Telangana Cong Swing: ತೆಲಂಗಾಣ ಚುನಾವಣಾ ಫಲಿತಾಂಶ, ಕಾಂಗ್ರೆಸ್ ಪುಟಿದೇಳಲು ನೆರವಾದ 6 ಅಂಶಗಳು
ಚುನಾವಣಾ ಆಯೋಗದ ಸದ್ಯದ ( ಡಿ.3ರ ಮಧ್ಯಾಹ್ನ 2 ) ಮಾಹಿತಿ ಪ್ರಕಾರ, ಕಾಂಗ್ರೆಸ್ 65, ಬಿಆರ್‌ಎಸ್ 41, ಬಿಜೆಪಿ 8, ಎಐಎಂಐಎಂ 6, ಸಿಪಿಐ 1ರಲ್ಲಿ ಮುನ್ನಡೆ ಸಾಧಿಸಿವೆ. ಕಾಂಗ್ರೆಸ್ ಮುನ್ನಡೆ ಸ್ಪಷ್ಟವಾಗುತ್ತ ಸಾಗಿದ್ದು, ಈ ಮುನ್ನಡೆಗೆ ಕಾರಣವಾದ 6 ಅಂಶಗಳ ವಿವರ.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣಗಳು ಗೋಚರಿಸಿವೆ. ತೆಲಂಗಾಣ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧಿಕಾರ ಕಳೆದುಕೊಳ್ಳುವ ಸೂಚನೆ ಲಭ್ಯವಾಗಿದೆ.
ಚುನಾವಣಾ ಆಯೋಗದ ಸದ್ಯದ ( ಡಿ.3ರ ಮಧ್ಯಾಹ್ನ 2 ) ಮಾಹಿತಿ ಪ್ರಕಾರ, ಕಾಂಗ್ರೆಸ್ 65, ಬಿಆರ್‌ಎಸ್ 41, ಬಿಜೆಪಿ 8, ಎಐಎಂಐಎಂ 6, ಸಿಪಿಐ 1ರಲ್ಲಿ ಮುನ್ನಡೆ ಸಾಧಿಸಿವೆ. ವಯಸ್ಸಿನಲ್ಲಿ ಭಾರತದ ಅತಿ ಕಿರಿಯ ರಾಜ್ಯವಾಗಿರುವ ತೆಲಂಗಾಣದಲ್ಲಿ ಕಳೆದ 10 ವರ್ಷಗಳಿಂದ ಕೆ ಚಂದ್ರಶೇಖರ್ ರಾವ್ ನೇತೃತ್ವದ ಪಕ್ಷ ಆಡಳಿತ ನಡೆಸಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಪುಟಿದೇಳುವಂತೆ ಮಾಡಿದ 6 ಅಂಶಗಳು
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲಿ ಪುಟಿದೇಳುವಂತೆ ಮಾಡಿದ 6 ಅಂಶಗಳು ಇವು
1. ಕೆ ಚಂದ್ರಶೇಖರ್ ರಾವ್ ವಿರುದ್ಧದ ಮತಗಳು ಕಾಂಗ್ರೆಸ್‌ಗೆ
ಮುಖ್ಯಮಂತ್ರಿ ಕೆ ಚಂದ್ರ ಶೇಖರ ರಾವ್ ಮತ್ತು ಅವರ ಸರ್ಕಾರದ ವಿರುದ್ಧ ಜನರ ನಡುವೆ ಇದ್ದ ವಿರೋಧ ಭಾವನೆಯನ್ನು ಕಾಂಗ್ರೆಸ್ ತನ್ನೆಡೆಗೆ ಆಕರ್ಷಿಸಿತು. ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳ ಮತದಾರರನ್ನು ಓಲೈಸುವಲ್ಲಿ ಕಾಂಗ್ರೆಸ್ ಯಶಸ್ಸು ಸಾಧಿಸಿದೆ. ಈ ಎರಡೂ ಪ್ರದೇಶಗಳು ಬಿಆರ್‌ಎಸ್ ಹಿಡಿತದಲ್ಲಿತ್ತು.
2. ಕಾಂಗ್ರೆಸ್ ಪಕ್ಷದ 6 ಗ್ಯಾರೆಂಟಿಗಳು
ಕರ್ನಾಟಕ ಮಾದರಿಯಲ್ಲೇ ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲಿ ಪ್ರಚಾರದ ವೇಳೆ 6 ಗ್ಯಾರೆಂಟಿಗಳನ್ನ ಘೋಷಿಸಿತು. ಮಹಾಲಕ್ಷ್ಮಿ - ಮಹಿಳೆಯರ ಯೋಗಕ್ಷೇಮ ಯೋಜನೆ, ರೈತು ಭರೋಸಾ - ಕೃಷಿಕರು ಮತ್ತು ಕೃಷಿ ಕಾರ್ಮಿಕರ ಯೋಗಕ್ಷೇಮ ಯೋಜನೆ, ಇಂದಿರಮ್ಮ - ಬಡ ಜನರಿಗೆ ಕಡಿಮೆ ದರದ ವಸತಿ ಸೌಲಭ್ಯ, ಗೃಹ ಜ್ಯೋತಿ- ವಿದ್ಯುತ್ ಬಿಲ್ ಸಬ್ಸಿಡಿ, ಯುವ ವಿಕಾಸಂ - ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣಕ್ಕೆ ನೆರವು, ಚೆಯುತ- ಆರೋಗ್ಯ ವಿಮೆ ಮತ್ತು ಪಿಂಚಣಿ ಯೋಜನೆ. ಇವು ದಲಿತರು ಮತ್ತು ಇತರೆ ಹಿಂದುಳಿದ ವರ್ಗಗಳ ಮತದಾರರನ್ನು ಸೆಳೆವಲ್ಲಿ ಯಶಸ್ವಿ.
3. ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್‌ಗೆ
ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಓಲೈಸುವಲ್ಲಿ ಕೂಡ ಸಫಲವಾಗಿದೆ. ಕರ್ನಾಟಕ ಮಾದರಿ ಮುಂದಿಟ್ಟುಕೊಂಡು ತೆಲಂಗಾಣದಲ್ಲಿ ಪ್ರಚಾರ ಮಾಡಿದ್ದು ಫಲ ಕೊಟ್ಟಿದೆ. ಇಲ್ಲಿ ಎಐಎಂಐಎಂ ನಷ್ಟ ಅನುಭವಿಸಿದ್ದು, ಪ್ರಯೋಜನ ಕಾಂಗ್ರೆಸ್‌ಗೆ ಆಗಿದೆ.
4. ಬಿಜೆಪಿ ನಾಯಕತ್ವ ದುರ್ಬಲ
ಕರ್ನಾಟಕದ ಮಾದರಿಯಲ್ಲೇ ತೆಲಂಗಾಣದಲ್ಲಿ ಬಿಜೆಪಿಯ ನಾಯಕತ್ವ ಬಹಳ ದುರ್ಬಲವಾಗಿದೆ. ಬಿಜೆಪಿ ಇಲ್ಲಿ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದ ಬಂಡಿ ಸಂಜಯ್ ಅವರನ್ನು ಅಲ್ಲಿಂದ ಕೆಳಕ್ಕೆ ಇಳಿಸಿ, ಕೇಂದ್ರ ಸಚಿವರಾಗಿದ್ದ ಜಿ. ಕಿಶನ್ ರೆಡ್ಡಿ ಅವರನ್ನು ನೇಮಕಮಾಡಿತ್ತು. ಈ ಪ್ರಕ್ರಿಯೆ ಇದೇ ವರ್ಷ ಜುಲೈನಲ್ಲಿ ಆಗಿತ್ತು. ಕರ್ನಾಟಕಲ್ಲಿ ಇಂತಹ ಪ್ರಯೋಗವನ್ನು ಮಾಡಿಲ್ಲ. ನಳಿನ್ ಕುಮಾರ್ ಕಟೀಲ್ ಅವರನ್ನೇ ಮುಂದುವರಿಸಲಾಗಿತ್ತು. ತೆಲಂಗಾಣದಲ್ಲಿ ಬಿಜೆಪಿ ಮಾಡಿದ ಪ್ರಯೋಗ ಹೆಚ್ಚು ಸಫಲವಾಗಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ವರದಾನವಾಯಿತು.
5. ಕೆಸಿಆರ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಪಾತ್ರ
ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅಂದರೆ ಜುಲೈ - ನವೆಂಬರ್ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಕೆ.ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿತು. ಅಷ್ಟೇ ಅಲ್ಲ, ಯೋಜನೆ ಅನುಷ್ಠಾನ ಮಾಡುತ್ತಿಲ್ಲ ಎಂದು ಆರೋಪಿಸಿತು. ಈ ಭ್ರಷ್ಟಾಚಾರದ ಆರೋಪಗಳು ಬಿಆರ್‌ಎಸ್ ನಾಯಕರ ಬಾಯಿ ಮುಚ್ಚಿಸಿತು.
6. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಪ್ರಚಾರ
ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಸುನಿಲ್ ಕನುಗೋಲು ಅವರ ಮೊರೆ ಹೋಗಿತ್ತು. ಸುನಿಲ್ ಮತ್ತು ಅವರ ತಂಡ, ಆನ್‌ಲೈನ್ ಪ್ರಚಾರ ಅಭಿಯಾನ ಚುರುಕಾಗಿರುವಂತೆ ನೋಡಿಕೊಂಡಿತ್ತು. ವೀಡಿಯೊ, ಮೀಮ್ , ಜಿಐಎಫ್ ಮತ್ತು ಪೋಸ್ಟರ್‌ಗಳ ಮೇಲೆ ಕೇಂದ್ರೀಕರಿಸಿದ ಆನ್‌ಲೈನ್ ಅಭಿಯಾನದೊಂದಿಗೆ ಅಧಿಕಾರ ವಿರೋಧಿ ಅಂಶದ ಲಾಭವನ್ನು ಪಡೆಯುವ ಪ್ರಯತ್ನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆರವಾಗಿದೆ.