2024 ರ ಕರ್ನಾಟಕದ ಟಾಪ್-10 ಘಟನಾವಳಿ; ಪ್ರಜ್ವಲ್‌, ದರ್ಶನ್‌ ಜೈಲು ವಾಸ, ಸಿದ್ದರಾಮಯ್ಯ ಮೇಲೆ ಮುಡಾ ಗುಮ್ಮ, ಮಂಡ್ಯ ಸಮ್ಮೇಳನದ ಆಹಾರ ವಿವಾದ
ಕನ್ನಡ ಸುದ್ದಿ  /  ಕರ್ನಾಟಕ  /  2024 ರ ಕರ್ನಾಟಕದ ಟಾಪ್-10 ಘಟನಾವಳಿ; ಪ್ರಜ್ವಲ್‌, ದರ್ಶನ್‌ ಜೈಲು ವಾಸ, ಸಿದ್ದರಾಮಯ್ಯ ಮೇಲೆ ಮುಡಾ ಗುಮ್ಮ, ಮಂಡ್ಯ ಸಮ್ಮೇಳನದ ಆಹಾರ ವಿವಾದ

2024 ರ ಕರ್ನಾಟಕದ ಟಾಪ್-10 ಘಟನಾವಳಿ; ಪ್ರಜ್ವಲ್‌, ದರ್ಶನ್‌ ಜೈಲು ವಾಸ, ಸಿದ್ದರಾಮಯ್ಯ ಮೇಲೆ ಮುಡಾ ಗುಮ್ಮ, ಮಂಡ್ಯ ಸಮ್ಮೇಳನದ ಆಹಾರ ವಿವಾದ

ಕರ್ನಾಟಕ ರಾಜ್ಯದಲ್ಲಿ 2024ರ ವರ್ಷವು ಹಲವು ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ರಾಜಕೀಯವಾಗಿ ಸಿಡಿ ಹಗರಣ, ಚುನಾವಣೆಗಳು, ಸಿದ್ದರಾಮಯ್ಯ ಹಗರಣ ಆರೋಪ, ಸಿಟಿರವಿ- ಲಕ್ಷ್ಮಿ ಹೆಬ್ಬಾಳಕರ್‌ ಜಟಾಪಟಿ ಪ್ರಮುಖ ಘಟನೆಗಳು. ಮಂಡ್ಯ ಸಾಹಿತ್ಯ ಸಮ್ಮೇಳನ ಆಹಾರ ಸಂಸ್ಕೃತಿಗೆ ದನಿಯಾಗಿದ್ದು ವಿಶೇಷ.

ಕರ್ನಾಟಕದಲ್ಲಿ 2024 ರಲ್ಲಿ ಪ್ರಮುಖ ಬೆಳವಣಿಗೆಗಳು ನಡೆದಿವೆ.
ಕರ್ನಾಟಕದಲ್ಲಿ 2024 ರಲ್ಲಿ ಪ್ರಮುಖ ಬೆಳವಣಿಗೆಗಳು ನಡೆದಿವೆ.

ಕರ್ನಾಟಕದಲ್ಲಿ 2024 ರಲ್ಲಿ ಸಾಕಷ್ಟು ರಾಜಕೀಯ ಘಟನೆಗಳು ಮಾತ್ರವಲ್ಲದೇ ಇತರೆ ಕ್ಷೇತ್ರಗಳಲ್ಲೂ ಬೆಳವಣಿಗೆಗಳು ನಡೆದವು. ಈ ಬಾರಿ ಭಾರೀ ಸದ್ದು ಮಾಡಿದ್ದು ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಮುಡಾ ನಿವೇಶನ ಹಗರಣ. ಹಾಸನ ಪ್ರಜ್ವಲ್‌ ರೇವಣ್ಣ ಸಿಡಿ ಪ್ರಕರಣ, ರೇವಣ್ಣ ಬಂಧನ. ನಟ ದರ್ಶನ್‌ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ನಾಲ್ಕು ತಿಂಗಳು ಜೈಲು ಸೇರಿದ್ದು. ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಬಂಪರ್‌ ಆಗಿ ಜಲಾಶಯಗಳು ಭರ್ತಿಯಾದವು. ಇದರ ನಡುವೆ ತುಂಗಭದ್ರಾ ಕ್ರಸ್ಟ್‌ ಗೇಟ್‌ ಮುರಿದು ಹೋಗಿತ್ತು. ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಮೂರೂ ಕ್ಷೇತ್ರ ಗೆದ್ದು ಬಲ ಹೆಚ್ಚಿಸಿಕೊಂಡಿತು. ವರ್ಷದ ಕೊನೆಯಲ್ಲಿ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನದ ಆಹಾರ ಸಂಸ್ಕೃತಿಯ ತಾರತಮ್ಯವನ್ನು ಮುರಿಯಲು ಅರ್ಧ ಯಶಸ್ವಿಯಾಯಿತು. ಈ ವರ್ಷದ ಹತ್ತು ಪ್ರಮುಖ ಘಟನಾವಳಿ/ ಬೆಳವಣಿಗೆಗಳ ನೋಟ ಇಲ್ಲಿದೆ.

  1. ಪ್ರಜ್ವಲ್‌ ರೇವಣ್ಣ ಸಿಡಿ ಸಂಕಟ

ಕರ್ನಾಟಕ ಮಾತ್ರವಲ್ಲದೇ ದೇಶ ಹೊರದೇಶದಲ್ಲೂ ಭಾರೀ ಸದ್ದು ಮಾಡಿದ್ದು ಹಾಸನದ ಸಂಸದರಾಗಿದ್ದ ಪ್ರಜ್ವಲ್‌ ರೇವಣ್ಣ ಅವರ ಸಿಡಿ ಸಂಕಟ ಹಾಗೂ ಎಚ್‌ ಡಿ ರೇವಣ್ಣ ಕುಟುಂಬದವರ ಬಂಧನ ಘಟನಾವಳಿಗಳು. ನಾಲ್ಕೈದು ವರ್ಷಗಳ ಹಿಂದೆ ಪ್ರಜ್ವಲ್‌ ರೇವಣ್ಣ ಅವರು ಹಾಸನದ ಭಾಗದ ಕೆಲವು ಮಹಿಳೆಯರೊಂದಿಗೆ ಹೊಂದಿದ್ದ ಸಂಬಂಧವನ್ನು ವಿಡಿಯೋ ಚಿತ್ರಕರಣ ಮಾಡಿಕೊಂಡಿದ್ದು ಲೋಕಸಭೆ ಚುನಾವಣೆ ವೇಳೆ ಸದ್ದು ಮಾಡಿತ್ತು.ಚುನಾವಣೆ ಮೊದಲ ಹಂತ ಮುಗಿದ ಒಂದೆರಡು ದಿನದಲ್ಲಿಯೇ ಸಿಡಿ ಬಿಡುಗಡೆಯಾಗಿತ್ತು. ಕೊನೆಗೆ ಪ್ರಜ್ವಲ್‌ ರೇವಣ್ಣ ವಿರುದ್ದ ಪ್ರಕರಣ ದಾಖಲಾಗಿ ಒಂದು ತಿಂಗಳು ತಲೆಮರೆಸಿಕೊಂಡರು. ಇದೇ ಪ್ರಕರಣದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಪ್ರಕರಣದಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಅವರ ಪುತ್ರ ಎಂಎಲ್ಸಿ ಡಾ.ಸೂರಜ್‌ ರೇವಣ್ಣ ಬಂಧನವಾದರೆ, ಭವಾನಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿತ್ತು. ತಿಂಗಳ ಬಳಿಕ ಪ್ರಜ್ವಲ್‌ ಬೆಂಗಳೂರಿನಲ್ಲಿ ಎಸ್‌ಐಟಿ ಪೊಲೀಸರ ಎದುರು ಶರಣಾಗಿದ್ದರು. ಆರು ತಿಂಗಳಿನಿಂದಲೂ ಪ್ರಜ್ವಲ್‌ ಜೈಲಿನಲ್ಲಿದ್ದು ಜಾಮೀನಿಗಾಗಿ ಪ್ರಯತ್ನ ಮುಂದುವರೆಸಿದ್ದಾರೆ.

2. ದರ್ಶನ್‌ ಕೊಲೆ ಪ್ರಕರಣ ನಾಲ್ಕು ತಿಂಗಳು ಜೈಲು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ, ಇದರಲ್ಲಿ ನಟ ದರ್ಶನ್‌ ತೂಗುದೀಪ ಪ್ರಮುಖ ಆರೋಪಿಯಾಗಿ ಸಿಲುಕಿದ್ದು ಭಾರೀ ಸದ್ದು ಮಾಡಿತು. ಬೆಂಗಳೂರಿನಲ್ಲಿ ನಡೆದ ಭೀಬತ್ಸ ಕೊಲೆ ಪ್ರಕರಣದಲ್ಲಿ ದರ್ಶನ್‌, ನಟಿ ಪವಿತ್ರಾ ಗೌಡ ಸಹಿತ ಹದಿನೇಳು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಮೊದಲು ಬೆಂಗಳೂರು ಜೈಲಿನಲ್ಲಿದ್ದ ದರ್ಶನ್‌ ನಂತರ ಬಳ್ಳಾರಿ ಜೈಲಿಗೆ ವರ್ಗಗೊಂಡಿದ್ದರು. ಸತತ ನಾಲ್ಕು ತಿಂಗಳು ಜೈಲಿನಲ್ಲಿದ್ದ ದರ್ಶನ್‌ಗೆ ಆರೋಗ್ಯದ ಕಾರಣದಿಂದ ಮಧ್ಯಂತರ ಜಾಮೀನು ಸಿಕ್ಕಿತ್ತು. ಆನಂತರ ಈಗ ಎಲ್ಲರೂ ಬಿಡುಗಡೆಯಾಗಿದ್ದಾರೆ. ಪ್ರಕರಣದ ವಿಚಾರಣೆ ಇನ್ನೂ ಮುಂದುವರಿದಿದೆ.

3. ಭಾರೀ ಮಳೆ ಭೂಕುಸಿತ ರೈಲು ಸಂಚಾರ ವ್ಯತ್ಯಯ

ಈ ಬಾರಿ ಮುಂಗಾರು ಮಳೆ ನಿರೀಕ್ಷೆಗಿಂತಲೂ ಹೆಚ್ಚು ಸುರಿಯಿತು. ಕರ್ನಾಟಕದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಭಾಗದಲ್ಲೂ ಭಾರೀ ಮಳೆಯಾಗಿ ಅನಾಹುತಗಳಾದವು. ಜನರೂ ಜೀವ ಕಳೆದುಕೊಂಡರು. ಬೆಳೆ ಹಾನಿಯಾಯಿತು. ಜಲಾಶಯಗಳು ತುಂಬಿದವು. ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸಹಿತ ಹಲವು ಭಾಗಗಳಲ್ಲಿ ಭೂಕುಸಿತಗಳು ಸಂಭವಿಸಿದವು. ಹಾಸನ ಭಾಗದಲ್ಲಿ ಭೂಕುಸಿತದಿಂದ ರೈಲು ಸಂಚಾರ ಸುಮಾರು ಒಂದೂವರೆ ತಿಂಗಳು ವ್ಯತ್ಯಯಗೊಂಡು ಜನ ಪರದಾಡಬೇಕಾಯಿತು. ರಸ್ತೆಗಳ ಸಂಚಾರಕ್ಕೂ ಅಡ್ಡಿಯಾಗಿತ್ತು.

4. ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ ಮುರಿತ

ಭಾರೀ ಮಳೆಯಿಂದ ತುಂಗಭದ್ರಾ ಜಲಾಶಯ ತುಂಬಿದರೂ ಜಲಾಶಯದ 19 ನೇ ಕ್ರಸ್ಟ್‌ಗೇಟ್‌ ಆಗಸ್ಟ್‌ನಲ್ಲಿ ಕೊಚ್ಚಿ ಹೋಯಿತು. ಜಲಾಶಯ ತುಂಬಿದ್ದರೂ ನೀರು ಅನಿವಾರ್ಯವಾಗಿ ಹೊರ ಬಿಡುವ ಸನ್ನಿವೇಶ. ಜಲಾಶಯಕ್ಕೆ ಏನಾದರೂ ಆಗಬಹುದಾ ಎನ್ನುವ ಆತಂಕದ ನಡುವೆ ತಜ್ಞರು ಮೂರೇ ದಿನದಲ್ಲಿ ದುರಸ್ತಿಗೊಳಿಸಿದರು. ಆದರೂ ಸಾಕಷ್ಟು ನೀರು ನದಿ ಮೂಲಕ ಹರಿದು ಹೋಯಿತು. ಆದರೆ ಮಳೆ ಚೆನ್ನಾಗಿ ಆಗಿದ್ದರಿಂದ ತುಂಗಭದ್ರಾ ಜಲಾಶಯ ಮತ್ತೆ ಭರ್ತಿಯಾಯಿತು.

5. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಜೆಡಿಎಸ್‌ ಬಿಜೆಪಿ ಪಾದಯಾತ್ರೆ

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಮುಡಾ ವಿವಾದ ಸಿದ್ದರಾಮಯ್ಯ ಅವರನ್ನು ಸುತ್ತಿಕೊಂಡಿತು. ಇದು ರಾಜ್ಯಪಾಲರು ಹಾಗೂ ಸಿದ್ದರಾಮಯ್ಯ ಅವರ ಕಾನೂನು ಸಮರವಾಗಿಯೂ ಮಾರ್ಪಟ್ಟಿತು. ಪತ್ನಿ ಪಾರ್ವತಿ ಹೆಸರಲ್ಲಿ ಸಿದ್ದರಾಮಯ್ಯ ಪ್ರಭಾವ ಬಳಸಿ ನಿವೇಶನ ಪಡೆದಿದ್ಧಾರೆ ಎನ್ನುವ ದೂರು ನೀಡಲಾಯಿತು. ಇಡಿ ಪ್ರಕರಣ ದಾಖಲಿಸುತ್ತಿದ್ದಂತೆ ಸಿದ್ದರಾಮಯ್ಯ ನಿವೇಶನ ವಾಪಾಸ್‌ ನೀಡಿದರು. ಆನಂತರ ಮುಡಾ ಅಧ್ಯಕ್ಷರಾಗಿದ್ದ ಕೆ.ಮರೀಗೌಡ ತಲೆ ದಂಡವೂ ಆಯಿತು. ಈಗ ಲೋಕಾಯುಕ್ತ ತನಿಖೆ ಮುಂದುವರಿದಿದೆ. ಇಡಿ ಕೂಡ ವಿಚಾರಣೆ ನಡೆಸುತ್ತಿದೆ. ಇದೇ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್‌ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ ನಡೆಸಿದರೆ ಕಾಂಗ್ರೆಸ್‌ ಕೂಡ ಮೈಸೂರಿನಲ್ಲಿ ಭಾರೀ ಸಮಾವೇಶವನ್ನು ನಡೆಸಿತು.

6. ಉಪ ಚುನಾವಣೆಯಲ್ಲಿ ಕೈ ಜಯಭೇರಿ

ಕರ್ನಾಟಕದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದು ಆಡಳಿತಾರೂಢ ಕಾಂಗ್ರೆಸ್ ಮೂರೂ ಕ್ಷೇತ್ರ ಗೆದ್ದುಕೊಂಡಿತು. ಅದರಲ್ಲೂ ಮಾಜಿ ಸಿಎಂ ಎಚ್‌ಡಿಕುಮಾರಸ್ವಾಮಿ ಹಾಗೂ ಬಸವರಾಜಬೊಮ್ಮಾಯಿ ಅವರು ತಮ್ಮ ಮಕ್ಕಳನ್ನು ಕಣಕ್ಕಿಳಿಸಿದರೂ ಇಬ್ಬರನ್ನೂ ಗೆಲ್ಲಿಸಿಕೊಳ್ಳಲಾಗದೇ ಕ್ಷೇತ್ರ ಕಳೆದುಕೊಂಡರು. ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಗೆದ್ದಿತು.

7. ವನ್ಯಜೀವಿ ಮಾನವ ಸಂಘರ್ಷ

ಕರ್ನಾಟಕದಲ್ಲಿ ವನ್ಯಜೀವಿ ಮಾನವ ಸಂಘರ್ಷ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮಂಡ್ಯ,ಕೊಡಗು, ಚಿಕ್ಕಮಗಳೂರು, ಮೈಸೂರು, ತುಮಕೂರು, ರಾಮನಗರ ಸಹಿತ ಹಲವು ಭಾಗಗಳಲ್ಲಿ ಮುಂದುವರಿದಿದೆ. ಹಾಸನದಲ್ಲಿ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಿತು. ಹುಲಿ, ಚಿರತೆ ದಾಳಿಗೆ ಹಲವರು ಜೀವ ಕಳೆದುಕೊಂಡರು. ಇದರ ನಡುವೆಯೇ ವೈನಾಡು ಚುನಾವಣೆ ವೇಳೆ ಬಂಡೀಪುರ ಅರಣ್ಯದಲ್ಲಿನ ರಾತ್ರಿ ಸಂಚಾರ ನಿಷೇಧ ವಿಚಾರವಾಗಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಗಾಂಧಿ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿತು.

8. ಬಾಣಂತಿಯರ ಸಾವು ಬಳ್ಳಾರಿ

ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕಡಿಮೆ ಅವಧಿಯಲ್ಲಿ ಬಾಣಂತಿಯರು ಮೃತಪಟ್ಟಿದ್ದು, ಭಾರೀ ಸದ್ದು ಮಾಡಿತು. ಅದೂ ಅಲ್ಲಿ ನೀಡುತ್ತಿರುವ ನಿಷೇಧಿತ ದ್ರಾವಣವನ್ನು ಚಿಕಿತ್ಸೆಗೆ ಬಳಸಿದ್ದರಿಂದಲೇ ದುರ್ಘಟನೆ ಸಂಭವಿಸಿದೆ ಎನ್ನುವುದು ತನಿಖೆಯಿಂದ ಬಯಲಾಯಿತು. ಈ ಕುರಿತು ಸರ್ಕಾರವೂ ತನಿಖೆಗೆ ಆದೇಶಿಸಿದ್ದು, ನಿಷೇಧಿತ ಔಷಧಿಗಳ ಬಳಕೆಗೆ ಬ್ರೇಕ್‌ ಹಾಕಲಾಗಿದೆ. ಇದರ ಜತೆಗೆ ಬಳ್ಳಾರಿ ಹೊರತುಪಡಿಸಿ ಇತರೆಡೆಯೂ ಬಾಣಂತಿಯರ ಸಾವುಗಳು ಡಿಸೆಂಬರ್‌ನಲ್ಲಿ ವರದಿಯಾದವು.

9. ಸಿಟಿ ರವಿ ಬಂಧನ ಗದ್ದಲ

ಈ ಬಾರಿ ಚಳಿಗಾಲದ ಅಧಿವೇಶನದ ಕೊನೆ ದಿನದಲ್ಲಿ ಬಿಸಿ ಏರಿಸಿದ ಘಟನೆಗಳು ನಡೆದವು. ವಿಧಾನಪರಿಷತ್‌ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌, ಶಾಸಕ ಸಿ.ಟಿ.ರವಿ ನಡುವೆ ಭಾರೀ ಗದ್ದಲವೇ ನಡೆಯಿತು. ಚರ್ಚೆ ನಡೆಯುವಾಗ ವೈಯಕ್ತಿಕ ನಿಂದನೆಗೆ ತಿರುಗಿ ಸಿ.ಟಿ.ರವಿ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದರು ಎಂದು ಲಕ್ಷ್ಮಿ ಹೆಬ್ಬಾಳಕರ್‌ ದೂರು ನೀಡಿದರು. ಕೊನೆಗೆ ಸಿಟಿರವಿಯವರನ್ನು ಬಂಧಿಸಿ ರಾತ್ರಿಯಿಡೀ ಬೇರೆ ಬೇರೆ ಕಡೆ ಸುತ್ತಾಡಿಸಿ ನಂತರ ಹೈಕೋರ್ಟ್‌ ಸೂಚನೆ ಮೇರೆಗೆ ಅವರನ್ನು ರಾತ್ರಿಯೇ ಬಿಡುಗಡೆ ಮಾಡಲಾಯಿತು. ಇದು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಜಟಾಪಟಿಗೆ ದಾರಿ ಮಾಡಿಕೊಟ್ಟಿದೆ.

10. ಮಂಡ್ಯ ಸಾಹಿತ್ಯ ಸಮ್ಮೇಳನ ಮತ್ತು ಬಾಡೂಟ

ಮಂಡ್ಯದಲ್ಲಿ ಒಂದು ವರ್ಷದಿಂದ ಮುಂದೆ ಹೋಗುತ್ತಲೇ ಇದ್ದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಿತು. ಈ ಬಾರಿ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸದೂಟ, ಗುಟ್ಕಾ ಬಳಕೆ ಇಲ್ಲ ಎನ್ನುವ ಪ್ರಕಟಣೆಯೊಂದು ವಿವಾದ ಸೃಷ್ಟಿಸಿ ತು. ಸಮ್ಮೇಳನದಲ್ಲಿ ಬಾಡೂಟ ಬೇಕೇಬೇಕು ಎಂದು ವಿವಿಧ ಸಂಘಟನೆಗಳು ಹೋರಾಟ ನಡೆಸಿದವು. ಕೊನೆಗೆ ಮಾತುಕತೆ ನಡೆಸಿ ಮೊಟ್ಟೆಯನ್ನು ವಿತರಿಸುವುದಾಗಿ ಮಂಡ್ಯ ಜಿಲ್ಲಾಡಳಿತ ಹೇಳಿತ್ತು. ಕೊನೆಯ ದಿನದ ರಾತ್ರಿ ಮೊಟ್ಟೆ ವಿತರಣೆಯೂ ಆಯಿತು. ಕೆಲ ಸಂಘಟನೆಗಳು ಸಮ್ಮೇಳನದ ನಡುವೆಯೇ ಬಾಡೂಟವನ್ನೂ ಬಡಿಸಿ ಪ್ರತಿಭಟನೆ ದಾಖಲಿಸಿದವು. ಆಹಾರ ಸಂಸ್ಕೃತಿಯಲ್ಲೂ ತಾರತಮ್ಯ ಏಕೆ ಎನ್ನುವುದು ಆಕ್ರೋಶದ ಮೂಲ. ನಾವು ಈ ಬಾರಿ ಅರ್ಧ ಗೆದ್ದಿದ್ದೆವೆ. ಮುಂದಿನ ಬಾರಿ ಬಳ್ಳಾರಿಯ ಸಮ್ಮೇಳನದಲ್ಲಿ ಬಾಡೂಟವನ್ನು ಕೊಡಿಸಿಯೇ ತೀರುತ್ತೇವೆ ಎಂದು ಸಂಘಟನೆಗಳು ಹೇಳಿಕೊಂಡಿವೆ.

Whats_app_banner