ಕನ್ನಡ ಸುದ್ದಿ  /  Lifestyle  /  Skin Care Tips Period Rash Home Remedies For Pad Rashes Apple Cider Vinegar Coconut Oil Neem Leaves Kannada News Rst

Period Rash: ಮುಟ್ಟಿನ ದಿನಗಳಲ್ಲಿ ಪ್ಯಾಡ್‌ ಧರಿಸುವುದರಿಂದ ನವೆ, ದದ್ದು ಉಂಟಾಗುತ್ತಿದೆಯೆ? ಪರಿಹಾರಕ್ಕೆ ಇಲ್ಲಿದೆ ಮನೆಮದ್ದು

ಮುಟ್ಟಿನ ದಿನಗಳಲ್ಲಿ ಪ್ಯಾಡ್‌ ಧರಿಸುವುದರಿಂದ ನವೆ, ತುರಿಕೆ, ದದ್ದು, ಕೆಂಪಾಗುವುದು, ಊತ ಕಾಣಿಸುವುದು ಸಾಮಾನ್ಯ. ಬೇಸಿಗೆಯಲ್ಲಿ ಅತಿಯಾದ ಬೆವರಿನ ಕಾರಣದಿಂದ ದದ್ದು ಹೆಚ್ಚಾಗುತ್ತದೆ. ಆದರೆ ಸುಲಭ ಮನೆಮದ್ದುಗಳಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಪ್ಯಾಡ್‌ನ ದದ್ದು ನಿವಾರಣೆಗೆ ಇಲ್ಲಿದೆ ಮನೆಮದ್ದು.

ಪ್ಯಾಡ್‌ನ ದದ್ದು ನಿವಾರಣೆಗೆ ಇಲ್ಲಿದೆ ಮನೆಮದ್ದು
ಪ್ಯಾಡ್‌ನ ದದ್ದು ನಿವಾರಣೆಗೆ ಇಲ್ಲಿದೆ ಮನೆಮದ್ದು

ಮುಟ್ಟಿನ ದಿನಗಳು ಹೆಣ್ಣುಮಕ್ಕಳಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಆ ದಿನಗಳಲ್ಲಿ ಕಿರಿಕಿರಿ, ಅಹಿತಕರ ಭಾವನೆ ಮಹಿಳೆಯರನ್ನು ಕಾಡುವುದು ಸಾಮಾನ್ಯ. ಮುಟ್ಟಿನ ಮೂರ್ನಾಲ್ಕು ದಿನಗಳು ಹೆಣ್ಣುಮಕ್ಕಳ ದೇಹ ಹಾಗೂ ಚರ್ಮದಲ್ಲಿ ಹಲವು ಸಮಸ್ಯೆಗಳು ಉಂಟಾಗುತ್ತವೆ. ಅವುಗಳಲ್ಲಿ ಪ್ರಮುಖ ಸಮಸ್ಯೆ ಚರ್ಮದ ದದ್ದು.

ನಿರಂತರವಾಗಿ ಪ್ಯಾಡ್‌ ಧರಿಸುವುದರಿಂದ ಚರ್ಮದಲ್ಲಿ ದದ್ದು ಉಂಟಾಗುತ್ತದೆ. ಬೇಸಿಗೆಯಲ್ಲಿ ಚರ್ಮದ ದದ್ದು ಉಂಟಾಗುವುದು ಹೆಚ್ಚು. ಪ್ಯಾಡ್‌ನಲ್ಲಿರುವ ರಾಸಾಯನಿಕ ಅಂಶವು ಚರ್ಮದ ಕಿರಿಕಿರಿಗೆ ಕಾರಣವಾಗಬಹುದು. ಇದು ಗುಪ್ತಾಂಗದ ನವೆಗೂ ಕಾರಣವಾಗಬಹುದು. ಇವು ಯೋನಿ ಹಾಗೂ ಒಳತೊಡೆಯ ಸುತ್ತಲಿನ ಚರ್ಮವನ್ನು ಕೆರಳಿಸುತ್ತವೆ. ಚಾಫಿಂಗ್‌ ಮತ್ತು ತೇವಾಂಶಗಳು ಪ್ಯಾಡ್‌ನಿಂದಾಗುವ ದದ್ದುಗಳಿಗೆ ಕಾರಣವಾಗುತ್ತದೆ. ಇದರ ನಿವಾರಣೆಗೆ ಹತ್ತಿಯ ಪ್ಯಾಡ್‌ ಬಳಸಬಹುದು ಅಥವಾ ನಿಮ್ಮ ಚರ್ಮಕ್ಕೆ ಹೊಂದುವ ಬ್ರ್ಯಾಂಡ್‌ನ ಪ್ಯಾಡ್‌ ಧರಿಸಬಹುದು. ಪ್ಯಾಡ್‌ ಬದಲಿಸುವ ಸಮಯದಲ್ಲಿ ಕೈಗಳು ಸ್ವಚ್ಛವಾಗಿರುವುದು ಬಹಳ ಮುಖ್ಯ.

ಮುಟ್ಟಿನ ಸಮಯದಲ್ಲಿ ಪ್ಯಾಡ್‌ನಿಂದಾಗುವ ದದ್ದು ನಿವಾರಣೆಗೆ ಮನೆಮದ್ದುಗಳು ಹೀಗಿವೆ:

ಆಪಲ್‌ ಸೀಡರ್‌ ವಿನೆಗರ್‌

ಆಪಲ್‌ ಸೀಡರ್‌ ವಿನೆಗರ್‌ ಬಳಕೆಯಿಂದ ತುರಿಕೆ ಕಡಿಮೆಯಾಗುತ್ತದೆ. ಒಂದು ಸಣ್ಣ ಹತ್ತಿ ಉಂಡೆಯಲ್ಲಿ ಆಪಲ್‌ ಸೀಡರ್‌ ವಿನೆಗರ್‌ ಅದ್ದಿ ದದ್ದು ಉಂಟಾದ ಜಾಗಕ್ಕೆ ಹಚ್ಚಿ, ಒಣಗಲು ಬಿಡಿ. ಇದನ್ನು ದಿನದಲ್ಲಿ ಮೂರು ಬಾರಿ ಮಾಡಿ.

ಐಸ್‌ ತುಂಡುಗಳು

ಇದು ನೋವು ಹಾಗೂ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕೆಲವು ತುಂಡು ಐಸ್‌ಗಳನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ದದ್ದು ಉಂಟಾದ ಜಾಗದಲ್ಲಿ ಇಡಿ. ಇದು ನರಗಳು ಮರಗಟ್ಟಿದಂತಾಗಿ ಬೇಗನೆ ನೋವು ಗುಣವಾಗುತ್ತದೆ.ಚರ್ಮದ ಕಿರಿಕಿರಿಗೂ ಇದು ಮದ್ದು.

ತೆಂಗಿನೆಣ್ಣೆ

ತೆಂಗಿನೆಣ್ಣೆಯಲ್ಲಿನ ಆಂಟಿಬ್ಯಾಕ್ಟಿರೀಯಲ್‌ ಅಂಶಗಳು ಪ್ಯಾಡ್‌ನಿಂದಾಗುವ ದದ್ದುಗಳ ನಿವಾರಣೆಗೆ ಉತ್ತಮ ಔಷಧಿ. ಇದು ಚರ್ಮಕ್ಕೆ ತೇವಾಂಶ ಒದಗಿಸುತ್ತದೆ. ರಾತ್ರಿ ಮಗಲುವ ಮೊದಲು ದದ್ದು ಉಂಟಾದ ಜಾಗವನ್ನು ಚೆನ್ನಾಗಿ ತೊಳೆದುಕೊಂಡು ಸ್ವಚ್ಛ ಮಾಡಿ. ಆ ಜಾಗವನ್ನು ಒಣಗಿಸಿ, ಅಲ್ಲಿಗೆ ತೆಂಗಿನೆಣ್ಣೆ ಹಚ್ಚಿ. ಇದನ್ನು ರಾತ್ರಿ ಇಡೀ ಹಾಗೆ ಇರಿಸಿ. ಬೆಳಿಗ್ಗೆ ಸ್ನಾನ ಮಾಡಿದ ಬಳಿಕವೂ ತೆಂಗಿನೆಣ್ಣೆ ಹಚ್ಚಬಹುದು.

ಬೇಕಿಂಗ್‌ ಸೋಡಾ

ಪ್ಯಾಡ್‌ನಿಂದಾಗುವ ತುರಿಕೆ ಹಾಗೂ ನವೆಗೆ ಬೇಕಿಂಗ್‌ ಸೋಡಾ ಬಳಸಬಹುದು. ಎರಡು ಚಮಚ ಬೇಕಿಂಗ್‌ ಸೋಡವನ್ನು ಒಂದು ಕಪ್‌ ನೀರಿಗೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ, ಅದನ್ನು ನವೆ ಇರುವ ಜಾಗಕ್ಕೆ ಹಚ್ಚಿ, ಒಣಗಲು ಬಿಡಿ. ನಂತರ ತಣ್ಣೀರಿನಿಂದ ಆ ಜಾಗವನ್ನು ತೊಳೆಯರಿ. ತೊಳೆದ ನಂತರ ಟವಲ್‌ ಅಥವಾ ಮೃದುವಾದ ಟವಲ್‌ನಿಂದ ಒರೆಸಲು ಮರೆಯದಿರಿ.

ಬೇವಿನ ಎಲೆಗಳು

ಬೇವಿನ ಎಣ್ಣೆಯನ್ನು ಚರ್ಮ ಹಾಗೂ ಕೂದಲಿನ ಆರೋಗ್ಯ ರಕ್ಷಣೆಗೆ ಬಳಸುತ್ತೇವೆ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ ಅಂಶಗಳಿವೆ. ಇದು ಉರಿಯೂತ ನಿವಾರಕವೂ ಹೌದು. ಇದು ಪ್ಯಾಡ್‌ನಿಂದ ಉಂಟಾಗುವ ದದ್ದಿನ ನಿವಾರಣೆಗೆ ಸಹಕಾರಿ. ಒಂದು ಕಂಟೇನರ್‌ನಲ್ಲಿ ದೊಡ್ಡ ನೀರು ಬಿಸಿ ಮಾಡಿ, ಆ ನೀರಿಗೆ 20 ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಆ ನೀರನ್ನು ತಣ್ಣಗಾಗಲು ಬಿಡಿ. ನಂತರ ದದ್ದು ಉಂಟಾದ ಜಾಗಕ್ಕೆ ಆ ನೀರನ್ನು ಹತ್ತಿಯ ಉಂಡೆಯ ಸಹಾಯದಿಂದ ಹಚ್ಚಿ. ಈ ನೀರನ್ನು ಸ್ನಾನದ ನೀರಿನ ಬಕೆಟ್‌ಗೂ ಹಾಕಿಕೊಂಡು ಸ್ನಾನ ಮಾಡಬಹುದು.

ಮುಟ್ಟಿನ ದಿನಗಳಲ್ಲಿ ಬಿಗಿಯಾದ, ಸಿಂಥೆಟಿಕ್‌ ಬಟ್ಟೆ ಧರಿಸುವುದು ಕೂಡ ದದ್ದು, ನವೆ ಉಂಟಾಗಲು ಕಾರಣವಾಗಬಹುದು. ಪ್ಯಾಡ್‌ ಬದಲು ಮೆನ್‌ಸ್ಟ್ರುವಲ್‌ ಕಪ್‌ ಅಥವಾ ಟ್ಯಾಂಪೋನ್‌ ಬಳಸಬಹುದು.