಣಕ್ಕೆ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಈಗ ಚುನಾವಣಾ ತಂತ್ರಗಾರರ ಮೊರೆ ಹೋಗುತ್ತಿರುವುದು ವಾಸ್ತವ.
ವಿಭಾಗ