ಚನ್ನಪಟ್ಟಣ ತಲುಪಿತು ಮುಡಾ ಹಗರಣ ವಿರುದ್ಧದ ಬಿಜೆಪಿ ಜೆಡಿಎಸ್ ಪಾದಯಾತ್ರೆ, ಬಿವೈ ವಿಜಯೇಂದ್ರ, ನಿಖಿಲ್ ಜೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಚನ್ನಪಟ್ಟಣ ತಲುಪಿತು ಮುಡಾ ಹಗರಣ ವಿರುದ್ಧದ ಬಿಜೆಪಿ ಜೆಡಿಎಸ್ ಪಾದಯಾತ್ರೆ, ಬಿವೈ ವಿಜಯೇಂದ್ರ, ನಿಖಿಲ್ ಜೋಡಿ

ಚನ್ನಪಟ್ಟಣ ತಲುಪಿತು ಮುಡಾ ಹಗರಣ ವಿರುದ್ಧದ ಬಿಜೆಪಿ ಜೆಡಿಎಸ್ ಪಾದಯಾತ್ರೆ, ಬಿವೈ ವಿಜಯೇಂದ್ರ, ನಿಖಿಲ್ ಜೋಡಿ

ಮುಡಾ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ಮೂರನೇ ದಿನ ಚನ್ನಪಟ್ಟಣ ತಲುಪಿದೆ. ಇಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ, ಜೆಡಿಎಸ್ ನಾಯಕ ನಿಖಿಲ್‌ ಜೋಡಿ ಗಮನಸೆಳೆಯಿತು. ಸಿಪಿ ಯೋಗೇಶ್ವರ್ ಮೂಲೆಗುಂಪಾಗಿರುವುದು ಕಂಡುಬಂತು. ಹೀಗಾಗಿ ನಿಖಿಲ್‌ ಇಲ್ಲಿನ ಉಪಚುನಾವಣೆಗೆ ಎನ್‌ ಡಿಎ ಅಭ್ಯರ್ಥಿ ಎಂಬ ಸಂದೇಶರವಾನೆಯಾಗಿದೆ (ವರದಿ- ಎಚ್.ಮಾರುತಿ, ಬೆಂಗಳೂರು)

ಚನ್ನಪಟ್ಟಣದಲ್ಲಿ ಮುಡಾ ಹಗರಣ ವಿರುದ್ಧದ ಬಿಜೆಪಿ ಜೆಡಿಎಸ್ ಪಾದಯಾತ್ರೆ, ಬಿವೈ ವಿಜಯೇಂದ್ರ, ನಿಖಿಲ್ ಜೋಡಿ.
ಚನ್ನಪಟ್ಟಣದಲ್ಲಿ ಮುಡಾ ಹಗರಣ ವಿರುದ್ಧದ ಬಿಜೆಪಿ ಜೆಡಿಎಸ್ ಪಾದಯಾತ್ರೆ, ಬಿವೈ ವಿಜಯೇಂದ್ರ, ನಿಖಿಲ್ ಜೋಡಿ. (BJP/JDS)

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್‌ ಜಂಟಿಯಾಗಿ ನಡೆಸುತ್ತಿರುವ ಪಾದಯಾತ್ರೆ ಇಂದು ಚನ್ನಪಟ್ಟಣ ತಲುಪಿದೆ. ಉಪಚುನಾವಣೆ ನಡೆಯಲಿರುವ ಚನ್ನಪಟ್ಟಣ ಇಂದಿನ ಪಾದಯಾತ್ರೆಯ ಕೇಂದ್ರಬಿಂದುವಾಗಿತ್ತು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾದ ನಂತರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ. ಈ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲೇಬೇಕೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪಣ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಿರುವ ಡಿಕೆ ಬ್ರದರ್ಸ್‌ ವಾರದಲ್ಲಿ ಎರಡು ಮೂರು ದಿನ ಚನ್ನಪಟ್ಟಣ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ.

ಎಚ್‌ ಡಿ ಕುಮಾರಸ್ವಾಮಿ ಅವರಿಗೂ ಈ ಕ್ಷೇತ್ರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದನ್ನು ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೂ ಪ್ರತಿನಿಧಿಸಿದ್ದರು. ಹಾಗಾಗಿ ಅವರ ಕುಟುಂಬ ಈ ಕ್ಷೇತ್ರವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲು ತಯಾರಿಲ್ಲ. ಈ ಎಲ್ಲ ಕಾರಣಗಳಿಗಾಗಿ ಸೋಮವಾರದ ಪಾದಯಾತ್ರೆಯ ಕೇಂದ್ರ ಬಿಂದು ಚನ್ನಪಟ್ಟಣ ಎಂದರೆ ತಪಾಗಲಿಕ್ಕಿಲ್ಲ.

ಚನ್ನಪಟ್ಟಣದಲ್ಲಿ ನಿಖಿಲ್ ಅಭ್ಯರ್ಥಿಯಾಗುವ ಸಾಧ್ಯತೆ

ಏನೆಲ್ಲಾ ಬೆಳವಣಿಗೆಗಳು ನಡೆದರೂ ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್‌ ಅಭ್ಯರ್ಥಿ ಕುಮಾರಸ್ವಾಮಿ ಅವರ ಪುತ್ರ, ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೂರು ದಿನಗಳಿಂದ ನಡೆಯುತ್ತಿರುವ ಪಾದಯಾತ್ರೆಯಲ್ಲಿ ವಿಜಯೇಂದ್ರ ಮತ್ತು ನಿಖಿಲ್‌ ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ಭಾನುವಾರವೂ ಇಬ್ಬರೂ ಹೀಗೆಯೇ ಕೈ ಕೈ ಹಿಡಿದು ಪಾದಯಾತ್ರೆಯಲ್ಲಿ ನಡೆದಿದ್ದರು.

ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಒಟ್ಟಾಗಿಯೇ ಅಭಿನಂದಿಸಿದ್ದರು. ಎರಡೂ ಪಕ್ಷಗಳ ಕಾರ್ಯಕರ್ತರೂ ನಾಯಕರನ್ನು ದಾರಿಯುದ್ದಕ್ಕೂ ಅಭಿನಂದಿಸುತ್ತಾ ಜೈಕಾರ ಹಾಕುತ್ತಲೇ ಬಂದಿದ್ದರು. ಎನ್‌ ಡಿಎ ಅಭ್ಯರ್ಥಿಯಾಗಿ ನಿಖಿಲ್‌ ಅವರನ್ನು ಒಪ್ಪಿಕೊಳ್ಳದೆ ಬಿಜೆಪಿಗೆ ಅನ್ಯ ಮಾರ್ಗವಿಲ್ಲ. ಎನ್‌ ಡಿಎ ಒಕ್ಕೂಟಕ್ಕೂ ಈ ಉಪ ಚುನಾವಣೆ ನಿರ್ಣಾಯಕವಾಗಿದ್ದು, ಪಾದಯಾತ್ರೆಯೂ ಮಹತ್ವದ ಪಾತ್ರ ವಹಿಸಲಿದೆ.

ಚನ್ನಪಟ್ಟಣ ಸಹಜವಾಗಿಯೇ ಜೆಡಿಎಸ್‌ ಕಾರ್ಯಕ್ಷೇತ್ರ. ಆ ಪಕ್ಷ ಈ ಕ್ಷೇತ್ರವನ್ನು ಕೇಳುವುದರಲ್ಲಿ ತಪ್ಪೇನಿಲ್ಲ. ಆದರೂ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನ ನಡೆಸುತ್ತೇವೆ. ನಮ್ಮ ಹೈ ಕಮಾಂಡ್‌ ಮತ್ತು ಜೆಡಿಎಸ್‌ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ಸಿಪಿ ಯೋಗೇಶ್ವರ್ ಪ್ರಬಲ ಆಕಾಂಕ್ಷಿ

ಈ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳುವುದು ಬಿಜೆಪಿಗೆ ಅಸಾಧ್ಯ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಈ ಕ್ಷೇತ್ರವನ್ನು 5 ಬಾರಿ ಪ್ರತಿನಿಧಿಸಿದ್ದಾರೆ. ಈ ಬಾರಿಯೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಯೋಗೇಶ್ವರ್‌ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು ಎನ್ನುವುದು ನಿಜ. ಆದರೆ ಈಗ ಈ ಕ್ಷೇತ್ರ ಜೆಡಿಎಸ್‌ ತೆಕ್ಕೆಯಲ್ಲಿದೆ. ನಾವು ಈ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕು. ಕಾರ್ಯಕರ್ತರು ನಾನೇ ಅಭ್ಯರ್ಥಿಯಾಗಬೇಕೆಂದು ಒತ್ತಡ ಹೇರುತ್ತಿದ್ದಾರೆ. ಆದರೆ ಅಂತಿಮ ನಿರ್ಧಾರವನ್ನು ಉಭಯ ಪಕ್ಷಗಳ ನಾಯಕರು ತೆಗೆದುಕೊಳ್ಳಲಿದ್ದಾರೆ ಎಂದು ನಿಖಿಲ್ ಹೇಳುತ್ತಾರೆ.

ಪಾದಯಾತ್ರೆಗೆ ಗೈರಾಗುವ ಮೂಲಕ ಯೋಗೇಶ್ವರ್‌ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಆಪ್ತರ ಜೊತೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅಲೋಚನೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಪಕ್ಷ ಟಿಕೆಟ್‌ ಕೊಟ್ಟರೆ ಕಣಕ್ಕಳಿಯುವೆ. ಒಂದು ವೇಳೆ ಟಿಕೆಟ್‌ ಸಿಗದಿದ್ದರೆ ಕಾರ್ಯಕರ್ತರ ಜೊತೆ ಸಮಾಲೋಚಿಸಿ ತೀರ್ಮಾನಿಸುವದಾಗಿ ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗೆ ಯೋಗೇಶ್ವರ್‌ ಪ್ರತಿಕ್ರಿಯಿಸಿದ್ದಾರೆ. ಆಗಸ್ಟ್‌ 11ರಂದು ಯೋಗೇಶ್ವರ್‌ ಬೆಂಬಲಿಗರು ನಮ್ಮ ಶಾಸಕ ನಮ್ಮ ಅಯ್ಕೆ ಎಂಬ ಸಮಾಲೋಚನಾ ಸಭೆಯನ್ನು ಆಯೋಜಿದ್ದಾರೆ. ಈ ಮೂಲಕ ಪಕ್ಷದ ವರಿಷ್ಠರಿಗೆ ಒತ್ತಡ ಹೇರುವ ಸಂದೇಶ ನೀಡುವ ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಈಗಾಗಲೇ ಬಿರುಸಿನ ಪ್ರಚಾರ ಆರಂಭಿಸಿದೆ. ಮೊನ್ನೆಯಷ್ಟೇ ನಡೆದ ಜನಸ್ಪಂದನ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರೇ ನಾನು ಮತ್ತು ಸಿದ್ದರಾಮಯ್ಯ ಅವರೇ ನಿಜವಾದ ಅಭ್ಯರ್ಥಿಗಳು ಎಂದು ಭಾವಿಸಿ ಎಂದು ಶಿವಕುಮಾರ್‌ ಹೇಳಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

Whats_app_banner