Cricket World Cup: ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್; ಏಷ್ಯಾಕಪ್, ವಿಶ್ವಕಪ್ ಉಚಿತ ಸ್ಟ್ರೀಮಿಂಗ್ ಘೋಷಿಸಿದ ಹಾಟ್‌ಸ್ಟಾರ್
ಕನ್ನಡ ಸುದ್ದಿ  /  ಕ್ರೀಡೆ  /  Cricket World Cup: ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್; ಏಷ್ಯಾಕಪ್, ವಿಶ್ವಕಪ್ ಉಚಿತ ಸ್ಟ್ರೀಮಿಂಗ್ ಘೋಷಿಸಿದ ಹಾಟ್‌ಸ್ಟಾರ್

Cricket World Cup: ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್; ಏಷ್ಯಾಕಪ್, ವಿಶ್ವಕಪ್ ಉಚಿತ ಸ್ಟ್ರೀಮಿಂಗ್ ಘೋಷಿಸಿದ ಹಾಟ್‌ಸ್ಟಾರ್

Disney plus Hotstar: ಏಕದಿನ ವಿಶ್ವಕಪ್‌ ಮತ್ತು ಏಷ್ಯಾಕಪ್‌ ಪಂದ್ಯಗಳನ್ನು ಮೊಬೈಲ್‌ನಲ್ಲಿ ಉಚಿತ ಸ್ಟ್ರೀಮಿಂಗ್ ಮಾಡಲು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ನಿರ್ಧರಿಸಿದೆ.

ಏಷ್ಯಾಕಪ್‌, ವಿಶ್ವಕಪ್‌ ಉಚಿತ ಸ್ಟ್ರೀಮಿಂಗ್‌ಗೆ ಹಾಟ್‌ಸ್ಟಾರ್‌ ನಿರ್ಧಾರ
ಏಷ್ಯಾಕಪ್‌, ವಿಶ್ವಕಪ್‌ ಉಚಿತ ಸ್ಟ್ರೀಮಿಂಗ್‌ಗೆ ಹಾಟ್‌ಸ್ಟಾರ್‌ ನಿರ್ಧಾರ (ICC Twitter)

ಕ್ರಿಕೆಟ್‌ ಅಭಿಮಾನಿಗಳಿಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ (Disney Hotstar) ಸಿಹಿಸುದ್ದಿಯನ್ನು ನೀಡಿದೆ. ಈ ಬಾರಿಯ ಐಪಿಎಲ್‌ ಆವೃತ್ತಿಯ ಎಲ್ಲಾ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಿದ್ದ ಅಭಿಮಾನಿಗಳು, ಇದೀಗ ಈ ವರ್ಷದ ಪ್ರಮುಖ ಕ್ರಿಕೆಟ್‌ ಪಂದ್ಯಗಳನ್ನು ಫ್ರೀಯಾಗಿ ನೋಡುವ ಭಾಗ್ಯ ಪಡೆದಿದ್ದಾರೆ.

ಐಪಿಎಲ್‌ನ 16ನೇ ಆವೃತ್ತಿಯನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ನೇರಪ್ರಸಾರ ಮಾಡಲಾಗಿತ್ತು. ಇದೀಗ ಈ ವರ್ಷ ನಡೆಯಲಿರುವ ಪ್ರಮುಖ ಕ್ರೀಡಾಜಾತ್ರೆಗಳಾದ ಏಷ್ಯಾಕಪ್‌ ಮತ್ತು ಏಕದಿನ ವಿಶ್ವಕಪ್ ಸರಣಿಯನ್ನು ಕೂಡಾ ಉಚಿತವಾಗಿ ವೀಕ್ಷಿಸಬಹುದಾಗಿದೆ. ಆದರೆ, ಈ ಬಾರಿ ಈ ಕೊಡುಗೆಯನ್ನು ನೀಡಿದ್ದು, ಜಿಯೋ ಅಲ್ಲ. ಬದಲಾಗಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌.

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಸೇರಿದಂತೆ ಏಷ್ಯಾಕಪ್‌ ಪಂದ್ಯಗಳನ್ನು ಕೂಡಾ ಭಾರತದಲ್ಲಿ ಉಚಿತ ಸ್ಟ್ರೀಮಿಂಗ್ ಮಾಡಲು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ನಿರ್ಧರಿಸಿದೆ. ಹೀಗಾಗಿ ಭಾರತದ ಕ್ರಿಕೆಟ್‌ ಅಭಿಮಾನಿಗಳು ತಮ್ಮ ಮೊಬೈಲ್ ಮೂಲಕ ಎಲ್ಲಾ ಪಂದ್ಯಗಳನ್ನು ಉಚಿತವಾಗಿ ನೋಡಬಹುದು. ಈಗಾಗಲೇ ಮುಗಿದ ಐಪಿಎಲ್‌ ಪಂದ್ಯಾವಳಿಗಳನ್ನು, ಡಿಸ್ನಿಯ ಅಗ್ರ ಪ್ರತಿಸ್ಪರ್ಧಿ ವಯೋಕಾಮ್‌ 18ನ ಜಿಯೋ ಸಿನಿಮಾಸ್‌ ಉಚಿತವಾಗಿ ಸ್ಟ್ರೀಮ್‌ ಮಾಡಿತ್ತು. ಇದರಿಂದ ಡಿಸ್ನಿಗೆ ಭಾರಿ ನಷ್ಟವಾಯ್ತು. ಹೀಗಾಗಿ ಕಳೆದುಕೊಂಡ ಗ್ರಾಹಕರನ್ನು ಮತ್ತೆ ತನ್ನ ಒಟಿಟಿ ವೇದಿಕೆಯತ್ತ ಕರೆತರಲು ಡಿಸ್ನಿ ಮಹತ್ವದ ಹೆಜ್ಜೆ ಇಟ್ಟಿದೆ. ಕ್ರಿಕೆಟ್ ಅನ್ನು ಉಸಿರಾಡುವ ಭಾರತದಲ್ಲಿ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುವ ಗುರಿಯನ್ನು ಕಂಪನಿ ಹೊಂದಿದೆ.

ಈ ಕುರಿತಾಗಿ ಇಂದು ಸಂಸ್ಥೆಯ ಮುಖ್ಯಸ್ಥರು ಹೇಳಿಕೆ ನೀಡಿರುವುದಾಗಿ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಏಷ್ಯಾಕಪ್ ಮತ್ತು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗಳನ್ನು ಬಳಕೆದಾರರಿಗೆ ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ನೀಡುವುದಾಗಿ ಕಂಪನಿ ಹೇಳಿದೆ.‌

ಈ ಉಚಿತ ಆಫರ್‌ ದೇಶದ 540 ಮಿಲಿಯನ್‌ಗಿಂತಲೂ ಹೆಚ್ಚು ಸ್ಮಾರ್ಟ್‌ಫೋನ್ ಬಳಕೆದಾರರನ್ನು ತಲುಪಲಿದೆ ಎಂದು ಡಿಸ್ನಿ ಶುಕ್ರವಾರ ಹೇಳಿದೆ. ಭಾರತದಲ್ಲಿರುವ ಹೆಚ್ಚಿನ ಮೊಬೈಲ್ ಬಳಕೆದಾರರು ಪಂದ್ಯಗಳನ್ನು ನೋಡುವಂತೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.‌

ಮೊಬೈಲ್‌ನಲ್ಲಿ ಮಾತ್ರ ಉಚಿತ

ಈ ಕೊಡುಗೆ ಮೊಬೈಲ್‌ ಮೂಲಕ ವೀಕ್ಷಕರಿಗೆ ಮಾತ್ರವೇ ಉಚಿತವಾಗಿದ್ದು, ಕ್ರಿಕೆಟ್ ಪಂದ್ಯಗಳನ್ನು ಟಿವಿ ಅಥವಾ ವೆಬ್‌ಸೈಟ್ ಮೂಲಕ ವೀಕ್ಷಿಸುವವರು ಈ ಹಿಂದಿನಂತೆ ಶುಲ್ಕ ಪಾವತಿಸಬೇಕಾಗುತ್ತದೆ. ಅಂದರೆ, ಮೊಬೈಲ್‌ ಮೂಲಕ ಮಾತ್ರ ಉಚಿತ ಸ್ಟ್ರೀಮಿಂಗ್‌ ವೀಕ್ಷಣೆ ಸಾಧ್ಯವಾಗಲಿದೆ.

ಈ ವರ್ಷದ ಆರಂಭದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಪಂದ್ಯಾವಳಿಯ ಸ್ಟ್ರೀಮಿಂಗ್ ಹಕ್ಕುಗಳನ್ನು ಡಿಸ್ನಿ ಕಳೆದುಕೊಂಡಿತ್ತು. ಪ್ರಬಲ ಪ್ರತಿಸ್ಪರ್ಧಿ‌ ಮುಖೇಶ್‌ ಅಂಬಾನಿ ಒಡೆತನ ರಿಲಯನ್ಸ್ ಇಂಡಸ್ಟ್ರೀಸ್‌ನ ಜಿಯೋ ಸಿನಿಮಾ, ಡಿಜಿಟಲ್‌ ಮಾಧ್ಯಮ ಹಕ್ಕುಗಳನ್ನು ಪಡೆದು ನೇರಪ್ರಸಾರ ಮಾಡಿತ್ತು. ಇದರಿಂದಾಗಿ ಹಾಟ್‌ಸ್ಟಾರ್‌ನ ಚಂದಾದಾರರ ಪ್ರಮಾಣವು ಸುಮಾರು 5 ಮಿಲಿಯನ್‌ನಷ್ಟು ಕುಗ್ಗಿದೆ ಎಂದು ಸಂಶೋಧನಾ ಸಂಸ್ಥೆ CLSA ಅಂದಾಜಿಸಿದೆ. ಸದ್ಯ ಕಳೆದುಕೊಂಡ ಎಲ್ಲಾ ಚಂದಾದಾರರನ್ನು ಮತ್ತೆ ಸಂಪಾದಿಸಲು ಸಂಸ್ಥೆ ಕಸರತ್ತು ನಡೆಸುತ್ತಿದೆ. ಇದರ ಭಾಗವಾಗಿ ಈ ಪ್ರಮುಖ ನಿರ್ಧಾರಕ್ಕೆ ಬಂದಿದೆ.

ಈ ವರ್ಷದ ಅಕ್ಟೋಬರ್‌ ಹಾಗೂ ನವೆಂಬರ್ ತಿಂಗಳಲ್ಲಿ ‌ ಏಕದಿನ ವಿಶ್ವಕಪ್‌ ನಡೆಯುವುದು ಬಹುತೇಕ ಖಚಿತವಾಗಿದೆ. ಅಕ್ಟೋಬರ್ 5ರಂದು ಅಹಮದಾಬಾದ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂ ಈ ಮಹತ್ವದ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ ಎಂದು ವರದಿಯಾಗಿದೆ. ನವೆಂಬರ್ 19ರಂದು ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.