ಸ್ಟ್ರೋಕ್ ಆದಾಗ ತಕ್ಷಣಕ್ಕೆ ಏನು ಮಾಡಬೇಕು, ಗೋಲ್ಡನ್ ಅವರ್ ಚಿಕಿತ್ಸೆ ಎಷ್ಟು ಮುಖ್ಯ; ಪಾರ್ಶ್ವವಾಯು ಬಗ್ಗೆ ಎಲ್ಲರಿಗೂ ತಿಳಿದಿರಬೇಕಾದ ಮಾಹಿತಿ
ಇತ್ತೀಚಿನ ವರ್ಷಗಳಲ್ಲಿ ಪಾರ್ಶ್ವವಾಯು ಜಗತ್ತಿನಲ್ಲಿ ಅತಿಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿರುವ ಮಾರಣಾಂತಿಕ ಕಾಯಿಲೆ. ಸ್ಟ್ರೋಕ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ. ಈ ಹೊತ್ತಿನಲ್ಲಿ ಪಾರ್ಶ್ವವಾಯುವಿಗೆ ಗೋಲ್ಡನ್ ಅವರ್ ಟ್ರೀಟ್‌ಮೆಂಟ್ ಎಷ್ಟು ಮುಖ್ಯ ಎಂಬುದನ್ನು ತಿಳಿಯೋಣ.
ಕ್ಯಾನ್ಸರ್, ಹೃದಯಾಘಾತದಂತೆ ಪಾರ್ಶ್ವವಾಯು ಕೂಡ ಇಂದು ಜಗತ್ತಿಗೆ ಮಾರಕವಾಗಿ ಕಾಡುತ್ತಿದೆ. ಸದ್ದೇ ಇಲ್ಲದೆ ಸ್ಟ್ರೋಕ್ ಆವರಿಸುತ್ತದೆ. ಮೆದುಳಿನ ಯಾವುದೇ ಭಾಗಕ್ಕೆ ರಕ್ತ ಸಂಚಾರವಾಗುವುದರಲ್ಲಿ ವ್ಯತ್ಯಯವಾದರೆ ಸ್ಟ್ರೋಕ್ ಸಂಭವಿಸುತ್ತದೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದು ಕೂಡ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪಾರ್ಶ್ವವಾಯುವಿಗೆ ಒಳಗಾಗುವವರ ಸಂಖ್ಯೆ ಹೆಚ್ಚಿದ್ದು, ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 29 ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ.
ಅಧಿಕ ರಕ್ತದೊತ್ತಡ, ಮಧುಮೇಹ, ಧೂಮಪಾನ ಈ ಅಂಶಗಳ ಪಾರ್ಶ್ವವಾಯುವಿನ ಪ್ರಮಾಣ ಹೆಚ್ಚಲು ಪ್ರಮುಖ ಕಾರಣಗಳಾಗಿವೆ. ಪ್ರಪಂಚದಾದ್ಯಂತ ಅತಿಹೆಚ್ಚು ಸಾವು ಉಂಟಾಗುವ ಕಾಯಿಲೆಗಳಲ್ಲಿ ಹೃದಯಾಘಾತದ ನಂತರದ ಸ್ಥಾನ ಸ್ಟ್ರೋಕ್‌ಗಿದೆ. ಆದರೂ ಆರಂಭಿಕ ಹಂತದಲ್ಲೇ ಇದನ್ನು ಗುರುತಿಸಿ ಚಿಕಿತ್ಸೆ ಪಡೆದರೆ ಪ್ರಾಣಾಯಾಮದಿಂದ ಪಾರಾಗಬಹುದು.
ಪಾರ್ಶ್ವವಾಯುವಿನಲ್ಲಿ ಒಟ್ಟು ಎರಡು ವಿಧಗಳಿವೆ. ಮೆದುಳಿಗೆ ರಕ್ತವನ್ನು ಸಾಗಿಸುವ ಅಪಧಮನಿಯಲ್ಲಿನ ತಡೆಯಿಂದ ಇಸ್ಕೀಮಿಕ್ ಸ್ಟ್ರೋಕ್ ಉಂಟಾಗುತ್ತದೆ. ಮೆದುಳಿನ ಯಾವುದೇ ಸ್ಥಳದಲ್ಲಿ ರಕ್ತಸ್ರಾವವಾದರೆ ಹೆಮರಾಜಿಕ್ ಸ್ಟ್ರೋಕ್ ಸಂಭವಿಸುತ್ತದೆ. ಇದು ವ್ಯಕ್ತಿಯ ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗಬಹುದು. ಆದರೆ ಲಕ್ವ, ಸ್ಟ್ರೋಕ್ ಅಥವಾ ಪಾರ್ಶ್ವವಾಯು ಕಾಣಿಸಿದಾಗ ಗೋಲ್ಡನ್ ಅವರ್ ಬಹಳ ಮುಖ್ಯವಾಗುತ್ತದೆ. ಗೋಲ್ಡನ್ ಅವರ್‌ನಲ್ಲಿ ಚಿಕಿತ್ಸೆ ನೀಡುವುದರಿಂದ ಪ್ರಾಣಾಯಾಮದಿಂದ ಪಾರಾಗಲು ಸಾಧ್ಯವಿದೆ. ಹಾಗಾದರೆ ಏನಿದು ಗೋಲ್ಡನ್ ಅವರ್, ಆ ಸಮಯದಲ್ಲಿ ಚಿಕಿತ್ಸೆ ನೀಡುವುದು ಹೇಗೆ? ಇಲ್ಲಿದೆ ತಜ್ಞರ ಮಾಹಿತಿ.
ಗೋಲ್ಡನ್ ಅವರ್ ಟ್ರೀಟ್‌ಮೆಂಟ್
ಪಾರ್ಶ್ವವಾಯುವಿಗೆ ಒಳಗಾದ ಸಂದರ್ಭದಲ್ಲಿ ಗೋಲ್ಡನ್ ಅವರ್ ಅತ್ಯಂತ ಮುಖ್ಯವಾಗುತ್ತದೆ. ಸ್ಟ್ರೋಕ್‌ನ ಲಕ್ಷಣಗಳ ಕಾಣಿಸಿದ ತಕ್ಷಣಕ್ಕೆ ಚಿಕಿತ್ಸೆ ನೀಡುವುದು ಬಹಳ ನಿರ್ಣಾಯಕವಾಗಿರುತ್ತದೆ. ಈ ಅವಧಿಯು ಸಾಮಾನ್ಯವಾಗಿ ಪಾರ್ಶ್ವವಾಯು ಪ್ರಾರಂಭವಾದ ನಂತರದ ಮೊದಲ ಕೆಲವು ಗಂಟೆಗಳಾಗಿರುತ್ತದೆ. ಕೂಡಲೇ ವೈದ್ಯರ ಬಳಿಗೆ ಕರೆದ್ಯೊಯವುದು, ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಔಷಧಿಯನ್ನು ನೀಡುವ ಮೂಲಕ ದೀರ್ಘಕಾಲೀನ ಅಂಗವೈಕಲ್ಯದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಮತ್ತು ಇದರಿಂದ ಚೇತರಿಕೆಯ ಪ್ರಮಾಣವೂ ಹೆಚ್ಚಿರುತ್ತದೆ. ಈ ಸಮಯದಲ್ಲಿ ತಕ್ಷಣಕ್ಕೆ ಅಂದರೆ ಗೋಲ್ಡನ್ ಅವರ್ ಮುಗಿಯುವ ಒಳಗೆ ವೈದ್ಯರ ಬಳಿಗೆ ಕರೆದೊಯ್ಯುವುದು ಬಹಳ ಮುಖ್ಯವಾಗುತ್ತದೆ‘ ಎಂದು ಕಿಮ್ಸ್ ಆಸ್ಪತ್ರೆಯಲ್ಲಿ ಹಿರಿಯ ಸಲಹೆಗಾರರಾಗಿರುವ ಡಾ.ಮಾನಸ್ ಕುಮಾರ್ ಪಾಣಿಗ್ರಾಹಿ ಡೆಕ್ಕನ್ ಕ್ರಾನಿಕಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ಕಾಂಗ್ನೇಟಿವ್ ಥೆರಪಿ, ಸಂವೇದನಾ ಪುನರ್ವಸತಿ ಮತ್ತು ಮನರಂಜನಾ ಚಿಕಿತ್ಸೆಯನ್ನು ಒಳಗೊಂಡಿರುವ ಒಂದು ಸಮಗ್ರ ಚಿಕಿತ್ಸಾ ವಿಧಾನವು ಪಾರ್ಶ್ವವಾಯು ಹೊಂದಿರುವವರ ಮೇಲೆ ಕೆಲಸ ಮಾಡುತ್ತದೆ. ಈ ಚಿಕಿತ್ಸೆಗಳು ದೈಹಿಕ ಚೇತರಿಕೆಗೆ ಮಾತ್ರವಲ್ಲದೆ ಭಾವನಾತ್ಮಕ ಯೋಗಕ್ಷೇಮವನ್ನು ಬೆಂಬಲಿಸಲು, ವ್ಯಕ್ತಿಗಳು ಸಹಜ ಜೀವನಕ್ಕೆ ಮರಳಲು ಹಾಗೂ ಎರಡನೇ ಬಾರಿ ಸ್ಟ್ರೋಕ್ ಆಗುವುದನ್ನು ತಡೆಯಲು ಬಹಳ ಮುಖ್ಯವಾಗಿದೆ ಎಂದು ಡಾ. ಮಾನಸ್ ಹೇಳುತ್ತಾರೆ.
ಅಪೋಲೋ ಹಾಸ್ಪಿಟಲ್ಸ್‌ನ ಇಂಟರ್ವೆನ್ಷನಲ್ ನ್ಯೂರೋ-ರೇಡಿಯಾಲಜಿಸ್ಟ್ ಡಾ.ಶರತ್ ಕುಮಾರ್ ಜಿ.ಜಿ. ಅವರ ಪ್ರಕಾರ ಗೋಲ್ಡನ್ ಅವರ್ ಎಂದರೆ ವೇಗವಾಗಿ ಚಿಕಿತ್ಸೆ ನೀಡುವುದು ಮಾತ್ರವಲ್ಲ, ಆ ಹೊತ್ತಿನ ಒಳಗೆ ಪಾರ್ಶ್ವವಾಯುವಿಗೆ ಸೂಕ್ತ ಚಿಕಿತ್ಸೆ ನೀಡುವ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಮುಖ್ಯವಾಗುತ್ತದೆ ಎನ್ನುತ್ತಾರೆ.
ಭಾರತದಲ್ಲಿ ಶೇ 1 ರಷ್ಟು ಮಂದಿ ಮಾತ್ರ ಗೋಲ್ಡನ್ ಅವರ್ ಒಳಗಡೆ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಉಳಿದ ಶೇ 99ರಷ್ಟು ಮಂದಿ ಸ್ಟ್ರೋಕ್ ಆಗದ ಜೀವ ಉಳಿಸುವ ಮಧ್ಯಸ್ಥಿಕೆಯನ್ನು ತಾವೇ ತೆಗೆದುಕೊಳ್ಳುತ್ತಾರೆ. ಭಾರತದಲ್ಲಿ ಪ್ರತಿ 20 ಸೆಕೆಂಡಿಗೆ ಒಬ್ಬರಂತೆ ಸ್ಟ್ರೋಕ್‌ಗೆ ಒಳಗಾಗುತ್ತಿದ್ದಾರೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು ಸ್ಟ್ರೋಕ್‌ನಿಂದ ಸಾಯುತ್ತಿದ್ದಾರೆ ಎಂದು ಅಂಕಿ–ಅಂಶಗಳು ಸೂಚಿಸುತ್ತಿವೆ ಎಂದು ಡಾ. ಶರತ್ ಕುಮಾರ್ ಹೇಳುತ್ತಾರೆ.
ಶೇ 70ಕ್ಕೂ ಹೆಚ್ಚು ಮಂದಿ ರಕ್ತಕೊರತೆಯ ಪಾರ್ಶ್ವವಾಯು ಅಥವಾ ಇಸ್ಕೀಮಿಕ್ ಸ್ಟ್ರೋಕ್ (ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುತ್ತದೆ) ಆದಾಗ ಸೂಕ್ತ ಸಮಯಕ್ಕೆ ಆಸ್ಪತ್ರೆ ತಲುಪುದಿಲ್ಲ. ಇದಕ್ಕೆ ಕಾರಣ ಅರಿವಿನ ಕೊರತೆ. ಹಠಾತ್ ದೌರ್ಬಲ್ಯ, ಅಸ್ಪಷ್ಟ ಮಾತು ಮತ್ತು ಮುಖದ ಇಳಿದಂತಾಗುವುದು ಸ್ಟ್ರೋಕ್‌ನ ಪ್ರಮುಖ ಲಕ್ಷಣಗಳಾಗಿವೆ. ಈ ಬಗ್ಗೆ ರೋಗಲಕ್ಷಣಗಳ ಬಗ್ಗೆ ಜನರಲ್ಲಿ ಅರಿವು ಕಡಿಮೆ ಇದೆ.
ಗೋಲ್ಡನ್ ಅವರ್ ಎಂದರೆ ಎಷ್ಟು ಹೊತ್ತು?
ಸ್ಟ್ರೋಕ್ ಆದಾಗ 60 ನಿಮಿಷ ಅಥವಾ ಒಂದು ಗಂಟೆಯ ಹೊತ್ತನ್ನು ಗೋಲ್ಡನ್ ಅವರ್ ಎಂದು ಕರೆಯುತ್ತಾರೆ. ಈ ಹೊತ್ತಿನ ಒಳಗೆ ಚಿಕಿತ್ಸೆ ನೀಡುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ರಕ್ತದ ಹರಿವನ್ನು ಮರುಸ್ಥಾಪಿಸುವ ಮತ್ತು ಮೆದುಳಿನ ಅಂಗಾಂಶವನ್ನು ಉಳಿಸುವ ಸಾಧ್ಯತೆಗಳು ಹೆಚ್ಚು. ಗೋಲ್ಡನ್ ಅವರ್ ಸಮಯದಲ್ಲಿ, ಪಾರ್ಶ್ವವಾಯು ರೋಗಿಗಳು ಬದುಕುಳಿಯುವ ಹೆಚ್ಚಿನ ಅವಕಾಶವನ್ನು ಹೊಂದಿರುತ್ತಾರೆ ಮತ್ತು ಅವರು ಸೂಕ್ತ ಚಿಕಿತ್ಸೆಯನ್ನು ಪಡೆದರೆ ದೀರ್ಘಕಾಲೀನ ಮಿದುಳಿನ ಹಾನಿಯನ್ನು ತಡೆಯಬಹುದು. ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಮೊದಲ ನಿಮಿಷಗಳಲ್ಲಿ ಇಂಟ್ರಾವೆನಸ್ ಥ್ರಂಬೋಲಿಟಿಕ್ ಚಿಕಿತ್ಸೆಯ ಪ್ರಯೋಜನವು ಉತ್ತಮವಾಗಿರುತ್ತದೆ ಮತ್ತು ಮುಂದಿನ 4.5 ಗಂಟೆಗಳಲ್ಲಿ ವೇಗವಾಗಿ ಕಡಿಮೆಯಾಗುತ್ತದೆ.
ಸ್ಟ್ರೋಕ್ ಗುರುತಿಸುವುದು ಹೇಗೆ?
ತಕ್ಷಣಕ್ಕೆ ವೈದ್ಯಕೀಯ ಸಹಾಯವನ್ನು ಪಡೆಯಲು ಸ್ಟ್ರೋಕ್‌ನ ಲಕ್ಷಣಗಳ ಬಗ್ಗೆ ಅರಿವು ಹೊಂದಿರುವುದು ಮುಖ್ಯವಾಗುತ್ತದೆ. ಮುಖ, ತೋಳುಗಳು, ಮಾತು, ಸಮಯ - ಸಾಮಾನ್ಯವಾಗಿ ಸ್ಟ್ರೋಕ್‌ಗೆ ಒಳಗಾದ ಸಮಯದಲ್ಲಿ ಗಮನಿಸಬೇಕಾದ ಅಂಶಗಳು.
ಮುಖ ಇಳಿ ಬಿದ್ದಂತಾಗುವುದು: ಮುಖದ ಒಂದು ಬದಿ ಇಳಿ ಬಿದ್ದದಂತಾಗಬಹುದು ಅಥವಾ ನಿಶ್ಚೇಜವಾಗಬಹುದು. ಆ ಸಮಯದಲ್ಲಿ ನಗಲು ಹೇಳುವ ಮೂಲಕ ನಗುವ ರೀತಿ ಸರಿಯ ಇದೆಯೇ ಎಂದು ಗಮನಿಸಬೇಕು.
ತೋಳಿನ ದೌರ್ಬಲ್ಯ: ಸ್ಟ್ರೋಕ್ ಆದಾಗ ಒಂದು ತೋಳು ದೌರ್ಬಲ್ಯ, ಮರಗಟ್ಟಬಹುದು. ಆ ಸಮಯದಲ್ಲಿ ಎರಡೂ ತೋಳುಗಳನ್ನು ಮೇಲಕ್ಕೆತ್ತಲು ಹೇಳಿ, ತೋಳುಗಳು ಮೇಲಿಂದ ಕೆಳಕ್ಕೆ ಆಡಿಸಲು ಬರುತ್ತವೆಯೇ ಎಂದು ಪರೀಕ್ಷೆ ಮಾಡಿ.
ಮಾತು ತೊದಲುವುದು: ಮಾತು ಅಸ್ಪಷ್ಟವಾಗಿರಬಹುದು ಅಥವಾ ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಸ್ಪಷ್ಟತೆಯನ್ನು ಪರಿಶೀಲಿಸಲು ಸರಳ ವಾಕ್ಯವನ್ನು ಪುನರಾವರ್ತಿಸಲು ಹೇಳಿ.
ಹಠಾತ್ ಗೊಂದಲ ಅಥವಾ ಅರ್ಥಮಾಡಿಕೊಳ್ಳುವಲ್ಲಿ ತೊಂದರೆ: ಇದು ಪಾರ್ಶ್ವವಾಯುವಿನ ಆರಂಭಿಕ ಚಿಹ್ನೆಯೂ ಆಗಿರಬಹುದು.
ಆಂಬ್ಯುಲೆನ್ಸ್‌ಗೆ ಕರೆ ಮಾಡಿ: ಈ ಚಿಹ್ನೆಗಳಲ್ಲಿ ಯಾವುದಾದರೂ ಇದ್ದರೆ, ತುರ್ತು ಸೇವೆಗಳಿಗೆ ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡುವುದು ಬಹಳ ಮುಖ್ಯ.
ಸ್ಟ್ರೋಕ್ ಆದಾಗ ತಕ್ಷಣ ಹೇಗೆ ಸಹಾಯ ಮಾಡಬಹುದು?
1. ತುರ್ತು ಸೇವೆಗಳಿಗೆ ತಕ್ಷಣ ಕರೆ ಮಾಡಿ
2. ಹೆಚ್ಚಿನ ಅಪಾಯವನ್ನು ತಡೆಯಲು ವ್ಯಕ್ತಿಯು ಸುರಕ್ಷಿತ ಸ್ಥಿತಿಯಲ್ಲಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. ತಲೆ ಸ್ವಲ್ಪ ಮೇಲೆ ಇರುವಂತೆ ವ್ಯಕ್ತಿಯನ್ನ ಮಲಗಿಸಿ.
3. ಸಮಯವನ್ನು ಗಮನಿಸಿ - ರೋಗಲಕ್ಷಣಗಳು ಮೊದಲು ಕಾಣಿಸಿಕೊಂಡ ಸಮಯವನ್ನು ರೆಕಾರ್ಡ್ ಮಾಡಿ. ಯಾಕೆಂದರೆ ಗೋಲ್ಡನ್ ಅವರ್ ನಂತರ ಚಿಕಿತ್ಸೆ ಪರಿಣಾಮಕಾರಿಯಲ್ಲ.
4. ಆಹಾರ ಅಥವಾ ಯಾವುದೇ ಪಾನೀಯವನ್ನು ನೀಡಬೇಡಿ.
ಸ್ಟ್ರೋಕ್‌ನ ವೈಯಕ್ತಿಕ ಅಪಾಯವನ್ನು ನಿರ್ಣಯಿಸಲು ಬಳಸಲು ಸುಲಭವಾದ ಸಾಧನವಾದ 'ದಿ ಸ್ಟ್ರೋಕ್ ರಿಸ್ಕೋಮೀಟರ್' ಎಂಬ ಅಪ್ಲಿಕೇಶನ್ ಅನ್ನು ಬಳಸಲು ವೈದ್ಯರು ಸಲಹೆ ನೀಡುತ್ತಾರೆ. ಅಪ್ಲಿಕೇಶನ್ ನಿಮಗೆ ಹೃದಯಾಘಾತ, ಬುದ್ಧಿಮಾಂದ್ಯತೆ ಮತ್ತು ಮಧುಮೇಹದ ಅಪಾಯದ ಸೂಚನೆಯನ್ನು ಸಹ ನೀಡುತ್ತದೆ. ಇದು ಸಹಾಯವಾಗಬಹುದು.