ಕನ್ನಡ ಸುದ್ದಿ  /  ಜೀವನಶೈಲಿ  /  ಕ್ರಿಕೆಟ್ ಅಭಿಮಾನ ಅಪ್ಪ-ಅಮ್ಮನಿಗೆ ಸಮಸ್ಯೆ ಆಗಬೇಕೆ? ಮಕ್ಕಳ ಮನಸ್ಸು ಅರ್ಥ ಮಾಡಿಕೊಳ್ಳಲು ಬಯಸುವ ಪೋಷಕರು ತಿಳಿಯಬೇಕಾದ ವಿಚಾರಗಳಿವು -ಮನದ ಮಾತು

ಕ್ರಿಕೆಟ್ ಅಭಿಮಾನ ಅಪ್ಪ-ಅಮ್ಮನಿಗೆ ಸಮಸ್ಯೆ ಆಗಬೇಕೆ? ಮಕ್ಕಳ ಮನಸ್ಸು ಅರ್ಥ ಮಾಡಿಕೊಳ್ಳಲು ಬಯಸುವ ಪೋಷಕರು ತಿಳಿಯಬೇಕಾದ ವಿಚಾರಗಳಿವು -ಮನದ ಮಾತು

ಈ ಪ್ರವೃತ್ತಿಯು ಗಟ್ಟಿಯಾದಷ್ಟು ಅಭಿಮಾನಿಯು ತನ್ನನ್ನು ತಾನು 'ನಿಷ್ಠಾವಂತ' ಅಭಿಮಾನಿ (loyal fan) ಎಂದು ಪರಿಗಣಿಸುವ ಹಂತಕ್ಕೆ ಮುಟ್ಟುತ್ತಾನೆ. ತಾನು ಅಭಿಯಾನಿಯಾದ ಕಾರಣಗಳನ್ನು ಸಮರ್ಥಿಸಿಕೊಳ್ಳುತ್ತಾನೆ. ನಾನು ಇಂಥವರ ಅಭಿಮಾನಿಯೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾನೆ. ಮತ್ತು ಇತರರನ್ನು ಸಹ ತನ್ನ ಅಭಿಮಾನದ ಬಳಗಕ್ಕೆ ಸೇರಲು ಪ್ರಚೋದಿಸುತ್ತಾನೆ.

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಪ್ರಶ್ನೆ: ನನಗೆ ಈಗ 15 ವರ್ಷ ವಯಸ್ಸು. ನಾನು ಕ್ರಿಕ್ರೆಟ್ ಪಟುಗಳ ಕಟ್ಟಾಭಿಮಾನಿ. ನಮ್ಮ ಮನೆಯ ರೂಮಿನ ಗೋಡೆಗಳು, ಪುಸ್ತಕ, ಮೊಬೈಲುಗಳ ತುಂಬ ಇವರ ಫೋಟೊಗಳೇ ಇವೆ. ಎದ್ದ ತಕ್ಷಣ, ಮತ್ತು ಮಲಗುವ ಮುನ್ನ ಇವರ ಮುಖ ನೋಡಲೇಬೇಕು. ಇಲ್ಲದಿದ್ದರೆ ದಿನ ಸಾರ್ಥಕವೆನ್ನಿಸುವುದಿಲ್ಲ. ಪ್ರತಿಯೊಂದು ಕ್ರಿಕೆಟ್ ಮ್ಯಾಚ್ ತಪ್ಪದೇ ನೋಡುತ್ತೇನೆ. ಬೇರೆ ಚಟುವಟಿಕೆಗಳಲ್ಲಿ ಆಸಕ್ತಿಯಿಲ್ಲ. ಅವರ ಉಡುಗೆ ತೊಡುಗೆಗಳು, ಜೀವನಶೈಲಿ, ಅವರು ಬಳಕೆ ಮಾಡುವ ಎಲ್ಲಾ ವಸ್ತುಗಳನ್ನು ಬಳಸಬೇಕೆಂದು ಪ್ರಯತ್ನಿಸುತ್ತೇನೆ. ಅವರಂತೆ ನಾನೂ ಆಗಬೇಕು ಎನ್ನುವ ಆಸೆಯಿದೆ. ನಮ್ಮ ಪೋಷಕರಿಗೆ ಇದು ಅರ್ಥವಾಗುವುದಿಲ್ಲ, ಇಷ್ಟವಾಗುವುದಿಲ್ಲ. ಅವರು ಸದಾ ಬೈಯುತ್ತಾರೆ. ನನ್ನದೇನು ತಪ್ಪು? ಮನೆಯಲ್ಲಿ ಈ ವಿಚಾರಕ್ಕೆ ಹೆಚ್ಚು ಘರ್ಷಣೆಗಳು ಉಂಟಾಗುತ್ತವೆ. ಮನಸ್ಸಿಗೆ ಬಹಳ ನೋವಾಗಿದೆ. ನಾನು ನಿಜಕ್ಕೂ ತಪ್ಪು ಮಾಡುತ್ತಿದ್ದಾನಾ? ಈ ಪರಿಸ್ಥಿತಿಯಿಂದ ಹೊರಗೆ ಬರುವುದು ಹೇಗೆ? ದಯವಿಟ್ಟು ಉತ್ತರಿಸಿ. -ಜ್ಞಾನೇಶ್, ಹುಬ್ಬಳ್ಳಿ

ಉತ್ತರ: ನೀವು ಪ್ರಶ್ನೆ ಕೇಳಿರುವ ರೀತಿ ಚೆನ್ನಾಗಿದೆ. ಈ ಪ್ರಶ್ನೆ ಓದಿದಾಗಲೇ ಉತ್ತರಿಸಬೇಕು ಎಂದುಕೊಂಡೆ. ನಿಮ್ಮ ಪ್ರಶ್ನೆ ಓದಿದಾಗ ನಿಮ್ಮ ಬರಹದಲ್ಲಿ ನೋವಿರುವುದು, ನಿಮ್ಮಲ್ಲಿ ಗೊಂದಲ ಇರುವುದು ಅರಿವಾಯಿತು. ಒಂದು ಕಡೆ ಕ್ರಿಕೆಟ್ ಪಟುಗಳ ಮೇಲೆ ನಿಮ್ಮ ಅತಿಯಾದ ಅಭಿಮಾನ, ಇನ್ನೊಂದು ಕಡೆ ಈ ವಿಷಯದ ಕುರಿತು ನಿಮ್ಮ ಪೋಷಕರ ವಿರೋಧ. ನಿಮ್ಮ ಪೋಷಕರಿಗೆ ಹೇಗೆ ಮನವರಿಕೆ ಮಾಡಿಕೊಡುವುದು? ನಿಮ್ಮ ಮನಸ್ಸನ್ನು ಯಾಕೆ ಅವರು ಅರ್ಥಮಾಡಿಕೊಳ್ಳುತ್ತಿಲ್ಲ? ನಿಮ್ಮ ಅಭಿಮಾನವನ್ನು ವ್ಯಕ್ತಪಡಿಸುವುದು ತಪ್ಪೇ? ಈ ಸಮಸ್ಯೆಯನ್ನು ಹೇಗೆ ಸರಿಪಡಿಸುವುದು ಎಂಬ ಚಿಂತೆಯಿಂದ ಗೊಂದಲಕ್ಕೆ ಈಡಾಗಿದ್ದೀರಿ? ಮನೆಯಲ್ಲಾಗುವ ಜಗಳಗಳಿಂದ ನಿಮಗೆ ಬಹಳ ನೋವಾದಂತಿದೆ.

ಇದರಲ್ಲಿ ನಿಮ್ಮ ಸರಿ-ತಪ್ಪುಗಳನ್ನು ಅರಿಯುವ ಮೊದಲು ನಿಮ್ಮ ಅಭಿಮಾನಕ್ಕೆ ಕಾರಣಗಳೇನೆಂದು ತಿಳಿದುಕೊಳ್ಳಿ. ನಿಧಾನವಾಗಿ ಸರಿ-ತಪ್ಪುಗಳ ಕುರಿತು ಯೋಚಿಸಿ. ವಯಸ್ಸಿಗೆ ಬಂದ ಮಕ್ಕಳು ಸಾಮಾನ್ಯವಾಗಿ ಸೆಲೆಬ್ರೆಟಿಗಳ (ಕ್ರೀಡಪಟುಗಳ, ಗಾಯಕರ, ಸಿನಿಮಾ ನಟರ, ರಾಜಾಕಾರಣಿಗಳ ಇತ್ಯಾದಿ) ಅಭಿಮಾನಿಗಳಾಗುವುದು ಸಹಜ. ಸೆಲೆಬ್ರೆಟಿಗಳನ್ನೇ ಅನುಕರಿಸುವುದು, ಅವರನ್ನೇ ಆದರ್ಶವಾಗಿಟ್ಟುಕೊಂಡು ಸ್ಫೂರ್ತಿ ಪಡೆಯುವುದು ಸರ್ವೇ ಸಾಮಾನ್ಯ.

ಟ್ರೆಂಡಿಂಗ್​ ಸುದ್ದಿ

ನಾವೇಕೆ ಯಾರಿಗಾದರೂ ಅಭಿಮಾನಿಗಳಾಗುತ್ತೇವೆ

ಅಭಿಮಾನಿಗಳು (ಫ್ಯಾನ್‌ಡಮ್‌ಗಳು) ತಮ್ಮ ಮೆಚ್ಚಿನ ಸೆಲೆಬ್ರಿಟಿಗಳೊಂದಿಗೆ ಹೆಚ್ಚಿನ ಮಾನಸಿಕವಾದ ನಂಟು ಬೆಳೆಸಿಕೊಳ್ಳುತ್ತಾರೆ. ತಮ್ಮ ವ್ಯಕ್ತಿತ್ವಕ್ಕೆ ಹೊಂದಿಕೊಳ್ಳುವಂತಹ ಬಹುತೇಕ ಅಂಶಗಳನ್ನು ಸೆಲೆಬ್ರಿಟಿಗಳಲ್ಲಿ ಕಂಡುಕೊಳ್ಳುತ್ತಾರೆ. ತಮ್ಮನ್ನು ತಾವು ಅವರಲ್ಲಿ ಗುರುತಿಸಿಕೊಳ್ಳುತ್ತಾರೆ. ತಮ್ಮ ಆಸೆ, ಆಕಾಂಕ್ಷೆ ಕನಸುಗಳನ್ನು ತಾರೆಯರಲ್ಲಿ ಕಾಣುತ್ತಾರೆ. ವ್ಯಕ್ತಿತ್ವದಲ್ಲಿ ಸಾಮ್ಯತೆ, ಒಂದೇ ರೀತಿಯ ಆಸಕ್ತಿ, ಪ್ರತಿಭೆ, ತಾವು ಅಪೇಕ್ಷಿಸುವಂತಹ ಆಕರ್ಷಣೀಯ ದೈಹಿಕ ಸೌಂದರ್ಯ... ಹೀಗೆ ಹಲವು ಕಾರಣಗಳಿಂದ ತಮ್ಮ ವ್ಯಕ್ತಿತ್ವಕ್ಕೆ ಹೊಂದುವ ಮತ್ತು ಮನಸ್ಸಿಗೆ ಮೆಚ್ಚುಗೆಯಾಗುವಂತಹ ಸೆಲೆಬ್ರಿಟಿಗಳನ್ನು ಹೆಮ್ಮೆಯಿಂದ ಆಯ್ಕೆ ಮಾಡುತ್ತಾರೆ.

ನಂತರ ಎಲ್ಲಾ ಅಭಿಮಾನಿಗಳು ಒಗ್ಗೂಡಿ ತಮ್ಮಲ್ಲಿರುವ ಒಂದೇ ರೀತೀಯ ಅಭಿಮಾನವನ್ನು ವ್ಯಕ್ತಪಡಿಸಿ, ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತಾರೆ. ಹಾಗೆಯೇ, ತಾವೆಲ್ಲರೂ ಆ ಅಭಿಮಾನಿಗಳ ಗುಂಪಿಗೆ ಸೇರಿದವರು ಎನ್ನುವ ತೃಪ್ತಿಯೂ ಇವರದ್ದಾಗಿರುತ್ತದೆ. ತಮ್ಮ ಇಷ್ಟದ ಸೆಲೆಬ್ರಿಟಿಯಿಂದ ಸ್ಫೂರ್ತಿ ಪಡೆಯುವುದಲ್ಲದೆ, ಅಭಿಮಾನಿಗಳು ತಮ್ಮ ಮನರಂಜನೆಯನ್ನು ಸಹ ಉಳಿದ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಾರೆ. ಹೀಗೆ ಹಲವು ಕಾರಣಗಳಿಂದ ತಮ್ಮ ಅಭಿಮಾನ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ.

ಈ ಪ್ರವೃತ್ತಿಯು ಗಟ್ಟಿಯಾದಷ್ಟು ಅಭಿಮಾನಿಯು ತನ್ನನ್ನು ತಾನು 'ನಿಷ್ಠಾವಂತ' ಅಭಿಮಾನಿ (loyal fan) ಎಂದು ಪರಿಗಣಿಸುವ ಹಂತಕ್ಕೆ ಮುಟ್ಟುತ್ತಾನೆ. ತಾನು ಅಭಿಯಾನಿಯಾದ ಕಾರಣಗಳನ್ನು ಸಮರ್ಥಿಸಿಕೊಳ್ಳುತ್ತಾನೆ. ನಾನು ಇಂಥವರ ಅಭಿಮಾನಿಯೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾನೆ. ಮತ್ತು ಇತರರನ್ನು ಸಹ ತನ್ನ ಅಭಿಮಾನದ ಬಳಗಕ್ಕೆ ಸೇರಲು ಪ್ರಚೋದಿಸುತ್ತಾನೆ.

ಅಂಧಾಭಿಮಾನದ ದುಷ್ಪರಿಣಾಮಗಳು

ತಮ್ಮ ಅಭಿಮಾನವನ್ನು ಸುತ್ತಲಿರುವ ಜನಗಳು ಅರ್ಥಮಾಡಿಕೊಳ್ಳದಿದ್ದರೆ, ವಿರೋಧಿಸಿದರೆ ಬೇಸರಗೊಂಡು ರೊಚ್ಚಿಗೆೇಳುವ ಸಾಧ್ಯತೆ ಹೆಚ್ಚು. ಭಾವೋದ್ರೇಕವಾಗಿ ಸ್ವಯಂ ಹಾನಿ ಮಾಡಿಕೊಳ್ಳಬಹುದು ಅಥವಾ ಬೇರೆಯವರಿಗೆ ಅಪಾಯ ಮಾಡಬಹುದು. ಕೆಲ ಅಭಿಮಾನಗಳು 'ಕುರುಡು ಅಭಿಮಾನ' ಸಹ ಹೊಂದಬಹುದು. ಕೆಲವು ಅಭಿಮಾನಿಗಳು ತಮ್ಮ ಅಚ್ಚುಮೆಚ್ಚಿನ ಸೆಲೆಬ್ರಿಟಿಯ ಬಗ್ಗೆ ಮೋಹವನ್ನು ಬೆಳೆಸಿಕೊಂಡು ಅವರನ್ನು ತನ್ನ ಸ್ವಾಧಿನಕ್ಕೆ (possessive) ತೆಗೆದುಕೊಳ್ಳುವ ಪ್ರಯತ್ನವನ್ನು ಸಹ ಮಾಡಬಹುದು. ಇದು ಅಪಾಯದ ಸೂಚನೆ. ಸೆಲೆಬ್ರಿಟಿಯನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಲು ಅಭಿಮಾನಿಯು ಯಾವ ಹಂತಕ್ಕೂ ಹೋಗಬಹುದು. ತನಗೂ ಅಪಾಯ ಮಾಡಿಕೊಂಡು, ಸೆಲೆಬ್ರಿಟಿಗೂ ಹಾನಿಯನ್ನು ಮಾಡಬಹುದು.

ಕೆಲವರು ತಮ್ಮ ಮೆಚ್ಚಿನ ಸೆಲೆಬ್ರಿಟಿಯಿಂದ ಎಷ್ಟು ಪ್ರಭಾವಗೊಳಗಾಗಿರುತ್ತಾರೆ ಎಂದರೆ, ಸೆಲೆಬ್ರಿಟಿಯು ತಮ್ಮ ಬದುಕಿನಲ್ಲಿ ಇಡುವ ಪ್ರತಿ ಹೆಜ್ಜೆಯನ್ನೂ ಕೂಡ ಅನುಸರಿಸುತ್ತಾರೆ. ಅವರಂತೆ ಕಾಣಲು, ಮಾತಾನಾಡಲು, ಗುಣಗಳನ್ನು ಅನುಕರಣೆ ಮಾಡಲು ಸತತ ಪ್ರಯತ್ನ ಮಾಡುತ್ತಾರೆ. ಇದರ ನಡುವೆ ತನ್ನತನವನ್ನು ಕಳೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ಸ್ವ ಅರಿವಿನ ಕೊರತೆಯೂ ಬಹಳಷ್ಟಿರುತ್ತದೆ. ಅದು ತಪ್ಪೋ ಅಥವಾ ಸರಿಯೋ, ತನ್ನ ಬದುಕಿಗೆ ಅದು ಸಮಂಜಸವಾಗೆದೆಯೋ ಇಲ್ಲವೋ ಎನ್ನುವ ವಿಶ್ಲೇಷಣೆ ಮಾಡುವ ವಿವೇಕ ಮತ್ತು ಸಂಯಮವನ್ನು ಕಳೆದುಕೊಂಡಿರುತ್ತಾರೆ. ಇದಕ್ಕೆ ಕಾರಣ ತಾವು ಮೆಚ್ಚಿರುವಂತಹ ಸೆಲಿಬ್ರಿಟಿಯ ಮೇಲಿಟ್ಟಿರುವ ಅತಿಯಾದ ನಂಬಿಕೆ ಮತ್ತು ಮೋಹ. ಅಭಿಮಾನಿಗಳು ತಮ್ಮನ್ನು ತಾವು ಸೆಲೆಬ್ರಿಟಿಗಳಲ್ಲಿ ಗುರುತಿಸಿಕೊಂಡಿರುತ್ತಾರೆ, ಹೀಗಾಗಿ ಸೆಲೆಬ್ರಿಟಿಯ ವಿರುದ್ಧ ಯಾವುದೇ ಕಳಂಕ ಅಸಹನೆ ಆರೋಪ ವ್ಯಕ್ತಪಡಿಸಿದರೆ ಸಹಿಸುವ ಶಕ್ತಿಯನ್ನು ಕಳೆದುಕೊಂಡು, ತಮಗೆ ಆಗಿರುವ ಕಳಂಕವೆಂಬಂತೆ ವರ್ತಿಸುತ್ತಾರೆ.

ಕೆಲವೊಮ್ಮೆ ಅತಿಯಾದ ಅಭಿಮಾನದಿಂದ ಖಿನ್ನತೆ ಮತ್ತು ಆತಂಕದ ಲಕ್ಷಣಗಳು ಸಹ ಕಂಡುಬರುತ್ತದೆ. ಆ ವ್ಯಕ್ತಿಯಂತೆ ನಾನು ಸಹ ಕಾಣಬೇಕು, ನನ್ನ ದೇಹ ಸೌಂದಯ೯ ಮತ್ತು ಉಡುಗೆ-ತೊಡುಗೆಗಳೆಲ್ಲವೂ ಸಹ ನಾನು ಇಷ್ಪಡುವ ಸೆಲೆಬ್ರಿಟಿಯಂತೆ ಇರಬೇಕು. ಅವರು ನನ್ನವರು, ಅವರಿಗೆ ತೆೊಂದರೆಯಾಗಬಾರದು... ಹೀಗೆ ಅಸಹಜವಾದ ಆಸೆ ಆಕಾಂಕ್ಷೆಗಳಿಂದ ಆತಂಕ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳನ್ನು ಉಂಟು ಮಾಡಬಹುದು.

ಈ ನೀವು ಕೇಳಿರುವ ನಿರ್ದಿಷ್ಟ ಪ್ರಶ್ನೆಯ ಬಗ್ಗೆ ವಿಚಾರ ಮಾಡೋಣ

ಕೆಲವು ಕ್ರೀಡೆಗಳು, ಚಲನಚಿತ್ರಗಳು ಅಥವಾ ಕಲಾವಿದರ ಬಗ್ಗೆ ಉತ್ಸಾಹವಿಲ್ಲದ ಇತರರಿಗೆ ಫ್ಯಾನ್‌ಡಮ್ ಸಂಸ್ಕೃತಿಯು ಗೊಂದಲಕ್ಕೊಳಗಾಗಬಹುದು.

ನಿಮ್ಮ ಪೋಷಕರಿಗೂ ಸಹಿತ ಸೆಲೆಬ್ರಿಟಿಗಳ ಬಗ್ಗೆ ನಿರಾಸಕ್ತಿ ಇರಬಹುದು ಅಥವಾ ಆಸಕ್ತಿಯಿದ್ದರೂ ಅದರ ವಿಪರೀತ ಅಭಿಮಾನದಿಂದಾಗುವ ದುಷ್ಪರಿಣಾಮಗಳನ್ನು ಅರಿತು ನಿಮ್ಮ 'ಅಭಿಮಾನಿ' ಪ್ರವೃತಿಯನ್ನು ಖಂಡಿಸುತ್ತಿರಬಹುದು. ವಾದ ವಿವಾದಗಳಿಗೆ ಪ್ರಾಶಸ್ತ್ಯ ಕೊಡದೆ ಒಮ್ಮೆ ಪೋಷಕರ ಬಳಿ ಸಂಯದಿಂದ ಗೌರವದಿಂದ ನಿಮ್ಮ ಆಸಕ್ತಿಗಳ ಕುರಿತು ವಿವರಿಸಿ. ಒಂದು ವೇಳೆ ನಿಮ್ಮ 'ಅಭಿಮಾನಿ' ಪ್ರವೃತ್ತಿಯು ಸ್ಫೂರ್ತಿ, ಮತ್ತು ಮನರಂಜನೆ ಅಥವಾ ಪ್ರಾಮಾಣಿಕ ಪ್ರೋತ್ಸಾಹವಾಗಿದ್ದು, ಮಿತಿಮೀರದ, ಹಾನಿಕಾರಕವಲ್ಲದ ಅಭಿಮಾನವಾಗಿದ್ದರೆ, ಪೋಷಕರಿಗೆ ಇದರ ಕುರಿತು ಮನವೊಲಿಸಿ. ಸ್ಪಷ್ಟತೆ ದೊರೆತ ಮೇಲೆ ಖಂಡಿತವಾಗಿಯೂ ಅವರು ಬದಲಾಗುವ ಸಾಧ್ಯತೆ ಇರುತ್ತದೆ.

ಫ್ಯಾನ್‌ಗಳಾಗಿರುವ ಮಕ್ಕಳ ಪೋಷಕರು ಅರ್ಥ ಮಾಡಿಕೊಳ್ಳಬೇಕಾದ ವಿಚಾರಗಳಿವು

ಈ ಬರಹವನ್ನು ನೀನು ಓದಿ ಅರ್ಥ ಮಾಡಿಕೊಳ್ಳುವುದರ ಜೊತೆಗೆ ನಿನ್ನ ಪೋಷಕರಿಗೂ ಓದಿಸು. ಹಲವು ಸೆಲೆಬ್ರಿಟಿಗಳಿಂದ ಮಕ್ಕಳು ಸ್ಫೂರ್ತಿ ಪಡೆಯುವುದುಂಟು. ಹಾಗೆಂದು ಅವರನ್ನು ಚಾಚೂತಪ್ಪದೇ ಅನುಕರಣೆ ಮಾಡುವುದು ಎಷ್ಟರಮಟ್ಚಿಗೆ ಸರಿ ಎನ್ನುವುದನ್ನು ವಿಮರ್ಶೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಮಕ್ಕಳಿಗೆ ಬಡಿ. ಉದಾ: ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್ ಆಟವಾಡುವ ರೀತಿ, ಶೈಲಿ, ಆಟದ ತಂತ್ರಗಳನ್ನು ಮಾದರಿಯಾಗಿಟ್ಟುಕೊಂಡು ಅನುಕರಣೆ ಮಾಡಿದರೆ ಸಹಾಯವಾಗುತ್ತದೆ. ಅದು ಸರಿಯೂ ಹೌದು. ಆದರೆ ತೆಂಡೂಲ್ಕರ್‌ ಅವರ ವೈಯಕ್ತಿಕ ಜೀವನ, ಅವರು ಬೆಳೆದು ಬಂದ ರೀತಿ, ಬಾಲ್ಯ, ಅವರ ವೈಯಕ್ತಿಕ ಆಯ್ಕೆಗಳನ್ನು ಅನುಸರಿಸುವುದು ಸರಿಯೇ? ನಿನ್ನ ಬದುಕಿಗೆ ಇದು ಸಹಾಯಕವಾಗುತ್ತದೆಯೇ? ಇದು ನಿನಗೆ ಆದರ್ಶವೇ ಎನ್ನುವ ಪ್ರಶ್ನೆಗಳನ್ನು ಕೇಳಿ.

ಮಕ್ಕಳು ಇಷ್ಟಪಡುವ, ಆದರ್ಶ ಎಂದುಕೊಳ್ಳುವ ಸೆಲೆಬ್ರಿಟಿಗಳ ಬಗ್ಗೆ ಹೀನಾಯವಾಗಿ ಮಾತನಾಡಬೇಡಿ. ಅವರ ಆಸಕ್ತಿಗಳನ್ನು ಅರ್ಥ ಮಾಡಿಕೊಳ್ಳಿ, ಸರಿತಪ್ಪುಗಳನ್ನು ಸಮಾಧಾನವಾಗಿ ಅರ್ಥ ಮಾಡಿಸಿ.

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.