ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Aadhaar-pan Link: ಆಧಾರ್‌ ಪಾನ್‌ ಜೋಡಣೆಗೆ ಹೆಲ್ಪ್‌ ಬೇಕು, ಆಧಾರನ್ನು ನಾವೇಕೆ ಜೋಡಿಸಬೇಕು? ಫೇಸ್‌ಬುಕ್‌ನಲ್ಲಿ ನಡಿತೀದೆ ಬಿಸಿಬಿಸಿ ಚರ್ಚೆ

Aadhaar-PAN link: ಆಧಾರ್‌ ಪಾನ್‌ ಜೋಡಣೆಗೆ ಹೆಲ್ಪ್‌ ಬೇಕು, ಆಧಾರನ್ನು ನಾವೇಕೆ ಜೋಡಿಸಬೇಕು? ಫೇಸ್‌ಬುಕ್‌ನಲ್ಲಿ ನಡಿತೀದೆ ಬಿಸಿಬಿಸಿ ಚರ್ಚೆ

Aadhaar-PAN link: ಆಧಾರ್‌ ಪಾನ್‌ ಜೋಡಣೆಗೆ ಜೂನ್‌ 30 ಕೊನೆದಿನ. ಈ ರೀತಿ ಜೋಡಣೆ ಮಾಡುವುದು ಜನಸಾಮಾನ್ಯರಿಗೆ ಸುಲಭವಲ್ಲ, ಸರಕಾರ ಹೆಲ್ಪ್‌ ಡೆಸ್ಕ್‌ ಮಾಡಬೇಕು ಎಂದು ಫೇಸ್‌ಬುಕ್‌ನಲ್ಲಿ ರಂಗಸ್ವಾಮಿ ಮೂಕನಹಳ್ಳಿ ಬರೆದಿದ್ದಾರೆ. ನಾವೇಕೆ ಆಧಾರನ್ನು ಜೋಡಿಸಬೇಕು ಎಂಬ ಪ್ರಶ್ನೆ ಸೇರಿದಂತೆ ಹಲವು ಮಾರುತ್ತರ ಇದಕ್ಕೆ ಬಂದಿದ್ದು, ಬಿಸಿಬಿಸಿ ಚರ್ಚೆಗೆ ನಾಂದಿಯಾಗಿದೆ.

ಆಧಾರನ್ನು ನಾವೇಕೆ ಜೋಡಿಸಬೇಕು? ಫೇಸ್‌ಬುಕ್‌ನಲ್ಲಿ ನಡಿತೀದೆ ಬಿಸಿಬಿಸಿ ಚರ್ಚೆ
ಆಧಾರನ್ನು ನಾವೇಕೆ ಜೋಡಿಸಬೇಕು? ಫೇಸ್‌ಬುಕ್‌ನಲ್ಲಿ ನಡಿತೀದೆ ಬಿಸಿಬಿಸಿ ಚರ್ಚೆ

Aadhaar-PAN linking deadline: ಆಧಾರ್‌-ಪಾನ್‌ ಕಾರ್ಡ್‌ ಜೋಡಣೆಗೆ ಜೂನ್‌ 30 ಡೆಡ್‌ಲೈನ್‌ ಆಗಿದ್ದು, ಇನ್ನೂ ಲಿಂಕ್‌ ಮಾಡದೆ ಇರುವವರು 1000 ರೂಪಾಯಿ ದಂಡದ ಜತೆಗೆ ಜೋಡಣೆ ಮಾಡಿಕೊಳ್ಳಬಹುದು. ಈ ರೀತಿ ಆಧಾರ್‌-ಪಾನ್‌ ಕಾರ್ಡ್‌ ಜೋಡಣೆ ಮಾಡುವುದು ಜನಸಾಮಾನ್ಯರಿಗೆ ಕಷ್ಟ, ಇದಕ್ಕಾಗಿ ಹೆಲ್ಪ್‌ ಡೆಸ್ಕ್‌ ಬೇಕೆಂದು ಬರಹಗಾರರಾದ ರಂಗಸ್ವಾಮಿ ಮೂಕನಹಳ್ಳಿ ಫೇಸ್‌ಬುಕ್‌ನಲ್ಲಿ ಹಲವು ಬಾರಿ ಮನವಿ ಮಾಡುತ್ತಲೇ ಇದ್ದಾರೆ. ಅವರ ಬರಹಗಳು ಸಾಕಷ್ಟು ಚರ್ಚೆಗೂ ನಾಂದಿಯಾಗಿದೆ. ಇದೇ ಪೋಸ್ಟ್‌ಗೆ ಹಲವು ಬಳಕೆದಾರರು ಕಾಮೆಂಟ್‌ ಮಾಡಿದ್ದು, ಆಧಾರ್‌ ಪಾನ್‌ ಕಾರ್ಡ್‌ ಜೋಡಣೆಯ ಕಷ್ಟಗಳ ಕುರಿತು ಮಾಹಿತಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆಧಾರ್‌-ಪಾನ್‌ ಕಾರ್ಡ್‌ ಲಿಂಕ್‌ಗೆ ಹೆಲ್ಪ್‌ ಡೆಸ್ಕ್‌ ಬೇಕು

ಎರಡು ದಿನದ ಹಿಂದೆ ರಂಗರಾಸ್ವಾಮಿ ಮೂಕನಹಳ್ಳಿ ಅವರು ಫೇಸ್‌ಬುಕ್‌ನಲ್ಲಿ ಈ ರೀತಿ ಪೋಸ್ಟ್‌ ಮಾಡಿದ್ದರು. ಇವರು ಹಣ ಹೂಡಿಕೆ ಸಲಹೆಗಾರರಾಗಿ, ಅಂಕಣ ಬರಹಗಾರರಾಗಿ ಚಿರಪರಿಚಿತರು. "ಈ ಹಿಂದೆಯೇ ಇದನ್ನ ಕುರಿತು ಬರೆದಿದ್ದೆ ! ನೀವು ಜೂನ್ ಅಂತಲ್ಲ ಡಿಸೆಂಬರ್ ಕೊನೆಯವರೆಗೆ ಟೈಮ್ ಕೊಟ್ಟರೂ ಈ ಜೋಡಣೆ ಕ್ರಿಯೆ ಮುಗಿಯುವುದಿಲ್ಲ. ಏಕೆಂದರೆ ಈ ಜೋಡಣೆ ಪ್ರಕ್ರಿಯೆ ಸುಲಭವಿಲ್ಲ . ವಿದ್ಯಾವಂತರೂ , ಟೆಕ್ನಾಲಜಿ ಜ್ಞಾನ ಇರುವರಿಗೂ ಇದು ಸಾಧ್ಯವಾಗುತ್ತಿಲ್ಲ ಇನ್ನು ಜನ ಸಾಮಾನ್ಯರ ಪಾಡೇನು ? ಸರಕಾರ ಯಾವುದೇ ಇರಲಿ ಹೆಚ್ಚಿನ ಪೆಟ್ಟು ಬೀಳುವುದು ಮಾತ್ರ ನಿಯತ್ತಾಗಿ ತೆರಿಗೆ ಕಟ್ಟುವವರಿಗೆ ಮಾತ್ರ ! ಹೆಲ್ಪ್ ಡೆಸ್ಕ್ ಶುರುಮಾಡಿ ಅಂತ ೬ ತಿಂಗಳ ಹಿಂದೆಯೇ ಮನವಿ ಮಾಡಿದ್ದೆ. ಈಗಲೂ ಮತ್ತದೇ ಹೇಳುತ್ತೇನೆ, ಜನರಿಗೆ ಸಹಾಯ ಬೇಕು , ಸಹಾಯ ಮಾಡಿ ಮಾಡಿ ಪ್ಲೀಸ್! ಜೋಡಣೆ ಬೇಡ ಎನ್ನುತಿಲ್ಲ ಜೋಡಣೆಗೆ ನೆರವು ಬೇಕು ಅಷ್ಟೇ. ಹುಷಾರು !! ಸಣ್ಣ ಕಿಡಿ ಜ್ವಾಲೆಯಾಗುವ ಮುನ್ನ ಎಚ್ಚೆತ್ತು ಕೊಳ್ಳಿ ಪ್ಲೀಸ್" ಎಂದು ಅವರು ಬರೆದಿದ್ದರು.

ಆಧಾರನ್ನು ನಾವೇಕೆ ಜೋಡಿಸಬೇಕು?

ರಂಗಸ್ವಾಮಿ ಮೂಕನಹಳ್ಳಿಯವರ ಪ್ರಶ್ನೆಗೆ ಬರಹಗಾರ ಮತ್ತು ವಿಮರ್ಶಕರಾದ ಮಂಜುನಾಥ ಕೊಳ್ಳೆಗಾಲ ಅವರು ನೀಡಿರುವ ಉತ್ತರ ಗಮನಸೆಳೆಯುತ್ತದೆ. ಅವರು ಈ ಮುಂದಿನಂತೆ ಉತ್ತರ ನೀಡಿದ್ದಾರೆ.

"ಮೂಲಭೂತಪ್ರಶ್ನೆ - ಆಧಾರನ್ನು ನಾವೇಕೆ ಜೋಡಿಸಬೇಕು? ಇದು ಬೇಜವಾಬ್ದಾರಿ ಪ್ರಶ್ನೆಯೆನಿಸಬಹುದು ಆದರೆ ಯೋಚಿಸಿ ನೋಡಿ. ದುಡಿದದ್ದಕ್ಕೆ ನಿಯತ್ತಾಗಿ ತೆರಿಗೆ ಕಟ್ಟಲು ಮೊದಲು ಚಾರ್ಟರ್ಡ್ ಅಕೌಂಟೆಂಟ್ ಮರೆಹೊಗುತ್ತಿದ್ದೆವು, ಅದನ್ನು ಸುಲಭವಾಗಿಸಲು ಈಗ ತೆರಿಗೆ ಇಲಾಖೆಯ ಪೋರ್ಟಲ್ ಇದೆ, ಪಾನ್ ಕಾರ್ಡ್ ಇದೆ. ರೇಶನ್ನಿಗೆ ರೇಷನ್ ಕಾರ್ಡ್ ಇದೆ, ವೃದ್ಧರಿಗೆ ಸೀನಿಯರ್ ಸಿಟಿಜೆನ್ ಕಾರ್ಡ, ಮತದಾರರಿಗೆ ಓಟರ್ ಕಾರ್ಡ್. ಆಧಾರ್ ಗೆ ಹೀಗೆ ನಿರ್ದಿಷ್ಟ ಬಳಕೆಯೇ ಇಲ್ಲ (ಸರ್ಕಾರದ ಹಲವು ಸವಲತ್ತುಗಳಿಗೆ ಈಗ ಆಧಾರ್ ಬೇಕೆನ್ನುತ್ತಾರೆ, ಇರಲಿ, ಹಾಗೆಂದರೆ ಉಳಿದ ಕಾರ್ಡುಗಳಂತೆಯೇ ಇದೂ ಒಂದು ಕಾರ್ಡ್). ಆದರೆ ಉಳಿದ ಯಾವ ಕಾರ್ಡನ್ನೂ ಒಂದಕ್ಕೊಂದು ಜೋಡಿಸುವುದಿಲ್ಲ. ಇದೊಂದನ್ನು ಮಾತ್ರ ಏಕೆ ಎಲ್ಲಕ್ಕೂ ಜೋಡಿಸಬೇಕು? ಇದು ನಿಜಕ್ಕೂ ಮೂಲಭೂತ ಡಾಕ್ಯುಮೆಂಟ್ ಆದ್ದರಿಂದ ತಾನೆ? ಹಾಗಿದ್ದ ಮೇಲೆ ಇದರಲ್ಲಿರುವ ವಿವರಗಳು ಉಳಿದೆಲ್ಲ ಕಡೆ ತಾನೇ ಅಪ್ಡೇಟ್ ಆಗಬೇಕು, ವಿವರ ಹೊಂದುವುದಿಲ್ಲವೆಂದು ರಿಜೆಕ್ಟ್ ಆಗಬಾರದು. ಅಷ್ಟೇಕೆ, ನಾವು ಬೇರೆಬೇರೆ ಬ್ಯಾಂಕುಗಳಲ್ಲಿ ಹಣವಿಟ್ಟು ತೆರಿಗೆ ವಂಚಿಸದಂತೆ ತೆರಿಗೆ ಇಲಾಖೆಯೇ ನಮ್ಮೆಲ್ಲ ವ್ಯವಹಾರವನ್ನೂ ನಮ್ಮ ಪಾನ್ ಕಾರ್ಡ್ ಮೂಲಕ ತಾನೇ ಜೋಡಿಸಿಕೊಂಡು ನಿಗಾ ಮಡಗುತ್ತದೆ. ಎಂದ ಮೇಲೆ ಆಧಾರನ್ನು ಜೋಡಿಸಿಕೊಳ್ಳುವುದು ಇಲಾಖೆಗೆ ಕಷ್ಟವೇ? ಮತ್ತೆ, ಆಧಾರ್ ನಾವು ಕೇಳಿ ಪಡೆದದ್ದಲ್ಲ, ನಮ್ಮ ಮೇಲೆ ಹೇರಿದ್ದು. ಆದರೂ ಪ್ರತಿಯೊಂದು ಬದಲಾವಣೆಗೂ ಐವತ್ತೋ ನೂರೋ ಪೀಕಿಸಲಾಗುತ್ತದೆ, ಪೀಕಿದರೂ ಕೆಲವು ವಿವರ ಅಪ್ಡೇಟ್ ಆಗುವುದಿಲ್ಲ. ಮೊದಲೂ ಆಧಾರ್ ಇಲ್ಲದೇ ತೆರಿಗೆ ರಿಟರ್ನ್ ಸಲ್ಲಿಸುತ್ತಿದ್ದೆವು, ಆದರೆ ಎಲೆಕ್ಟ್ರಾನಿಕ್ ಸಹಿ ಆಗುತ್ತಿರಲಿಲ್ಲ, ಸ್ವೀಕೃತಿಯನ್ನು ಪೋಸ್ಟ ಮುಖಾಂತರ ಸಲ್ಲಿಸುತ್ತಿದ್ದೆವು. ಆಮೇಲೆ ಬ್ಯಾಂಕ್ ಮೂಲಕ ಡಿಜಿಟಲ್ ಸಹಿ ಮಾಡಿ ಕಳಿಸಬಹುದೆಂದಾಯಿತು, ಆಮೇಲೆ ಆಧಾರ್ ಲಿಂಕ್ ಮಾಡಿ ಸುಲಭವಾಗಿ ಕಳಿಸುವುದಾಯಿತು. ಅದೆಲ್ಲಾ ನಮ್ಮ ಆಯ್ಕೆಯ ವಿಷಯವಾಗಿತ್ತು. ಬೇಡವೆಂದರೆ ಅಂಚೆ ಮೂಲಕ ಸ್ವೀಕೃತಿ ಕಳಿಸುವ ಆಯ್ಕೆ ಇದ್ದೇ ಇತ್ತು. ತಾಂತ್ರಿಕ ಕಾರಣಕ್ಕೆ ಆಧಾರ್ ಲಿಂಕ್ ಆಗದೇ ಅಂಚೆ ಮೂಲಕ ಸ್ವೀಕೃತಿ ಕಳಿಸಬೇಕಾದ ತೊಂದರೆಗೆ ಹಲ್ಲು ಕಡಿಯಬೇಕಾದವರು ನಾವು, ನಮ್ಮ ಗೊಡವೆಯಿಲ್ಲದೇ ನೀವೇ ಏಕೆ ಲಿಂಕ್ ಮಾಡುತ್ತಿಲ್ಲ ಎಂದು ಕೇಳಬೇಕಾದವರು ನಾವು, ಇಲ್ಲಿ ನೋಡಿದರೆ ತದ್ವಿರುದ್ಧ - ಸರ್ಕಾರದ್ದೇ ಎರಡು ಡಾಕ್ಯುಮೆಂಟ್ ಲಿಂಕ್ ಮಾಡಲಾರದ ಅವರ ಅಯೋಗ್ಯತೆಗೆ ನಾವು ಸಾವಿರ ರುಪಾಯಿ ದಂಡ ಕಟ್ಟುವುದು. ಈ ಸರ್ಕಾರಗಳು ಜನರನ್ನು ಪೀಡಿಸುವುದೇ ಆಡಳಿತವೆಂದು ತಿಳಿದಂತಿದೆ." ಎಂದು ಅವರು ಫೇಸ್‌ಬುಕ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ.

ಜನಸಾಮಾನ್ಯರಿಗೆ ಕಷ್ಟ

ಆದಾಯ ತೆರಿಗೆ ರಿಟರ್ನ್‌ ಸಲ್ಲಿಸುವವರು ಇಂತಹ ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲಿ ಮಾಡಬಹುದು. ಆದರೆ, ರೈತರು ಸೇರಿದಂತೆ ಬ್ಯಾಂಕ್‌ ವ್ಯವಹಾರಗಳಿಗೆ ಪಾನ್‌ ಕಾರ್ಡ್‌ ಹೊಂದಿರುವವರಿಗೆ ಈ ರೀತಿ ಲಿಂಕ್‌ ಮಾಡುವುದು ತಿಳಿದಿರುವುದಿಲ್ಲ. ಇದಕ್ಕಾಗಿ ಹಲವು ಬಾರಿ ಸೇವಾ ಕೇಂದ್ರಗಳಿಗೆ ಹೋಗಬೇಕಾಗುತ್ತದೆ. "ನೀವು ಹೇಳಿದ್ದು ಅಕ್ಷರಶಃ ಸತ್ಯ.

ನಮ್ಮ ಅತ್ತೆಯ PAN ಮತ್ತು adhaar ಲಿಂಕ್ ಮಾಡಲು ಮಾರ್ಚ್ 30ಕ್ಕೇ 1000 ರೂ ಕಟ್ಟಿದ್ದಾಯಿತು, ಆಮೇಲೆ ಹೆಸರು ಹೊಂದುತ್ತಿಲ್ಲ ಎಂದು ಬಂದಿದ್ದು ಆಯಿತು. Adhaar ಹೆಸರಿನ ಆಧಾರದ mele PAN ಗೆ ಹೆಸರು ಬದಲಾಯಿಸಲು ಆನ್ಲೈನ್ ಅಲ್ಲೇ ಅರ್ಜಿ ಹಾಕಿದ್ದು ಆಯಿತು. ಇನ್ನೂ PAN update ಆಗಿ ಬಂದಿಲ್ಲಾ. ಯಾರಿಗೆ ಹೇಳೋದು ನಮ್ಮ ಗೋಳು. ಯಾರನ್ನ ಸಂಪರ್ಕಿಸಿ ಸರಿ ಪಡಿಸಬೇಕು??" ಎಂದು ರಂಗಸ್ವಾಮಿ ಅವರ ಬರಹಕ್ಕೆ ಸುದರ್ಶನ್‌ ಕಾಮೆಂಟ್‌ ಮಾಡಿದ್ದಾರೆ.

ಇದೇ ರೀತಿಯ ಸಮಸ್ಯೆಯ ಕುರಿತು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ಪ್ರಕ್ರಿಯೆ ಸುಲಭವಾಗಿದೆ ಸರ್. ಆದರೆ ಎಡವಟ್ಟಾಗುವುದು ಕೊನೆಯ ಹಂತದಲ್ಲಿ. ಪಾನ್, ಆಧಾರ್ ಎಲ್ಲವನ್ನೂ ನಮೂದಿಸಿ ಹಣ ಕಟ್ಟಿದ ನಂತರ ಲಿಂಕ್ ಮಾಡಲು ಹೋದರೆ ಹೆಸರು ಹೊಂದಾಣಿಕೆ ಆಗುತ್ತಿಲ್ಲ ಎನ್ನುವ ಸೂಚನೆ ಬರುತ್ತದೆ. (ಹೆಸರಿನಲ್ಲಿ ವ್ಯತ್ಯಾಸ ಇದ್ದರೆ ಮಾತ್ರ.) ಉದಾಹರಣೆಗೆ ನನ್ನ ಹೆಸರನ್ನೇ ತೆಗೆದುಕೊಳ್ಳಿ. ಒಂದು ಕಡೆ H.K.Vadiraj ಮತ್ತೊಂದು ಕಡೆ Vadiaj. H.K ಎಂದು ಇದ್ದರೆ ಹೆಸರಿನ ಬದಲಾವಣೆ‌ಗೆ ಆಧಾರ್ ಕೇಂದ್ರಕ್ಕೆ ಹೋಗಬೇಕು. ಇಂತಹ ಸಣ್ಣ ಪುಟ್ಟ negligible ವಿಷಯಗಳನ್ನು ಕೈಬಿಡಬೇಕು" ಎಂದು ವಾದಿರಾಜ್‌ ಅವರು ತಮ್ಮ ಸಮಸ್ಯೆಯನ್ನು ತಿಳಿಸಿದ್ದಾರೆ.

ಒಟ್ಟಾರೆ ಆಧಾರ್‌-ಪಾನ್‌ ಕಾರ್ಡ್‌ ಲಿಂಕ್‌ ಮಾಡುವ ಸಮಸ್ಯೆಗಳ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಆದಾಯ ತೆರಿಗೆ ಇಲಾಖೆ ಮಾತ್ರ ಈ ರೀತಿ ಆಧಾರ್‌ ಲಿಂಕ್‌ ಜೋಡಣೆಗೆ ಜೂನ್‌ 30 ಕೊನೆಯ ದಿನವೆಂದು ಡೆಡ್‌ಲೈನ್‌ ಹಾಕಿಕೊಂಡಿದೆ. ಈ ರೀತಿ ಡೆಡ್‌ಲೈನ್‌ನೊಳಗೆ ಜೋಡಣೆ ಮಾಡದೆ ಇದ್ದರೆ ಏನಾಗಬಹುದು ಎಂಬ ಪ್ರಶ್ನೆಯೂ ಜನರಲ್ಲಿರಬಹುದು. ಈ ರೀತಿ ಆಧಾರ್‌ ಪಾನ್‌ ಜೋಡಣೆ ಮಾಡದೆ ಇದ್ದರೆ ಏನಾಗಬಹುದೆಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point