ಕರ್ನಾಟಕ ಲೋಕಾಯುಕ್ತ ದಾಳಿ; 12 ಅಧಿಕಾರಿಗಳ 55 ನಿವಾಸಗಳ ಮೇಲೆ ದಾಳಿ , ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಲೋಕಾಯುಕ್ತ ದಾಳಿ; 12 ಅಧಿಕಾರಿಗಳ 55 ನಿವಾಸಗಳ ಮೇಲೆ ದಾಳಿ , ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ

ಕರ್ನಾಟಕ ಲೋಕಾಯುಕ್ತ ದಾಳಿ; 12 ಅಧಿಕಾರಿಗಳ 55 ನಿವಾಸಗಳ ಮೇಲೆ ದಾಳಿ , ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ

ಕರ್ನಾಟಕ ಲೋಕಾಯುಕ್ತ ದಾಳಿ; ಆದಾಯ ಮೀರಿದ ಆಸ್ತಿ ಪ್ರಕರಣದಲ್ಲಿ ರಾಜ್ಯದ 12 ಅಧಿಕಾರಿಗಳ 55 ನಿವಾಸಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ತಂಡ, ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ ಮಾಡಿದೆ. ಲೋಕಾಯುಕ್ತ ದಾಳಿ ಮುಂದುವರಿದಿದ್ದು, ಇದುವರೆಗಿನ ಅಪ್ಡೇಟ್ಸ್ ಹೀಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಕರ್ನಾಟಕ ಲೋಕಾಯುಕ್ತ ದಾಳಿ; 12 ಅಧಿಕಾರಿಗಳ 55 ನಿವಾಸಗಳ ಮೇಲೆ ದಾಳಿ , ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ ಮಾಡಿದ್ದಾರೆ.
ಕರ್ನಾಟಕ ಲೋಕಾಯುಕ್ತ ದಾಳಿ; 12 ಅಧಿಕಾರಿಗಳ 55 ನಿವಾಸಗಳ ಮೇಲೆ ದಾಳಿ , ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆ ಮಾಡಿದ್ದಾರೆ. (MRT)

ಬೆಂಗಳೂರು: ಯಾದಗಿರಿ, ಶಿವಮೊಗ್ಗ ಮತ್ತು ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳ 12 ಅಧಿಕಾರಿಗಳ ನಿವಾಸಗಳಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯಾಚರಣೆ ಶುರುಮಾಡಿದ್ದು, ಇನ್ನೂ ಮುಂದುವರಿದಿದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿಪಾಸ್ತಿ ಗಳಿಸಿದ್ದಾರೆ ಎಂಬ ದೂರುಗಳು ದಾಖಲಾದ ನಂತರ 85ಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು ಈ ಅಧಿಕಾರಿಗಳಿಗೆ ಸಂಬಂಧಿಸಿದ 55 ಕ್ಕೂ ಹೆಚ್ಚು ಸ್ಥಳಗಳ ಮೇಲೆ ತಪಾಸಣೆ ನಡೆಸಿದ್ದಾರೆ. ಸತತ ಎರಡನೇ ವಾರವೂ ಲೋಕಾಯುಕ್ತ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ.

ಲೋಕಾಯುಕ್ತ ದಾಳಿ ಎಲ್ಲೆಲ್ಲಿ; ಯಾವ್ಯಾವ ಜಿಲ್ಲೆಯಲ್ಲಿ

ಬೆಂಗಳೂರು ನಗರದ ಕಾನೂನು ಮಾಪನಶಾಸ್ತ್ರ ಇಲಾಖೆಯ ಉಪ ನಿಯಂತ್ರಕ ಮೀರ್‌ ಅತ್ತರ್‌ ಅಲಿ ಅವರ ನಿವಾಸದ ಮೇಲೆ ನಡೆದ ಲೋಕಾಯುಕ್ತ ದಾಳಿಯಲಿ ಭಾರಿ ಪ್ರಮಾಣದ ಆಸ್ತಿ, ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಇವರ ನಿವಾಸದಲ್ಲಿ 25 ಲಕ್ಷ ನಗದು ಹಣ ಪತ್ತೆಯಾಗಿದೆ.

ಲೋಕಾಯುಕ್ತ ಪೊಲೀಸರು ಆಗಮಿಸಿದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆ ಅಲಿ ಅವರು 2.5 ಕೆಜಿ ಚಿನ್ನಾಭರಣ ಮತ್ತು 2 ಕೆಜಿ ಬೆಳ್ಳಿ ಇರುವ ಬ್ಯಾಗ್‌ ಅನ್ನು ಪಕ್ಕದ ಮನೆ ಕಾಂಪೌಂಡ್‌ ಒಳಗೆ ಎಸೆದಿದ್ದಾರೆ. ಆದರೆ ಇದನ್ನು ಗಮನಿಸಿದ ಪೊಲೀಸರು ಬ್ಯಾಗ್‌ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪಗಳು ದಾಖಲಾದ ನಂತರ ಶಿವಮೊಗ್ಗದ ತೊಟಗಾರಿಕೆ ಇಲಾಖೆ ಉಪ ನಿರ್ದೇಕ ಎಸ್‌. ಪ್ರಕಾಶ್‌ ಮತ್ತು ಭದ್ರಾವತಿ ತಾಲ್ಲೂಕು ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ನಾಗೇಶ್ ಅವರ ನಿವಾಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಾಗೇಶ್‌ ಅವರು ಭದ್ರಾವತಿ ತಾಲೂಕು ಕಾಂಗ್ರೆಸ್‌ ಪಕ್ಷದ ಮುಖಂಡರೂ ಆಗಿದ್ದು, ಶಾಸಕ ಬಿ.ಕೆ.ಸಂಗಮೇಶ್ ಅವರ ಜತೆ ಗುರುತಿಸಿಕೊಂಡಿದ್ದಾರೆ.

ಕೆಐಎಡಿಬಿ ನಿರ್ದೇಶಕ ಸೇರಿ ಹಲವು ಅಧಿಕಾರಿ ಮನೆಯಲ್ಲಿ ಶೋಧ

ತುಮಕೂರು ಜಿಲ್ಲೆಯ ಕೆಐಎಡಿಬಿ ನಿರ್ದೇಶಕ ಸಿ.ಟಿ.ಮುದ್ದುಕುಮಾರ್‌ ಅವರ ಬೆಂಗಳೂರಿನ ನಾಗರಬಾವಿಯ 2ನೇ ಹಂತದಲ್ಲಿರುವ ನಿವಾಸ, ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಖನಿಜ ಭವನದ ಕಚೇರಿ ಸೇರಿ 7 ಕಡೆ ಏಕ ಕಾಲಕ್ಕೆ ದಾಳಿ ನಡೆಸಲಾಗಿದೆ. ಇವರು ಇತ್ತೀಚೆಗೆ ಇನ್‌ ವೆಸ್ಟ್‌ ಕರ್ನಾಟಕ ಸಮಾವೇಶದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಇವರು ತುಮಕೂರು, ಚಿಕ್ಕನಾಯಕನಹಳ್ಳಿಯಲ್ಲಿ ಮನೆಗಳನ್ನು ಹೊಂದಿದ್ದು ಫಾರಂ ಹೌಸ್‌ ಇದೆ ಎಂದು ತಿಳಿದು ಬಂದಿದೆ. ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಬಾಟೆಲ್‌ ತಯಾರಿಕಾ ಕೈಗಾರಿಕೆ ಹೊಂದಿದ್ದಾರೆ. ಇವರ ಬಳಿ ಹುಬಲೋಟ್‌ ಕೈ ಗಡಿಯಾರ ಇರುವುದನ್ನು ಪತ್ತೆ ಹಚ್ಚಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ. ಆನಂದ್‌ ಅವರ ಬೆಂಗಳೂರಿನ ಮನೆ ಮತ್ತು ಮಂಗಳೂರಿನ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿಪಾಸ್ತಿ ಗಳಿಸಿರುವುದನ್ನು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗೆ ಇವರಿಗೆ ಯಾವುದೇ ಸ್ಥಳ ತೋರಿಸಿದೆ ವರ್ಗಾವಣೆ ಮಾಡಲಾಗಿತ್ತು. ಆದರೆ ಇವರು ಕೆಎಟಿ ಮೊರೆ ಹೋಗಿ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರು. ಇವರು ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮನೆ ಹಾಗೂ ನಿವೇಶನ ಹೊಂದಿರುವುದು ಪತ್ತೆಯಾಗಿದೆ. ಬ್ಯಾಂಕ್‌ ನಲ್ಲಿರುವ ಲಾಕರ್‌ ತೆರೆಯಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.

ಬೆಂಗಳೂರಿನ ಹೆಬ್ಬಗೋಡಿಯ ಪೌರಾಡಳಿತ ಇಲಾಖೆಯ ಆಯುಕ್ತ ನರಸಿಂಹಮೂರ್ತಿ ಅವರ ಬೆಂಗಳೂರಿನ ಮನೆ ಮತ್ತು ಅವರಿಗೆ ಸೇರಿದ ವಾಣಿಜ್ಯ ಕಟ್ಟಡದ ಮೇಲೆ ದಾಳಿ ನಡೆಸಿದ್ದಾರೆ.

ಮಂಡ್ಯ ಕಾರ್ಮಿಕ ಇಲಾಖೆ ಅಧಿಕಾರಿ ಚೇತನ್‌ ಕುಮಾರ್‌ ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ರಮೇಶ್‌ ಕುಮಾರ್‌ ಅವರಗೆ ಸೇರಿದ ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಯಾದಗಿರಿ ಜಿಲ್ಲಾ ಪಂಚಾಯತ್‌ ಯೋಜನಾ ನಿರ್ದೇಶಕ ಬಲವಂತ್‌ ರಾಥೋಡ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಿರಿಯ ಪಶುವೈದ್ಯಾಧಿಕಾರಿ ಆರ್‌.ಸಿದ್ದಪ್ಪ ಅವರ ನಿವಾಸಗಳ ಮೇಲೂ ಲೋಕಾಯುಕ್ತ ಪೊಲೀಸರು ಬೇಟೆಯಾಡಿದ್ದಾರೆ.

ಜುಲೈ 11ರಂದು ಲೋಕಾಯುಕ್ತ ಪೊಲೀಸರು 11 ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿ 45 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು.

(ವರದಿ- ಎಚ್.ಮಾರುತಿ, ಬೆಂಗಳೂರು)

Whats_app_banner